ಒಂದು ದುರಂತದ ಸಾವಿಗೆ ಸಾಕ್ಷಿಯಾಗಿ ನಿಂತ ಮಾಣಿಕ್ಯಧಾರ ಜಲಪಾತ, ಕೇರಳ ಮೂಲದ ಶ್ರೀನಂದಾ ಸಾವಿಗೆ ಕಾರಣವೇನು? ಮರಣೋತ್ತರ ವರದಿಯಲ್ಲಿ ಬಯಲಾಯ್ತಾ ವಾಸ್ತವ ಸ್ಥಿತಿ!….
1 min read
ಅವಿನ್ ಟಿವಿ ಸುದ್ದಿಜಾಲ ✍️:
ಒಂದು ದುರಂತದ ಸಾವಿಗೆ ಸಾಕ್ಷಿಯಾಗಿ ನಿಂತ ಮಾಣಿಕ್ಯಧಾರ ಜಲಪಾತ, ಕೇರಳ ಮೂಲದ ಶ್ರೀನಂದಾ ಸಾವಿಗೆ ಕಾರಣವೇನು? ಮರಣೋತ್ತರ ವರದಿಯಲ್ಲಿ ಬಯಲಾಯ್ತಾ ವಾಸ್ತವ ಸ್ಥಿತಿ!
ಚಿಕ್ಕಮಗಳೂರು ಏ ೧೧: ಪ್ರವಾಸಿ ಶ್ರೀನಂದಾ ಸಾವಿಗೆ ಕಾರಣವೇನು? ಮರಣೋತ್ತರ ವರದಿಯಲ್ಲಿ ಬಯಲಾಯ್ತಾ ಅಸಲಿ ಸತ್ಯ!
ಕಾಫಿನಾಡು ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತವು ಹಿಮಾಲಯಕ್ಕಿಂತಲೂ ಹಳೆಯದು,ಭಾರತದ ಪಶ್ಚಿಮ ಕರಾವಳಿಗೆ ಅಡ್ಡಲಾಗಿ ನಿಂತಿರುವ ಈ ಪರ್ವತ ಶ್ರೇಣಿಗಳನ್ನು ಪಶ್ಚಿಮ ಘಟ್ಟಗಳು ಎಂದು ಕರೆಯುತ್ತೇವೆ, ಇದು ಕೇವಲ ಗುಡ್ಡಗಳ ಸಾಲಲ್ಲ, ಕೋಟ್ಯಾಂತರ ಜೀವ ವೈವಿಧ್ಯತೆಗಳಿಗೆ ಆಸರೆಯಾಗಿರುವ ಪ್ರಕೃತಿಯ ಅದ್ಭುತಗಳು ಜೀವವೈವಿಧ್ಯತೆಗಳು ಈ ಪಶ್ಚಿಮ ಘಟ್ಟದ ಗರ್ಭದೊಳಗಿವೆ , ಕೋಟ್ಯಾನು ಕೋಟಿ ಜೀವಿಗಳಿಗೆ ಆಸರೆಯಾಗಿದ್ದ ಇಂತಹ ಪರ್ವತ ಶ್ರೇಣಿಯು ಬಾಳಿ ಬದುಕಿ ಭಾರತದ ಭವಿಷ್ಯವಾಗಿ ಅರಳಬೇಕಾಗಿದ್ದ ಕೇರಳ ಮೂಲದ ಪ್ರವಾಸಿ ಶ್ರೀನಂದಾಳ ದುರಂತ ಸಾವಿಗೆ ಕಾರಣವಾಗಿದ್ದಾದರೂ ಯಾಕೆ ಎಂಬ ಈ ಪ್ರಶ್ನೆ ಯಾರನ್ನು ಕಾಡದೇ ಇರಲಾರದು.
