ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಅನಿಯಂತ್ರಿತ ಓಡಾಟದ ಕಡಿವಾಣಕ್ಕೆ ಆಗ್ರಹ….
1 min read
ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಅನಿಯಂತ್ರಿತ ಓಡಾಟದ ಕಡಿವಾಣಕ್ಕೆ ಆಗ್ರಹ
ಚಿಕ್ಕಮಗಳೂರು: ದತ್ತಾತ್ರೇಯ ಬುಡನ್ ಬೆಟ್ಟಶ್ರೇಣಿಯ ಮುಳ್ಳಯ್ಯನಗಿರಿ ಸೇರಿದಂತೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳ ತಾಳಿಕೆ ಸಾಮರ್ಥ್ಯವನ್ನು ಮೀರಿ ಪ್ರವಾಸಿಗರ ಅನಿಯತ್ರಿತ ಓಡಾಟಕ್ಕೆ ಅವಕಾಶ ನೀಡುತ್ತಿರುವುದಕ್ಕೆ ತಕ್ಷಣ ಪೂರ್ಣ ವಿರಾಮವನ್ನು ಹಾಕಬೇಕು ಎಂದು ಪರಿಸರ ಸಂಘಟನೆಗಳು ಆಗ್ರಹಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಭದ್ರಾ ವೈಲ್ಡ್ ಲೈಫ್ ಕನ್ಸರ್ವೇಶನ್ ಟ್ರಸ್ಟ್ನ ಡಿ.ವಿ.ಗಿರೀಶ್, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ.ಗಿರಿಜಾಶಂಕರ, ಗೌರವ ವನ್ಯಜೀವಿ ಪರಿಪಾಲಕರು ಶ್ರೀದೇವ್ ಹುಲಿಕೆರೆ ಪರಿಸರ ಸೂಕ್ಷ್ಮ ಪ್ರದೇಶದಲ್ಲಿರುವ ಮಾಜಿ ಪ್ರವಾಸಿ ತಾಣಗಳ ತಾಳಿಕೆ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರವಾಸಿಗರಿಗೆ ಪ್ರವೇಶಾವಕಾಶ ನೀಡಬೇಕೆಂದು ರಾಷ್ಟ್ರೀಯ ನ್ಯಾಯ ಪೀಠ ಆದೇಶ ನೀಡಿದ್ದರೂ ಅದನ್ನು ಕಡೆಗಣಿಸಿ ಪ್ರವಾಸಿಗರ ಸಂಖ್ಯೆ ಮಿತಿ ಮೀರುವಂತೆ ಅವಕಾಶವನ್ನು ಪ್ರವಾಸೋದ್ಯಮ ಇಲಾಖೆ ನೀಡುತ್ತಿದೆ ಎಂದು ದೂರಿದ್ದಾರೆ..
200 ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಈ ಸೂಕ್ಷ್ಮ ಪ್ರದೇಶಗಳಿಗೆ ಹೋಗುತ್ತಿರುವುದರಿಂದ ಪ್ಲಾಸ್ಟಿಕ್ ಸೇರಿದಂತೆ ವಿವಿಧ ರೀತಿಯ ತ್ಯಾಜ್ಯದ ಪ್ರಮಾಣವು ಹೆಚ್ಚಾಗುತ್ತಿದೆಯಲ್ಲದೆ, ವನ್ಯಪ್ರಾಣಿಗಳ ಆವಾಸ ಸ್ಥಾನವಾದ ಈ ಸ್ಥಳಗಳಲ್ಲಿ ಅವುಗಳ ನೆಮ್ಮದಿಯ ಬದುಕಿಗೂ ಮಾರಕವಾಗಿದೆ ಎಂದಿದ್ದಾರೆ.
