“ಡಿ.ಎಸ್.ಜೆ. ಆ್ಯಪ್ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ : ಸಾರ್ವಜನಿಕರಿಗೆ ಎಚ್ಚರಿಕೆ.”
1 min read
ಮೂಡಿಗೆರೆ:ಡಿ.ಎಸ್.ಜೆ. (DSJ) ಎಂಬ ಹೆಸರಿನ ಆ್ಯಪ್ ಮೂಲಕ ಹೆಚ್ಚಿನ ಲಾಭದ ಆಮಿಷವೊಡ್ಡಿ ಜನರನ್ನು ವಂಚಿಸುವ ಜಾಲ ಸಕ್ರಿಯವಾಗಿದ್ದು, ಮೂಡಿಗೆರೆ ಹಾಗೂ ಬಣಕಲ್ ಭಾಗದ ಹಲವು ಮಂದಿ ಹಣ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಮೊದಲು ಅಪರಿಚಿತ ಸಂಖ್ಯೆಯಿಂದ ವಾಟ್ಸ್ಆ್ಯಪ್ ಸಂದೇಶ ಕಳುಹಿಸಿ,ಷೇರು ವಹಿವಾಟು (ಶೇರ್ ಟ್ರೇಡಿಂಗ್) ಮೂಲಕ ಹೆಚ್ಚಿನ ಲಾಭ ಗಳಿಸಬಹುದು ಎಂದು ನಂಬಿಸಲಾಗುತ್ತದೆ. ಬಳಿಕ ವಾಟ್ಸ್ಆ್ಯಪ್ ಗುಂಪಿಗೆ ಸೇರಿಸಿ,ಇನ್ನೂ 20 ಮಂದಿಯನ್ನು ಗುಂಪಿಗೆ ಸೇರಿಸುವಂತೆ ಸೂಚಿಸಲಾಗುತ್ತದೆ.
ನಂತರ ಡಿ.ಎಸ್.ಜೆ.ಹೆಸರಿನ ಆ್ಯಪ್ ಡೌನ್‌ಲೋಡ್ ಮಾಡಲು ಹೇಳಿ,ಆರಂಭದಲ್ಲಿ ₹250 ಹೂಡಿಕೆ ಮಾಡಲು ಸೂಚಿಸುತ್ತಾರೆ.ಕೆಲವೇ ಗಂಟೆಗಳಲ್ಲಿ ಆ್ಯಪ್‌ನಲ್ಲಿ ₹750 ಆಗಿರುವಂತೆ ತೋರಿಸಿ ಜನರ ವಿಶ್ವಾಸ ಗಳಿಸುತ್ತಾರೆ.
ಇದನ್ನು ನಂಬಿದವರು ಮತ್ತಷ್ಟು ಹಣ ಹೂಡಿಕೆ ಮಾಡತೊಡಗುತ್ತಾರೆ. ₹2,000 ಹೂಡಿಕೆ ಮಾಡಿದರೆ ಕೆಲವೇ ದಿನಗಳಲ್ಲಿ ₹6,000 ಆಗಿರುವಂತೆ ಆ್ಯಪ್‌ನಲ್ಲಿ ತೋರಿಸಲಾಗುತ್ತದೆ. ಇದೇ ರೀತಿ ಕ್ರಮೇಣ ಸಾವಿರಗಳಿಂದ ಲಕ್ಷಾಂತರ ರೂಪಾಯಿವರೆಗೆ ಹೂಡಿಕೆ ಮಾಡಲು ಪ್ರೇರೇಪಿಸಲಾಗುತ್ತದೆ.
ಮೋಸಕ್ಕೆ ಒಳಗಾದವರಲ್ಲಿ ಒಬ್ಬ ಯುವಕ ತನ್ನ ತಂಗಿಯ ಮದುವೆಗಾಗಿ ಉಳಿಸಿಕೊಂಡಿದ್ದ ಸುಮಾರು ₹1.5 ಲಕ್ಷವನ್ನು ಹೂಡಿಕೆ ಮಾಡಿದ್ದ.ಆ್ಯಪ್‌ನಲ್ಲಿ ₹3.35 ಲಕ್ಷ ಇರುವಂತೆ ತೋರಿಸಿದ್ದರೂ,ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಸಾಧ್ಯವಾಗಿಲ್ಲ.ಬಳಿಕ ಇತರರೂ ಹಣ ಹಿಂಪಡೆಯಲು ಯತ್ನಿಸಿದಾಗ,ಅವರನ್ನು ಆ್ಯಪ್ ಹಾಗೂ ವಾಟ್ಸ್ಆ್ಯಪ್ ಗುಂಪಿನಿಂದ ತೆಗೆದುಹಾಕಲಾಗಿದೆ ಎಂದು ತಿಳಿದುಬಂದಿದೆ.
ಈ ವಂಚನೆ ಜಾಲದ ಹಿಂದಿರುವವರು ಬಿಹಾರ,ಉತ್ತರ ಪ್ರದೇಶ,ಆಂಧ್ರ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ಮೂಲದವರಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.ಇತ್ತೀಚೆಗೆ ಕನ್ನಡದಲ್ಲಿಯೂ ಮಾತನಾಡಿ ಜನರ ವಿಶ್ವಾಸಗಳಿಸುವ ಪ್ರಯತ್ನ ಮಾಡುತ್ತಿರುವುದರಿಂದ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವಿದೆ.
ಹೆಚ್ಚಿನ ಲಾಭದ ಆಮಿಷವೊಡ್ಡುವ ಯಾವುದೇ ಅಪರಿಚಿತ ಆ್ಯಪ್‌ಗಳಲ್ಲಿ ಹಣ ಹೂಡಿಕೆ ಮಾಡಬಾರದು,ವಾಟ್ಸ್ಆ್ಯಪ್ ಮೂಲಕ ಬರುವ ಹೂಡಿಕೆ ಸಂದೇಶಗಳು ಮತ್ತು ಅಪರಿಚಿತರ ಸಲಹೆಗಳನ್ನು ನಂಬುವ ಮುನ್ನ ಸಂಬಂಧಿತ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಪರಿಶೀಲಿಸಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.
✍🏻ಬರಹ ಕೃಪೆ.✍🏻

ಸಾಜಿದ್ ಬಣಕಲ್.
ಸಾಮಾಜಿಕ ಕಾರ್ಯಕರ್ತರು.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

