लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸ್ಮಾರ್ಟ್ ಫೋನಿನೊಳಗಿನ ಅನ್ ಸ್ಮಾರ್ಟ್ ಅವಾಂತರಗಳು

ನಮ್ಮ ದಿನಚರಿ ಶುರುವಾಗುವುದು ದೇವರ ನಾಮಸ್ಮರಣೆ ಯಿಂದಲೋ ಅಥವಾ ಇಲ್ಲವೋ ಗೊತ್ತಿಲ್ಲ. ಆದರೆ ಬೆಳ್ಳಂಬೆಳಗ್ಗೆ ಫೋನ್ ಎತ್ತಿ ವಾಟ್ಸಾಪ್ ನೋಟಿಫಿಕೇಶನ್ ಜಾಲಾಡುವುದರಿಂದಲೇ ಎಂಬುದು ಕಹಿ ಸತ್ಯ. ಕಣ್ಣು ಪೂರ್ತಿ ಬಿಡದಿದ್ದರೂ ಬೆರಳುಗಳು ಮಾತ್ರ ಸರಿಯಾಗಿ ಆ ಹಸಿರು ಐಕಾನ್ ಮೇಲೆ ಹೋಗಿ ನಿಲ್ಲುತ್ತವೆ. ಒಮ್ಮೆ ಅನ್ಲಾಕ್ ಮಾಡಿದರೆ ಸಾಕು ಅಲ್ಲಿ ತೆರೆದುಕೊಳ್ಳುವುದು ಒಂದು ವಿಚಿತ್ರ ಲೋಕ. ಈ ಲೋಕದಲ್ಲಿ ನಗು ಇದೆ, ಅಳು ಇದೆ. ಆದರೆ ಇವೆಲ್ಲಕ್ಕಿಂತ  ಹೆಚ್ಚಾಗಿ ಅಸಹನೀಯ ಕಿರಿಕಿರಿಗಳ ಮಹಾಪೂರವೇ ಇದೆ. ಈ ‘ಟಿಂಗ್ ಸೌಂಡಿನ ಹಿಂದೆ ಅಡಗಿರುವ ನೂರಾರು ಕಾಮಿಡಿ ಪ್ರಸಂಗಗಳು ನಮ್ಮನ್ನು ದಿನನಿತ್ಯ ಹೈರಾಣಾಗಿಸುತ್ತಿವೆ.
‎
‎ಈ ಕಿರಿಕಿರಿಯ ಮೊದಲ ಅಧ್ಯಾಯ ಶುರುವಾಗುವುದೇ ಆ “ಶುಭೋದಯ” ಶೂರರಿಂದ. ಇವರ ಫೋನಿನಲ್ಲಿ ಯಾವುದೋ ಅದೃಶ್ಯ ಫ್ಯಾಕ್ಟರಿ ಇರಬೇಕು. ದಿನಕ್ಕೊಂದು ಹೊಸ ಡಿಸೈನ್‌ ಹೂವು, ಅದರ ಮೇಲೆ ಹಾರುವ ಹಕ್ಕಿ, ಅದರ ಪಕ್ಕದಲ್ಲಿ ಜೀವನದ ಅತಿದೊಡ್ಡ ತತ್ವದ ಸಾಲುಗಳನ್ನು ಕಳಿಸದಿದ್ದರೆ ಇವರಿಗೆ ನಿದ್ದೆಯೇ ಬರುವುದಿಲ್ಲ. ಇವರು ಕಳಿಸುವ ಆ ‘ಗುಡ್ ಮಾರ್ನಿಂಗ್’ ಚಿತ್ರಗಳು ಎಷ್ಟೊಂದು ಹೈ ಕ್ವಾಲಿಟಿ ಇರುತ್ತವೆ ಎಂದರೆ ನಮ್ಮ ಫೋನಿನಲ್ಲಿ ನಮ್ಮ ಫೋಟೋಗೆ ಸ್ಟೋರೇಜ್ ಇಲ್ಲದಂತಾಗಿರುತ್ತದೆ. ಇನ್ನು ಇವರು ಗ್ರೂಪ್‌ ಗಳಲ್ಲಿ ಮೆಸೇಜ್ ಹಾಕಿದಾಗ ಅದಕ್ಕೆ ಪ್ರತಿಯಾಗಿ ಹತ್ತು ಜನ ಹಾಕುವ ಆ ಸಾಲು ಸಾಲು ಇಮೆಜುಗಳನ್ನು ನೋಡುವುದೇ ಒಂದು ದೊಡ್ಡ ಶಿಕ್ಷೆ.