ಜಿಲ್ಲಾಡಳಿತಕ್ಕೆ ಪರಿಸರಾಸಕ್ತರು ಹಿಂದಿನಿಂದಲೂ ವಾರದ ಕೊನೆ ಹಾಗೂ ರಜಾದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಮಿತಿ ಮೀರದಂತೆ ಹಾಗೂ ಬಂದ ಪ್ರವಾಸಿಗ-ರಿಗೆ ಅದೊಂದು ಉತ್ತಮ ಮತ್ತು ಅಧ್ಯಯನ ಪ್ರವಾಸವೂ ಆಗುವಂತೆ ಮಾಡಬೇಕೆಂದು ಒತ್ತಾಯಿಸುತ್ತಲೇ ಬಂದಿದ್ದರೂ ಈವರೆಗೂ ಜಿಲ್ಲಾಡಳಿತ ಅದನ್ನು ಜಾರಿಗೆ ತಂದಿಲ್ಲ ಎಂದರು
ರಜಾದಿನಗಳಲ್ಲಿ ದಿನವೊಂದಕ್ಕೆ 1200.ವಾಹನಗಳನ್ನು ಈ ಮಾತ್ರ ಬೆಟ್ಟಕ್ಕೆ ಬಿಡಬೇಕೆಂದು ಜಿಲ್ಲಾಡಳಿತ ನಿಗದಿಪಡಿಸಿ ಆದೇಶಿಸಿದ್ದರೂ ವಾರಾಂತ್ಯದಲ್ಲಿ 1800ಕ್ಕೂ ಹೆಚ್ಚು ವಾಹನಗಳು ಸೂಕ್ಷ್ಮ ಪ್ರದೇಶಗಳಿಗೆ ಹೋಗುತ್ತಿವೆ. ಬಂದ ಪ್ರವಾಸಿಗರನ್ನು ಕರೆದೊಯ್ಯುವ ಬಾಡಿಗೆ ಟ್ಯಾಕ್ಸಿಗಳಿಗೆ ಯಾವುದೇ ನಿಯಮ ಅನ್ವಯಿಸದೆ ಅವರುಗಳು ಮನಸೋಯಿಚ್ಛೆ ಪ್ರವಾಸಿಗರನ್ನು ಕರೆದೊಯ್ಯುವ ಎಂದಿದ್ದಾರೆ. ಪರಿಪಾಟ ಹೆಚ್ಚಾಗಿದೆ
ಪ್ರವಾಸಿ ತಾಣಗಳಿಗೆ ಹೋಗುವ ವಾಹನಗಳ ಸಂಖ್ಯೆ ನಿಯಂತ್ರಿಸುವುದರ ಜೊತೆಗೆ ಪ್ರವಾಸಿಗರ ಸಂಖ್ಯೆಗೆ ಅನುಗುಣವಾಗಿ ಶುಲ್ಕ ವಿಧಿಸಬೇಕೇ ಹೊರತು ಒಟ್ಟು ವಾಹನವೊಂದಕ್ಕೆ ಶುಲ್ಕ ವಿಧಿಸುವ ಪದ್ಧತಿಯನ್ನು ಕೈಬಿಡಬೇಕು. ಆನ್ಲೈನ್ನಲ್ಲಿ ಬುಕ್ ಮಾಡದೆ ತಮ್ಮ ಸ್ವಂತ ವಾಹನದಲ್ಲಿ ಬರುವ ಪ್ರವಾಸಿಗರು ಖಾಸಗಿ ಬಾಡಿಗೆ ಜೀಪ್ಗಳಲ್ಲಿ ಹೋಗುವುದು ಹೆಚ್ಚಾಗಿದ್ದು, ಪ್ರವಾಸಿ ಪ್ರದೇಶದಲ್ಲಿ ಜನಜಂಗುಳಿ ವಿಪರೀತವಾಗುತ್ತಿದೆ. ಇದರ ಜೊತೆಗೆ ಹಳದಿ ಸಂಖ್ಯಾ ಫಲಕ ಹೊಂದಿರುವ ವಾಹನಗಳು ಪ್ರವಾಸಿಗರನ್ನು ಕರೆದೊಯ್ಯಬೇಕಿದ್ದರೂ ಬಿಳಿ ಸಂಖ್ಯಾಫಲಕ ಹೊಂದಿರುವ ಅನೇಕ ಜೀಪ್ ಗಳು ಪ್ರವಾಸಿಗರನ್ನು ಕರೆದೊಯ್ಯುತ್ತಿವೆ. ಹೀಗಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಪ್ರವಾಸಿಗರು ಹೋಗಿ ಬರಲು ಸಮಯವನ್ನು ನಿಗದಿ ಮಾಡಿಲ್ಲ ಎಂದು ದೂರಿದ್ದಾರೆ.
