लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕೊಪ್ಪ ತಾಲ್ಲೂಕಿನ ಲೋಕನಾಥಪುರ ಪ್ರೌಢಶಾಲೆಯಲ್ಲಿ ವಿಶೇಷ ಪೋಷಕ ಶಿಕ್ಷಕರ ಮಹಾ ಸಭೆ….

1 min read

ಕೊಪ್ಪ ತಾಲ್ಲೂಕಿನ ಲೋಕನಾಥಪುರ ಪ್ರೌಢಶಾಲೆಯಲ್ಲಿ ವಿಶೇಷ ಪೋಷಕ ಶಿಕ್ಷಕರ ಮಹಾ ಸಭೆಯನ್ನು ಮಕ್ಕಳ ದಿನಾಚರಣೆ ಪ್ರಯುಕ್ತ ಸರ್ಕಾರದ ಆದೇಶದಂತೆ ದಿನಾಂಕ:14.11.2025 ರಂದು ಏರ್ಪಡಿಸಲಾಗಿತ್ತು.
ಶಾಲೆಯ ಸರ್ವಾಂಗೀಣ ಅಭಿವೃದ್ದಿಗೆ ಸಮುದಾಯ, ಪೋಷಕರು ಕೈಜೋಡಿಸುವ ಸಲುವಾಗಿ ಹಾಗೂ ಮಕ್ಕಳ ಶಾಲಾ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಪೋಷಕರಿಗೆ ನೀಡಿ ಚರ್ಚಿಸುವ ಸಲುವಾಗಿ ಸರ್ಕಾರವು ಈ ವಿಶೇಷ ಮಹಾಸಬೆಯನ್ನು ಆಯೋಜಿಸಿತ್ತು. ಕಾಡಿನ ಪರಿಸರದ ನಡುವೆ ಊರಿನಿಂದ ಹೊರಗೆ ಇರುವ ಶಾಲೆಯಲ್ಲಿ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ತಾಲೂಕು ವೈದ್ಯಾಧಿಕಾರಿಗಳಾದ ಡಾ.ಮಹೇಂದ್ರ ಕಿರೀಟಿಯವರು ನಡೆಸಿಕೊಟ್ಟರು. ತಮ್ಮ ವಿಶೇಷ ಉಪನ್ಯಾಸದಲ್ಲಿ ವೈದ್ಯರು ‘ಪೋಷಕರು ಮತ್ತು ಮಕ್ಕಳಿಗೆ ಹದಿಹರೆಯದಲ್ಲಿನ ಬದಲಾವಣೆಗಳು, ಹದಿಹರೆಯದ ಮಕ್ಕಳ ಸಮಸ್ಯೆಗಳು, ಅವುಗಳಿಗೆ ಕಾರಣ, ಪರಿಹಾರ, ಹದಿಹರೆಯದಲ್ಲಿರುವ ಮಕ್ಕಳನ್ನು ಯಾವ ರೀತಿ ಬೆಳೆಸಬೇಕು? ಸರ್ಕಾರದಿಂದ ಆರೋಗ್ಯ ಇಲಾಖೆ ಮೂಲಕ ಸಿಗುವ ಸೌಲಭ್ಯಗಳು, ಸದಾ ಆರೋಗ್ಯವಾಗಿರಲು ನಮ್ಮ ಜೀವನ ಶೈಲಿಯ ಪ್ರಾಮುಖ್ಯತೆ, ಸಾವಯವ ಕೃಷಿ, ಪೋಷಕಾಂಶಗಳು, ನಮ್ಮ ಸಹಜ ಆಹಾರ ಪದ್ಧತಿ, ಜಂಕ್ ಫುಡ್ಡುಗಳು, ಉತ್ತಮವಾದ ಮತ್ತು ಸೇವಿಸಬಾರದ ಆಹಾರಗಳ ಬಗ್ಗೆ ವಿವರವಾಗಿ ತಿಳಿಸಿ ಕೊಡುವುದರ ಜೊತೆಗೆ ಎಲ್ಲರೊಂದಿಗೆ ಆರೋಗ್ಯಕರ ಸಮಸ್ಯೆಗಳ ಬಗ್ಗೆ ಸಂವಾದವನ್ನು ನಡೆಸಿದರು.
ಕಾಫಿ ಮಂಡಳಿ ಕೊಪ್ಪ ಸಿ.ಆರ್.ಎಸ್. ಅಲ್ಲಿ ಹಿರಿಯ ಸಲಹಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಪ್ರಭುಗೌಡ ಅವರು ಆಗಮಿಸಿದ್ದರು. ಸ್ವತಃ ಸರ್ಕಾರಿ ಶಾಲೆಯಲ್ಲಿ ಓದಿ ಉನ್ನತ ಸ್ಥಾನಕ್ಕೆ ಏರಿರುವ ಇವರು ಸ್ವಂತ ಉದಾಹರಣೆಯೊಂದಿಗೆ, ಡಾ. ಅಬ್ದುಲ್ ಕಲಾಂ, ಸ್ವಾಮಿ ವಿವೇಕಾನಂದರು ಮುಂತಾದವರ ಆಶೋತ್ತರಗಳನ್ನ ಈಡೇರಿಸುವಲ್ಲಿ ಪೋಷಕರ ಮತ್ತು ಮಕ್ಕಳ ಪಾತ್ರವನ್ನು ವಿವರವಾಗಿ ತಿಳಿಸಿಕೊಟ್ಟರು. ಗ್ರಾಮೀಣ ಪ್ರದೇಶದಲ್ಲಿರುವ ಉತ್ತಮ ಶಾಲೆ, ನಮ್ಮ ಮಕ್ಕಳಿಗೆ ಆಶಾಕಿರಣ ಈ ಪ್ರೌಢಶಾಲೆ. ಈ ಶಾಲೆಯ ಬಗ್ಗೆ ಬಹಳ ಕೇಳಿದ್ದೇನೆ. ಇಲ್ಲಿನ ಶಿಕ್ಷಕರ ಸಾಧನೆ ಎಲ್ಲರಿಗೂ ಪ್ರೇರಣದಾಯಕ. ಖಾಸಗಿ ಶಾಲೆಯ ಮೋಹವನ್ನು ತೊರೆದು ಇಂತಹ ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಓದಿಸುವ ಮೂಲಕ ಅವರಿಗೆ ಜೀವನದ ನೈಜ ಪರಿಚಯವನ್ನು ಮಾಡಿಕೊಡಬೇಕಾಗಿ ಪೋಷಕರಲ್ಲಿ ವಿನಂತಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಾರ್ಥನೆಯನ್ನು ಕು.ಶಮಿತಾ ಮತ್ತು ಸಂಗಡಿಗರು ನಡೆಸಿಕೊಟ್ಟರು. ನೆರೆದಿದ್ದ ಪೋಷಕರಿಗೆ, ಮಕ್ಕಳಿಗೆ ಸಂವಿಧಾನ ಪೀಠಿಕೆಯನ್ನು ಬೋಧಿಸಲಾಯಿತು. ಪ್ರಾಸ್ತಾವಿಕವಾಗಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಪದ್ಮನಾಬ್ ಅವರು ಪೋಷಕ ಶಿಕ್ಷಕ ಮಹಾ ಸಭೆಯ ಸದುದ್ದೇಶಗಳನ್ನು ಪೋಷಕರಿಗೆ ತಿಳಿಸಿ, ಶಾಲೆಯ ಭೌತಿಕ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರು ಸದಾ ಕೈ ಜೋಡಿಸಬೇಕಾಗಿ ವಿನಂತಿಸಿದರು.
ಈ ಕಾರ್ಯಕ್ರಮದ ವಿಶೇಷ ಭಾಗವಾಗಿ ಬಾಲ್ಯ ವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿಯ ದುಷ್ಪರಿಣಾಮಗಳು ಇವುಗಳಿಗೆ ಸಂಬಂಧಿಸಿದ ಕಾನೂನುಗಳು, ಇವುಗಳ ದುಷ್ಪರಿಣಾಮದ ಬಗ್ಗೆ ಸಮಾಜ ವಿಜ್ಞಾನ ಶಿಕ್ಷಕರಾದ ಶ್ರೀ ರವಿಕುಮಾರ್ ಪೂಜಾರ್ ನೆರೆದವರಿಗೆ ತಿಳಿಸಿಕೊಟ್ಟರು
ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ, ಮಕ್ಕಳ ಹಕ್ಕುಗಳು, ಫೋಕ್ಸೋ ಕಾಯಿದೆ ಈ ವಿಷಯಗಳ ಬಗ್ಗೆ ಕನ್ನಡ ಭಾಷಾ ಶಿಕ್ಷಕರಾದ ಶ್ರೀ ಆರ್.ಡಿ. ರವೀಂದ್ರರವರು ಎಲ್ಲರಿಗೂ ತಿಳಿಸಿಕೊಟ್ಟರು. ಇಂದು ಹದಿಹರೆಯದ ಮಕ್ಕಳಲ್ಲಿ ಕಂಡು ಬರುತ್ತಿರುವ ವಿವಿಧ ಮಾನಸಿಕ ತುಮುಲಗಳು, ಅವುಗಳಿಂದ ಹೊರಬರುವ ವಿಧಾನ, ಲೈಂಗಿಕ ದೌರ್ಜನ್ಯ ಉಂಟಾದಾಗ ನಮ್ಮ ಸಹಾಯಕ್ಕೆ ಬರುವ ವಿವಿಧ ಕಾನೂನುಗಳು, 1098 ಸಂಖ್ಯೆಯ ಬಳಕೆ ಇತ್ಯಾದಿಗಳ ಬಗ್ಗೆ ಅವರು ತಿಳಿಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀ ಕೆ.ಜಿ. ರಮೇಶ್ ಅವರು ವಹಿಸಿದ್ದು ‘ಕಾರ್ಯಕ್ರಮಗಳಲ್ಲಿ ಪೋಷಕರು ವಿಶೇಷವಾಗಿ ಭಾಗವಹಿಸಬೇಕು. ಇಂತಹ ಸಭೆಗಳಲ್ಲಿ ಚರ್ಚಿಸಲ್ಪಡುವ ವಿಷಯಗಳನ್ನು ತಿಳಿದುಕೊಂಡು ಅದಕ್ಕೆ ಪೂರಕವಾಗಿ ತಮ್ಮ ಮಕ್ಕಳನ್ನು ಬೆಳೆಸಬೇಕು. ಮಕ್ಕಳ ಏಳಿಗೆಯಲ್ಲಿ ಶಾಲೆಯಷ್ಟೇ ಪೋಷಕರ ಪಾತ್ರವು ಮುಖ್ಯ ಎಂದು ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಸಿಹಿಯೊಂದಿಗೆ ಭೋಜನದ ವ್ಯವಸ್ಥೆಯನ್ನು ಎಲ್ಲರಿಗೂ ಏರ್ಪಡಿಸಲಾಗಿತ್ತು. ತಾಲೂಕು, ಜಿಲ್ಲೆ, ವಿಭಾಗ ಮತ್ತು ರಾಜ್ಯ ಹಂತದಲ್ಲಿ ಕ್ರೀಡೆ ಮತ್ತು ವಿವಿಒಧ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬಹುಮಾನವನ್ನು ವಿತರಿಸಿ ಅಭಿನಂದಿಸಲಾಯಿತು.

About Author

Leave a Reply

Your email address will not be published. Required fields are marked *

You may have missed