‎
‎ಹೀಗೆ ಮೆಸೇಜ್‌ಗಳ ಕಾಟದಿಂದ ತಪ್ಪಿಸಿಕೊಂಡು ಸ್ಟೇಟಸ್ ಕಡೆಗೆ ಕಣ್ಣು ಹಾಯಿಸಿದರೆ ಅಲ್ಲಿ ನಡೆಯುವುದು ಅಪ್ಪಟ ನಾಟಕ ಕಂಪನಿ. ಒಬ್ಬ ವ್ಯಕ್ತಿ ಎಷ್ಟು ಬಾರಿ ಸ್ಟೇಟಸ್ ಬದಲಿಸಬಹುದು ಎಂಬ ದಾಖಲೆ ಬರೆಯುವವರೇ ಇಲ್ಲಿ ಹೆಚ್ಚು. ಕಾಫಿ ಕುಡಿದರೆ ಸ್ಟೇಟಸ್, ಮಳೆ ಬಂದರೆ ಸ್ಟೇಟಸ್, ಅತ್ತರೆ ಸ್ಟೇಟಸ್, ನಕ್ಕರೆ ಸ್ಟೇಟಸ್ . ಕೊನೆಗೆ ಜ್ವರ ಬಂದು ಥರ್ಮಾಮೀಟರ್ ಬಾಯಲ್ಲಿ ಇಟ್ಟುಕೊಂಡಿದ್ದರೂ ಅದರದ್ದೊಂದು ಫೋಟೋ ತೆಗೆದು “ಫೀಲಿಂಗ್ ಸಿಕ್”
‎
ಎಂದು ಹಾಕುವ ಮಹಾನುಭಾವರಿದ್ದಾರೆ. ಇನ್ನು ಕೆಲವರಂತೂ ಸ್ಟೇಟಸ್ ಮೂಲಕವೇ ಪರೋಕ್ಷ ಯುದ್ಧ ಸಾರುತ್ತಾರೆ. ಯಾರೋ ಒಬ್ಬನಿಗೆ ಬೈಯಲು ಇಡೀ ಜಗತ್ತಿಗೆ ಕೇಳಿಸುವಂತೆ ಯಾವುದೋ ಸಿನಿಮಾದ ಡೈಲಾಗ್ ಹಾಕಿ “ಯಾರಿಗೆ ಗೊತ್ತು ಅವರಿಗೆ ಗೊತ್ತು” ಎಂಬ ಒಗಟು ಬಿಡಿಸುತ್ತಾರೆ. ಇದು ಸಂವಹನವೋ ಅಥವಾ ಸರ್ಕಸ್ಸೊ ಎಂಬ ಗೊಂದಲ ನಮಗೆ ಶುರುವಾಗುತ್ತದೆ.
