लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜಾತ್ರೆ ಉತ್ಸವಗಳಲ್ಲಿ ಧಾರ್ಮಿಕ ನಂಬಿಕೆ ಮಾತ್ರವಲ್ಲ ಸಮಾಜ ಜೀವನದ ಸುಖವಿದೆ ಸಾಮರಸ್ಯದ ಬದುಕಿದೆ:…

1 min read

ಅವಿನ್ ಟಿವಿ ಸುದ್ದಿಜಾಲ ✍️: ಜಾತ್ರೆ ಉತ್ಸವಗಳಲ್ಲಿ ಧಾರ್ಮಿಕ ನಂಬಿಕೆ ಮಾತ್ರವಲ್ಲ ಸಮಾಜ ಜೀವನದ ಸುಖವಿದೆ ಸಾಮರಸ್ಯದ ಬದುಕಿದೆ: ದಿಣ್ಣೇಕೆರೆಯಲ್ಲಿ ಉಗಾದಿ ಉತ್ಸವಕ್ಕೆ ತೆರೆ.

ಚಿಕ್ಕಮಗಳೂರು ಮಾ ೨೨: ಭಾರತದ ಪ್ರತಿ ಹಳ್ಳಿಗಳು ತಮ್ಮದೇ ಆದ ಒಂದು ಘನವಾದ ಕಥನವನ್ನು ಹೊಂದಿವೆ, ಒಂದರ್ಥದಲ್ಲಿ ಈ ಹಳ್ಳಿಗಳು ಕಥೆ ಕವನ ಕಾವ್ಯಗಳಿದ್ದಂತೆ, ಒಗಟುಗಳಿದ್ದಂತೆ, ನಾಣ್ಣುಡಿಗಳಿದ್ದಂತೆ, ಶ್ರಮದ ಪ್ರತೀಕವಾಗಿ,ಆರೋಗ್ಯದ ದ್ಯೋತಕವಾಗಿ ಕಲೆ ಸಾಹಿತ್ಯ ಸಂಸ್ಕೃತಿಗಳ ಮೂಲಕ ದೇವರುಗಳ ಹೆಸರಿನಲ್ಲಿ ಜಾತ್ರೆ ಉತ್ಸವಗಳನ್ನು ತಲೆಮಾರಿನಿಂದ ತಲೆಮಾರಿಗೆ ನಡೆಸಿಕೊಂಡು ಇಂದಿಗೂ ಬರುತ್ತಿವೆ.

ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ ಸುಮಾರು 18 ಕಿಲೋಮೀಟರ್ ದೂರವಿರುವ ಗೌತಮ ಮುನಿ ಆಶ್ರಮದ ಸನಿಹದಲಿ ಇರುವ ಊರು ದಿಣ್ಣೇಕೆರೆ, ಹಿಂದೆ ಕಲ್ಲಹಳ್ಳಿ ಮತ್ತು ದಿಣ್ಣೇಕೆರೆ ಎಂಬ ಎರಡು ಕೂಡು ಗ್ರಾಮಗಳಿಂದ ಕೂಡಿದ ಈ ಊರಿನಲ್ಲಿ ಕೇವಲ ಹತ್ತಾರು ಮನೆಗಳಿದ್ದವು ಅಷ್ಟೇ, ಬದಲಾದ ಕಾಲಘಟ್ಟದಲ್ಲಿ ಕಲ್ಲಹಳ್ಳಿ ಎಂಬ ಹೆಸರು ನೆಪಥ್ಯಕ್ಕೆ ಸರಿದು, ಸುಮಾರು 60ಕ್ಕೂ ಹೆಚ್ಚು ಕೃಷಿ ಕುಟುಂಬಗಳು ಮನೆತನಗಳನ್ನು ಕಟ್ಟಿಕೊಂಡು ದಿಣ್ಣೇಕೆರೆ ಎಂಬ ಹೆಸರಿನೊಂದಿಗೆ ವ್ಯವಹಾರಗಳನ್ನು ಮಾಡುತ್ತಾ ಮಾದರಿ ಬದುಕಿನತ್ತ ಹೆಜ್ಜೆ ಹಾಕುತ್ತಿದೆ ಈಗ ಈ ಗ್ರಾಮ .

