ಜನಗಣಮನ*..
1 min read
*ಜನಗಣಮನ*
ಜನಗಣಮನ ವನ್ನು ರಚಿಸಿದ್ದು ರಬೀಂದ್ರನಾಥ್ ಠಾಗೋರ್. ಮೊಟ್ಟಮೊದಲಬಾರಿ ಸಾರ್ವಜನಿಕವಾಗಿ ಪ್ರಕಟಗೊಂಡಿದ್ದು ಡಿಸೆಂಬರ್ 11, 1911 ರಂದು. ಇದರ ಮೂಲರೂಪ *ಭಾರತೋ ಭಾಗ್ಯೋ ಬಿದಾತ* ಅನ್ನೋ ಠಾಗೋರರ ಕವಿತೆ. ಇದು ಅಸಲಿಗೆ ಬ್ರಹ್ಮೋ ಗೀತೆ ಅರ್ಥಾತ್ ಬ್ರಹ್ಮ ಸಮಾಜದ ಗೀತೆ. ಈ ಗೀತೆಯ ಮೂಲ ರೂಪ ಬ್ರಹ್ಮ ಸಮಾಜದ ಅಧಿಕೃತ ಪತ್ರಿಕೆ ತತ್ವಭೋಧಿನಿ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು.
ಜನಗಣಮನವನ್ನು ಮೊಟ್ಟಮೊದಲಬಾರಿ ರಾಷ್ಟ್ರಗೀತೆ ಎಂದು ಘೋಷಿಸಿದ್ದು ನೇತಾಜಿ ಸುಭಾಶ್ಚಂದ್ರ ಬೋಸ್ ಸಪ್ಟೆಂಬರ್ 11, 1942 ರಂದು. ಅವತ್ತು ಜರ್ಮನಿಯ ಹ್ಯಾಂಬರ್ಗ್ನ ಹೋಟೇಲ್ ಅಟ್ಲಾಂಟಿಕ್ನಲ್ಲಿ ಜರ್ಮನ್-ಇಂಡಿಯನ್ ಸೊಸಾಯ್ಟಿಯ ಸ್ಥಾಪನಾ ಸಭೆ. ಇದನ್ನು Hamburg Radio Symphony Orchestra ಭಾರತದ ರಾಷ್ಟ್ರಗೀತೆಯೆಂದು ವೇದಿಕೆಯಲ್ಲಿ ಪ್ರಸ್ತುತಪಡಿಸಿತ್ತು.
ಜನಗಣಮನವನ್ನು ಮೊಟ್ಟಮೊದಲಬಾರಿ ಸಾರ್ವಜನಿಕವಾಗಿ ಹಾಡಿದ್ದು ರಬೀಂದ್ರನಾಥ್ ಠಾಗೋರರ ಸೊಸೆ ಡಿಸೆಂಬರ್ 27, 1911 ರಂದು ಕೊಲ್ಕೊತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ನ ಅಧಿವೇಶನದ ಎರಡನೆಯ ದಿನ. ಇದಾಗಿ ಕೆಲ ದಿನಗಳ ನಂತರ ಇದನ್ನು ಎರಡನೆಯಬಾರಿ ಸಾರ್ವಜನಿಕವಾಗಿ ಹಾಡಿದ್ದು ಜವರಿ 1912 ರಲ್ಲಿ ಆದಿ ಬ್ರಹ್ಮ ಸಮಾಜದ ವಾರ್ಷಿಕ ಕಾರ್ಯಕ್ರಮದಲ್ಲಿ.
ಕೊಲ್ಕೊತ್ತಾದ ಹೊರಗಡೆ ಇದನ್ನು ಮೊಟ್ಟಮೊದಲಬಾರಿ ಹಾಡಿದ್ದು ಸ್ವತ ರಬೀಂದ್ರನಾಥ ಠಾಗೋರ್ ಫೆಬ್ರವರಿ 28, 1919 ರಂದು ಇಂದಿನ ಆಂಧ್ರಪ್ರದೇಶದ ಮದನಪಳ್ಳಿಯ ಬೆಸೆಂಟ್ ಥಿಯೋಸೋಫಿಕಲ್ ಕಾಲೇಜಿನಲ್ಲಿ. ಅವತ್ತಿನಿಂದ ಇವತ್ತಿನವರೆಗೂ ಈ ಕಾಲೇಜಿನಲ್ಲಿ ಜನಗಣಮನವನ್ನು ನಿತ್ಯ ತಪ್ಪದೇ ಹಾಡುತ್ತಿದ್ದಾರಂತೆ.
