ಜಲ್ಜೀವನ್ ಮಿಷನ್ ಯೋಜನೆ ಅನುಷ್ಠಾನ ಸಮಗ್ರ ತನಿಖೆಗೆ ವಹಿಸಲಿ.ಹೊಲದಗದ್ದೆಗಿರೀಶ್..
1 min read
ಜಲ್ಜೀವನ್ ಮಿಷನ್ ಯೋಜನೆ ಅನುಷ್ಠಾನ ಸಮಗ್ರ ತನಿಖೆಗೆ ವಹಿಸಲಿ.ಹೊಲದಗದ್ದೆಗಿರೀಶ್..
ಚಿಕ್ಕಮಗಳೂರು : ಜಿಲ್ಲೆಯಾದ್ಯಂತ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನದಲ್ಲಿ ನಡೆದಿರುವ ಕೋಟ್ಯಾಂತರ ರೂ. ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಹೊಲದಗದ್ದೆ ಗಿರೀಶ್ ಆಗ್ರಹಿಸಿದ್ದಾರೆ.
ಲೂಟಿ:: ಜೆಜೆಎಂಗೆ ಬಳಸಲಾಗುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡರ ಅನುದಾನವೂ ನುಂಗಣ್ಣಗಳ ಪಾಲಾಗುತ್ತಿದೆ. ಈಗಾಗಲೇ ಕೋಟ್ಯಾಂತರ ರೂ. ಹಣವನ್ನು ಹೊಡೆಯಲಾಗಿದೆ. ಲಕ್ಷಾಂತರ ರೂ. ವೆಚ್ಚಮಾಡಿ ಕೈಗೊಳ್ಳಲಾದ ನೂರಾರು ಕಾಮಗಾರಿಗಳು ಪ್ರಯೋಜನಕ್ಕೆ ಬಾರದಂತಾಗಿದ್ದು, ಗುತ್ತಿಗೆದಾರರು, ರಾಜಕಾರಣಿಗಳು, ಚುನಾಯಿತ ಪ್ರತಿನಿಧಿಗಳ ಜೇಬು ಮಾತ್ರ ತುಂಬಿದೆ ಎಂದು ದೂರಿದ್ದಾರೆ.
ಈ ಒಂದು ರೀತಿ ಹಗಲು ದರೋಡೆಯಂತಾಗಿರುವ ಹಗರಣದ ತನಿಖೆಗೆ ದಕ್ಷ ಅಧಿಕಾರಿಗಳ ತಂಡವನ್ನು ನೇಮಿಸಿ ಪ್ರತಿ ಕಾಮಗಾರಿಯನ್ನೂ ಪರಿಶೀಲನೆಗೊಳಪಡಿಸಿ ಯೋಜನೆ ವೈಫಲ್ಯಕ್ಕೆ ಕಾರಣರಾದವರು, ನೀರೇ ಇಲ್ಲದಿದ್ದರೂ ಟ್ಯಾಂಕ್ ನಿರ್ಮಾಣ ಮಾಡಿ, ಪೈಪ್ ಲೈನ್ ಅಳವಡಿಸಿ ಬಿಲ್ ಮಾಡಿಕೊಂಡಿರುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಹಣ ವಸೂಲಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ನೀರಿನ ಮೂಲೆಗಳೇ ಇಲ್ಲದಿದ್ದರೂ ಕಾಮಗಾರಿ ಆರಂಭಿಸಿದ ಬಗ್ಗೆ ನಾವು ಪ್ರಾರಂಭದಲ್ಲೇ ಆಕ್ಷೇಪ ವ್ಯಕ್ತಪಡಿಸಿದರೂ ಸಹ ಜಿಲ್ಲಾಡಳಿತವಾಗಲಿ, ಜಿಲ್ಲಾ ಪಂಚಾಯ್ತಿಯಾಗಲಿ ಗಂಭೀರವಾಗಿ ಪರಿಗಣಿಸದ ಪರಿಣಾಮ ಈಗ ಕೋಟ್ಯಾಂತರ ರೂ. ಸುರಿದು ಕಾಮಗಾರಿ ಕೈಗೊಂಡರೂ ಸಾರ್ವಜನಿಕರಿಗೆ ಒಂದು ಹನಿ ಕುಡಿಯುವ ನೀರು ಕೊಡಲು ಸಾಧ್ಯವಾಗಿಲ್ಲ. ಶೇ.99 ರಷ್ಟು ಕಾಮಗಾರಿಗಳು ವೈಫಲ್ಯಕಂಡಿವೆ. ಕಮಿಷನ್ ಆಸೆಗಾಗಿ ಕಂಡ ಕಂಡಲ್ಲಿ ಕಾಮಗಾರಿ ಮಾಡಿ ಹಣ ಲೂಟಿ ಮಾಡಲಾಗಿದೆ. ತಳಮಟ್ಟದಿಂದ ಹಿಡಿದು ಉನ್ನತ ಮಟ್ಟದ ಅಧಿಕಾರಿ, ಸಿಬ್ಬಂಧಿಗಳು, ಗುತ್ತಿಗೆದಾರರು ಅಕ್ರಮದಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಬಹುತೇಕ ಕಾಮಗಾರಿಗಳು ಹಾಳು ಸುರಿಯುತ್ತಿವೆ. ಕೆಲವು ಕಡೆಗಳಲ್ಲಿ ಪೈಪ್ ಲೈನ್ಗಳನ್ನು ಕಿತ್ತು ಕದ್ದೊಯ್ಯಲಾಗಿದೆ. ಕಣ್ಣ ಮುಂದೆಯೇ ದೊಡ್ಡ ಮಟ್ಟದ ಅಕ್ರಮ ನಡೆದು ಸರ್ಕಾರದ ಅನುದಾನ ದುರ್ಬಳಕೆ ಆಗುತ್ತಿದ್ದರೂ ಜಿಲ್ಲಾಡಳಿತವಾಗಲಿ, ಚುನಾಯಿತ ಪ್ರತಿನಿಧಿಗಳಾಗಲಿ ಗಂಭೀರವಾಗಿ ಪರಿಗಣಿಸದಿರುವುದು ಅನುಮಾನಕ್ಕೆ ಕಾರಣವಾಗುತ್ತಿದೆ ಎಂದು ದೂರಿದ್ದಾರೆ.
ಹಲವು ಸಂದರ್ಭದಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ಸಲ್ಲಿಸಲಾಗಿದೆ. ಶಾಸಕರು, ವಿಧಾನ ಪರಿಷತ್ ಸದಸ್ಯರು ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನೊಳಗೊಂಡ ತನಿಖಾ ಸಮಿತಿ ರಚಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಕೆಡಿಪಿ ಸಭೆಯಲ್ಲೇ ನಿರ್ಣಯ ಕೈಗೊಳ್ಳಲಾಗಿದರೂ ಈ ವಿಚಾರದಲ್ಲಿ ಯಾವುದೇ ಪ್ರಗತಿ ಆದಂತೆ ಕಾಣುತ್ತಿಲ್ಲ. ತನಿಖೆಗೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿ ತಿಂಗಳುಗಳೇ ಕಳೆದಿದ್ದರೂ ಜೆಜೆಎಂ ಯೋಜನೆಯ ಅಕ್ರಮಗಳು ಮಾತ್ರ ಮುಂದುವರಿದೇ ಇರುವುದು ವಿಪರ್ಯಾಸ ಎಂದಿದ್ದಾರೆ.
ಆದಷ್ಟು ಬೇಗನೇ ಯೋಜನೆ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು. ದುರುಪಯೋಗವಾಗಿರುವ ಅನುದಾನದ ವಸೂಲಿಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