ಪ್ರತಿ ಹಳ್ಳಿಗೂ ಒಂದು ಇತಿಹಾಸ ಇರುವಂತೆ ದಿಣ್ಣೇಕೆರೆ ಗ್ರಾಮಕ್ಕೆ ಒಂದು ಪರಂಪರೆ ಮತ್ತು ಇತಿಹಾಸವಿದೆ, ಈ ಗ್ರಾಮದಲ್ಲಿ ಶ್ರೀ ಪ್ರಸನ್ನ ಗಣಪತಿ ವೀರಾಂಜನೇಯ ಸ್ವಾಮಿ ದೇವಾಲಯ ಇದ್ದರೂ ಕೂಡ ಗ್ರಾಮ ದೇವತೆ ಶ್ರೀರಂಗನಾಥ ಸ್ವಾಮಿಯಾಗಿದ್ದು, ಈ ರಂಗನಾಥಸ್ವಾಮಿಯು ಬೇರೆ ಬೇರೆ ಕಾರಣದಿಂದ ಈಗ ವಸ್ತಾರೆಯಲ್ಲಿ ನೆಲೆಗೊಂಡಿದೆ.

ಶತಮಾನಗಳ ಹಿಂದೆ ದಿಣ್ಣೇಕೆರೆಯಿಂದ ಅಂದಿನ ವಸುಂದರಾ ಪಟ್ಟಣವೆಂಬ ಇಂದಿನ ವಸ್ತಾರೆಗೆ ಹೋಗಿ ಅಲ್ಲಿ ನೆಲೆಗೊಂಡ ಶ್ರೀ ರಂಗನಾಥ ಸ್ವಾಮಿ ಮತ್ತು ಅದರ ಪರಿವಾರವನ್ನು ಕಳೆದ ಮೂರೂವರೆ ನಾಲ್ಕು ದಶಕಗಳಿಂದ ದಿಣ್ಣೇಕೆರೆ ಗ್ರಾಮಸ್ಥರು ಪ್ರತಿ ವರ್ಷ ಆಗಮಿಸುವ ವಸಂತ ಋತುವಿನ ಯುಗಾದಿ ಹಬ್ಬದ ಸಮಯದಲ್ಲಿ ಗ್ರಾಮಕ್ಕೆ ವಸ್ತಾರೆಯಿಂದ ದಿಣ್ಣೆಕೆರೆಗೆ ಶ್ರದ್ಧಾ ಭಕ್ತಿಯಿಂದ ಅಡ್ಡೆ ಕಟ್ಟಿ ಹೊತ್ತು ತರುತ್ತಾರೆ.

ಹೀಗೆ ಊರಿಗೆ ಆಗಮಿಸಿದ ಶ್ರೀರಂಗನಾಥ ಸ್ವಾಮಿ ಮತ್ತು ಅದರ ಪರಿವಾರವು ಗ್ರಾಮದ ಜನರು ಕೊಡ ಮಾಡುವ ಪೂಜೆ ಪುನಸ್ಕಾರಗಳನ್ನು ಸ್ವೀಕರಿಸುತ್ತದೆ, ಹಾಗೂ ಗ್ರಾಮದ ಬೆಟ್ಟದ ಬುಡದಲ್ಲಿರುವ ತನ್ನ ಮೂಲ ಗದ್ದೆಗೆಗೆ ಹೋಗಿ ಕುಳಿತುಕೊಂಡು,ಪೂಜೆ ಪುನಸ್ಕಾರ ಫಲತಾಂಬಲ ಪಾನಕವನ್ನು ಸ್ವೀಕರಿಸಿ, ತನ್ನ ಇಬ್ಬರು ಮಡದಿಯರಾದ ಶ್ರೀ ಲಕ್ಷ್ಮಿ ಮತ್ತು ಪದ್ಮಾವತಿಯೊಂದಿಗೆ ಒಂದು ಗಂಡುಗಸ್ತು ಕುಣಿತವನ್ನು ಹಾಕಿ , ತನ್ನ ಪರಿವಾರವಾದ ಕೆಂಚರಾಯ ಭೂತರಾಯ ಕರಿರಾಯರೊಂದಿಗೆ ಬೇಟೆಮಣೆ ಆಡಿ,ಈ ಮಧ್ಯೆ ದಿಣ್ಣೇಕೆರೆ ಗ್ರಾಮದ ನೆರೆ ಗ್ರಾಮವಾದ ಗುಮ್ಮನ್ ಖಾನ್ ಗೂ ಹೋಗಿ ಆ ಗ್ರಾಮಸ್ಥರಿಂದಲೂ ಪೂಜೆ ಹರಕೆ ನೈವೇದ್ಯಗಳನ್ನು ಸ್ವೀಕರಿಸಿ, ಮೂರು ದಿನಗಳ ಕಾಲ ಗ್ರಾಮದಲ್ಲಿ ವಿರಾಜಮಾನವಾಗಿ ಅಲಂಕರಿಸಿ, ಮಂಗಳಕರವಾದ ವಾದ್ಯಗೋಷ್ಠಿಗಳೊಂದಿಗೆ ಕೊಂಬು ಕಹಳೆ ಮೊಳಗಿಸಿ, ಗ್ರಾಮದ ಪ್ರತಿ ಮನೆಗಳಿಂದಲೂ ಪೂಜೆ ಪುನಸ್ಕಾರ ಫಲ ಪುಷ್ಪ ನೈವೇದ್ಯಗಳನ್ನು ಸ್ವೀಕರಿಸಿ, ತನ್ನ ಪರಿವಾರಕ್ಕೆ ಕೋಳಿ ಬೇಟೆಯನ್ನು ಮಾಡಿಸಿ, ಊರಿನ ಆಗುಹೋಗುಗಳ ಬಗ್ಗೆ ಇಟ್ಟ ಬೇಡಿಕೆಗಳನ್ನು ಸ್ವೀಕರಿಸಿ ಸಂತೃಪ್ತಗೊಂಡು ಊರನ್ನು ಹರಸಿ ಹಾರೈಸಿ ಪುನಃ ಮರಳಿ ಶ್ರೀ ರಂಗನಾಥ ಸ್ವಾಮಿಯು ವಸ್ತಾರೆಗೆ ನಿರ್ಗಮಿಸುತದೆ.

