लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೇ ಭೀಮಾ ಕೋರೆಗಾಂವ್ ಯುದ್ಧ.”

1 min read

‘’ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೇ ಭೀಮಾ ಕೋರೆಗಾಂವ್ ಯುದ್ಧ.”
✊✊✊✊✊✊✊✊
ಭಾರತೀಯ ಚರಿತ್ರೆಯಲ್ಲಿ ಶೋಷಿತರಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಆದರೆ ಈ ದೀರ್ಘಾ ಪರಂಪರೆಯಲ್ಲಿ ಬಹುತೇಕ ಮಧ್ಯಕಾಲದವರೆಗೆ ಅಷ್ಟೇ ಏಕೆ, ಬ್ರಿಟಿಷರ ಆಡಳಿತದವರೆಗೂ ಶೋಷಿತರನ್ನು ಕುರಿತು ಪಂಚಮರು, ಗುಲಾಮರು, ದಸ್ಯುಗಳು, ಅಸ್ಪೃಶ್ಯರು ಎಂಬ ಪ್ರಸ್ತಾಪಗಳಿವೆ ವಿನಾಃ ಅವರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ ವಿವರಗಳು ಸಿಗುವುದಿಲ್ಲ. ಅಂದರೆ ಭಾರತೀಯ ಇತಿಹಾಸವೆನ್ನುವುದು ಏಕಮುಖಿಯಾದ ದೃಷ್ಟಿಕೋನದಿಂದ ವಿವರಿಸಿದ್ದಾಗಿದೆ. ಭಾರತದ ಚರಿತ್ರೆ ರಚನೆಯಲ್ಲಿ ವೈಜ್ಞಾನಿಕ ಖಚಿತತೆ ಕಂಡು ಬಂದಿದ್ದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚರಿತ್ರೆ ಬರವಣಿಗೆಯಿಂದ, ಅಂತೆಯೇ ನೂರಾರು ವರ್ಷಗಳ ಕಾಲ ಮರೆಮಾಚಿದ್ದ ಭೀಮಾ ಕೋರೆಗಾಂವ್ ಯುದ್ಧವನ್ನು ಸಹ ಭಾರತದ ಇತಿಹಾಸ ಪುಟಕ್ಕೆ ಸೇರಿಸಿದ್ದು ಕೂಡ ಈ ಚರಿತ್ರೆಗಾರರಿಗೆ ಸಲ್ಲುತ್ತದೆ.
ಪ್ರಮುಖವಾಗಿ ಭಾರತದ ಚರಿತ್ರೆಯನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ ಪ್ರಾಚೀನ ಭಾರತದ ಇತಿಹಾಸ, ಮಧ್ಯಕಾಲೀನ ಭಾರತದ ಇತಿಹಾಸ, ಆಧುನಿಕ ಕಾಲದ ಭಾರತದ ಇತಿಹಾಸ ಎಂದು ವಿಂಗಡಿಸಲಾಗಿದೆ. ಪ್ರಾಚೀನ ಭಾರತದ ಮೌರ್ಯ ಸಾಮ್ರಾಜ್ಯದ ಪಥನದ ನಂತರ ಭಾರತವನ್ನು ಅನೇಕ ರಾಜ ಮಹಾರಾಜರು ಆಳ್ವಿಕೆ ಮಾಡಿದರು. ಅವರ ಕಾಲದಲ್ಲಿ ವೈದಿಕಶಾಹಿ ವಿಜೃಂಭಿಸುವ ಕಾಲವಾದ್ದರಿಂದ ಜಾತಿ ವ್ಯವಸ್ಥೆ, ಅಸಮಾನತೆ, ಅಸ್ಪೃಶ್ಯತೆ ಮುಂಚೂಣಿಯಲ್ಲಿತ್ತು ಬ್ರಾಹ್ಮಣವಾದ ಮೇಲುಗೈ ಸಾಧಿಸಿ ಅಸಮರ್ಪಕ ರಾಜಮನೆತನಗಳು ತಲೆ ಎತ್ತಿದವು. ಎಲ್ಲಾ ಕ್ಷೇತ್ರಗಳಲ್ಲೂ ಅಸಮರ್ಪಕ ಮೇಲ್ ವರ್ಗದವರಿದ್ದರು. ಈ ಅವಕಾಶವನ್ನೇ ಕಾಯುತ್ತಿದ್ದ ವಿದೇಶಿಯರು ಒಬ್ಬರ ನಂತರ ಒಬ್ಬರು ನೂಕು ನುಗ್ಗಲಾಗಿ ಭಾರತದ ಮೇಲೆ ದಾಳಿ ಮಾಡಿದರು. ಮಧ್ಯಕಾಲೀನ ಭಾರತದಲ್ಲಿ ಪ್ರಥಮವಾಗಿ ಅರಬ್ಬರು ದಾಳಿ ಮಾಡಿದರು. ಆ ಕಾಲಕ್ಕೆ ಭಾರತ ಮೌಢ್ಯ, ಅಂಧಕಾರದಲ್ಲಿ, ತುಂಬಿ ತುಳುಕುತ್ತಿತ್ತು. ದೇಶ ರಕ್ಷಣೆಗಿಂತಲೂ ಮಿಗಿಲಾಗಿ ವೈಧೀಕ ಶಾಹಿಯ ಪರಂಪರೆಯನ್ನು ಉಳಿಸಿಕೊಳ್ಳುವುದೇ ಹೆಚ್ಚಾಗಿತ್ತು. ಇಂತಹ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಮೊಹಮ್ಮದ್ ಘಜ್ನಿ ಭಾರತದ ಮೇಲೆ 17 ಬಾರಿ ದಂಡೆಯಾತ್ರೆ ಮಾಡಿ ಅಪಾರ ಸಂಪತ್ತಿನೊಂದಿಗೆ ಹಿಂದಿರುಗಿದನು. ಆತನ 16 ನೇ ದಾಳಿಯು 1026 ರ ಜನವರಿ 6 ರಿಂದ 8 ರ ತನಕ ನಡೆದ ದಾಳಿಯು ಭೀಕರವಾಗಿತ್ತು. ಈ ದಾಳಿಯಿಂದ ಆ ಕಾಲಕ್ಕೆ 20 ಲಕ್ಷ ದಿನಾರ್ ಸಂಪತ್ತು ಮೊಹಮ್ಮದ್ ಘಜ್ನಿಯ ಕೈ ಸೇರಿತು. ಅದುವೇ ಸೋಮನಾಥಪುರದ ದೇವಾಲಯದ ಮೇಲೆ ದಾಳಿ ಮಾಡಿದ್ದು. ಆ ದಾಳಿಯನ್ನು ಸಾವಿರಾರು ದೇಶಭಕ್ತರು ದೇವಸ್ಥಾನದ ಆವರಣದ ಹೊರಗಡೆ ಮೂಕ ಪ್ರೇಕ್ಷಕರಾಗಿ ನಿಂತು ನೋಡುತ್ತಿದ್ದರು. ಆ ಸಾವಿರ ಜನ ದೇಶ ಭಕ್ತರು ಅಸ್ಪೃಶ್ಯ ಜನಾಂಗಕ್ಕೆ ಸೇರಿದವರಾಗಿದ್ದರು. ಅವರನ್ನು ಮನುಷ್ಯರೇ ಅಲ್ಲ ಎಂದು ಪರಿಗಣಿಸುವ ಕಾಲವಾಗಿತ್ತು. ಅಷ್ಟು ಪ್ರಮಾಣದ ವೈಧೀಕ ಪರಂಪರೆ ದೇಶವನ್ನು ಆಳುತ್ತಿತ್ತು. ಒಂದು ವೇಳೆ ದೇವಸ್ಥಾನದ ಪ್ರವೇಶ ಇದ್ದು ವಲ್ಲಭರಾಜರು ಅಸ್ಪೃಶ್ಯರನ್ನು ಸೈನ್ಯಕ್ಕೆ ಸೇರಿಸಿಕೊಂಡು ಯುದ್ಧ ಮಾಡುವಂತೆ ಸೂಚಿಸಿದ್ದರೆ ಭಾರತಕ್ಕೆ ಮತ್ತೇಂದು ವಿದೇಶಿಯರು ದಾಳಿ ಮಾಡಲು ಸಾಧ್ಯವೇ ಆಗುತ್ತಿರಲಿಲ್ಲ. ಶಕ್ತಿಯಿದ್ದರು ಅಸ್ಪೃಶ್ಯತೆಯ ಕಾರಣಕ್ಕಾಗಿ ದೇವಸ್ಥಾನದ ಪ್ರವೇಶವಿಲ್ಲದೆ ಹಲ್ಲು ಮಸೆಯುತ್ತಾ ಮೂಕ ಪ್ರೇಕ್ಷಕರಾಗಿ ದೇವಸ್ಥಾನದ ಹೊರಗಡೆ ನಿಂತಿದ್ದು ಈ ದೇಶದ ಅಸ್ಪೃಶ್ಯತೆ ಆಚರಣೆಗೆ ಹಿಡಿದ ಕನ್ನಡಿಯಾಗಿದೆ. ಅಂತೆಯೇ ವಿಶ್ವಕ್ಕೆ ಜ್ಞಾನಜ್ಯೋತಿಯನ್ನು ಬೆಳಗಿದ ನಳಂದವಿಶ್ವವಿದ್ಯಾಲಯವು ವಿದೇಶಿಯರ ದಾಳಿಗೆ ಒಳಗಾಗಿ 03 ತಿಂಗಳುಗಳ ಕಾಲ ಹೊತ್ತಿ ಉರಿಯಲು ಇಂತಹ ಅಸಮರ್ಪಕ ರಾಜ ಮಹಾರಾಜರು ಹಾಗೂ ವೈದಿಕಶಾಹಿ ಪರಂಪರೆ ಕಾರಣವಾಗಿದೆ. ಇಂತಹ ನೂರಾರು ಘಟನೆಗಳು ಭಾರತದ ಚರಿತ್ರೆಯಲ್ಲಿ ನಡೆದಿದೆ. ಭಾರತೀಯ ಸೈನ್ಯದಲ್ಲಿ ಮೂಲನಿವಾಸಿ ವೀರ ಯೋಧರನ್ನು ನೇಮಿಸಿಕೊಳ್ಳದೆ ಅಸಮರ್ಪಕ ದಲ್ಲಾಳಿಗಳನ್ನು ನೇಮಿಸಿಕೊಂಡಿದ್ದೆ ಬಹುದೊಡ್ಡ ದುರಂತ. ಭಾರತೀಯರ ಅಸಮರ್ಥತೆಯನ್ನು ಹಾಗೂ ಜಾತಿ ವ್ಯವಸ್ಥೆ ಅರಿತಿದ್ದ ವಿದೇಶಿಯರು ಒಬ್ಬರ ನಂತರ ಮತ್ತೊಬ್ಬರು ದಾಳಿ ಮಾಡಿದರು ಪೋರ್ಚುಗೀಸರು, ಡಚ್ಚರು, ಬ್ರಿಟಿಷರು ಪ್ರೆಂಚರು ವಸಾಹತುಶಾಹಿ ಆಳ್ವಿಕೆಯನ್ನು ಮಾಡಿದರು.
