ಮಾನವಶಾಸ್ತ್ರಜ್ಞ ಪಟೇಲರ ಪ್ರಯೋಗಶೀಲತೆಗೆ ಒಲಿದು ಬಂದ ಸುವರ್ಣ ಕನ್ನಡಿಗ ಪುರಸ್ಕಾರ…..
1 min read
ಅವಿನ್ ಟಿವಿ ಸುದ್ದಿಜಾಲ ✍️: ಮಾನವಶಾಸ್ತ್ರಜ್ಞ ಪಟೇಲರ ಪ್ರಯೋಗಶೀಲತೆಗೆ ಒಲಿದು ಬಂದ ಸುವರ್ಣ ಕನ್ನಡಿಗ ಪುರಸ್ಕಾರ.
ಚಿಕ್ಕಮಗಳೂರು: ಇದು ಪ್ರಶಸ್ತಿಗಳ ಯುಗ, ಯಾವುದೇ ಪ್ರಶಸ್ತಿಗಳನ್ನು ಕೇಳಿ ಪಡೆಯುವುದಕ್ಕೂ ಅಥವಾ ತಾನಾಗೆ ಒಲಿದು ಬರುವುದಕ್ಕೂ ವ್ಯತ್ಯಾಸವಿದೆ, ಈ ವ್ಯತ್ಯಾಸದ ಗೆರೆಯನ್ನು ಅರಿಯದೆ ಹೋದರೆ ಪ್ರಶಸ್ತಿಗಳ ಮೌಲ್ಯ ತಿಳಿಯುವುದಿಲ್ಲ ಮತ್ತು ಅದರ ಮಹತ್ವ ಏನು ಎಂಬುದು ಅರಿಯುವುದಿಲ್ಲ ಎಂಬ ಒಂದು ಸಣ್ಣ ವಿಶ್ಲೇಷಣೆಯೊಂದಿಗೆ ಅವಿನ್ ಟಿವಿ ಸುದ್ದಿಜಾಲ ಮಾತನಾಡುತ್ತಿದೆ….
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ರಂಗೇನಹಳ್ಳಿಯ ಡಾ.ಹೆಚ್ ಎಂ.ಮರಳುಸಿದ್ದಯ್ಯ ಪಟೇಲರು ಹೆಚ್ಚಾಗಿ ಅವರ ಒಡನಾಡಿಗಳ ಮಧ್ಯೆ ಮೈಸೂರು ಪಟೇಲರು ಎಂದೆ ಚಿರಪರಿಚಿತರಾಗಿದ್ದಾರೆ, ಇಂತಹ ಮೈಸೂರು ಪಟೇಲರಿಗೆ ಕನ್ನಡಪ್ರಭ ಮತ್ತು ಏಷ್ಯಾ ನೆಟ್ ಸುವರ್ಣ ನ್ಯೂಸ್ ಸುದ್ದಿ ಸಂಸ್ಥೆ ಕೊಡ ಮಾಡುವ 2026 ನೇ ಸಾಲಿನ ಪ್ರತಿಷ್ಠಿತ *ಸುವರ್ಣ ಕನ್ನಡಿಗ ಪ್ರಶಸ್ತಿಯು* ತಾನಾಗಿಯೇ ಒಲಿದು ಬಂದು ಅದು ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ ಎಂಬ ಪ್ರಶಂಸೆಗೆ ಈ ಪಟೇಲರು ಒಳಗಾಗಿದ್ದಾರೆ.
ಪಟೇಲರು ಚಿಕ್ಕಮಗಳೂರು ಜಿಲ್ಲೆಯ ರಂಗೆನಹಳ್ಳಿಯಲ್ಲಿ ಹುಟ್ಟಿ ಮೈಸೂರಿನಲ್ಲಿ ನೆಲೆಗೊಂಡಿದ್ದರೂ ಸಹ ತನ್ನವರನ್ನು ತನ್ನ ಜಿಲ್ಲೆಯ ಜನತೆಯನ್ನು, ಗ್ರಾಮೀಣ ಬದುಕಿನ ಸೊಗಡು ಸಂಪದವನ್ನು ಮರೆತಿಲ್ಲ,ಪಟೇಲರು ಭಾರತೀಯ ಮಾನವ ವಿಜ್ಞಾನ ಸರ್ವೇಕ್ಷಣಾ ಸಂಸ್ಕೃತಿ ಮಂತ್ರಾಲಯದ ಮಾನವ ಶಾಸ್ತ್ರಜ್ಞರಾಗಿ, ವಿಜ್ಞಾನಿಯಾಗಿ, ಈ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಅವರು ದುಡಿದ ಕಾರ್ಯಕ್ಷೇತ್ರ ಬಹು ವಿಸ್ತಾರವಾದದ್ದು, ನಿವೃತ್ತಿ ಬದುಕಿನ ನಂತರವೂ ಕೂಡ ಹುಟ್ಟೂರು ರಂಗೆನಹಳ್ಳಿಯಲ್ಲಿ ಕೃಷಿ ಬದುಕನ್ನು ಮುಂದುವರಿಸುತ್ತಿದ್ದಾರೆ.
