ಭಾರತಿಬೈಲ್ನಲ್ಲಿ ಹುಲಿಯ ಸಂಚಲನ-ಗ್ರಾಮಸ್ಥರಲ್ಲಿ ಅತಂಕ….
1 min read
ಭಾರತಿಬೈಲ್ನಲ್ಲಿ ಹುಲಿಯ ಸಂಚಲನ-ಗ್ರಾಮಸ್ಥರಲ್ಲಿ ಅತಂಕ




ಕೊಟ್ಟಿಗೆಹಾರ: ಜಿಲ್ಲೆಯ ಮಲೆನಾಡು ಭಾಗದಲ್ಲಿ ವನ್ಯಪ್ರಾಣಿಗಳ ಹಾವಳಿ ದಿನೇದಿನೇ ಹೆಚ್ಚಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಮೂಡಿಗೆರೆ ಉಪವಿಭಾಗದ ಮೂಡಿಗೆರೆ ವಲಯದ ಭಾರತೀಬೈಲು ಶಾಖೆ ವ್ಯಾಪ್ತಿಯ ಬಿ.ಹೊಸಹಳ್ಳಿ ಗ್ರಾಮದ ಸರ್ವೆ ನಂಬರ್ 212ರಲ್ಲಿ ಕಾಡುಪ್ರಾಣಿಯ ದಾಳಿಯಿಂದ ಹಸು ಮೃತಪಟ್ಟ ಘಟನೆ ನಡೆದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸ್ಥಳ ಪರಿಶೀಲನೆ ನಡೆಸಿದೆ.
ಭಾರತೀಬೈಲು-ಬಿ.ಹೊಸಹಳ್ಳಿ ಗ್ರಾಮ ಸಮೀಪದ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಅಳವಡಿಸಿದ್ದ ಕ್ಯಾಮೆರಾ ಟ್ರ್ಯಾಪ್ನಲ್ಲಿ ಹುಲಿಯ ಚಲನವಲನ ಸೆರೆಯಾಗಿದ್ದು, ಈ ದೃಶ್ಯಗಳು ಬಹಿರಂಗವಾದ ಬಳಿಕ ಗ್ರಾಮಸ್ಥರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ. ಹಸುಗಳ ಮೇಲೆ ನಿರಂತರ ದಾಳಿ ನಡೆಯುತ್ತಿರುವುದರಿಂದ ಗ್ರಾಮಸ್ಥರು ಭೀತಿಯಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹುಲಿಯ ಜೊತೆಗೆ ಇತರೆ ಕಾಡುಪ್ರಾಣಿಗಳ ಸಂಚಲನ ಕೂಡ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಹುಲಿಯನ್ನು ಕೂಡಲೇ ಸೆರೆ ಹಿಡಿದು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಇತ್ತ ಕಾಫಿನಾಡಿನ ಮಲೆನಾಡು ಭಾಗಗಳಲ್ಲಿ ಕಾಡಾನೆಗಳ ಹಾವಳಿಯಿಂದ ಕಾಫಿ ಮತ್ತು ಅಡಿಕೆ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕಾಡಾನೆಗಳ ದಾಳಿಯಿಂದ ಅನೇಕ ರೈತರು ಹಾಗೂ ಕಾರ್ಮಿಕರು ಪ್ರಾಣ ಕಳೆದುಕೊಂಡಿರುವ ಘಟನೆಗಳು ಈಗಾಗಲೇ ನಡೆದಿದ್ದು, ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಯೋಜನೆ ರೂಪಿಸಬೇಕೆಂಬ ಬೇಡಿಕೆ ಬಹುಕಾಲದಿಂದ ಕೇಳಿಬರುತ್ತಿದೆ. ಆದರೆ ಸರ್ಕಾರದಿಂದ ಸಮರ್ಪಕ ಸ್ಪಂದನೆ ದೊರಕಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.ಈ ಮಧ್ಯೆ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಹುಲಿ ಹಾಗೂ ಚಿರತೆಗಳ ಸಂಚಲನ ಹೆಚ್ಚಾಗುತ್ತಿರುವುದು ರೈತರ ನಿದ್ದೆ ಕಸಿದುಕೊಳ್ಳುತ್ತಿದೆ.
ವನ್ಯಪ್ರಾಣಿಗಳ ಹಾವಳಿಗೆ ತ್ವರಿತ ಹಾಗೂ ಶಾಶ್ವತ ಪರಿಹಾರ ಒದಗಿಸುವಂತೆ ಸರ್ಕಾರ ಮತ್ತು ಅರಣ್ಯ ಇಲಾಖೆಯನ್ನು ಜನರು ಆಗ್ರಹಿಸಿದ್ದಾರೆ.
ವರದಿ…
ರಕ್ಷಿತ್ ಬಾಳೂರು.