ಉತ್ತರ ಭಾರತವನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದ ಬ್ರಿಟಿಷರು ಟಿಪ್ಪುವಿನ ಮರಣಾನಂತರ ದಕ್ಷಿಣ ಭಾರತದಲ್ಲಿಯು ತನ್ನ ವಸಾಹತುಶಾಹಿಯನ್ನು ಸ್ಥಾಪಿಸಲು ಮುಂದಾಗಿದ್ದರು. ಅಂತಹ ಸಂದರ್ಭದಲ್ಲಿ 1800 ರಲ್ಲಿ ಮಹಾರಾಷ್ಟ್ರದಲ್ಲಿ ಪೇಶ್ವೆಗಳು ಆಡಳಿತ ನಡೆಸುತ್ತಿದ್ದರು. ಇವರ ಆಡಳಿತವು ಅಸ್ಪೃಶ್ಯರ ಪಾಲಿಗೆ ಕರಳದಿನವಾಗಿತ್ತು. ಅಸ್ಪೃಶ್ಯರ ನೆರಳು ಕೂಡ ಹಿಂದೂ ಸವರ್ಣಿಯರ ಮೇಲೆ ಬೀಳಬಾರದಿತ್ತು. ಆ ಕಾರಣಕ್ಕಾಗಿ ಅಸ್ಪೃಶ್ಯರು ಊರ ಮಧ್ಯೆ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ನಡೆದುಕೊಂಡು ಹೋಗಬೇಕಾಗಿತ್ತು. ಹೋಗುವಾಗ ಕುತ್ತಿಗೆಗೆ ಒಂದು ಮಡಿಕೆ ನೇತು ಹಾಕಿಕೊಳ್ಳಬೇಕಾಗಿತ್ತು. ಸೊಂಟಕ್ಕೆ ಒಂದು ಪರಕೆಯನ್ನು ಕಟ್ಟಿಕೊಂಡು ತಾನು ನಡೆದ ದಾರಿಯನ್ನು ಗುಡಿಸಿಕೊಂಡು ಹೋಗಬೇಕಾಗಿತ್ತು. ಅಸ್ಪೃಶ್ಯರು ಮುಂಗೈಗೆ ದಪ್ಪದಾದ ಕಪ್ಪು ದಾರವನ್ನು ಕಡ್ಡಾಯವಾಗಿ ಕಟ್ಟಿಕೊಳ್ಳಬೇಕಾಗಿತ್ತು. ಹಾಗೆಯೇ ಊರಿನೊಳಗೆ ಸತ್ತ ದನಗಳನ್ನು ಊರಿನಿಂದ ಹೊರಗೆ ಹೊತ್ತುಕೊಂಡು ಹೋಗಿ ತಿನ್ನಬೇಕಾಗಿತ್ತು. ಅವರಿಗೆ ವಿದ್ಯೆ ಕಲಿಯುವ ಹಕ್ಕು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಅಸ್ಪೃಶ್ಯ ಹೆಂಗಸರು ಚಿನ್ನ ಮತ್ತು ಬೆಳ್ಳಿ ಆಭರಣವನ್ನು ಧರಿಸುವಂತಿರಲಿಲ್ಲ. ಹಿಂದೂ ಸವರ್ಣಿಯರು ಅಸ್ಪೃಶ್ಯ ಹೆಂಗಸರ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು. ಎಲ್ಲಾ ದೌರ್ಜನ್ಯಗಳನ್ನು ನಿಲ್ಲಿಸಬೇಕೆಂದು ಅಸ್ಪೃಶ್ಯರು 1800 ರಲ್ಲಿ ರಾಜ್ಯಭಾರ ನಡೆಸುತ್ತಿದ್ದ ಪೇಶ್ವೆ ಎರಡನೇ ಬಾಜೀರಾಯನನ್ನು ವಿನಂತಿಸಿ ಕೊಂಡಾಗ ಎರಡನೇ ಬಾಜೀರಾಯನು ನೀವು ಹುಟ್ಟಿರುವುದೇ ನಮ್ಮಗಳ ಸೇವೆ ಮಾಡಲಿಕ್ಕಾಗಿ ನಿಮ್ಮ ಹೆಂಗಸರು ಇರುವುದೇ ನಮ್ಮಗಳ ಸುಖಪಡಿಸಲಿಕ್ಕಾಗಿ ಇದೇ ನಮ್ಮ ಮನು ಸಂವಿಧಾನ ಎಂದು ಖಡಕ್ಕಾಗಿ ಉತ್ತರಿಸಿ, ಕೇಳಲು ಹೋದವರನ್ನು ಅವಮಾನ ಮಾಡಿ ಕಳಿಸಿದ್ದರು. ಇದರಿಂದ ಅಸ್ಪೃಶ್ಯರು ವ್ಯವಸ್ಥೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದರು. ಅಂತಹ ಸುವರ್ಣ ಅವಕಾಶ ಬ್ರಿಟಿಷರಿಂದ ಅವರಿಗೆ ಒದಗಿ ಬಂದಿತ್ತು ಪೇಶ್ವೆಗಳ ದೌರ್ಜನ್ಯ ದಬ್ಬಾಳಿಕೆ ಗಳಿಂದ ಇನ್ನಿಲ್ಲದಂತೆ ರೋಷ ಗೊಂಡಿದ್ದ ಮಹಾರಾಷ್ಟ್ರದ ಅಸ್ಪೃಶ್ಯರು ಅದರಲ್ಲೂ ಅಸ್ಪೃಶ್ಯ ಯುವಕರು ಪೇಶ್ವೆಗಳ ಬಿಸಿ ರಕ್ತ ಕುಡಿಯಲು ಕಾಯುತ್ತಿದ್ದರು. ಇದನ್ನು ಗಮನಿಸಿದ ಚಾಣಕ್ಯ ಬ್ರಿಟಿಷರು ಪೇಶ್ವೆಗಳ ವಿರುದ್ಧ ಯುದ್ಧ ಮಾಡಲು ಅಸ್ಪೃಶ್ಯರನ್ನು ಕೋರಿಕೊಂಡರು. ಇಂತಹ ಅವಕಾಶವನ್ನು ಬಳಸಿಕೊಂಡ ಅಸ್ಪೃಶ್ಯರು ಸಿದ್ದನಾಕನ ನಾಯಕತ್ವದಲ್ಲಿ 500 ಜನ ಯುವಕರು ಯುದ್ಧ ಮಾಡಲು ಒಪ್ಪಿಕೊಂಡರು ಬ್ರಿಟಿಷ್ ಕ್ಯಾಪ್ಟನ್ ಸ್ಪಂಡನ್ ನೇತೃತ್ವದಲ್ಲಿ 500 ಅಸ್ಪೃಶ್ಯ ಯೋಧರ ಪಡೆ ಡಿಸೆಂಬರ್ 31 ನೇ ತಾರೀಕು ರಾತ್ರಿ ಶಿರೂರಿನಿಂದ ಹೊರಡುತ್ತಾರೆ ಇಡೀ ರಾತ್ರಿ ಸತತವಾಗಿ 27 ಕಿಲೋಮೀಟರ್ ನಡೆದು ಮಾರನೇ ದಿನ ಅಂದರೆ 1818 ರ ಜನವರಿ 01 ಪೂನಾ ನಗರದ 15 ಕಿಲೋ ಮೀಟರ್ ದೂರದಲ್ಲಿರುವ ಭೀಮಾನದಿಯ ತೀರದಲ್ಲಿರುವ ಕೋರೆಗಾಂವ್ ಎಂಬ ಸ್ಥಳವನ್ನು ಸೈನ್ಯ ತಲುಪುತ್ತದೆ. ಇಡೀ ರಾತ್ರಿ ನಿದ್ದೆ ಇಲ್ಲದೆ 27 ಕಿಲೋಮೀಟರ್ ದೂರ ನಡೆದುಕೊಂಡು ಬಂದಿದ್ದ ಈ ಅಸ್ಪೃಶ್ಯ ಸೈನ್ಯ ಅನ್ನ, ನೀರು ಯಾವುದನ್ನು ಬಯಸದೆ ಬೆಳಗ್ಗೆ 9 ಗಂಟೆಗೆ ಸರಿಯಾಗಿ ಪೇಶ್ವೆ ಸೈನಿಕರ ಮೇಲೆ ಎರಗುತ್ತಾರೆ. 20,000 ಅಶ್ವ ಪಡೆ 8000 ಕಾಲ್ದಳ ಸೇರಿದಂತೆ ಒಟ್ಟು 28,000 ಪೇಶ್ವೆ ಸೈನಿಕರು ಮೂರು ದಿಕ್ಕಿನಿಂದ ಅಸ್ಪೃಶ್ಯ ಯೋಧರನ್ನು ಎರಗುತ್ತಾರೆ. ಬೆಳಿಗ್ಗೆ 9:00 ರಿಂದ ರಾತ್ರಿ 9:00 ರವರೆಗೆ ಸತತ 12 ಗಂಟೆಗಳ ಕಾಲ ನಡೆದ ಈ ಘೋರ ಯುದ್ಧದಲ್ಲಿ ಹಸಿದ ಹೆಬ್ಬುಲಿಗಳಂತಿದ್ದ ಅಸ್ಪೃಶ್ಯ ಯೋಧರು