लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅವಿನ್ ಟಿವಿ ಸುದ್ದಿಜಾಲ ✒️: “Gandhi Replaced by Rama”

ಮನರೇಗಾ To “ಜಿ ರಾಮ್ ಜಿ”
———————-

ಮಹಾತ್ಮ ಗಾಂಧಿಯ ಹೆಸರಿನಲ್ಲಿದ್ದ ಕಾಯ್ದೆಯೊಂದಕ್ಕೆ ಬದಲಿ ಹೆಸರು ಇಡುವುದೆಂದರೆ ಅದು ಭಾರತದ ಆತ್ಮಕ್ಕೆ ಕೈಹಾಕಿದಂತೆಯೇ ಸರಿ. ಇಂತಹ ಕೆಲಸವನ್ನು ಭಾರತದ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರ ಕೈಗೊಂಡಿದೆ.

ಏನಿದು ಮನರೇಗಾ ? (MGNREGA ) ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ.

ಇದು 2005ರಲ್ಲಿ ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ಡಾ.ಮನಮೋಹನ್ ಸಿಂಗ್ ಅವರ ಸರ್ಕಾರ ಈ ಯೋಜನೆಯನ್ನು ಒಂದು ಖಾತ್ರಿ ಕಾಯ್ದೆಯಾಗಿ ಗ್ರಾಮೀಣಾಭಿವೃದ್ಧಿ ದೃಷ್ಟಿಯಿಂದ ಜಾರಿಗೆ ತಂದಿತ್ತು.

ಕೇಂದ್ರ ಸರ್ಕಾರದ ಒಂದು ಯಶಸ್ವಿ ಕಾಯ್ದೆ ಇದು, ಅಂದಿನ ಡಾ. ಮನಮೋಹನ್ ಸಿಂಗ್ ಅವರ ಸರ್ಕಾರ ಜಾರಿಗೆ ತಂದ ಈ ಕಾರ್ಯಕ್ರಮದ ಯಶಸ್ಸನ್ನು ಇಂದಿನ ಸರ್ಕಾರ ತನ್ನದಾಗಿಸಿಕೊಳ್ಳುವ ಹಪಾಹಪಿತನದಿಂದ ಮಹಾತ್ಮ ಗಾಂಧಿ ಹೆಸರಿನಲ್ಲಿದ್ದ ಈ ಕಾಯ್ದೆಗೆ , ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಸೂದೆಯಂದನು ಮಂಡಿಸಿ, ಮಹಾತ್ಮ ಗಾಂಧಿಯ ಹೆಸರಿನಲ್ಲಿದ್ದ ಮನರೇಗಾ ಎಂಬ ಹೆಸರಿನ ಬದಲಿಗೆ *”ವಿಬಿ- ಜಿ ರಾಮ್ ಜಿ “* ಎಂದು ಮರು ನಾಮಕರಣ ಮಾಡಿದೆ.

