ಶಾಮನೂರು ಶಿವಶಂಕರಪ್ಪನವರು ಇನ್ನಿಲ್ಲ* —–
1 min read
ನ್ಯೂಸ್ ಕಿಂಗ್ ✒️:
*ಬಾಪೂಜಿ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರು, ದೇಶದ ಅತ್ಯಂತ ಹಿರಿಯ ಶಾಸಕರು ಎಂಬ ಹೆಗ್ಗಳಿಕೆಗೆ ಕಾರಣರಾಗಿದ್ದ ಶಾಮನೂರು ಶಿವಶಂಕರಪ್ಪನವರು ಇನ್ನಿಲ್ಲ*
—————-
ಬೆಂಗಳೂರು ಡಿ14: ಕಾಂಗ್ರೆಸ್ನ ಹಿರಿಯ ನಾಯಕ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರಾದ ಶಾಮನೂರು ಶಿವಶಂಕರಪ್ಪನವರು ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.
ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಶಾಮನೂರು ಶಿವಶಂಕರಪ್ಪ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು (ಡಿಸೆಂಬರ್ 14) ಸಂಜೆ ಕೊನೆಯುಸಿರೆಳೆದಿದ್ದಾರೆ.
ಶಾಮನೂರು ಶಿವಶಂಕರಪ್ಪ ಅವರು 6 ಬಾರಿ ಶಾಸಕರಾಗಿದ್ದು, ಹಲವು ಮುಖ್ಯಮಂತ್ರಿ ಗಳ ಸಂಪುಟದಲ್ಲಿ ಸಚಿವರಾಗಿದ್ದರು.
ಭಾರತದಲ್ಲೇ ಹಿರಿಯ ಶಾಸಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ, ವಯೋಸಹಜ ಅನಾರೋಗ್ಯದ ಹಿನ್ನೆಲೆ ಕೆಲ ದಿನಗಳಿಂದ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು.
ಕೆಲ ದಿನಗಳ ಹಿಂದೆ ಬೇರೆ ಬೇರೆ ರೀತಿಯ ಸುದ್ದಿ ಹರಿದಾಡಿದ್ದರಿಂದ ಈ ಬಗ್ಗೆ ಪುತ್ರ, ಸಚಿವ ಎಸ್ಎಸ್ ಮಲ್ಲಿಕಾರ್ಜುನ ಆವರು ಪ್ರತಿಕ್ರಿಯಿಸಿ ತಮ್ಮ ತಂದೆ ಚೆನ್ನಾಗಿದ್ದಾರೆ. ಗುರು ಹಿರಿಯರ ಆಶೀರ್ವಾದದಿಂದ ಇನ್ನೊಂದು ವಾರದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಹೇಳಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ.
1931ರ ಜೂನ್ 16ರಂದು ದಾವಣಗೆರೆಯ ಶಾಮನೂರಿನಲ್ಲಿ ಕಲ್ಲಪ್ಪ ಮತ್ತು ಸಾವಿತ್ರಮ್ಮ ಅವರ ಎರಡನೇ ಮಗನಾಗಿ ಜನಿಸಿದ ಶಿವಶಂಕರಪ್ಪ ಅವರು ಸರಕಾರಿ ಕಾಲೇಜು, ದಾವಣಗೆರೆಯಲ್ಲಿ ವಿದ್ಯಾಭ್ಯಾಸ ಪೂರೈಸಿದರು.
1969ರಲ್ಲಿ ಕಾಂಗ್ರೆಸ್ ಮೂಲಕ ರಾಜಕೀಯ ಸೇರಿ ಮೊಟ್ಟಮೊದಲಿಗೆ ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯರಾದರು.
1971ರಲ್ಲಿ ಪಾಲಿಕೆ ಅಧ್ಯಕ್ಷರಾದರು. 1994ರಲ್ಲಿ ದಾವಣಗೆರೆಯಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 1998-99ರಲ್ಲಿ ಲೋಕಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದರು. 2004ರಿಂದ ದಾವಣಗೆರೆ ದಕ್ಷಿಣದಿಂದ ಆರು ಬಾರಿ ಶಾಸಕರಾಗಿ ಗೆದ್ದು, ಭಾರತದ ಅತ್ಯಂತ ವಯಸ್ಸಿನ ಶಾಸಕ ಎಂಬ ಹೆಗ್ಗಳಿಗೆ ಅವರಾಗಿತ್ತು. 2013-16ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದರು.
ಹಾಲಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಸೇರಿ ಮೂವರು ಪುತ್ರರು,ನಾಲ್ವರು ಪುತ್ರಿಯರು, ಅತಿ ದೊಡ್ಡ ಕುಟುಂಬ ವರ್ಗವು ಸೇರಿ ಅಪಾರವಾದ ಅಭಿಮಾನಿ ಬಳಗವನ್ನು ಬಿಟ್ಟು ಅಗಲಿದ್ದಾರೆ.
ಶಿವಶಂಕರಪ್ಪ ಅವರ ನಿಧನಕ್ಕೆ ರಾಜ್ಯ ಸೇರಿದಂತೆ ದೇಶದ ಮೂಲೆ ಮೂಲೆಗಳಿಂದ ವಿವಿಧ ಪಕ್ಷದ ರಾಜಕೀಯ ದುರಿಣರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಸಮಾಜದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
•••••••••••••••
ಡಿ.ಎಂ.ಮಂಜುನಾಥಸ್ವಾಮಿ
ನ್ಯೂಸ್ ಕಿಂಗ್… ✒️
ಚಿಕ್ಕಮಗಳೂರು