ಪೈಚಾಚಿಕ ಯುಗದಿಂದ ಇಂದಿನ ಆಧುನಿಕತೆಯ ಸ್ಮಾರ್ಟ್ ಯುಗಕ್ಕೆ ಈ ಮಾನವ ಸಂಕುಲ ಬಂದು ನಿಂತಿದ್ದರೂ ಕೂಡ, ಚಂದ್ರನ ಅಂಗಳದಲ್ಲಿ ಈ ಮನುಷ್ಯ ತನ್ನ ಹೆಜ್ಜೆ ಗುರುತನ್ನು ಮೂಡಿಸಿ, ಆನಂದದಿಂದ ಸ್ಪರ್ಶಿಸಿ ಚಂದ್ರನನ್ನು ಏರಿ ಇಳಿದಿದ್ದರೂ ಸಹ ಈ ನಾಡಿನ ಹಲವು ಗುಡ್ಡಗಾಡು ಕುಟುಂಬಗಳು, ಆದಿವಾಸಿ ಬುಡಕಟ್ಟು ಜನರು ಇಂದಿಗೂ ಕೂಡ ಹೆಣ್ಣು ಗಂಡುಗಳಾದಿಯಾಗಿ ನಾಗರೀಕ ಪ್ರಪಂಚದಿಂದ ಹೊರ ಉಳಿದು ಬೆತ್ತಲೆಯಾಗಿಯೇ ಶಿಲಾಯುಗದ ಜನರಂತೆ ಬದುಕುತ್ತಿದ್ದಾರೆ ಎಂಬ ಸತ್ಯ ಸಂಗತಿಯನ್ನು ಈ ಸಂದರ್ಭದಲ್ಲಿ ಮತ್ತೊಮ್ಮೆ ನಾವೆಲ್ಲ ನೆನಪು ಮಾಡಿಕೊಳ್ಳಬೇಕಾಗಿದೆ.
ಈ ಸಮಾಜದ ಕಟ್ಟಕಡೆಯ ಜನರಾಗಿ ಅ ಕಾಡಂಚಿನಲ್ಲಿ ಬದುಕುತ್ತಿರುವ ಇಂತಹ ಜನ ಸಮೂಹದ ಬಗ್ಗೆ ಕ್ಷೇತ್ರಾಧ್ಯಯನ ಮಾಡಿ, ಶೋಧನೆ ಸಂಶೋಧನೆಗೆ ಇಳಿದು, ಮಹಾಪ್ರಬಂಧವನ್ನು ರಚಿಸಿ, ಇಂತಹ ಬುಡಕಟ್ಟು ಜನಾಂಗದ ಬದುಕು ಭಾಷೆ ಸಂಸ್ಕೃತಿ ಆಹಾರ ವಿಹಾರ ಜೀವನ ಪದ್ಧತಿಯ ಬಗ್ಗೆ ಆಳವಾದ ಕ್ಷೇತ್ರ ಕಾರ್ಯ ನೆಡಸಿ ಸಮಾಜ ಮತ್ತು ಸರ್ಕಾರದ ಮೇಲೆ ಬೆಳಕು ಚೆಲ್ಲುವಂತಹ ವರದಿ ನೀಡಿ, ಮಾನವ ಶಾಸ್ತ್ರಜ್ಞರಾಗಿ, ವಿಜ್ಞಾನಿಯಾಗಿ ಹಲವು ಸಂಶೋಧನಾತ್ಮಕ ಕೃತಿಗಳನ್ನು ಪರಿಚಯಾತ್ಮಕವಾಗಿ ಪರಿಚಯಿಸಿ, ಕಾಡಿನ ಜನರನ್ನು ನಾಡಿಗೆ ಹೊರತಂದು ನಾಗರಿಕ ಸಮಾಜ ಜೊತೆಗೆ ಬದುಕಲು ಬಿಟ್ಟರೆ ಅವರ ಮಾನಸಿಕ ಸ್ಥಿತಿ, ಅವರು ಮಾತನಾಡುವ ಭಾಷೆ, ಆ ಭಾಷೆಯೊಳಗಿರುವ ದಟ್ಟ ಕಾನನದ ನಿಸರ್ಗ ಸಂಸ್ಕೃತಿ, ಅ ಕಾಡಿನ ಆಹಾರ ವಿಹಾರ, ಆಚಾರ ವಿಚಾರ, ಅವರ ಗಾಢವಾದ ಪರಿಸರ ಪ್ರಜ್ಞೆಯ ಮೇಲೆ ದಾಳಿ ಮಾಡಿದಂತೆ ಉಂಟಾಗುವ ದುಷ್ಪರಿಣಾಮಗಳು ಹಾಗೂ ಅ ಆದಿವಾಸಿ ಬುಡಕಟ್ಟು ಜನಾಂಗಗಳಲ್ಲಿರುವ ಅಪಾರವಾದ ಕೌಶಲ್ಯಯುತವಾದ ಕಸುಬು ಹಾಗೂ ಅವರ ಜ್ಞಾನ ಬಂಡಾರವು ನಶಿಸಿ ಹೋಗದಂತೆ ಎಚ್ಚರವಹಿಸುವ ಮೂಲಕ ಕಾಡಿನ ಬುಡಕಟ್ಟು ಬದುಕಿನಿಂದ ನಾಗರೀಕ ಬದುಕಿನ ಲೋಕಕ್ಕೆ ಕರೆತರುವ ಮುಂಚೆ ಯಾವೆಲ್ಲ ಎಚ್ಚರಿಕೆಗಳನ್ನು ವಹಿಸಬೇಕು ಎಂಬ ಬಗ್ಗೆ ಪರಿಣಾಮಕಾರಿಯಾಗಿ ಬೆಳಕು ಚೆಲ್ಲಿದವರು ಈ ಪಟೇಲರು,ಆದಿವಾಸಿ ಬುಡಕಟ್ಟುಗಳ ಹಕ್ಕು ಬಾಧ್ಯತೆಗಳನ್ನು ಮಾನವ ಶಾಸ್ತ್ರಜ್ಞ ಇಲಾಖೆ ಅಧಿಕಾರಿಯಾಗಿ ಹಲವು ಸಂದರ್ಭಗಳಲ್ಲಿ ಅವರು ಸರ್ಕಾರಕ್ಕೆ ನೀಡಿದ ವರದಿಗಳು, ಒಬ್ಬ ಸಾಹಿತಿಯಾಗಿ, ಬರಹಗಾರರಾಗಿ ಮೌಲ್ಯಯುತವಾದ ಕೃತಿಗಳ ಮೂಲಕ ಆದಿವಾಸಿಗಳ ಬದುಕು ಬವಣೆಯನ್ನು ನಾಗರೀಕ ಸಮಾಜಕ್ಕೆ ಸಮಗ್ರವಾಗಿ ಪರಿಚಯಿಸಿದ ಡಾ. ಮರಳುಸಿದ್ದಯ್ಯ ಪಟೇಲರ ಸಾಹಿತ್ಯ ಕೃಷಿ ಬಹು ವಿಶಿಷ್ಟವಾದುದು.