‎
‎ಈ ಸ್ಟೇಟಸ್ ಎಂಬ ಮಾಯಾಲೋಕದಿಂದ ಆಚೆ ಬಂದು ಯಾವುದೋ ಕೆಲಸಕ್ಕೆ ಕೈ ಹಾಕಿದರೆ ಅಷ್ಟರಲ್ಲಿ ಯಾವುದೋ ಗ್ರೂಪ್‌ನಿಂದ ವಿಡಿಯೋ ಕಾಲ್ ಎಂಬ “ಡಿಜಿಟಲ್ ಬಾಂಬ್” ಬೀಳುತ್ತದೆ. ಎದುರಿಗಿರುವವರು ಸ್ನಾನ ಮಾಡಿದ್ದಾರೋ ಇಲ್ಲವೋ, ಅಥವಾ ಅವರು ಯಾವುದೋ ಮೀಟಿಂಗ್‌ನಲ್ಲಿ ಇದ್ದಾರೋ ಎಂಬ ಕನಿಷ್ಠ ಜ್ಞಾನವೂ ಇಲ್ಲದೆ ಗ್ರೂಪ್ ಕಾಲ್ ಮಾಡುವುದು ಇಂದಿನ ಫ್ಯಾಷನ್. ಆ ಕರೆ ಎತ್ತಿದರೆ ಸಾಕು ಅಲ್ಲಿ ಕನಿಷ್ಠ ಹತ್ತು ಜನ ಪರಸ್ಪರ -ಮುಖ ನೋಡಿಕೊಂಡು “ಕೇಳಿಸ್ತಾ ಇದೆಯಾ?”, “ಏನೋ ಸೌಂಡ್ ಬರ್ತಾ ಇಲ್ಲ”, “ನೆಟ್ವರ್ಕ್ ಸಿಗ್ತಾ ಇಲ್ಲ” ಅಂತ ಕಿರುಚುತ್ತಾ ಹತ್ತು ನಿಮಿಷ ಕಳೆಯುತ್ತಾರೆ. ಇನ್ನು ಕೆಲವರು ಆಡಿಯೋ ಮೆಸೇಜ್ ಕಳಿಸುವ ಸೋಂಬೇರಿಗಳು. ಎರಡು ನಿಮಿಷದ ಆಡಿಯೋ ಕಳಿಸಿ ಕೊನೆಗೆ “ಸರಿ ಆಯ್ತು ಬಿಡು” ಎಂಬ ಮೂರೇ ಶಬ್ದ ಹೇಳಿರುತ್ತಾರೆ. ಅದನ್ನು ಕೇಳಲು ನಾವು ಇಯರ್ ಫೋನ್ ಹುಡುಕುವಷ್ಟರಲ್ಲಿ ಅರ್ಧ ಪ್ರಾಣ ಹೋಗಿರುತ್ತದೆ.
‎
ಇಷ್ಟೆಲ್ಲಾ ಗದ್ದಲದ ನಡುವೆ ಈ ಫಾರ್ವರ್ವರ್ಡ್ ವೀರರ ಉಪಟಳವಂತೂ ಕೇಳುವುದೇ ಬೇಡ. “ಈ ಮೆಸೇಜ್ ಅನ್ನು 11 ಜನಕ್ಕೆ ಕಳಿಸಿ, ಇಲ್ಲದಿದ್ದರೆ ನಿಮ್ಮ ಫೋನ್ ಬ್ಲಾಸ್ಟ್ ಆಗುತ್ತದೆ” ಎನ್ನುವಂತಹ ವಿಚಿತ್ರ ಗಾಳಿ ಸುದ್ದಿಗಳನ್ನು ಇವರು ಅತೀ ನಂಬಿಕೆಯಿಂದ ಹಂಚುತ್ತಾರೆ. ಯಾವುದೋ ದೇಶದ ಯಾವುದೋ ವಿಡಿಯೋವನ್ನು ನಮ್ಮೂರಿನ ಘಟನೆ ಎಂದು ನಂಬಿಸಿ ಆತಂಕ ಹುಟ್ಟಿಸುವುದು ಇವರಿಗೆ ಅತೀ ಪ್ರಿಯವಾದ ಕೆಲಸ. ಇನ್ನು ಇಷ್ಟೆಲ್ಲಾ ಕಿರಿಕಿರಿ ಕೊಡುವ ಜನರೇ ಆಮೇಲೆ ನಾನು ಬ್ಯುಸಿ ಇದ್ದೆ, ಮೆಸೇಜ್ ನೋಡಿಲ್ಲ ಎಂಬ ಸುಳ್ಳನ್ನು ಹಾರಿ ಬಿಡುತ್ತಾರೆ. ಇದರ ಜೊತೆ ಬ್ಲೂ ಟಿಕ್ ಆಫ್ ಮಾಡಿ ಲಾಸ್ಟ್ ಸೀನ್ ಮರೆಮಾಚಿ ಅಡಗಿಕೊಳ್ಳುವ ಈ ಡಿಜಿಟಲ್ ಕಳ್ಳ ಪೊಲೀಸ್ ಆಟ ನೋಡುವುದೇ ಒಂದು ಮೋಜು.