ಈ ಘಟ್ಟ ಪ್ರದೇಶಕ್ಕೆ ಪ್ರವಾಸಕ್ಕೆಂದು ಬಂದು ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಪತ್ತೆಯಾಗಿದ್ದು
ಪ್ರಪಾತಕ್ಕೆ ಬಿದ್ದು ಸಾವಿಗೀಡಾಗಿದ್ದಾಳೆ ಎಂದು ತಿಳಿಸಿದ ಚಿಕ್ಕಮಗಳೂರಿನ ಪೊಲೀಸ್ ಮೂಲಗಳು
ಶ್ರೀನಂದಾ ಸಾವಿನಲ್ಲಿ ಯಾವುದೇ ಅಸಹಜತೆ ಇಲ್ಲ ಎಂದು ಪ್ರಾಥಮಿಕ ಮರಣೋತ್ತರ ವರದಿಯಲ್ಲೂ ಉಲ್ಲೇಖವಾಗಿದೆ ಎಂದು ತಿಳಿದು ಬಂದಿದೆ,ಐದು ದಿನಗಳ ಹಿಂದೆ ಕಾಫಿನಾಡು ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಪ್ರವಾಸಕ್ಕೆ ಬಂದು ನಿಗೂಢವಾಗಿ ನಾಪತ್ತೆಯಾಗಿದ್ದ ಕೇರಳ ಮೂಲದ ಬಾಲಕಿ ಶ್ರೀನಂದಾ (15) ಶವವಾಗಿ ಪತ್ತೆಯಾಗಿರುವುದು ಪಾಲಕರನ್ನು ದುಃಖದ ಕಡಲಲ್ಲಿ ಮುಳುಗಿಸಿದೆ.
ಪ್ರಪಾತಕ್ಕೆ ಬಿದ್ದು ಸಾವಿಗೀಡಾಗಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿದರು ಕೂಡ ಶ್ರೀನಂದಾ ಪಾಲಕರು ಮಾತ್ರ ಆಕೆಯ ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಆರಂಭಿಕ ಮರಣತ್ತೋರ ವರದಿ ಹೊರಬಿದ್ದಿದೆ.
ಶ್ರೀನಂದಾ ಸಾವಿನಲ್ಲಿ ಯಾವುದೇ ಅಸಹಜತೆ ಇಲ್ಲ ಎಂದು ಪ್ರಾಥಮಿಕ ಮರಣೋತ್ತರ ವರದಿ ಹೇಳುತ್ತದೆ. ವರದಿಯ ಪ್ರಕಾರ, ತಲೆಯ ಬಲಭಾಗಕ್ಕೆ ಗಂಭೀರವಾದ ಗಾಯವಾಗಿರುವುದೇ ಸಾವಿಗೆ ಕಾರಣ ಎಂದು ಉಲ್ಲೇಖಿಸಲಾಗಿದೆ. ಶ್ರೀನಂದಾ ಅವರ ದೇಹದಾದ್ಯಂತ ಗಾಯಗಳಾಗಿವೆ. ಹಲವು ಸ್ಥಳಗಳಲ್ಲಿ ಮೂಳೆಗಳು ಮುರಿದಿದ್ದು, ಇದೆಲ್ಲವೂ ಮೇಲಿಂದ ಬಿದ್ದು ಸಂಭವಿಸಿವೆ ಎಂದು ಮರಣೋತ್ತರ ವರದಿ ಹೇಳಿದೆ.
ಅಂದಹಾಗೆ, ನಿನ್ನೆ ಶ್ರೀನಂದಾಳ ಮೃತದೇಹದೊಂದಿಗೆ ಸಂಬಂಧಿಕರು ಮನೆಗೆ ಮರಳಿ ಅಂತ್ಯಕ್ರಿಯೆ ನೆಡೆಸಿದ್ದಾರೆ. ಆಕೆಯ ಮೃತದೇಹದಲ್ಲಿ ಯಾವುದೇ ಅಸಾಮಾನ್ಯ ಸಂಗತಿಗಳು ಪತ್ತೆಯಾಗಿಲ್ಲ ಎಂದು ತನಿಖಾ ವರದಿಯಲ್ಲಿ ತಿಳಿಸಲಾಗಿದೆ. ಅಂದರೆ, ಇದು ಕೊಲೆಯಲ್ಲ ಎಂದು ನಂಬಲಾಗಿದೆ. ಮೊನ್ನೆ ಬೆಳಗ್ಗೆ ನಡೆಸಿದ ಹುಡುಕಾಟದಲ್ಲಿ ಮಧ್ಯಾಹ್ನ 12 ಘಂಟೆ ಸುಮಾರಿಗೆ ಶ್ರೀನಂದಳಾ ಮೃತದೇಹ ಪತ್ತೆಯಾಗಿದೆ. ಈ ಸಮಯದಲ್ಲಿ ಶ್ರೀನಂದಾಳ ಬಟ್ಟೆ ಹರಿದಿದ್ದು, ಮರದ ಕೊಂಬೆಗಳು ಬಡಿದು ಸಾವಿಗೀಡಾಗಿರಬಹುದು ಎಂಬುದು ಪ್ರಾಥಮಿಕ ವರದಿ ಹೇಳಿದೆ.
ಬಾಬಾ ಬುಡನ್ಗಿರಿ ಬಳಿ ಇರುವ ಮಾಣಿಕ್ಯಧಾರ ಜಲಪಾತ ಹತ್ತಿರ 1500 ಅಡಿ ಆಳದಲ್ಲಿ ಶ್ರೀನಂದಾಳ ಶವ ಪತ್ತೆಯಾಗಿದೆ. ಪೊಲೀಸರು, ಅರಣ್ಯ ಇಲಾಖೆ ಮತ್ತು ವಿಪತ್ತು ನಿರ್ವಹಣಾ ತಂಡ ನಡೆಸಿದ ಜಂಟಿ ಹುಡುಕಾಟದ ವೇಳೆ ಶವ ಪತ್ತೆಯಾಗಿದೆ. ತಮ್ಮ ಮಗಳು ಕಾಣೆಯಾದಾಗಿನಿಂದ ಮೃತಳ ಕುಟುಂಬವು ಸಾಕಷ್ಟು ಅನುಮಾನಗಳನ್ನು ಹೊರಹಾಕಿ, ಸಂಶಯವನ್ನು ವ್ಯಕ್ತಪಡಿಸಿತ್ತು. ಆದ್ದರಿಂದ, ಶವ ಪತ್ತೆಯಾದ ಸ್ಥಳದಲ್ಲೇ ಪೊಲೀಸರ ತಂಡವು ತನಿಖೆಯನ್ನು ಮುಂದುವರೆಸಿತ್ತು.
ಶ್ರೀನಂದಳಾ ತಂದೆಯ ಸಮ್ಮುಖದಲ್ಲಿಯೂ ತನಿಖೆ ನಡೆಸಲಾಯಿತು. ಕುಟುಂಬ ಮಾಡಿರುವ ಆರೋಪಗಳ ಆಯಾಮದಲ್ಲೂ ತನಿಖೆ ಮಾಡಲಾಗುವುದು ಮತ್ತು ಯಾವುದೇ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಚಿಕ್ಕಮಗಳೂರು ಎಸ್ಪಿ ಜಿತೇಂದ್ರ ದಯಾಮ ತಿಳಿಸಿದ್ದಾರೆ.
ಏನಿದು ಘಟನೆ?
15 ವರ್ಷದ ಶ್ರೀನಂದಾ, ಪಾಲಕ್ಕಾಡ್ನ ಕದಂಬಜಿಪುರಂ ಮೂಲದ ರಮೇಶ್ ಗೋಪಾಲನ್ ಮತ್ತು ರೋಹಿಣಿ ದಂಪತಿಯ ಪುತ್ರಿ. 40 ಜನರ ಗುಂಪು ಕಳೆದ ಶನಿವಾರ ಪ್ರವಾಸಕ್ಕಾಗಿ ತಮ್ಮ ಊರಿನಿಂದ ಕರ್ನಾಟಕಕ್ಕೆ ಆಗಮಿಸಿತ್ತು. ಮಂಗಳವಾರ (ಏ.07) ಸಂಜೆ 5:35ರ ಸುಮಾರಿಗೆ ಶ್ರೀನಂದಾ ದಿಢೀರ್ ಕಣ್ಮರೆಯಾದರು. ಸಂಜೆ 5.20ಕ್ಕೆ ಕುಟುಂಬದೊಂದಿಗೆ ತೆಗೆದ ಫೋಟೋದಲ್ಲಿದ್ದ ಬಾಲಕಿ, 5.35ಕ್ಕೆ ನಾಪತ್ತೆ ಆದಳು. ಇದು ಹೆತ್ತವರಲ್ಲಿ ಭಾರೀ ಆತಂಕ ಹಾಗೂ ಅನುಮಾನ ಮೂಡಿಸಿತು.
ತೀವ್ರ ಹುಡುಕಾಟದ ಮೂರನೇ ದಿನದಂದು ಬಾಬಾ ಬುಡನ್ಗಿರಿ ಬಳಿ 1500 ಅಡಿ ಆಳದಲ್ಲಿ ಶ್ರೀನಂದಾ ಶವ ಪತ್ತೆಯಾದ ಸುದ್ದಿ ತಿಳಿದ ತಕ್ಷಣ ಆಕೆಯ ಕುಟುಂಬದಲ್ಲಿ ಆಕ್ರದಂನ ಮುಗಿಲು ಮುಟ್ಟಿ ಈ ಗಿರಿ ಶ್ರೇಣಿ ಒಂದು ದುರಂತ ಸಾವಿಗೆ ಸಾಕ್ಷಿಯಾಗಿದ್ದು ವಿಷಾದದ ಸಂಗತಿ.
••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✍️
ಚಿಕ್ಕಮಗಳೂರು