ಜೇನು ಕುರುಬ, ಕಾಡು ಕುರುಬ, ಜಾರ್ವ, ಗಂಟೆ ಚೋರ, ಹಂದಿ ಜೋಗಿ, ಗೂಂಗ್ಡೆ, ಸಿಳ್ಳೆಕ್ಯಾತ, ಮಲೆಕುಡಿಯ, ಸೋಲಿಗ, ಕಾರ್ವಿ, ಅಂಗಾರ, ಅಜಿಲ, ಹಂಡೆ ಕೊರಗ, ಸೊಪ್ಪು ಕೊರಗ, ಸಿದ್ದಿ ಜನಾಂಗ ಹೀಗೆ ಇನ್ನು ಮುಂತಾದ ಆದಿವಾಸಿ ಬುಡಕಟ್ಟು ಜನಾಂಗಗಳ ಜೀವನ ಮೌಲ್ಯ, ಅವರ ಸಾಂಸ್ಕೃತಿಕ ಕಥನ, ಪರಿಸರ ಪ್ರೇಮ, ಧಾರ್ಮಿಕ ಆಚರಣೆಗಳು ಸೇರಿ ಸುಮಾರು ಹತ್ತಕ್ಕೂ ಹೆಚ್ಚು ವಿವಿಧ ಕ್ಷೇತ್ರಗಳ ಅಧ್ಯಯನ ಮಾಡಿ, ಮಾನವೀಯ ಸಂವೇದನೆಯ ಬರಹವನ್ನು ಗ್ರಹಿಸಿ, ಮಾನವ ಶಾಸ್ತ್ರಜ್ಞನಾಗಿ ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲಿರುವ ಬುಡಕಟ್ಟು ಜನಾಂಗಗಳನ್ನು ಅಧ್ಯಯನ ಮಾಡಿ, ಉತ್ತರ ಭಾರತದ ಕೆಲವು ರಾಜ್ಯಗಳು ಸೇರಿದಂತೆ ಜಗತ್ತಿನ ಹತ್ತಕ್ಕೂ ಹೆಚ್ಚು ದೇಶಗಳಿಗೆ ಭೇಟಿಕೊಟ್ಟು, ಆದಿವಾಸಿ ಬುಡಕಟ್ಟು ಜನಾಂಗದ ಪುನಶ್ಚೇತನಕ್ಕಾಗಿ ಮಾನವೀಯ ನೆಲೆಗಟ್ಟಿನ ಮೇಲೆ ಕೊಡಮಾಡಿದ ಕರ್ತವ್ಯ ಮತ್ತು ಸೇವೆಯನ್ನು ಪರಿಗಣಿಸಿ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಸುದ್ದಿ ಸಂಸ್ಥೆಯು ವರ್ಷದ ಸುವರ್ಣ ಕನ್ನಡಿಗ 2026ರ ಪ್ರಶಸ್ತಿಯನ್ನು ಡಾ. ಮರಳುಸಿದ್ದಯ್ಯ ಪಟೇಲರಿಗೆ ಕೊಡ ಮಾಡಿದೆ.
ಪ್ರಶಸ್ತಿಗಾಗಿ ಅರ್ಜಿಯನ್ನು ಸ್ವೀಕರಿಸದೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಹುಡುಕಿಕೊಂಡು ಅವರ ಮನೆ ಬಾಗಿಲಿಗೆ ಬಂದು ಕೊಡ ಮಾಡುವ ಈ ಪ್ರಶಸ್ತಿಯು ಇತರೆ ಎಲ್ಲ ಪ್ರಶಸ್ತಿಗಳಿಗಿಂತ ಬಹು ವಿಶಿಷ್ಟವಾಗಿದೆ, ತಾನಾಗಿಯೇ ಒಲಿದು ಬಂದಂತಹ ಇಂತಹ ಪ್ರಶಸ್ತಿ ಪಟೇಲರ ಮುಡಿಗೆ ಏರುವ ಮೂಲಕ ಸುವರ್ಣ ಕನ್ನಡಿಗ ಪ್ರಶಸ್ತಿಯು ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ ಎನ್ನಬಹುದು.
ಮಾನವ ಶಾಸ್ತ್ರವನ್ನು ಕುರಿತು ಇಷ್ಟೊಂದು ವಿಸ್ತಾರವಾದ ವಿಶಾಲವಾದ ಪರಿಣಾಮಕಾರಿಯಾದ ಅಧ್ಯಯನವನ್ನು ಮಾಡಿ. ದೇಶ ವಿದೇಶಗಳನ್ನು ಸುತ್ತಿ, ಅನುಭವಕ್ಕೆ ದಕ್ಕಿದ ಜ್ಞಾನವನ್ನು ತಮ್ಮ ಅನೇಕ ಬರಹ ಮತ್ತು ಹಲವು ಕೃತಿಗಳ ಮೂಲಕ ಸಾಹಿತ್ಯ ಲೋಕಕ್ಕೆ ಕೊಡಮಾಡಿದ್ದರೂ ಸಹ ಪಟೇಲರು ತನ್ನ ತವರು ಜಿಲ್ಲೆಯ ಜನತೆಗೆ ಹೆಚ್ಚಾಗಿ ಪರಿಚಯವಾಗಿದ್ದು ಕಳೆದ ವರ್ಷ ತರೀಕೆರೆಯಲ್ಲಿ ನೆಡೆದ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ ದೊರೆಕಿದ ನಂತರ ಎನ್ನಬಹುದು.