‎
‎ವಾಸ್ತವದಲ್ಲಿ ಈ ವಾಟ್ಸಾಪ್ ಎಂಬುದು ಒಂದು ಚಕ್ರವ್ಯೂಹವಿದ್ದಂತೆ. ಒಳಗೆ ಹೋಗುವುದು ಸುಲಭ ಆದರೆ ಆ ನೋಟಿಫಿಕೇಶನ್‌ಗಳ ಸುಳಿಯಿಂದ ಹೊರಬರುವುದೇ ಸಾಹಸ. ನಾವು ಸಂವಹನವನ್ನು ಸುಲಭಗೊಳಿಸಲು ತಂತ್ರಜ್ಞಾನ ತಂದೆವು. ಆದರೆ ಈಗ ಅದೇ ತಂತ್ರಜ್ಞಾನ ನಮ್ಮನ್ನು ಆಳುತ್ತಿದೆ. ಪಕ್ಕದ ರೂಮಿನಲ್ಲಿರುವ ಅಮ್ಮನಿಗೆ ಕೊಡು ಎಂದು ಮೆಸೇಜ್ ಮಾಡುವ ಹಂತಕ್ಕೆ ನಾವು ತಲುಪಿದ್ದೇವೆ ಎಂದರೆ ನಮ್ಮ ಸೋಂಬೇರಿತನಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೆ? ಈ ಡಿಜಿಟಲ್ ಗದ್ದಲದ ನಡುವೆ ನೈಜ ಬದುಕಿನ ಮೌನ ಮತ್ತು ಮುಖಾಮುಖಿ ಮಾತುಕತೆಗಳು ಹರಾಜಾಗುತ್ತಿವೆ.
‎
‎ಆದರೆ ನೆನಪಿಡಿ ಜಗತ್ತು ನಿಮ್ಮ ನೋಟಿಫಿಕೇಶನ್‌ಗಾಗಿ ಕಾಯುತ್ತಾ ಕುಳಿತಿಲ್ಲ ಮತ್ತು ಪ್ರತಿಯೊಂದು ಫಾರ್ವಡ್್ರ ಮೆಸೇಜ್‌ಗೂ ಪ್ರತಿಕ್ರಿಯಿಸುವುದು ನಿಮ್ಮ ಜನ್ಮಸಿದ್ಧ ಹಕ್ಕೇನಲ್ಲ. ಇಂದೇ ಆ ಮ್ಯೂಟ್ ಮತ್ತು ಡಿಲೀಟ್ ಬಟನ್‌ಗಳ ಜೊತೆ ಸ್ವಲ್ಪ ಸ್ನೇಹ ಬೆಳೆಸಿ. ದಿನದಲ್ಲಿ ಕನಿಷ್ಠ ಒಂದು ಗಂಟೆಯಾದರೂ ಆ ಹಸಿರು ಐಕಾನ್‌ನಿಂದ ಮುಕ್ತಿ ಪಡೆದು ಕಿಟಕಿಯಾಚೆಯ ನಿಜವಾದ ಪ್ರಪಂಚವನ್ನು ನೋಡಿ, ನಿಮ್ಮ ಜೀವನದ ಅತ್ಯುತ್ತಮ ಕ್ಷಣಗಳು ಯಾರದೋ ಸ್ಟೇಟಸ್ ನಲ್ಲಿ ಅಥವಾ ಗ್ರೂಪಿನಲ್ಲಿರುವುದಿಲ್ಲ.ನೀವು ಪೊನ್ ಬದಿಗಿಟ್ಟು ನಗುವ ಅ ಕ್ಷಣಗಲ್ಲಿ.

ಗ್ರೀಷ್ಮ.ಹೊಸೂರು.

About Author

Leave a Reply

Your email address will not be published. Required fields are marked *

You may have missed