ಮಹಾತ್ಮ ಗಾಂಧಿಯ ಹೆಸರಿನಲ್ಲಿದ್ದ ಈ ಕಾಯ್ದೆಯ ಹೆಸರನ್ನು ಬದಲಾಯಿಸುವ ನಿರ್ಧಾರ ಯಾಕೆ ಕೈಗೊಂಡಿತು?ಎಂಬ ಬಗ್ಗೆ ಆಡಳಿತ ರೂಢ ಕೇಂದ್ರ ಸರ್ಕಾರದ ಒಬ್ಬರೇ ಒಬ್ಬರಿಂದ ಸಮರ್ಥವಾದ ಪ್ರಭುದ್ಧವಾದ ಹೇಳಿಕೆ ನೀಡಲು ಸಾಧ್ಯವಾಗಿಲ್ಲ, ಗಾಂಧೀಜಿಯವರ ಹೆಸರನ್ನು ಹೊರಗಿಟ್ಟು ಜನಪರ ಕಲ್ಯಾಣ ಕಾರ್ಯಕ್ರಮದ ಯಶಸ್ಸನ್ನು ತಮ್ಮದಾಗಿಸಿಕೊಳ್ಳುವ ನೀಚ ಕೆಲಸಕ್ಕೆ ಕೇಂದ್ರ ಸರ್ಕಾರ ಕೈ ಹಾಕಿ ಬಿಟ್ಟಿದೆ, ಗಾಂಧಿಜಿಯ ಹೆಸರನ್ನು ಬದಲಾಯಿಸಿದ್ದಕ್ಕೆ ವಿಶ್ವದೆದುರು ಭಾರತ ತಲೆತಗ್ಗಿಸುವಂಥಾಗಿದೆ ಹಾಗೂ ಈ ಕಾಯ್ದೆಯ ಅನೇಕ ತಿದ್ದುಪಡಿಗಳಿಂದ ರಾಜ್ಯ ಸರ್ಕಾರಗಳಿಗೆ ಆರ್ಥಿಕ ಹೊರ ಬಿದ್ದು ಈ ಜನಕಲ್ಯಾಣ ಯೋಜನೆಗೆ ದಕ್ಕೆ ಆಗಲಿದೆ ಎಂದು ಇಡೀ ದೇಶಾದ್ಯಂತ , ವಿರೋಧ ಪಕ್ಷಗಳು ಸೇರಿದಂತೆ, ದೇಶದ ನೂರಾರು ಸಂಘ ಸಂಸ್ಥೆಗಳು, ಮಹಾತ್ಮ ಗಾಂಧೀಜಿಯ ಅಭಿಮಾನಿಗಳನ್ನು ಒಳಗೊಂಡಂತೆ ಸಾರ್ವಜನಿಕರಿಂದ ಜನಾಕ್ರೋಶ ವ್ಯಕ್ತವಾಗುತ್ತಿದೆ.

unmasked Ideological Face of Honorable Prime Minister shri Narendra modi.

ಈ ಹಿನ್ನೆಲೆಯಲ್ಲಿ, ಸಾಮಾಜಿಕ ಕಾರ್ಯಕರ್ತ, ಜ್ಞಾನಭಿಕ್ಷಾ ಪಾದಯಾತ್ರಿ ಹೆಚ್.ಕೆ. ವಿವೇಕಾನಂದ ಅವರು ಬರದಿರುವ ಗಂಭೀರವಾದ ಲೇಖನವೊಂದನ್ನು ಅವಿನ್ ಟಿವಿ ಸುದ್ದಿಜಾಲ ತನ್ನ ಓದುಗರಿಗಾಗಿ ಹೊತ್ತು ತಂದಿದೆ..

ಇವರ ಈ ಲೇಖನ ಹಿಂದಿ ಮತ್ತು ಇಂಗ್ಲಿಷಿಗೆ ತರ್ಜುಮೆಗೊಂಡು ಇಡೀ ಭಾರತದ ಎಲ್ಲ ಗಾಂಧಿ ಭವನಗಳಿಗೆ ರವಾನೆ ಮಾಡಿ, ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಹಿಂತೆಗೆದುಕೊಳ್ಳಲು ಒತ್ತಾಯ ಮಾಡುವಂತೆ ಕೋರಲಾಗಿದೆ.

ತಪ್ಪದೆ ಹೆಚ್. ಕೆ. ವಿವೇಕಾನಂದ ಅವರ ಈ ಕೆಳಕಂಡ ಲೇಖನವನ್ನು ಗಂಭೀರವಾಗಿ ಓದಿ ಅರ್ಥೈಸಿಕೊಂಡು ಜನಾಭಿಪ್ರಾಯ ಮೂಡಿಸಲು ಕೋರಿದೆ…..
•••••••••••••••••••••••••••••👇
ಬಯಲಾದ ಶ್ರೀ ನರೇಂದ್ರ ಮೋದಿಯವರ ಸೈದ್ಧಾಂತಿಕ ಮುಖವಾಡ.

ಗಾಂಧಿಯ ಬದಲು ರಾಮ….

ಇದು ನಮ್ಮ ರಾಜಕೀಯ ನಿಲುವಲ್ಲ. ಈ ದೇಶದ ಮಾನವೀಯ ಮೌಲ್ಯಗಳ ಅಸ್ಮಿತೆಗಾಗಿ ನಮ್ಮ ಒಂದು ಸಣ್ಣ ಧ್ವನಿ. ದೇಶದ ಮುಂದಿನ ಭವಿಷ್ಯದ ಉಳಿವಿಗಾಗಿ. ಸ್ವಲ್ಪ ಕಠಿಣವಾಗಿದ್ದರೆ ಕ್ಷಮೆ ಇರಲಿ. ಇದು ಈ ಸಂದರ್ಭದ ಅನಿವಾರ್ಯ ಮತ್ತು ನಮ್ಮ ಕರ್ತವ್ಯ.

ಮೋದಿಯವರನ್ನು ಅತ್ಯಂತ ತೀವ್ರವಾಗಿ ಇಷ್ಟಪಡುವವರು ಸಹ ಈ ವಿಷಯದಲ್ಲಿ ಅವರನ್ನು ವಿರೋಧಿಸಿ ಅವರು ಮನ:ಪರಿವರ್ತನೆಗೆ ದಯವಿಟ್ಟು ಆಗ್ರಹಿಸಿ ಎಂದು ಕಳಕಳಿಯ ಮನವಿ ಮಾಡಿಕೊಳ್ಳುತ್ತಾ….

ಗಾಂಧಿಯವರನ್ನು ವಿಮರ್ಶಿಸಿ, ಟೀಕಿಸಿ, ವಿರೋಧಿಸಿ ಆದರೆ ದ್ವೇಷಿಸಬೇಡಿ. ಅವರು ಜಗತ್ತಿನ ನಿಜವಾದ ಶಾಂತಿದೂತ. ಭಾರತದ ನಿಜವಾದ ಆತ್ಮ…….

‌ನಮ್ಮ ನಿರೀಕ್ಷೆ ನಿಜವಾಗುತ್ತಿದೆ. ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಮುಖವಾಡ, ಅವರ ಕಾರ್ಯವಿಧಾನದ ಹಿಡನ್ ಅಜೆಂಡಾ ಸ್ಪಷ್ಟವಾಗಿ ಬಯಲಾಯಿತು. ಧರ್ಮಕ್ಕಿಂತ ದೇಶ ಮುಖ್ಯ ಎಂದು ಮೇಲ್ನೋಟಕ್ಕೆ ಹೇಳುತ್ತಾ, ಧರ್ಮ ಮುಖ್ಯ ಎನ್ನುವ ಕೆಲವು ಮೂಲಭೂತವಾದಿ ಮುಸ್ಲಿಮರ ಮಾತುಗಳನ್ನೇ ವಿಜೃಂಭಿಸುತ್ತಾ, ಇಡೀ ಸಮುದಾಯವನ್ನೇ ಅನುಮಾನದಿಂದ ನೋಡುವಂತೆ ಮಾಡಿ ಈಗ ತಾವು ಸಹ ದೇಶಕ್ಕಿಂತ ಧರ್ಮ ಮುಖ್ಯ ಎನ್ನುವುದನ್ನು ಸಾಬೀತು ಮಾಡಿ ದೇಶವನ್ನು ಅಸಹಿಷ್ಣುತೆಯ ಅಂಚಿಗೆ ತಂದು ನಿಲ್ಲಿಸಿದ್ದಾರೆ. ಮುಂದೆ ಹೇಗೋ ಏನೋ.

ಏಕೆಂದರೆ, ಒಂದು ರಾಷ್ಟ್ರೀಯ ಯೋಜನೆಗೆ ಈ ದೇಶದ ನಿಜವಾದ ಆತ್ಮ ಮಹಾತ್ಮ ಗಾಂಧಿಯವರ ಹೆಸರನ್ನು ಬದಲಾಯಿಸಿ ರಾಮನ ಹೆಸರನ್ನು ಪ್ರತಿಷ್ಠಾಪಿಸುವ ಮೂಲಕ ಈ ದೇಶದ ಮೌಲ್ಯಗಳಿಗೆ, ನಂಬಿಕೆಗಳಿಗೆ, ನ್ಯಾಯ ನೀತಿಗಳ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ.

