ಬಿಜೆಪಿ ಮುಖಂಡರು ದುಬಾರಿ ಜೀವನ ತ್ಯಜಿಸಿ ಮಾದರಿಯಾಗಲಿ- ಎಚ್.ಎಚ್.ದೇವರಾಜ್….
1 min read
ಬಿಜೆಪಿ ಮುಖಂಡರು ದುಬಾರಿ ಜೀವನ ತ್ಯಜಿಸಿ ಮಾದರಿಯಾಗಲಿ- ಎಚ್.ಎಚ್.ದೇವರಾಜ್
ಚಿಕ್ಕಮಗಳೂರು: ನಾಗರೀಕರಿಗೆ ಸರಳ ಜೀವನದ ಬಗ್ಗೆ ಕರೆ ನೀಡಿರುವ ಪ್ರಧಾನಿ ಮೋದಿ ಮತ್ತು ಬಿಜೆಪಿ ಮುಖಂಡರು ಮೊದಲು ಅವರು ದುಬಾರಿ ಜೀವನ ತ್ಯಜಿಸಿ ಮಾದರಿಯಾಗಲಿ ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಛೇಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರಮೋದಿ ಅವರು ಚಿನ್ನ ಖರೀದಿಸಬೇಡಿ, ಅಡುಗೆ ಎಣ್ಣೆ ಕಡಿಮೆ ಬಳಸಿ, ಪೆಟ್ರೋಲ್, ಡೀಸೆಲ್ ಮಿತಬಳಕೆ, ರಸಗೊಬ್ಬರ ಕಡಿಮೆ ಬಳಸಿ ಎಂದು ಕರೆ ನೀಡಿದ್ದಾರೆ. ಮೊದಲು ಅವರು ವಿದೇಶಿ ಪ್ರವಾಸ ಕಡಿಮೆ ಮಾಡಲಿ, ಲಕ್ಷಾಂತರ ರೂ. ಮೌಲ್ಯದ ದಿನಕ್ಕೊಂದು ಸೂಟು ಹಾಕುವುದನ್ನು ನಿಲ್ಲಿಸಲಿ, ಅದನ್ನು ಬಿಡದೆ ಸರಳ ಜೀವನಕ್ಕೆ ಕರೆ ಕೊಡುವುದು ಮೂರ್ಖತನದ ಪರಮಾವದಿ ಎಂದು ಟೀಕಿಸಿದರು.
ಜನರಿಗೆ ಅಗತ್ಯ ಮೂಲಭೂತ ಸೌಕರ್ಯ ನೀಡುವುದು ಎಲ್ಲ ಸರಕಾರಗಳ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿ. ಅದರಿಂದ ನುಣುಚಿಕೊಳ್ಳುವ ದೃಷ್ಟಿಯಿಂದ ಮತ್ತು ತಮ್ಮ ಆಡಳಿತದ ವೈಫಲ್ಯ ಮೆರೆಮಾಚಲು ಈ ಸರಳ ಜೀವನಕ್ಕೆ ಕರೆ ನೀಡಿದ್ದಾರೆ.
ಮೊದಲು ಬಿಜೆಪಿ ಮುಖಂಡರು ತಮ್ಮಲ್ಲಿರುವ ಎಲ್ಲವಾಹನಗಳನ್ನು ಸ್ಥಗಿತ ಮಾಡಿ ಮಾದರಿಯಾಗಲಿ.” ತಮ್ಮಲ್ಲಿರುವ ಕಾನೂನುಗಳಿರುವುದು ಜನಸಾಮಾನ್ಯರಿಗೆ ಮಾತ್ರವಲ್ಲ. ಅದು ಎಲ್ಲರಿಗೂ ಅನ್ವಯಿಸಬೇಕು ಎಂದು ಹೇಳಿದರು.
ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರೂ ಕೂಡ ಇಂತಹ ಸರಳ ಜೀವನದ ಬಗ್ಗೆ ಕರೆ ನೀಡಿದ್ದರು ಎಂದು ಕೆಲ ಬಿಜೆಪಿಯವರು ಸಾಮಾಜಿಕ ಜಾಲತಾಣದಲ್ಲಿ ಅವರ ಭಾವಚಿತ್ರ ಹಾಕಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಸುಳ್ಳು ಕಥೆ ಕಟ್ಟುವುದರಲ್ಲಿ ಅವರು ನಿಸ್ಸಿಮರು ಎಂದು ಟೀಕಿಸಿದರು.
ಶೃಂಗೇರಿ ಕ್ಷೇತ್ರದ ಮರು ಮತ ಎಣಿಕೆ ನಂತರ ಶಾಸಕ ಟಿ.ಡಿ.ರಾಜೇಗೌಡರ ಕಚೇರಿ ಮುಂದೆ ಇದ್ದಂತಹ ನಾಮಫಲಕವನ್ನು ಬಿಜೆಪಿ ಕಾರ್ಯಕರ್ತರು ಕಿತ್ತೆಸೆದಿದ್ದರು. ಕೂಡಲೇ ಅವರ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
’ಬಿಜೆಪಿ ಯಲ್ಲಿ ನಿಷ್ಠಾವಂತ ನಾಯಕರಾಗಿರುವ ಶೆಟ್ಟಿಗದ್ದೆ ರಾಮಸ್ವಾಮಿ ಮತ್ತು ಸತೀಶ್ ಅದ್ದಡ ಅವರ ಮೇಲೆ ಕಾಂಗ್ರೆಸ್ಗೆ ಸಹಕಾರ ನೀಡಿರುವ ಆರೋಪ ಹೊರಿಸುವ ಮೂಲಕ ಜೀವರಾಜ್ ಮೂರನೇ ದರ್ಜೆ ರಾಜಕಾರಣ ಮಾಡಿದ್ದಾರೆ ಎಂದು ದೂರಿದರು.
ಗ್ರಾಮೀಣ ಭಾಗದಲ್ಲಿ ಕುಡಿವ ನೀರಿನ ಅಭಾವ ಸೃಷ್ಟಿಯಾಗಿದ್ದು ಕೂಡಲೇ ಜಿಲ್ಲಾ ಪಂಚಾಯಿತಿ ಸಿಇಒ • ಜಿಲ್ಲಾಕಾರಿಗಳು ಭೇಟಿ ನೀಡಿ ಸಮಸ್ಯೆ ಬಗೆಹಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡರಾದ ಎಂ.ಡಿ.ರಮೇಶ್, ಹಿರೇಮಗಳೂರು ರಾಮಚಂದ್ರ, ಶಾಂತಕುಮಾರ್, ಸಂತೋಷ್ ಲಕ್ಯಾ ಮತ್ತಿತರಿದ್ದರು.

