ಮಾನವೀಯತೆಯನ್ನು ಕುರಿತು ಬಹುತ್ವದ ಧ್ವನಿಯೊಂದಿಗೆ ಮತ್ತೊಮ್ಮೆ ಧೇನಿಸಬೇಕಾಗಿದೆ, ಬರೆಯಬೇಕಾಗಿದೆ, ಆಲೋಚಿಸಬೇಕಾಗಿದೆ…..
1 min read
ಅವಿನ್ ಟಿವಿ ಸುದ್ದಿಜಾಲ ✒️: ಮಾನವೀಯತೆಯನ್ನು ಕುರಿತು ಬಹುತ್ವದ ಧ್ವನಿಯೊಂದಿಗೆ ಮತ್ತೊಮ್ಮೆ ಧೇನಿಸಬೇಕಾಗಿದೆ, ಬರೆಯಬೇಕಾಗಿದೆ, ಆಲೋಚಿಸಬೇಕಾಗಿದೆ.
•••••••••••••••
ಡಿಸೆಂಬರ್ 29 ರಂದು ನೆಡೆಯಲಿದೆ ಚಿಕ್ಕಮಗಳೂರಿನ ಸಮಾನ ಮನಸ್ಕಾರ ವೇದಿಕೆ ವತಿಯಿಂದ “ನಮ್ಮ ನಡಿಗೆ ಸೌಹಾರ್ದತೆಯ ಕಡೆಗೆ” ಕಾಲ್ನಡಿಗೆ ಜಾಥ….
ಚಿಕ್ಕಮಗಳೂರು ನ,10: ಈ ನೆಲದ ಬಹುತ್ವ ಮತ್ತು ಬಹುರೂಪಿತನದ ಬದುಕನ್ನು ಪ್ರಕಟಿಸಿ- ಪ್ರಚುರಪಡಿಸಿ ಆಗಿ ಹೋದ ಮಹಾತ್ಮರ ಮಹನೀಯರ ದಾರ್ಶನಿಕರ ಹಾಗೂ ಆದರ್ಶ ಪತಿ ಪತ್ನಿಯರಾಗಿ ಇತಿಹಾಸದುದ್ದಕ್ಕೂ ಮಹತ್ವದ ಸಂದರ್ಭದಲ್ಲಿ ಆಗಾಗ ವಿಶೇಷ ಚರ್ಚೆಗೋಳಪಡುತ್ತಿರುವ ಅನೇಕರ ವಿಚಾರಧಾರೆಗಳು ನಮ್ಮ ಸ್ಮೃತಿ ಪಟಲದಿಂದ ಮರೆಯಾಗಿ ಹೋಗದಂತೆ ಮತ್ತೊಮ್ಮೆ ಸಂಪಾದನೆ ಮಾಡಿಕೊಂಡು ಸೌಹಾರ್ದತೆಯ ಹೆಸರಿನಲ್ಲಿ ಬಿತ್ತಿ ಬೆಳೆದು ಒಂದು ಜತನದಿಂದ ಭವಿಷ್ಯದ ಯುವ ಸಮುದಾಯಕ್ಕೆ ವರ್ಗಾಯಿಸಬೇಕಾಗಿದೆ ಎಂಬುದು ಚಿಕ್ಕಮಗಳೂರಿನ ಸಮಾನ ಮನಸ್ಕರ ವೇದಿಕೆಯ ಆಶಯವಾಗಿದೆ.
ಒಂದು ಹೆಣ್ಣಿನ ಎದೆಯ ಭಾಗ ಅದು ಎಲ್ಲರ ಎದೆಯ ಭಾಗವಾಗಿ ಎಲ್ಲರನ್ನೂ ಎಲ್ಲ ಕಾಲಕ್ಕೂ ಕಾಡುತ್ತಿರಬೇಕು, ಕಾರಣ ಹೆಣ್ಣಿನ ಎದೆಯ ಭಾಗ ಎಂದರೆ ಅದೊಂದು ತಾಯ್ತನದ ಭಾಗ, ಆ ತಾಯ್ತನವು ನಮ್ಮೊಳಗೆ ಗೂಡು ಕಟ್ಟಿದಾಗ ಮಾತ್ರ ಬಹುತ್ವದ ಬದುಕು,ಬಹುಮುಖಿ ಪರಂಪರೆಯ ದನಿ, ಮಾನವೀಯತೆಯ ಜೀವಸೆಲೆ ಸದಾ ನಮ್ಮೊಳಗೆ ಜಿನುಗುತ್ತಿರಲು ಸಾಧ್ಯವಾಗುತ್ತದೆ, ಹಾಗಾಗಿ, ಎಲ್ಲಿಯವರೆಗೆ ಹೆಣ್ಣಿನ ಎದೆಯ ಭಾಗವೊಂದು ನಮ್ಮ ಎದೆಯ ಭಾಗವಾಗಿ ಕಾಡುವುದಿಲ್ಲವೋ ಅಲ್ಲಿಯವರೆಗೆ ಕ್ರೌರ್ಯದ ಚಹರೆಗಳು, ನಾನು ನನ್ನದು ಎಂಬ ಮತ ಧರ್ಮ ಜಾತಿಯೆಂಬ ಶ್ರೇಷ್ಠತೆಯ ವ್ಯಸನಗಳು , ಅಜ್ಞಾನ ಮತ್ತು ಭ್ರಮೆಯ ಆಳಕ್ಕೆ ಇಳಿದು ಒಂದು ಶ್ರೇಷ್ಠವಾದ ನಾಗರಿಕ ಸಮಾಜದ ಅಧಪತನಕ್ಕೆ ಕಾರಣವಾಗಬಹುದು.
ಭಾರತ ಎಂಬುದು ಒಂದು ಬಹುವಚನವೆ ಆಗಿದೆ, ಸಮಾಜದ ನಿಜವಾದ ಗೆಲುವು ಇರುವುದು ನಾನು ಎಂಬುವುದರಲ್ಲಿ ಅಲ್ಲ,ನಾವು ಎಂಬುವುದರಲ್ಲಿ, ನಾವು ಎಂಬುದು ಬಹುವಚನ, ಹಾಗಾಗಿ ಭಾರತ ಎಂಬುದು ಬಹು ಭಾಷೆ ಬಹು ಸಂಸ್ಕೃತಿಯಿಂದ ಕೂಡಿದ ಒಂದು ಬಹುತ್ವದ ಬಹುವಚನವೇ ಆಗಿದೆ,
ಬಹುತ್ವ ಮತ್ತು ಬಹು ಸಂಸ್ಕೃತಿಯ ವಿಚಾರ ಬಂದಾಗ ನಮ್ಮ ಧ್ವನಿ ಮೆಲುವಾಗಿದ್ದರೂ ಸಹ ನಿಲುವುಗಳನ್ನು ಗಟ್ಟಿ ಮಾಡಿಕೊಂಡು, ನಮ್ಮ ನಮ್ಮ ಅಂಗೈ ಗೆರೆಗಳಷ್ಟೇ ಸ್ಪಷ್ಟವಾಗಿ ಮತ್ತು ನಿಖರವಾಗಿ ನೇರವಾಗಿ ಮಾತನಾಡಿ, ಎಲ್ಲರನ್ನೂ ಒಳಗೊಳ್ಳುವಂತೆ ಬಹುತ್ವದ ಬದುಕಿನತ್ತ ಕರೆತರಬೇಕಾಗಿದೆ.
ಈ ಹಿನ್ನೆಲೆಯಲ್ಲಿ, ಚಿಕ್ಕಮಗಳೂರಿನ ಸಮಾನ ಮನಸ್ಕರ ವೇದಿಕೆಯು, ಮನುಜ ಮತ ವಿಶ್ವ ಪಥಕ್ಕೆ ಕರೆಕೊಟ್ಟ ಈ ನೆಲದ ರಸ ಋಷಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆಯ ಸಂದರ್ಭದಲ್ಲಿ, ಇದೇ ಮುಂಬರುವ ಡಿಸೆಂಬರ್ 29 ರಂದು ನಮ್ಮ ನಡಿಗೆ ಸೌಹಾರ್ದತೆ ಕಡೆಗೆ ಎಂಬ ಧ್ಯೇಯ ವಾಕ್ಯದೊಂದಿಗೆ ಕಾಲ್ನಡಿಗೆ ಜಾಥ ಮತ್ತು ಬಹಿರಂಗ ಸಮಾರಂಭವನ್ನು ಚಿಕ್ಕಮಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಬೃಹತ್ ಪ್ರಮಾಣದಲ್ಲಿ ನಡೆಯುವ ಈ ಕಾಲ್ನಡಿಗೆ ಜಾಥ ಮತ್ತು ಸಮಾರಂಭಕ್ಕೆ ಚಿಕ್ಕಮಗಳೂರು ಜಿಲ್ಲೆಯ ಎಲ್ಲ 9 ತಾಲೂಕುಗಳನ್ನು ಒಳಗೊಂಡಂತೆ ವಿವಿಧ ಜನಮುಕಿ ಸಂಘ ಸಂಸ್ಥೆಗಳು ಹಾಗೂ ಈ ನಾಡಿನ ಅನೇಕ ಹಿರಿಯ ಸಾಹಿತಿಗಳು ಬರಹಗಾರರು ಹೋರಾಟಗಾರರು ಚಳುವಳಿಗಾರರು ಸಮಾಜಮುಖಿ ಮನಸ್ಸುಗಳು ರಾಜ್ಯದ ವಿವಿದೆಡೆಗಳಿಂದ ಬಂದು ಪಾಲ್ಗೊಳ್ಳುತ್ತಾರೆ.
ಈ ಸಂಬಂಧ ಚಿಕ್ಕಮಗಳೂರಿನ ಪ್ರವಾಸಿ ಮಂದಿರದಲ್ಲಿ ಮೂರನೇ ಪೂರ್ವಭಾವಿ ಸಭೆಯನ್ನು ಸಮಾನ ಮನಸ್ಕರ ವೇದಿಕೆ ಕರೆದಿದ್ದು, ಈ ಸಭೆಗೆ ರೈತಪರ ದಲಿತಪರ ಕನ್ನಡಪರ ಸಂಘಟನೆಗಳು ಸೇರಿದಂತೆ ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ದುಡಿಯುತ್ತಿರುವ ವಿವಿಧ ಜನಪರ ಸಂಘಟನೆಗಳು, ಹಲವು ಪಕ್ಷದ ರಾಜಕೀಯ ಧುರೀಣರು, ಸಾಹಿತಿಗಳು, ಲೇಖಕರು, ಮಾಧ್ಯಮ ಮಿತ್ರರು ಭಾಗಿಯಾಗಿ ಚರ್ಚೆ ಮಾಡಿ ಸಲಹೆ ನೀಡಿದರು.
••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ… ✒️
ಚಿಕ್ಕಮಗಳೂರು