ಸಾಹಿತಿ ಅಥವಾ ಬರಹಗಾರನ ಕೆಲಸ ಕೇವಲ ತನ್ನ ವಿಚಾರಧಾರೆಗಳನ್ನು ಪ್ರಕಟಿಸಿ, ಬರೆದು ಭಾಷಣ ಮಾಡಿ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದು ಸುಮ್ಮನಾಗುವುದಲ್ಲ, ಕಾರಣ,ಸಾಹಿತಿಗೆ ಸಾಮಾಜಿಕ ಜವಾಬ್ದಾರಿ ತುಸು ಹೆಚ್ಚು, ಆದ್ದರಿಂದ ಒಂದು ಶ್ರೇಷ್ಠ ಸಮಾಜದ ಏಳ್ಗೆಗೆ , ಜನಮಾನಸದ ಪರಿವರ್ತನೆಗೆ ಸಾಹಿತಿಗಳ ಹೃದಯ ಸದಾ ತುಡಿಯುತ್ತಿರಬೇಕು, ಈ ನೆಲ ಜಲ ಬದುಕು ಬವಣೆಯ ಬಗ್ಗೆ ಸಾಹಿತ್ಯ ಕಲೆ ಸಂಸ್ಕೃತಿಯ ಬಗ್ಗೆ ಬರೆದು ಮಾತನಾಡುತ್ತಿರುವವರು ಸದಾಕಾಲ ಜೀವ ಕಾರುಣ್ಯದ ಸದ್ದು ಮಾಡುತ್ತಿರಬೇಕು ಎಂಬುದು ಪಟೇಲರ ಹೃದಯದ ಒಳತುಡಿತವಾಗಿದೆ.
ನಾಡಿನ ಪ್ರತಿಷ್ಠಿತ ಪ್ರಶಸ್ತಿ ಪುರಸ್ಕಾರಗಳಾದ ನಾಡೋಜ, ಗೌರವ ಡಾಕ್ಟರೇಟ್ ಪದವಿಯಂಥಹ ಹಲವು ಪ್ರಶಸ್ತಿಗಳು ಇಂದು ತಮ್ಮ ತೂಕವನ್ನು ಕಳೆದುಕೊಳ್ಳುತ್ತಿವೆ, ರಾಜಕಾರಣಿಗಳ ಪ್ರಭಾವ ಮತ್ತು ಹಣವನ್ನು ಕೊಟ್ಟು ಪ್ರಶಸ್ತಿಗಳನ್ನು ಪಡೆಯುವಂತಹ ಪರಿಸ್ಥಿತಿಗೆ ಜನರು ಇಳಿದಿದ್ದಾರೆ ಎಂಬ ಆರೋಪ ಇಂದಿನ ಸಮಾಜದೊಳಗಿದೆ, ಇಂತಹ ಪ್ರಶಸ್ತಿಗಳ ಬಗ್ಗೆ ನೆಗೆಟಿವ್ ಪಬ್ಲಿಸಿಟಿ ಕೂಡ ಬಹು ವ್ಯಾಪಕವಾಗಿ ವ್ಯಕ್ತವಾಗುತ್ತಿರುವ ಕಾಲಘಟ್ಟವಿದು , ಇಂಥಹ ಟೀಕೆಗಳಿಗೆ ಸಕಾರಣವೂ ಕೂಡ ಇದೆ, ಪ್ರಶಸ್ತಿ ಪುರಸ್ಕಾರಗಳನ್ನು ಕುರಿತು ಒಂದು ಅರ್ಥಪೂರ್ಣ ಚರ್ಚೆಯನ್ನು ಅತಿ ತುರ್ತಾಗಿ ಆರಂಭಿಸಬೇಕಾಗಿದೆ, ಒಂದು ಅರ್ಥಪೂರ್ಣ ಚರ್ಚೆಗೆ ನಾವು ಹೆಜ್ಜೆ ಹಾಕದಿದ್ದರೆ, ಇದುವರೆಗೆ ನಮ್ಮ ಹಿರಿಯರು ಸಂಪಾದಿಸಿ ಕೊಟ್ಟು ಹೋಗಿರುವ ಸಮಾಜದ ಅನೇಕ ಒಳಿತುಗಳನ್ನು ಕಳೆದುಕೊಳ್ಳಬೇಕಾಗುತ್ತದೆ,ಜೊತೆಗೆ ಯಾವುದೇ ಪ್ರಶಸ್ತಿ ಪುರಸ್ಕಾರಗಳ ಮೌಲ್ಯವನ್ನು ಮತ್ತಷ್ಟು ಎತ್ತರಿಸಲು ಸಾಧ್ಯವಾಗುವುದಿಲ್ಲ, ಈ ನಿಟ್ಟಿನಲ್ಲಿ ಒಂದು ಅವಲೋಕನ ಅವಶ್ಯಕವಾಗಿದೆ.
ಸುಮಾರು 35 ವರ್ಷಗಳಿಗೂ ಹೆಚ್ಚು ಕಾಲ ಮಾನವ ಶಾಸ್ತ್ರಜ್ಞ ಇಲಾಖೆಯ ಮುಖ್ಯಸ್ಥರಾಗಿ,ಮನುಷ್ಯ ಪ್ರಜ್ಞೆಯೊಂದಿಗೆ ನಾಗರಿಕತೆಯ ಅಂಗಳದಲ್ಲಿ ನಿಂತು ಕಾಡಿನ ಸೂಕ್ಷ್ಮ ಪ್ರದೇಶಗಳನ್ನು ಅಲ್ಲಿನ ಆದಿವಾಸಿಗಳ ಜನ ಜೀವನವನ್ನು ಅರಿಯಲು ಜೀವ ಭಯದ ಹಂಗು ತೊರೆದು ಕಾಡಿನೊಳಗೆ ಹೋಗಿ, ಆ ಕಾಡು ಜನರ ಭಾಷೆಗಳನ್ನು ಗ್ರಹಿಸಿ, ಅವರ ವಿಶ್ವಾಸಕ್ಕೆ ಪಾತ್ರರಾಗಿ, ಆ ಆದಿವಾಸಿ ಬುಡಿಕಟ್ಟು ಜನರೊಳಗಿದ್ದ ಅದೆಷ್ಟೋ ರೋಚಕ ಮತ್ತು ಸ್ವಾರಸ್ಯಕರ ಸಂಗತಿಗಳನ್ನು ಹೊತ್ತು ತಂದು ಕೊಡ ಮಾಡಿದ ಪ್ರಾಮಾಣಿಕ ಕರ್ತವ್ಯಕ್ಕಾಗಿ ಡಾ.ಮರುಳುಸಿದ್ದಯ್ಯ ಪಟೇಲರಿಗೆ ಒದಗಿ ಬಂದಿರುವ ಈ ಪ್ರಶಸ್ತಿಯು ಈ ನಾಡಿನ ಜನರಿಗೆ ಸಂತಸವಾಗಿದೆ ಮತ್ತು ಸುವರ್ಣ ಕನ್ನಡಿಗ 2026 ಪ್ರಶಸ್ತಿ ಪುರಸ್ಕೃತರಾದ ಪಟೇಲರ ಸಾಮಾಜಿಕ ಜವಾಬ್ದಾರಿಯನ್ನು ಮತ್ತಷ್ಟು ಇನ್ನಷ್ಟು ಹೆಚ್ಚಿಸಿದೆ.
ಇತ್ತೀಚೆಗೆ ಬೆಂಗಳೂರಿನ ಪ್ರತಿಷ್ಠಿತ ಅಂತರಾಷ್ಟ್ರೀಯ ಕಾಂನ್ರಡ್ ಸ್ಟಾರ್ ಹೋಟೆಲ್ ವೊಂದರಲ್ಲಿ ನೆಡೆದ ಸಮಾರಂಭದಲ್ಲಿ ಡಾ.ಹೆಚ್ ಎಂ. ಮರಳುಸಿದ್ದಯ್ಯ ಪಟೇಲ್ ಅವರು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ಸಚಿವ ರಾಮಲಿಂಗ ರೆಡ್ಡಿ ಅವರಿಂದ 2026 ನೇ ಸಾಲಿನ ಸುವರ್ಣ ಕನ್ನಡಿಗ ಪ್ರಶಸ್ತಿಯನ್ನು ಸ್ವೀಕರಿಸಿದರು, ಈ ಸಂದರ್ಭದಲ್ಲಿ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌದರಿ,ಪ್ರತಿಭಾ ಪಟೇಲ್, ಕನ್ನಡ ಪ್ರಭ ಪತ್ರಿಕೆಯ ಸಂಪಾದಕರಾದ ರವಿ ಹೆಗಡೆ, ದುಬೈ ಮೂಲದ ಪವನ್ ಗ್ರೂಪನ ಶಶಿಧರ ನಾಗಾರ್ಜನ್, ನಿಲೇಶ್ ಉಪಸ್ಥಿತರಿದ್ದರು.
•••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