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಕೆಲವು ಲೋಪ ದೋಷಗಳನ್ನು ತಿದ್ದುಪಡಿ ಮಾಡಿ ಹೊಸ ಮಸೂದೆ ಮಂಡಿಸುತ್ತಿರುವುದು ಸ್ವಾಗತಾರ್ಹ. ಆದರೆ ಮಹಾತ್ಮ ಗಾಂಧಿಯವರ ಹೆಸರನ್ನು ಬದಲಾಯಿಸುತ್ತಿರುವುದು ಮಾತ್ರ ಅತ್ಯಂತ ಘನ ಘೋರ ಅನ್ಯಾಯ. ಒಂದು ವೇಳೆ ರಾಜಕೀಯ ಕಾರಣಗಳಿಗಾಗಿ ನೆಹರು ಕುಟುಂಬದ ಕೆಲವರ ಹೆಸರನ್ನು ಬದಲಾಯಿಸುತ್ತಿದ್ದರೆ. ಅದನ್ನು ಟೇಕಿಸಿ, ಚುನಾವಣಾ ವಿಷಯವಾಗಿ ಪ್ರತಿಪಕ್ಷಗಳು ಆರೋಪ ಮಾಡಬಹುದು. ಅದೊಂದು ರಾಜಕೀಯ ನಿರ್ಧಾರ. ಆದರೆ ಮಹಾತ್ಮ ಗಾಂಧಿ ಯಾವುದೋ ಒಂದು ಪಕ್ಷದ ಅಥವಾ ಒಂದು ಧರ್ಮದ ಅಥವಾ ಒಂದು ಪ್ರದೇಶದ ವ್ಯಕ್ತಿಯಲ್ಲ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಒಬ್ಬ ಬರಿ ಮೈ ಫಕೀರ ಮಾತ್ರವಲ್ಲ, ಭಾರತೀಯ ಮೌಲ್ಯಗಳಾದ ಸತ್ಯ, ಶಾಂತಿ, ಅಹಿಂಸೆ, ಸರಳತೆ, ಸತ್ಯಾಗ್ರಹ ಇನ್ನೊಬ್ಬರನ್ನು ಗೌರವಿಸುವುದು, ಇನ್ನೊಬ್ಬರನ್ನು ಪ್ರೀತಿಸುವುದು, ಈ ಎಲ್ಲದರ ಸಾಂಕೇತಿಕ ವ್ಯಕ್ತಿತ್ವ ಮಹಾತ್ಮ ಗಾಂಧಿಯವರದು.

ಒಳಗೆ ಗೋಡ್ಸೆ ಮನಸ್ಥಿತಿಯಿದ್ದು ಹೊರಗೆ ಗಾಂಧಿ ಮುಖವಾಡವನ್ನು ತೊಟ್ಟಿದ್ದ ನರೇಂದ್ರ ಮೋದಿಯವರು ನಿರ್ಧಿಷ್ಟವಾಗಿ ಈ ವಿಷಯದಲ್ಲಿ ಅತ್ಯಂತ ಕೆಟ್ಟ, ದೇಶದ್ರೋಹದ ತೀರ್ಮಾನವನ್ನು ಕೈಗೊಂಡಿದ್ದಾರೆ‌. ದೇಶದ ರಾಷ್ಟ್ರಪಿತನ ಹೆಸರನ್ನು ಬದಲಾಯಿಸಿ ಕಾಲ್ಪನಿಕ, ಪೌರಾಣಿಕ ಪಾತ್ರವಾದ ಶ್ರೀ ರಾಮನ ಹೆಸರನ್ನು ಮುನ್ನಲೆಗೆ ತರುವ ಮುಖಾಂತರ ಅವರ ನೈಜ ಮುಖವಾಡ ಬಯಲಾಗಿದೆ.

ಮಹಾತ್ಮ ಗಾಂಧಿಯವರು ಸಹ ಶ್ರೀರಾಮನ ಆದರ್ಶಗಳನ್ನು ಮೆಚ್ಚುತ್ತಿದ್ದರು. ಆದರೆ ಮಹಾತ್ಮ ಗಾಂಧಿಯವರ ಆದರ್ಶ ರಾಮ ಬೇರೆ, ನರೇಂದ್ರ ಮೋದಿಯವರ ರಾಮ ಬೇರೆ. ಮೋದಿಯವರ ರಾಮ ಕೇವಲ ಚುನಾವಣಾ ರಾಜಕೀಯದ, ವ್ಯಾಪಾರದ ಸರಕಿನ ಒಂದು ಭಾಗ ಮಾತ್ರ….

