ಯುವ ಸಾಹಿತಿ ಶಶಿ ತರೀಕೆರೆಯವರ “ಪ್ಯೂಪಾ” ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ….
1 min read
ಅವಿನ್ ಟಿವಿ ಸುದ್ದಿಜಾಲ ✍️: ಯುವ ಸಾಹಿತಿ ಶಶಿ ತರೀಕೆರೆಯವರ “ಪ್ಯೂಪಾ” ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ.
ಮಾ ೨೫ ಬೆಂಗಳೂರು : ಕರ್ನಾಟಕ ಸಾಹಿತ್ಯ ಅಕಾಡೆಮಿಯು ವಿವಿಧ ಪ್ರಕಾರಗಳ ಕೃತಿಗಳಿಗೆ ಕೊಡ ಮಾಡುವ 2024 ನೇ ಸಾಲಿನ ಪುಸ್ತಕ ಬಹುಮಾನ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ಬಾರಿ ಒಟ್ಟು ವಿವಿಧ 17 ಸಾಹಿತ್ಯ ಪ್ರಕಾರಗಳನ್ನು ಗುರುತಿಸಿ, ವಿಮರ್ಶಕರ ಅಭಿಪ್ರಾಯಗಳನ್ನು ಆಧಾರವಾಗಿಟ್ಟುಕೊಂಡು, 2024 ನೇ ಸಾಲಿನ ರಾಜ್ಯದ 17 ಜನರ ಅತ್ಯುತ್ತಮ ಕೃತಿಗಳನ್ನು ಆಯ್ಕೆ ಮಾಡಿ,ಈ ಎಲ್ಲ ಕೃತಿಗಳಿಗೆ ಉತ್ತಮ ಪುಸ್ತಕವೆಂಬ ಬಹುಮಾನವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎಲ್.ಎನ್ ಮುಕುಂದರಾಜುರವರು ಪ್ರಕಟಿಸಿದ್ದಾರೆ.
25,000 ನಗದು, ಫಲಕ ಶಾಲು, ಹಾರ, ಪ್ರಮಾಣ ಪತ್ರವನ್ನು ಈ ಬಹುಮಾನ ಒಳಗೊಂಡಿದೆ.
ಈ 17 ಜನ ಕೃತಿಕಾರರಲ್ಲಿ ಚಿಕ್ಕಮಗಳೂರು ಜಿಲ್ಲೆ, ತರೀಕೆರೆಯ ಯುವ ಸಾಹಿತಿ ಶಶಿ ತರೀಕೆರೆಯವರು ಒಬ್ಬರಾಗಿದ್ದಾರೆ.
ಶಶಿ ತರೀಕೆರೆ ಅವರು ವೃತ್ತಿಯಲ್ಲಿ ಪ್ರಸ್ತುತ ಬೆಂಗಳೂರಿನ ಇಸ್ರೋ ಕಂಪನಿಯ ಉದ್ಯೋಗಿಯಾಗಿದ್ದು, ಪ್ರವೃತ್ತಿಯಾಗಿ ಕಥೆ ಕವನ ಲೇಖನಗಳನ್ನು ಬರೆಯುವ ಮೂಲಕ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ.
ಶಶಿಯವರು ತನ್ನ 21ನೇ ವಯಸ್ಸಿನಿಂದಲೇ ಬರವಣಿಗೆ ಆರಂಭಿಸಿದವರು, 2019 ರಲ್ಲಿ ಮೊದಲ ಕಥಾ ಸಂಕಲನ ಡುಮಿಂಗ ಪ್ರಕಟವಾಗಿತ್ತು, 2023ರಲ್ಲಿ ತಿರಾಮಿಸು ಎಂಬ ಎರಡನೇ ಕಥಾ ಸಂಕಲನ ಲೋಕಾರ್ಪಣೆಗೊಂಡಿತ್ತು, 2024ರಲ್ಲಿ ಪ್ಯೂಪಾ ಕೃತಿಯು ನಾಡಿಗೆ ಪರಿಚಯವಾಗಿತ್ತು. ಈ ಪ್ಯೂಪಾ ಕೃತಿಯು ಸಾಹಿತ್ಯ ಅಕಾಡೆಮಿಯ ಬಹುಮಾನವು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮೂಲಕ ಇದುವರೆಗೆ ಒಟ್ಟು ಎಂಟು ಪ್ರಶಸ್ತಿಗಳು ತನ್ನದಾಗಿಸಿಕೊಂಡಿರುವುದು ವಿಶೇಷವಾಗಿದೆ, ಈ ಮೂಲಕ ಶಶಿ ತರೀಕೆರೆಯವರ ಬರಹದ ಶಕ್ತಿ ಸಾಮರ್ಥ್ಯ ಗುಣಮಟ್ಟ ಯಾವ ಮಟ್ಟದಲ್ಲಿದೆ ಎಂದು ಪರಿಗಣಿಸಬಹುದಾಗಿದೆ.
ಶಶಿ ತರೀಕೆರೆ ಅವರು ಪುಸ್ತಕ ರಚನೆಯ ಜೊತೆ ಜೊತೆಗೆ ಅಲರು ಪುಸ್ತಕ ಪ್ರಕಾಶನ ಸಂಸ್ಥೆಯೊಂದನ್ನು ಕೂಡ ಆರಂಭಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕು ಹಲವು ಕಾರಣಗಳಿಂದ ಗಮನ ಸೆಳೆದಿದೆ, ಅದು ಕಲೆ ಸಾಹಿತ್ಯ ಸಂಗೀತ ಮಾತ್ರವಲ್ಲ ಈ ತಾಲೂಕು ಜಿಲ್ಲೆಯಲ್ಲಿಯೇ ವಿಶೇಷವಾಗಿ ಎಲ್ಲ ತರಹದ ಬೆಳೆಗಳನ್ನು ಬೆಳೆಯುವ ತರಿ ನೆಲವಾಗಿದೆ, ಅನ್ನದ ಬೇಳೆ ವಾಣಿಜ್ಯ ಬೆಳೆ ಬೆಳೆಯುವಲ್ಲಿ ಹೆಸರಾಗಿರುವ ತರೀಕೆರೆ ಸಾಹಿತ್ಯ ಕೃಷಿಯಲ್ಲಿಯೂ ರಾಜ್ಯದ ಗಮನಸೆಳೆಯುತ್ತಿರುವುದು ಈ ತಾಲೂಕಿನ ವಿಶೇಷತೆಯಾಗಿದೆ ಎನ್ನಬಹುದು.
•••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ … ✒️
ಚಿಕ್ಕಮಗಳೂರು