ಪ್ರವಾಸಿಗರನ್ನು ನಿಯಂತ್ರಿಸುವ ಚೆಕ್ ಪೋಸ್ಟ್ ಗೇಟ್ ಬಳಿ ಪ್ರವಾಸೋದ್ಯಮ ಇಲಾಖೆ ನೌಕರರು ಬೆಳಿಗ್ಗೆ 6 ಗಂಟೆಗೆ ಹಾಜರಿರಬೇಕು. ಆದರೆ ಅವರು ಆ ಹೊತ್ತಿಗೆ ಬಾರದೆ 9 ಗಂಟೆಗೆ ಬರುತ್ತಿರುವುದರಿಂದ ದಿನಗೂಲಿ ನೌಕರರೇ ಈ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ. ಪ್ರವಾಸೋದ್ಯಮ ಇಲಾಖೆ ಹೋಂಸ್ಟೇ ಮತ್ತು ರೆಸಾರ್ಟ್ಗೆ ಹೋಗುವವರಿಗೆ ಯಾವುದೇ ಸಮಯ ನಿಯಂತ್ರಣವನ್ನು ಹೇರದೆ ಹಗಲಿರುಳೆನ್ನದೆ ವಾಹನಗಳನ್ನು ಬಿಡಲಾಗುತ್ತಿದೆ. ರಾತ್ರಿ ವೇಳೆ ಈ ವಾಹನಗಳನ್ನು ಗೇಟ್ ನಲ್ಲಿ ನಿಲ್ಲಿಸಿ ತಪಾಸಣೆ ಮಾಡಲಾಗುತ್ತಿತ್ತು. ಅದನ್ನು ಕೈಬಿಡಲಾಗುತ್ತಿದೆ. ಈ ಬಗ್ಗೆ ಯಾರಾದರೂ ಪ್ರಶ್ನಿಸಿದರೆ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಯ ಹೆಸರು ಹೇಳಿ ವಾಹನಗಳು ಮುಂದುವರಿಯುತ್ತಿವೆ ಎಂದು ಹೇಳಿ ದ್ದಾರೆ.
ಪ್ರವಾಸಿಗರು ಇಷ್ಟ ಬಂದ ಹಾಗೆ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದಕ್ಕೆ ಅವಕಾಶ ನೀಡದೆ ಅದಕ್ಕೆ ಸಮಯ ನಿಗದಿ ಮಾಡಬೇಕು. ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಪ್ರವೇಶಾವಕಾಶ ಮಾಡಿದಲ್ಲಿ ಪ್ರವಾಸಿಗರ
ನಿಯಂತ್ರಣ ಸುಲಭವಾಗುವುದಲ್ಲದೆ, ವ್ಯವಸ್ಥಿತ ಪ್ರವಾಸೋದ್ಯಮಕ್ಕೂ ಇದು ಪೂರಕವಾಗುತ್ತದೆ. ಇದರಿಂದ ಪ್ರವಾಸಿಗರ ಮೂಲಭೂತ ದಿನಚ-ರಿಗೂ ಈ ಸಮಯ ನಿಗದಿ ಸಹಾಯವಾಗುತ್ತದೆ ಎಂದು ತಿಳಿಸದ್ದಾರೆ.
ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯೊಳಗೆ ಪ್ರವಾಸಿಗರು ಆನ್ ಲೈನ್ ಬುಕ್ಕಿಂಗ್ ಮೂಲಕ ಬಂದು ಹೋಗುವಂತೆ ಮಾಡಿದಲ್ಲಿ ಸಂಖ್ಯೆಯನ್ನೂ ನಿಯಂತ್ರಿಸಬಹುದು. ಸ್ಥಳೀಯರ ಓಡಾಟಕ್ಕೂ ಹಾಗೂ ಕಾರ್ಮಿಕರ ಓಡಾಟಕ್ಕೂ ಯಾವುದೇ ಅಡೆತಡೆ ಇಲ್ಲದೆ ಸೂಕ್ತ ಸಮಯ ನೀಡಿದಂತಾಗುತ್ತದೆ ಎಂದಿದ್ದಾರೆ.
ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯವನ್ನು ನಿಯಂತ್ರಿಸುವ ಹೆಚ್ಚಿನ ಯಾವುದೇ ಕ್ರಮಗಳನ್ನೂ ಪ್ರವಾಸೋದ್ಯಮ ಇಲಾಖೆ ಕೈಗೊಳ್ಳದೆ `ಸಂಪೂರ್ಣವಾಗಿ ವಿಫಲವಾಗಿದೆ. ಇಲಾಖೆಯ ಬೇಜವಾಬ್ದಾರಿ ನೀತಿಯಿಂದ ಪ್ರವಾಸಿ ತಾಣಗಳು ಕಸ ಸಂಗ್ರಹಣೆಯ ತಾಣಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಸೇರಿದಂತೆ ಭೂಮಿಯಲ್ಲಿ ಕರಗದ ಹಾಗೂ ಇನ್ನಿತರ ತ್ಯಾಜ್ಯ ಸಂಗ್ರಹಣೆಯಾಗದಂತೆ ಎಚ್ಚರ ವಹಿಸುವ ವ್ಯವಸ್ಥೆ ಜಾರಿಗೊಳಿಸಬೇಕೆಂದು ಈ ಮೂಲಕ ತಮ್ಮಲ್ಲಿ ಒತ್ತಾಯಿಸುತ್ತೇವೆ ಎಂದು ತಿಳಿಸಿದ್ದಾರೆ.
ಪರಿಸರಾಸಕ ಜಿಲ್ಲೆಯ ಪರಿಸರ ಸಮಸ್ಯೆಗಳನ್ನು ಚರ್ಚಿಸಲು ಪ್ರವಾಸೋದ್ಯಮ ಇಲಾಖೆ ಕೇವಲ ರೆಸಾರ್ಟ್ ಹಾಗೂ ಹೋಂಸ್ಟೇ ಮಾಲೀಕರನ್ನು ಮಾತ್ರ ಆಹ್ವಾನಿಸುತ್ತಿದ್ದು,” ಸಂಘಟನೆಗಳನ್ನು ಇದರಿಂದ ಹೊರಗಿಟ್ಟಿದೆ. ಪ್ರವಾಸೋದ್ಯಮ ಇಲಾಖೆಗೂ ಸಹ ಈ ಸೂಕ್ಷ್ಮ ಪ್ರದೇಶಗಳ ಸಂರಕ್ಷಣೆಯ ಬಗ್ಗೆ ಯಾವುದೇ ರೀತಿಯ ಕಾಳಜಿ ಇಲ್ಲದಿರುವುದನ್ನು ಇದು ಸ್ಪಷ್ಟಪಡಿಸಿದೆ ಎಂದಿದ್ದಾರೆ.
ಜಿಲ್ಲಾಧಿಕಾರಿಗಳು ಈ ಬಗ್ಗೆ ತಕ್ಷಣ ಇತಿಮಿತಿ ಇಲ್ಲದ ಪ್ರವಾಸೋದ್ಯಮಕ್ಕೆ ತಡೆಯೊಡ್ಡಿ ಈ ಪರಿಸರ ಸೂಕ್ಷ್ಮ ಪ್ರದೇಶಗಳಿಗೆ ಯಾವುದೇ ರೀತಿಯ ಹಾನಿ ತಟ್ಟದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