ಸ್ವಾತಂತ್ರ್ಯ ಭಾರತ ಇಂದು ತನ್ನ ತಳಹದಿಯ ಮೇಲೆ 79 ವರ್ಷಗಳ ನಂತರ ವಿಶ್ವಮಟ್ಟದಲ್ಲಿ ಒಂದು ಪ್ರತಿಷ್ಠಿತ ದೇಶವಾಗಿ ಮುನ್ನಡೆಯಲು ಕೊಡುಗೆ ಇರುವುದು ಮಹಾತ್ಮ ಗಾಂಧಿಯವರದೇ ಹೊರತು ಶ್ರೀರಾಮರದಲ್ಲ. ಮಹಾತ್ಮ ಗಾಂಧಿ ಬ್ರಿಟಿಷರ ದಾಸ್ಯದಿಂದ ಮುಕ್ತವಾಗಲು ನಾಯಕತ್ವ ವಹಿಸಿ ಹೋರಾಡಿದವರು. ರಾಮ ತನ್ನ ಸ್ವಂತ ಕುಟುಂಬದ ಅಧಿಕಾರದ ಹಿತಾಸಕ್ತಿಯ ಪ್ರತೀಕವಾಗಿ, ಆಗಿನ ಕಾಲದ ಸಾಮಾಜಿಕ ಮೌಲ್ಯಗಳ ಆದರ್ಶವಾಗಿ ಚಿತ್ರಿತವಾಗಿರುವ ಪಾತ್ರ.

ಏಕೆ ಮಾನ್ಯ ನರೇಂದ್ರ ಮೋದಿಯವರೇ ಇಷ್ಟೊಂದು ದೊಡ್ಡ ತಪ್ಪು ಮತ್ತು ಕೆಟ್ಟ ನಿರ್ಧಾರವನ್ನು ತೆಗೆದುಕೊಂಡಿರಿ. ನಿಮ್ಮ ಎಲ್ಲಾ ಸರ್ವಾಧಿಕಾರಿ ಧೋರಣೆಗಳ ಮಧ್ಯೆಯೂ ಒಂದಷ್ಟು ಒಳ್ಳೆಯ ಕೆಲಸಗಳ ಬಗ್ಗೆ ಸಣ್ಣ ಸಹಾನುಭೂತಿ ನಮಗೆಲ್ಲಾ ಇತ್ತು. ಆದರೆ ಈ ನಿರ್ಧಾರದಿಂದ ಆ ಸಹಾನುಭೂತಿಯನ್ನು ಸಹ ನೀವು ಕಳೆದುಕೊಂಡಿರಿ.

ಈಗ ಅನಿಸುತ್ತಿದೆ ಇದರ ಹಿಂದೆ ನಿಮ್ಮ ವ್ಯವಸ್ಥಿತ ಪಿತೂರಿ, ಕಾರ್ಯಾಚರಣೆ ನಿರಂತರವಾಗಿ ನಡೆದುಕೊಂಡು ಬಂದು ಈಗ ಈ ಹಂತ ತಲುಪಿದೆ.

ಈ ದೇಶದ ನಿಮ್ಮ ಅಭಿಮಾನಿಗಳು, ಆರಾಧಕರು, ಭಕ್ತರು ಮಹಾತ್ಮ ಗಾಂಧಿಯವರ ವ್ಯಕ್ತಿತ್ವ ಮತ್ತು ಮೌಲ್ಯವನ್ನು ನಿಧಾನವಾಗಿ ಕಳೆದ ಹತ್ತು ವರ್ಷಗಳಿಂದ ಪ್ರತಿಕ್ಷಣ
ಅಪಮೌಲ್ಯ ಗೊಳಿಸುತ್ತಾ ಕೆಟ್ಟದಾಗಿ ಬಿಂಬಿಸುತ್ತಿರುವಾಗ, ನೀವು ಅದನ್ನು ಖಂಡಿಸದೆ ಮೇಲ್ನೋಟಕ್ಕೆ ಗಾಂಧಿಯವರ ಮುಖವಾಡ ತೊಟ್ಟುಕೊಂಡು ಈಗ ನೀವು ಅವರಿಗೆ ಸಂಪೂರ್ಣ ಪ್ರೋತ್ಸಾಹ ಕೊಡುವ ರೀತಿಯಲ್ಲಿ ಈ ನಿರ್ಧಾರ ಕೈಗೊಂಡಿದ್ದು ಕ್ಷಮಿಸಲು ಸಾಧ್ಯವಿಲ್ಲದ ತಪ್ಪು.

