ಚಿಕ್ಕಮಗಳೂರಿನಲ್ಲಿ ನಡೆದ ಕಲ್ಲೆಸೆದ ಘಟನೆಯನ್ನು ನಾವು ಸ್ಪಷ್ಟವಾಗಿ ಖಂಡಿಸುತ್ತೇವೆ….
1 min read
ಚಿಕ್ಕಮಗಳೂರಿನಲ್ಲಿ ನಡೆದ ಕಲ್ಲೆಸೆದ ಘಟನೆಯನ್ನು ನಾವು ಸ್ಪಷ್ಟವಾಗಿ ಖಂಡಿಸುತ್ತೇವೆ. ಯಾರೇ ಆಗಲಿ ಇಂತಹ ಕಾನೂನುಬಾಹಿರ ಮತ್ತು ಅಶಾಂತಿ ಉಂಟುಮಾಡುವ ಕೃತ್ಯಗಳಿಗೆ ಯಾವುದೇ ಸಮರ್ಥನೆ ಇಲ್ಲ. ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು.
ಆದರೆ ಈ ಘಟನೆಯನ್ನು ಉದ್ದೇಶಪೂರ್ವಕವಾಗಿ ಧಾರ್ಮಿಕ ಬಣ್ಣ ಹಚ್ಚಿ, ಸಂಪೂರ್ಣ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಪ್ರತಿಭಟನೆಗಳು ನಡೆಸಲಾಗಿದ್ದು ಮಾತ್ರವಲ್ಲದೆ, ಹಲವು ಬಿಜೆಪಿ ನಾಯಕರು ಹಾಗೂ ಕೆಲ ಹಿಂದೂ ಸಂಘಟನೆಗಳ ಮುಖಂಡರು ಪರಿಶೀಲನೆಯ ಮುನ್ನವೇ ಪತ್ರಿಕಾ ಹೇಳಿಕೆಗಳ ಮೂಲಕ ಆರೋಪ ಮಾಡಿರುವುದು ಅತ್ಯಂತ ಜವಾಬ್ದಾರಿಯಿಲ್ಲದ ಮತ್ತು ಅಪಾಯಕಾರಿ ನಡೆ.
ಇಂತಹ ಪ್ರಚೋದನಕಾರಿ ಹೇಳಿಕೆಗಳು ನಗರವನ್ನು ಹಿಂದೂ–ಮುಸ್ಲಿಂ ಉದ್ವಿಗ್ನತೆಯತ್ತ ತಳ್ಳಿದವು. ಇದು ಸಾಮಾನ್ಯ ಘಟನೆಗೆ ರಾಜಕೀಯ ಲಾಭಕ್ಕಾಗಿ ಸಮುದಾಯಗಳ ನಡುವೆ ಭಿನ್ನತೆ ಉಂಟುಮಾಡುವ ಪ್ರಯತ್ನ ಎಂಬ ಅನುಮಾನವನ್ನು ಬಲಪಡಿಸುತ್ತದೆ.
ಇದೀಗ ಪೊಲೀಸ್ ತನಿಖೆಯಲ್ಲಿ ಮೂವರು ಹಿಂದೂ ಯುವಕರ ಬಂಧನವಾಗಿರುವುದು ಆರಂಭಿಕ ಆರೋಪಗಳು ಮತ್ತು ಪ್ರಚಾರ ಎಷ್ಟು ತಪ್ಪಾಗಿದ್ದವು ಎಂಬುದನ್ನು ಸ್ಪಷ್ಟಪಡಿಸಿದೆ. ಸಮಾಜವನ್ನು ಉದ್ದೇಶಪೂರ್ವಕವಾಗಿ ದಾರಿ ತಪ್ಪಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
ಹಿಂದೆಯೂ ಹಸು ವಿಚಾರದ ಹೆಸರಿನಲ್ಲಿ ಮುಸ್ಲಿಂ ಯುವಕರ ಮೇಲೆ ದಾಳಿ ನಡೆದ ಪ್ರಕರಣಗಳ ಹಿನ್ನೆಲೆಯಲ್ಲಿ, ಮರುಮರು ಉದ್ವಿಗ್ನತೆ ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿರುವುದು ಗಂಭೀರ ಸಂಗತಿ. ಕಾನೂನನ್ನು ಕೈಗೆತ್ತಿಕೊಳ್ಳುವವರಿಗೂ, ಪ್ರಚೋದನಕಾರಿ ಹೇಳಿಕೆ ನೀಡುವವರಿಗೂ ಸಮಾನವಾಗಿ ಹೊಣೆಗಾರಿಕೆ ನಿಗದಿಯಾಗಬೇಕು.
ಚಿಕ್ಕಮಗಳೂರು ಶಾಂತಿ ಮತ್ತು ಸಹಬಾಳ್ವೆಯ ನೆಲವಾಗಿದೆ. ರಾಜಕೀಯ ಲಾಭಕ್ಕಾಗಿ ಧಾರ್ಮಿಕ ಭಾವನೆಗಳನ್ನು ದುರುಪಯೋಗಪಡಿಸುವ ಯಾವುದೇ ಶಕ್ತಿಗಳಿಗೆ ಅವಕಾಶ ನೀಡಬಾರದು. ಕಾನೂನು ಪ್ರಭುತ್ವ ಮತ್ತು ಸಂವಿಧಾನ ಮೌಲ್ಯಗಳೇ ಮೇಲುಗೈ ಸಾಧಿಸಬೇಕು.
ಸಯ್ಯದ್ ಅಜ್ಮತ್ ಪಾಷಾ
ಅಧ್ಯಕ್ಷರು, ಎಸ್ಡಿಪಿಐ
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ…