ಪೇಶ್ವೆ ಸೈನ್ಯವನ್ನು ಧೂಳಿಪಟ ಮಾಡುತ್ತಾರೆ. ಇಡೀ ಯುದ್ಧಭೂಮಿಯು ತುಂಬಾ ರಕ್ತದ ಕೋಡಿಯಿಂದ ಹರಿಯುತ್ತದೆ. ಸಾವಿರಾರು ಸೈನಿಕರು ಯುದ್ಧ ಭೂಮಿಯಲ್ಲಿ ಸಾವನ್ನಪ್ಪುತ್ತಾರೆ. ರಣಹೇಡಿ ಪೇಶ್ವೆ ಸೈನ್ಯ ನಿಲ್ಲಲಾರದೆ ಜೀವ ಉಳಿಸಿಕೊಳ್ಳಲು ಓಡಿ ಹೋಗುತ್ತದೆ.
ಅಂತಿಮವಾಗಿ ಈ ಯುದ್ಧದಲ್ಲಿ ಅಸ್ಪೃಶ್ಯ ಸೈನಿಕರು ಪ್ರಚಂಡ ಜಯಗಳಿಸುತ್ತಾರೆ. ಸತತ 12 ಗಂಟೆಗಳ ಕಾಲ ನಡೆದ ಕಾಳಗದಲ್ಲಿ 5000ಕ್ಕೂ ಹೆಚ್ಚು ಪೇಶ್ವೆ ಸೈನಿಕರು ಸಾವನ್ನಪ್ಪಿದ್ದರೆ ಕೇವಲ 22 ಜನ ಅಸ್ಪೃಶ್ಯ ಯೋಧರು ವೀರ ಮರಣ ಹೊಂದುತ್ತದೆ. ಈ ಯುದ್ಧದಲ್ಲಿ ಅಸ್ಪೃಶ್ಯ ಯೋಧರ ನಾಯಕನಾಗಿದ್ದ ಸಿದ್ದನಾಕ ಸಹ ವೀರ ಮರಣ ಹೊಂದುತ್ತಾನೆ. ರಣರಂಗದಲ್ಲಿ ವೀರವೇಶದಿಂದ ಹೋರಾಡಿ ಜಯ ತಂದುಕೊಟ್ಟ ಹುತಾತ್ಮರಾದ 22 ನೆನಪಿಗಾಗಿ ಬ್ರಿಟಿಷರು 1921ರ ಮಾರ್ಚ್ 21ರಂದು ಯುದ್ಧ ನಡೆದ ಸ್ಥಳದಲ್ಲಿ (ಕೋರೆಗಾಂವ್) 65 ಅಡಿ ಎತ್ತರದ ವಿಜಯಾ ಸ್ತಂಭವನ್ನು ನಿರ್ಮಿಸಿ ಆ ಸ್ತಂಭದ ಮೇಲೆ 22 ಹುತಾತ್ಮ ಯೋಧರ ಹೆಸರನ್ನು ಕೆತ್ತಿಸಿದರು. ಈ ವಿಜಯದ ನಂತರ ಬ್ರಿಟಿಷ್ ಬೋರ್ಡ್ ಆಫ್ ಕಂಟ್ರೋಲ್ ಅಧ್ಯಕ್ಷ ಸ್ಕ್ಯಾನಿಂಗ್ ಈ ವಿಜಯದ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತಾ ಸಣ್ಣ ಸೈನ್ಯ ಒಂದು ಬಲಾಡ್ಯ ಸಂಖ್ಯೆಯ ಸೈನ್ಯವನ್ನು ಮಣ್ಣುಮುಕ್ಕಿಸಿದ್ದು ಪ್ರಪಂಚದಲ್ಲಿ ಮೊದಲು ಎಂದರು. ಅನೇಕರು ಈ ಯುದ್ಧವನ್ನು ಪ್ರಶಂಸಿದ್ದರು. ಅಂತಹ ಯುದ್ಧವೇ ಭೀಮಾ ಕೋರೆಗಾಂವ್ ಯುದ್ಧ. ಆದರೇ ಇಂತಹ ಕ್ರಾಂತಿಕಾರಕ ಯುದ್ಧವನ್ನು 3ನೇ ಆಂಗ್ಲೋ ಮರಾಠ ಯುದ್ಧ ಎಂದು ಇತಿಹಾಸಗಾರರು ಬರೆದಿದ್ದಾರೆ. ಹೆಣ್ಣಿಗಾಗಿ, ಹೊನ್ನಿಗಾಗಿ, ಮಣ್ಣಿಗಾಗಿ, ಧರ್ಮರಕ್ಷಣೆಗಾಗಿ ಪ್ರಪಂಚದಲ್ಲಿ ಅನೇಕ ಮಹಾಯುದ್ಧಗಳೇ ನಡೆದಿವೆ ಆದರೆ ತನ್ನ ಸ್ವಾಭಿಮಾನಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ನಡೆದ ಪ್ರಪಂಚದ ಏಕೈಕ ಯುದ್ಧವೇ ಭೀಮಾ ಕೋರೆಂಗಾವ್ ಯುದ್ಧ. 1818ರ ನಂತರ ಭಾರತದಲ್ಲಿ ಅನೇಕ ರೀತಿಯ ಶೈಕ್ಷಾಣಿಕ, ಸಾಮಾಜಿಕ ಕ್ರಾಂತಿ ಆದದ್ದು ಇಂತಹ ವೀರಯೋಧರ ತ್ಯಾಗ ಬಲಿದಾನದಿಂದ ಅನೇಕ ರೀತಿಯ ಸಾಮಾಜಿಕ, ಶೈಕ್ಷಣಿಕ ಬದಲಾವಣೆಗೆ ಬ್ರಿಟಿಷರು ಮುನ್ನುಡಿ ಬರೆದರು. ಸ್ವಾಭಿಮಾನಕ್ಕಾಗಿ ಸ್ವಾತಂತ್ರಕ್ಕಾಗಿ ವೈಧೀಕ ಶಾಹಿಯ ಪರಂಪರೆಯ (ಒಂದು ವ್ಯವಸ್ಥೆಯ) ವಿರುದ್ಧ ಹೋರಾಟ ಮಾಡಿದ ಜನವರಿ 01. 1818 ನೇ ದಿನವನ್ನು ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮ ಎಂದು ಕರೆಯಬಹುದು.
1857 ರಲ್ಲಿ ನಡೆದ ಸಿಪಾಯಿ ದಂಗೆಯನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದಿದ್ದು ಈ ದೇಶದ ದೊಡ್ಡ ದುರಂತ. 39 ವರ್ಷಗಳ ಹಿಂದೆಗೆ ನಿಜವಾದ ಸ್ವಾತಂತ್ರಕ್ಕಾಗಿ ಸ್ವಾಭಿಮಾನಕ್ಕಾಗಿ ನಡೆದ ಭೀಮಾ ಕೋರೆಗಾಂವ್ ಯುದ್ಧ ಚರಿತ್ರೆಗಾರರ ಕಣ್ಣಿಗೆ ಕಾಣಲೇ ಇಲ್ಲ. ಕೇವಾಲ ಬ್ರಿಟಿಷರ ವಸಾಹತುಶಾಹಿಗಳ ವಿರುದ್ಧ ಹೋರಾಟ ಮಾಡಿದ ಉತ್ತರ ಭಾರತ ಹಾಗೂ ಮಧ್ಯ ಭಾರತದ ಮೇಲ್ ವರ್ಗದವರ ಚಳುವಳಿಯನ್ನೇ (ಆಂಗ್ಲರ ನಂತರ ಭಾರತದಲ್ಲಿ ರಾಜಕೀಯ ಅಧಿಕಾರಕ್ಕಾಗಿ ಹಿಂಡಿದ ಹೋರಾಟವನ್ನೇ) ಭಾರತದ ಸ್ವಾತಂತ್ರ ಹೋರಾಟ ಎಂದು ಬಿಂಬಿಸಿದ್ದು ಕಾಣಬಹುದಾಗಿದೆ. ಸ್ವಾತಂತ್ರಕ್ಕಾಗಿ ಅನೇಕ ಬುಡಕಟ್ಟುಗಳು ಹೋರಾಟ ಮಾಡಿದ್ದು ಚರಿತ್ರೆಯಲ್ಲಿ ದಾಖಲಾಗಲೆ ಇಲ್ಲ. ಪ್ರಭುತ್ವದ ವಿರುದ್ಧ ಸೈದ್ಧಾಂತಿಕವಾಗಿ ಒಗ್ಗಟ್ಟಿನಿಂದ ಸಮಾನತೆಗಾಗಿ, ಸ್ವಾತಂತ್ರ್ಯಕ್ಕಾಗಿ, ಸ್ವಾಭಿಮಾನಕ್ಕಾಗಿ ಹೋರಾಟ ಮಾಡಿದವರೆಲ್ಲಾ ಸ್ವಾತಂತ್ರ ಹೋರಾಟಗಾರರೇ ಎಂದು ವ್ಯಾಖ್ಯಾನಿಸಬೇಕಾಗಿದೆ. ಹಾಗಾಗಿ 1857ರ ಸಿಪಾಯಿ ದಂಗೆಗಿಂತ 39 ವರ್ಷಗಳ ಮೊದಲೇ ನಡೆದ ಭೀಮಾ ಕೋರೆಗಾಂವ್ ಹೋರಾಟವನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆಯಬಹುದು.
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದು ಇಂದಿಗೆ 208 ವರ್ಷಗಳು ಕಳೆದಿವೆ ಆದರೆ ಭಾರತೀಯ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕಪರಿಸ್ಥಿತಿ ಸುಧಾರಿಸಿದೆಯೇ ಎಂದು ಅವಲೋಕದ ಮಾಡಿಕೊಳ್ಳುವ ಅಗತ್ಯವಿದೆ. ಆದರೆ ಇಂದು ಸಿದ್ದ ಮಾದರಿಗೆ ಬಿದ್ದು ಯಾವ ಸೈದ್ಧಾಂತಿಕ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿ ಚರಿತ್ರೆ ಸೃಷ್ಟಿಸಿ ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗೆ ಮುನ್ನುಡಿ ಬರೆದರೂ ನಮ್ಮ ವೀರಯೋಧರು ಅವರ ಆಶಯಗಳು ಇಂದು ಬುಡಮೇಲಾಗಿ, ಡಿಜೆ, ನಾಸಿಕ್ ಡೋಲ್, ಕೀಲು ಗೊಂಬೆಗಳ ಅಬ್ಬರದ ಕಾರ್ಯಕ್ರಮಕ್ಕೆ ಭೀಮಾ ಕೋರೆಗಾಂವ್ ಆಚರಣೆ ಸೀಮಿತವಾಗಿದೆ. ಇಂತಹ ಕಾರ್ಯಕ್ರಮವನ್ನು ಮಾಡಲು ಸಂಘಟನೆಗಳು ನೂಕು ನುಗ್ಗಲು ತಾ ಮುಂದು, ನಾ ಮುಂದು, ಎನ್ನುವ ಸಂಘಟನೆಗಳು ಈ ಹೊತ್ತಿನಲ್ಲಿ ಆಲೋಚಿಸುವ ಅಗತ್ಯವಿದೆ ಮೂಲ ನಿವಾಸಿಗಳಿಗೆ ವಾಸಿಸಲು ಮನೆ ಇಲ್ಲ, ಕಷ್ಟಪಟ್ಟು ಕಲಿತ ವಿದ್ಯಾವಂತರಿಗೆ ಉದ್ಯೋಗವಿಲ್ಲ , ಪ್ರಮುಖವಾಗಿ ಸತ್ತಾಗ ಊಣಲು ತುಂಡು ಭೂಮಿಯು ಇಲ್ಲದಂತಹ ಹೀನಾಯ ಪರಿಸ್ಥಿತಿಯಲ್ಲಿ ಇರುವಾಗ ಕುಣಿದು ಕುಪ್ಪಳಿಸುವುದು ಎಷ್ಟು ಸರಿ ? ಪ್ರಭುತ್ವ ತನ್ನ ಲಾಭಕ್ಕಾಗಿ ತನ್ನ ಭ್ರಷ್ಟತೆಯನ್ನು ಮರೆಮಾಚಲು ಹಣವನ್ನು ನೀಡಿ ಬೀದಿಯಲ್ಲಿ ಶೋಷಿತರನ್ನು ಕುಣಿಸುತ್ತಿದೆ. ಒಂದು ದಿನ ಕುಣಿದು ಕುಪ್ಪಳಿಸಿ ಪ್ರಭುತ್ವದಿಂದಲೇ ಗಿಣಿ ಪಾಠವನ್ನು ಹೇಳಿಸಿಕೊಳ್ಳುತ್ತಿರುವುದು ಭೀಮಾ ಕೋರೆಗಾಂವ್ ಆಚರಣೆಯಾಗಿದೆ. ಇದು ಸರಿಯಾದ ಕ್ರಮವಲ್ಲ.
ಜಾಗತೀಕರಣದ ನಂತರ ಹಣಕಾಸು ಬಂಡವಾಳ ದೇಶವನ್ನು ಆಳುತ್ತಾ ಬ್ರಾಹ್ಮಣವಾದ ಮತ್ತು ಬಂಡವಾಳವಾದ ಮೇಲುಗೈ ಸಾಧಿಸಿರುವಾಗ ಇದರ ಒಳ ಮರ್ಮವನ್ನು ಅರ್ಥ ಮಾಡಿಕೊಳ್ಳಲೇಬೇಕಾಗಿದೆ. 208 ವರ್ಷಗಳ ಹಿಂದೆ ಕೇವಾಲ 500 ಜನ ವೀರ ಯೋಧರು ಶತ ಶತಮಾನಗಳ ಸಿದ್ದ ಮಾದರಿಯ (ಪುರೋಹಿತಶಾಹಿ) ವಿರುದ್ಧ ತಿರುಗಿ ಬಿದ್ದು ಇತಿಹಾಸ ಸೃಷ್ಟಿಸಿದ್ದಾರೆ. ಅವರ ಹೋರಾಟದ ಬದುಕು ಶೋಷಿತರಿಗೆ ಸ್ಪೂರ್ತಿಯಾಗಬೇಕಿದೆ. ಕೇವಾಲ 500 ಜನರು ಒಗ್ಗಟ್ಟಾಗಿ ಹೋರಾಟ ಮಾಡಿ ಚರಿತ್ರೆ ಸೃಷ್ಟಿಸಿದ್ದನ್ನು ಕಣ್ಣಾರೆ ಕಂಡ ಪ್ರಭುತ್ವ, ತನ್ನ ಉಳುವಿಗಾಗಿ ಅಂದಿನಿಂದ ಇಂದಿನವರೆಗೂ ಶೋಷಿತರನ್ನು ಒಡೆದು ಆಳುತ್ತಲೇ ಬರುತ್ತಿದೆ ಎಂತಹ ಸೈದ್ಧಾಂತಿಕ ಸಂಘಟನೆ ಕಟ್ಟಲಿ, ಎಂತಹ ರಾಜಕೀಯ ಪಕ್ಷವನ್ನೇ ಕಟ್ಟಲಿ ಒಂದಲ್ಲ ಒಂದು ರೀತಿಯಲ್ಲಿ ಪ್ರಭುತ್ವ ಮಧ್ಯ ಪ್ರವೇಶಿಸಿ ಹರಿದು ಹಂಚುತ್ತಿದೆ ಇದರ ಅರಿವೇ ಇಲ್ಲದೆ ಶೋಷಿತರು ತಮ್ಮೊಳಗೆ ತಾವೇ ಕಿತ್ತಾಡಿಕೊಳ್ಳುತ್ತಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್ ರವರ ಸೈದ್ಧಾಂತಿಕ ಆಶಯದಲ್ಲಿ ಕಟ್ಟಿದ ಡಿ,ಎಸ್,ಎಸ್ (D.S.S )ಸಂಘಟನೆಯನ್ನು ಎಡಗೈ-ಬಲಗೈ ಎಂದು ವಿಭಾಗಿಸಿ ಸಾಮಾಜಿಕ ಚಳವಳಿಯಾದ ಸಂಘಟನೆಯನ್ನು ರಾಜಕೀಯ ಸಂಘಟನೆಯಾಗಿ ರೂಪಿಸಿ ಚುನಾವಣೆಗೆ ಪ್ರವೇಶಿಸುವಂತೆ ಪ್ರೇರೇಪಿಸಿ ಅಂತಹ ಜೀವಪರ ಸಂಘಟನೆಯನ್ನು ಕೂಡ ಒಡೆದು ಆಳಿದರು. ಪ್ರಭುತ್ವದ ಒಳಸಂಚನ್ನು ಅರಿಯದ ಶೋಷಿತರು ತಮ್ಮೊಳಗೆ ತಾವೇ ಸಂಘರ್ಷ ಮಾಡಿಕೊಳ್ಳುತ್ತಾ ನೂರಾರು ಸಂಘಟನೆಗಳಾಗಿ ಒಡೆದು ಹಂಚಿ ಹೋಗಿರುವುದು ದುರಂತ. ಆದರೇ ಈ ಹೊತ್ತಿನಲ್ಲಿ ಮೊದಲು ತಮ್ಮ ಶತ್ರುಗಳು ಯಾರು? ಮಿತ್ರರು ಯಾರು? ಎಂಬ ಅರಿವನ್ನು ಇಟ್ಟುಕೊಂಡು ಈ ವರ್ಷದ 208 ನೇ ಭೀಮಾ ಕೋರೆಗಾಂವ್ ದಿನವನ್ನು ಸೈದ್ಧಾಂತಿಕವಾಗಿ ಎಲ್ಲರೂ ಒಂದಾಗಿ ಒಗ್ಗಟ್ಟಿನಿಂದ ವೀರ ಯೋಧರನ್ನು ನೆನೆಯೋಣ.
” ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೇ ಭೀಮಾ ಕೋರೆಗಾಂವ್ ಯುದ್ಧ ಎಂದು ಘೋಷಿಸೋಣ”.
ಬ್ರಾಹ್ಮಣವಾದ ಮತ್ತು ಬಂಡವಾಳವಾದವನ್ನು ಹಿಮ್ಮೆಟ್ಟಿಸೋಣ….
ಜೈ ಭೀಮ್,
ಜೈ ಭಾರತ್,
ಜೈ ಸಂವಿಧಾನ್.
ಪ್ರತಿಕ್ರಿಯೆಗೆ ಸ್ವಾಗತವಿದೆ ವಾಟ್ಸಾಪ್ ನಂಬರ್
(9731 493209)
ಬರಹ: ಡಾ. ಹರೀಶ್ ನಲ್ಕೆ
ಸಂಶೋಧನಾ ಬರಹಗಾರರು.

About Author

Leave a Reply

Your email address will not be published. Required fields are marked *

You may have missed