ಮಾನ್ಯ ಮೋದಿಯವರೇ ನಿಮಗೆ ಗೋಡ್ಸೆ ಸುಲಭವಾಗಿ ಅರ್ಥವಾಗುತ್ತಾರೆ. ಆದರೆ ಗಾಂಧಿ ಖಂಡಿತ ಅರ್ಥವಾಗುವುದಿಲ್ಲ. ಆ ಸಾಧ್ಯತೆಯೂ ತುಂಬಾ ಕಡಿಮೆ. ಆದರೂ ನಾವೆಲ್ಲರೂ ನಿರೀಕ್ಷಿಸುತ್ತೇವೆ ನೀವು ಈ ನಿರ್ಧಾರವನ್ನು ಪುನರ್ ಪರಿಶೀಲಿಸಿ ಮಹಾತ್ಮಾ ಗಾಂಧಿಯವರ ವ್ಯಕ್ತಿತ್ವಕ್ಕೆ, ಘನತೆಗೆ, ತ್ಯಾಗಕ್ಕೆ ಮಸಿ ಬಳಿಯುವ ಕೆಲಸ ಮಾಡದೆ ಈ ದೇಶದ ಜನರ ಮನಸ್ಸಾಕ್ಷಿಯನ್ನು ಎತ್ತಿ ಹಿಡಿಯುತ್ತೀರೆಂದು.

ಮಾನ್ಯ ಪ್ರಧಾನಿಯವರೇ, ಗಾಂಧಿಯ ಮೌಲ್ಯಗಳನ್ನು ಮರೆತ ದೇಶ ಖಂಡಿತಾ ಸರ್ವಾಂಗೀಣವಾಗಿ, ನಿಮ್ಮ ಆಶಯದ ವಿಕಸಿತ ಭಾರತವಾಗಿ ಯಶಸ್ವಿಯಾಗುವುದು ಸಾಧ್ಯವಿಲ್ಲ. ಈಗಾಗಲೇ ಈ ದೇಶದ ಮೌಲ್ಯಗಳು ತಮ್ಮ ನೇತೃತ್ವದಲ್ಲಿ ಹಣ ಕೇಂದ್ರೀಕೃತವಾಗಿ ವಿರುದ್ಧ ಮೌಲ್ಯಗಳು ಮಾನ್ಯತೆ ಪಡೆಯುತ್ತಿವೆ. ಹಣವೇ ನಿನ್ನಯ ಗುಣ ಎಂಬ ಸಾಮಾನ್ಯ ಸಾಮಾಜಿಕ ವಾತಾವರಣ ನಿರ್ಮಾಣವಾಗಿದೆ.

ಇಂತಹ ಸಂದರ್ಭದಲ್ಲಿ ತಾವು ದೇಶವನ್ನು ಮೌಲ್ಯ ರಹಿತವಾಗಿ, ಹಿಮ್ಮುಖವಾಗಿ ಚಲಿಸುವಂತೆ ಮಾಡುತ್ತಿದ್ದೀರಿ. ಇದಕ್ಕಾಗಿ ಈ ದೇಶ ಬಹಳ ದೊಡ್ಡ ಗಂಡಾಂತರಕ್ಕೆ ಸಿಲುಕುತ್ತದೆ. ನಿಮ್ಮನ್ನು ಬೆಂಬಲಿಸಿದವರು ಪಶ್ಚಾತಾಪ ಪಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಗುಣವಿಲ್ಲದ ಹಣ ನಿಷ್ಪ್ರಯೋಜಕ ಮತ್ತು ಅಪಾಯಕಾರಿ. ತಾವು ಗಾಂಧಿಯವರನ್ನು ಏಕೆ ಗುರಿಯಾಗಿಸಿಕೊಂಡಿರಿ ಎಂಬುದು ಅರ್ಥವಾಗುತ್ತಿಲ್ಲ.

ಮಾನವೀಯ ಮೌಲ್ಯಗಳ ಪ್ರತಿಪಾದಕರಾದ, ಜಗತ್ತಿನ ಕೆಲವೇ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರಾದ ಗಾಂಧಿಯ ದ್ವೇಷ ಯಾಕಿಷ್ಟು ನಿಮಗೆ. ಬಹುಶಃ ಇದನ್ನು ನೋಡುತ್ತಿದ್ದರೆ ನಿಮ್ಮ ಮುಂದಿನ ಟಾರ್ಗೆಟ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು ಎಂದೆನಿಸುತ್ತದೆ. ಏಕೆಂದರೆ ಕೆಲವು ಮೂಲಭೂತವಾದಿ ಅಂಬೇಡ್ಕರ್ ವಾದಿಗಳು ತಪ್ಪು ಗ್ರಹಿಕೆಯಿಂದ ಮಹಾತ್ಮ ಗಾಂಧಿಯವರನ್ನು ನಿಮ್ಮಷ್ಟೇ ಟೀಕಿಸುತ್ತಾರೆ, ದ್ವೇಷಿಸುತ್ತಾರೆ. ಅದರ ಅರಿವು ನಿಮಗಿದೆ. ಅದರ ಭಾಗವಾಗಿ ಈಗ ಗಾಂಧಿಯವರನ್ನು ಏಕಾಂಗಿಯಾಗಿಸಿ ಅವರ ಚಿಂತನೆಗಳನ್ನು ಕೊಂದ ಬಳಿಕ ಮುಂದಿನ ಹೆಜ್ಜೆ ಬಹುಶಃ ಬಾಬಾ ಸಾಹೇಬರೇ ಆಗಿರುತ್ತಾರೆ.

ಬಾಬಾಸಾಹೇಬರ ಅನುಯಾಯಿಗಳು ಬಹುದೊಡ್ಡ ಸಂಖ್ಯೆಯಲ್ಲಿ ಸಂಘಟಿತರಾಗಿರುವುದರಿಂದ ನೀವು ಮೇಲ್ನೋಟಕ್ಕೆ ಅವರನ್ನು ಟೀಕಿಸುವುದಿಲ್ಲ. ಗಾಂಧಿಯವರು ಇಂದು ನಿಮ್ಮ ಆಡಳಿತದಲ್ಲಿ, ಓಟಿನ ರಾಜಕೀಯದಲ್ಲಿ ಸವಕಲು ನಾಣ್ಯ. ಗಾಂಧಿಯವರನ್ನು ಬೆಂಬಲಿಸುವ, ಓಟಿನ ರಾಜಕೀಯ ಮಾಡುವ ಜನರ ಸಂಖ್ಯೆ, ಸಮುದಾಯಗಳ ಸಂಖ್ಯೆ ಇಲ್ಲದೇ ಇರುವುದರಿಂದ ನಿಮಗೆ ಇಷ್ಟೊಂದು ಧೈರ್ಯ ಬಂದಿರಬೇಕು. ಕಾಂಗ್ರೆಸ್ಸಿನ ತಪ್ಪುಗಳನ್ನೇ ಮುಂದೆ ಮಾಡಿ ಮಹಾತ್ಮ ಗಾಂಧಿಯವರನ್ನು ಜನರ ಮನಃಪಟಲದಿಂದ ದೂರ ತಳ್ಳುತ್ತಿರುವುದು ಭಾರತೀಯರಿಗೆ ನೀವು ಮಾಡುತ್ತಿರುವ ಬಹುದೊಡ್ಡ ದ್ರೋಹ.

ಸನ್ಮಾನ್ಯ ನರೇಂದ್ರ ಮೋದಿಯವರೇ, ಸತ್ಯಕ್ಕೆ ಜನಪ್ರಿಯತೆ ಮುಖ್ಯ ಅಲ್ಲ. ಸತ್ಯಕ್ಕೆ ಮನಸ್ಸಾಕ್ಷಿ ಮುಖ್ಯ. ಸತ್ಯ ಸಾರ್ವತ್ರಿಕವಾದದ್ದು, ಶಾಶ್ವತವಾದದ್ದು, ಜನಪ್ರಿಯತೆ ಕ್ಷಣಿಕವಾದದ್ದು. ಮೋದಿಯವರೇ, ನಿರ್ಧಿಷ್ಟವಾಗಿ ನಿಮ್ಮ ಈ ಯೋಜನೆಯ ಹೆಸರು ಬದಲಾವಣೆಗೆ ನಮ್ಮೆಲ್ಲಾ ಪ್ರಭುದ್ಧ ಮನಸ್ಸುಗಳ ಧಿಕ್ಕಾರ…….
••••••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ… ✒️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed