….ನಿಧನ….
1 min read
ನನ್ನೊಲವಿನ ರಾಯಚೂರು ಜಿಲ್ಲೆಯ ದೇವದುರ್ಗ ತಾಲೋಕಿನ ತಿಂತಿಣಿ ಶ್ರೀಗಳ ಸಾವಿಗೆ ‘ಈ ಸಾವು ನ್ಯಾಯವೇ?’ ಎಂದು ದೇವರಲ್ಲಿಯೇ ಪ್ರಶ್ನೆಯಿಟ್ಟೆ.
ಉತ್ತರವಾಗಿ ನನಗೆ “ಸಾವಿಗೆ ಸಂಗಡವಾರು ಇಲ್ಲ” ಸಾವು ಬದುಕಿನ ಅಂತಿಮ ಸತ್ಯ ಎಂಬ ಶರಣರ ಜ್ಞಾನವೇ ನನಗೆ ಕಾಡಿತು.
ನನ್ನ ಮತ್ತು ಶ್ರೀಗಳ ನಡುವಿನ ಸುಧೀರ್ಘ ಕಾಲದ ಸಂಬಂಧದ ನಡುವೆ ಓದು ಬರಹ ಸಿದ್ದಾಂತಗಳ ನಡುವೆ ವಿಪರೀತ ಎನ್ನುವಷ್ಟೇ ಪದೇ ಪದೇ ಮಾತನಾಡಿದ್ದೇ. ಶ್ರೀಗಳು ಸತ್ಯವನ್ನು ಬಿಟ್ಟು ಎಂದಿಗೂ ತನ್ನ ನಡೆನುಡಿಯನ್ನು ಬದಲಿಸಲೇ ಇಲ್ಲ.
ಕಲ್ಯಾಣ ಕರ್ನಾಟಕದ ಭಾಗದಲ್ಲಿ ತನ್ನ ಪ್ರೀತಿಯನ್ನು ಆ ಭಾಗದ ಜನರೊಂದಿಗೆ ವಿಪರೀತ ಹಂಚಿದ್ದರು. ಜಾತಿಯ ಮತಗಳ ನಡುವೆ ಮನುಷ್ಯತ್ವದ ಮಠವೊಂದನ್ನು ಪ್ರೀತಿ ಪ್ರೇಮಗಳಿಂದ ಕಟ್ಟಿದ್ದರು.
ನೂರಾರು ತಬ್ಬಲಿ ಸಮುದಾಯಗಳನ್ನು ಗುರುತಿಸಿ ಅವರ ಬಗ್ಗೆ ವಿಚಾರ ಸಂಕೀರ್ಣಗಳ ಮೂಲಕ ಈ ದೇಶದ ಅಷ್ಟು ರಾಜ್ಯಗಳ ಪ್ರತಿಭಾವಂತರನ್ನು ಕರೆಸಿ ಮಾತನಾಡಿಸಿ ಸತ್ಯದ ಅನ್ವೇಷಣೆ ಮಾಡಿದವರು.
ವಿದ್ಯಾಭ್ಯಾಸದಲ್ಲಿ, ಅನುಭವದಲ್ಲಿ, ತತ್ವಶಾಸ್ತ್ರ, ನ್ಯಾಯ ಶಾಸ್ತ್ರ, ಮಾನವೀಯ ವಿಜ್ಞಾನ, ಶರಣರ ಸಂತರ ಅಧ್ಯಯನದಲ್ಲಿ ಶ್ರೀಗಳು Rank students ಆಗಿ ಅರಿತವರು. ಆದರೆ ಇಷ್ಟು ಚಿಕ್ಕ ವಯಸ್ಸಿಗೆ ನನಗೆ ಸಾವು ಬರುತ್ತದೆ ಎಂಬ ಸುಳಿವನ್ನು ಶ್ರೀಗಳು ಅರಿಯಾಲಾಗಲಿಲ್ಲ.
ಸ್ವಾಮೀಜಿಗಳು ಯಾರು ಬೇಕಾದರೂ ಆಗಬಹುದು ಎಂಬ ಪರಿಸ್ಥಿತಿಯ ನಡುವೆ
ಕಾವಿ ತೊಟ್ಟವರೆಲ್ಲ ಸ್ವಾಮೀಜಿಗಳೇ ಎಂಬ ಭಾವ ಜನ ಸಾಮಾನ್ಯರಲ್ಲಿ ಇರುವ ಈ ಕಾಲಘಟ್ಟದಲ್ಲಿ ತಿಂತಿಣಿ ಶ್ರೀಗಳು ಜೀವ ಪರವಾಗಿ,
ಅಸಮಾನತೆಯ ವಿರುದ್ಧ ಯೋಚಿಸಿ, ಜಾತಿ ಧರ್ಮ ಭೇದ ಇಲ್ಲದೇ, ಪರಸ್ತ್ರೀ ಪರಧನಕ್ಕೆ ಎರಗದೇ, ಭಿಕ್ಷುಕರನ್ನೂ ದೇವರೆಂದು ಪ್ರೀತಿಸಿ, ಸಂಪ್ರದಾಯದ ಹೆಸರಲ್ಲಿ ಮಹಿಳೆಯರನ್ನು, ದಲಿತರನ್ನು, ಬಡವರನ್ನು ಹೊರಗಿಡುವ ಪದ್ಧತಿಯಿಂದ ದೂರವಿದ್ದು, ಬೇರೆ ಕೆಲ ಸ್ವಾಮೀಜಿಗಳಂತೆ ರಾಜಕಾರಣದಲ್ಲಿ ಬ್ಯೂಸಿ ಆಗದೇ, ಗಲಾಟೆ ಗದ್ದಲಕ್ಕೆ ಪಿತಾಮಹರಾಗಿರುವ ಸ್ವಾಮೀಜಿಗಳ ಸಾಲಿಗೆ ಸೇರದೇ, ನ್ಯಾಯ ನೀತಿ ಧರ್ಮಕ್ಕಾಗಿ, ಸತ್ಯ ಸತ್ವ ತತ್ವ ಸಮಾನತೆಗಾಗಿ ಬದುಕಿ ಬಾಳಿದ ತಿಂತಿಣಿ ಶ್ರೀಗಳ ಸಾವಿನ ಸುದ್ಧಿಯನ್ನು ಅರಗಿಸಿಕೊಳ್ಳಲು ಕಷ್ಟವೇ.
ಮನುಷ್ಯತ್ವದ ಮನಸ್ಸಿಗೂ ಸಾವಿದೆ ಎಂಬುದೇ ತಿಂತಿಣಿ ಶ್ರೀಗಳ ಸಾವಿನ ಅಂತಿಮ ಸಂದೇಶವಾಗಿದ್ದು ತುಂಬ ನೋವಿನ ಸಂಗತಿ..
ನನ್ನಂತಹ ಅನೇಕ ಸಣ್ಣವರನ್ನು, ಬಡವರನ್ನು ಅಸ್ಪೃಶ್ಯರನ್ನು, ಕಡೆಗಣಿಸಲ್ಪಟ್ಟ ಜನರನ್ನು ಎತ್ತರದಲ್ಲಿಟ್ಟು ತಾನು ಕೆಳಗೆ ಕುಳಿತು ಪ್ರೀತಿಸುವ ಹೃದಯಕ್ಕೆ ಇಂದು ಸಾವಾಗಿದೆ.
ಭಕ್ತಿಯೆಂಬ ಪೃಥ್ವಿಯ ಮೇಲೆ
ಗುರುವೆಂಬ ಬೀಜವಂಕುರಿಸಿ,
ಲಿಂಗವೆಂಬ ಎಲೆಯಾಯಿತ್ತು:
ಲಿಂಗವೆಂಬ ಎಲೆಯ ಮೇಲೆ
ವಿಚಾರವೆಂಬ ಹೂವಾಯಿತ್ತು,
ಆಚಾರವೆಂಬ ಕಾಯಾಯಿತ್ತು;
ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಕಳಚಿ ಬೀಳುವಲ್ಲಿ
ಕೂಡಲ ಸಂಗಮದೇವ
ತನಗೆ ಬೇಕೆಂದು ತಿಂತಿಣಿ ಶ್ರೀಗಳನ್ನು ಎತ್ತಿಕೊಂಡ..
ನಾನೇನು ಮಾಡಲಿ ಬಡವ ಭಕ್ತನಯ್ಯಾ..
ನಾನು ಕೂಡ ಶ್ರೀಗಳೋದ ದಾರಿಯ ಸರದಿಯಲ್ಲಿಯೇ ನಿಂತವನು ನಾನಯ್ಯ.
ಈ
ಸಾವಯ್ಯ
ಒಂದು ದಿನ
ಯಾರಿಗೂ ಬಿಡಲ್ಲವಯ್ಯಾ.
ಹೋಗಿ ಬನ್ನಿ ಪೂಜ್ಯರೇ.
ಮನಸುಳಿ ಮೋಹನ್.