ಕಾಂಗ್ರೇಸ್ನ ಅಧಿವೇಶನದಲ್ಲಿ ಇದನ್ನು ಹಾಡಿದ್ದು ಬ್ರಿಟೀಷ್ ರಾಜನ ಗೌರವಾರ್ಥವಾಗಿ ಎಂದು ಅಂದಿನ ಒಂದೆರಡು ಬ್ರಿಟೀಷ್ ಪತ್ರಿಕೆಗಳು ಸುದ್ದಿ ಮಾಡಿದಾಗ, ಅಮೃತಾ ಬಜಾರ್, ಬೆಂಗಾಲಿ ಮುಂತಾದ ಪತ್ರಿಕೆಗಳು ಇದನ್ನು ಅಲ್ಲಗಳೆದು, ಅವತ್ತು ಬ್ರಿಟೀಷ್ ರಾಜ ಜಾರ್ಜ್ ಗೌರವಾರ್ಥ ಹಿಂದಿ ಕವಿ ರಾಮ್ಭುಜ್ ಚೌಧರಿ ರಚಿಸಿದ ಬಾದ್ಶಾ ಹಮಾರಾ ಎನ್ನುವ ಪದ್ಯವನ್ನು ಹಾಡಲಾಗಿತ್ತೆ ವಿನ ಜನಗಣಮನವನ್ನಲ್ಲ.
ಕಾಂಗ್ರೇಸ್ ಅಧಿವೇಶನದ ಅಧಿಕೃತ ಪತ್ರಿಕಾ ವರದಿಗಳಲ್ಲಿ ಹೀಗೆ ಪ್ರಕಟಿಸಲಾಗಿತ್ತು. “ಕಾಂಗ್ರೇಸ್ನ 28 ಅಧಿವೇಶನದ ಮೊದಲ ದಿನ ವಂದೇ ಮಾತರಂ ಗೀತೆಯ ಮೂಲಕ ಆರಂಭವಾಗಿತ್ತು. ಎರಡನೆಯ ದಿನದ ಅಧಿವೇಶನ ಬಾಬು ರಬೀಂದ್ರನಾಥ್ ಠಾಗೋರ್ ರಚಿಸಿದ ದೇಶಭಕ್ತಿ ಗೀತೆಯನ್ನು ಹಾಡಿದ ನಂತರ ಆರಂಭವಾಗಿತ್ತು. ಜಾರ್ಜ್ ವಿ. ಬ್ರಿಟನ್ನ ಅಧಿಕೃತ ರಾಜ ಎಂದು ನಿರ್ಣಯ ಅಂಗೀಕಾರವಾದ ನಂತರ ರಾಜ ಜಾರ್ಜ್ ಹಾಗೂ ರಾಣಿ ಮೇರಿಯನ್ನು ಸ್ವಾಗತಿಸಲು ರಚಿಸಿದ ಗೀತೆಯನ್ನು ಹಾಡಲಾಯಿತು.”
ನವೆಂಬರ್ 10, 1937 ರಂದು ರಬೀಂದ್ರನಾಥ್ ಠಾಗೋರ್ ಸ್ವತ ಪುಲಿನ್ ಬಿಹಾರಿ ಸೇನ್ ಅವರಿಗೆ ಬರೆದ ಪತ್ರದಲ್ಲಿ ಜನಗಣಮನವನ್ನು ತಾನು ಬ್ರಿಟೀಷ್ ರಾಜನ ಗೌರವಾರ್ಥ ರಚಿಸಿದ್ದಲ್ಲ ಎಂದು ಬರೆದಿದ್ದಾರೆ. ಈ ಪತ್ರದ ಬಂಗಾಲಿ ರೂಪ ಪ್ರಭಾತ್ ಕುಮಾರ್ ಮುಖರ್ಜಿ ಸಂಪಾದಿಸಿದ ರಬೀಂದ್ರನಾಥ್ ಠಾಗೋರರ ಜೀವನಚರಿತ್ರೆ *ರಬೀಂದ್ರಜಿಬಾನಿ* ಯ ಎರಡನೆಯ ಸಂಪುಟದ 339 ಪುಟದಲ್ಲಿದೆ. ಮಾರ್ಚ್ 19, 1939 ರಂದು ಠಾಗೋರ್ ಬರೆದ ಇನ್ನೊಂದು ಪತ್ರದಲ್ಲೂ ಇದನ್ನು ಮತ್ತೆ ಸ್ವಷ್ಟಪಡಿಸಿದ್ದಾರೆ.
ರಾಷ್ಟ್ರಗೀತೆಯ ಬಗ್ಗೆಯೂ ಅಷ್ಟೇ ಅಸಡ್ಡೆ. ಸಂವಿಧಾನದ ಬಗ್ಗೆಯೂ ಅದೇ ಸ್ವಭಾವ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನೇರವಾಗಿ ರಾಷ್ಟ್ರಧ್ವಜ, ಗೀತೆ, ಸಂವಿಧಾನವನ್ನು ಬದಲಾಯಿಸಲು ಆಗಲ್ಲವೆನ್ನುವುದೂ ಇದನ್ನು ವಿರೋಧಿಸುವ ಸಂಘಟನೆಗಳಿಗೆ ,ವ್ಯಕ್ತಿಗಳಿಗೆ ಸಂಪೂರ್ಣ ಅರಿವಿದೆ . ಹಾಗಾಗಿ ಕೆಲವುಸಲ ಕೆಲವರು ತಮ್ಮ ನಾಲಗೆಯ ತುರಿಕೆ ಅತಿಯಾಗಿ ಕಕ್ಕುವುದು , ಹೀಗಾದರೂ ತೀರಿಸಿಕೊಳ್ಳಲು ಬಿಡಿ.
ಸಂಗ್ರಹ : ವಜ್ರ💎 ಶಕ್ತಿ ಪತ್ರಿಕೆ