ಯುಗಾದಿಯ ಹೆಸರಿನಲ್ಲಿ ನಡೆಯುವ ಈ ಆಚರಣೆಗಳು, ಗ್ರಾಮಸ್ಥರಲ್ಲಿ ಗ್ರಾಮದೇವತೆಯ ಬಗ್ಗೆ ಹಾಸು ಹೊಕ್ಕಾಗಿರುವ ನಂಬಿಕೆಗಳು ಶ್ರದ್ದೆಗಳು, ನಂಬಿಕೆಗಳ ಹೆಸರಿನ ನಡೆಯುವ ವಿಶಿಷ್ಟ ಆಚರಣೆಗಳು,ಉತ್ಸವಕ್ಕಾಗಿ ಗ್ರಾಮಕ್ಕೆ ಗ್ರಾಮವೇ ಶೃಂಗಾರದಿಂದ ತೆರೆದುಕೊಳ್ಳುವ ವೈಭವದ ಬಗೆಗಳು, ಯುಗಾದಿಯ ಹೆಸರಿನಲ್ಲಿ ನೆಂಟರು ಬಂಧುಗಳು ಸಂಬಂಧಿಗಳನ್ನು ಆಹ್ವಾನಿಸಿ ಸತ್ಕರಿಸುವ ಉಪಚಾರಗಳು ಬಹು ವಿಶಿಷ್ಟ ಆಚರಣೆ ಮತ್ತು ಸಂಪ್ರದಾಯಗಳ ಹೆಸರಿನಲ್ಲಿ ಸಾಗಿ ಬರುತ್ತಿವೆ.

ಈ ಬಾರಿಯ ವಿಶೇಷತೆ ಎಂದರೆ ದೇವರು ಊರಿಗೆ ಆಗಮಿಸುವ ಹೊತ್ತಿಗೆ ಮೂರು ದಿನ ಬಿಡದೆ ಸಮೃದ್ಧಿಯಾದ ಮಳೆಯಾಗಿದ್ದು ಅದು ದೇವರ ಕೃಪೆ ಎಂಬ ಭಾವ ಈ ಗ್ರಾಮಸ್ಥರದ್ದು, ಇಂತಹ ನಂಬಿಕೆ ಭಾವನೆಗಳನ್ನು ಗಾಢವಾಗಿ ಹೊಂದಿ ಕೃಷಿ ಬದುಕನ್ನು , ಶ್ರಮ ಸಂಸ್ಕೃತಿಯನ್ನು, ಬೆವರಿನ ಹನಿಯೊಂದಿಗೆ ಕಟ್ಟಿಕೊಂಡಿರುವ ನಮ್ಮ ಹಳ್ಳಿಗರು ದೇವರ ಹೆಸರಿನಲ್ಲಿ ಹಬ್ಬದ ಹೆಸರಿನಲ್ಲಿ ಮಾಡುವ ವಿಶಿಷ್ಟ ಆಚರಣೆಗಳು ವ್ಯಕ್ತಿನಿಷ್ಠೆಯಾಗಿ ಮಾತ್ರವಲ್ಲ ಸಮಸ್ಟಿನಿಷ್ಟೆಯಾಗಿ ತೆರೆದುಕೊಂಡು ಹೊಸ ಬಾಷ್ಯವನ್ನು ದಿಣ್ಣೇಕೆರೆ ಗ್ರಾಮವು ಯುಗಾದಿ ಹೆಸರಿನಲ್ಲಿ ಬರೆಯಿತು.
••••••••••••••••
ಡಿ. ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✒️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed