ನಾಡೋಜ ಡಾ. ಬಿ. ಟಿ. ರುದ್ರೇಶ್ ಗೆ ಮಹಿಳಾ ವಿವಿ “ಗೌಡಾ” ಪದವಿ…,…
1 min read
ಚಿಕ್ಕಮಗಳೂರು ಸೆ 30.ಅವಿನ್ ಟಿವಿ ಸುದ್ದಿಜಾಲ ✒️:
ನಾಡೋಜ ಡಾ. ಬಿ. ಟಿ. ರುದ್ರೇಶ್ ಗೆ ಮಹಿಳಾ ವಿವಿ “ಗೌಡಾ” ಪದವಿ.

•••••••••••••••••••
ಅಂತರಾಷ್ಟ್ರೀಯ ಖ್ಯಾತಿಯ ಹೋಮಿಯೋಪತಿ ತಜ್ಞ ನಾಡೋಜ ಡಾ. ಬಿ. ಟಿ. ರುದ್ರೇಶ್ ಚಿಕ್ಕಮಗಳೂರು ತಾಲೂಕು ಬೆಳವಾಡಿ ಗ್ರಾಮದ ಕೃಷಿಕ ದಂಪತಿಗಳಾದ ತಿಪ್ಪೇಸ್ವಾಮಿ ಮತ್ತು ಶಾಂತಮ್ಮನವರ ಪುತ್ರ.
ಕೆಮ್ಮಿನಿಂದ ಕ್ಯಾನ್ಸರ್ ವರೆಗೆ ಹೋಮಿಯೋಪತಿ ಚಿಕಿತ್ಸಾ ಪದ್ಧತಿಯಲ್ಲಿ ಆರೈಕೆ ಮಾಡಿ, ಸಂತಾನಹೀನ ಸಮಸ್ಯೆಯಿಂದ ಬಳಲುತ್ತಿದ್ದ ಸುಮಾರು ಮೂರು ಸಾವಿರಕ್ಕೂ ಹೆಚ್ಚು ದಂಪತಿಗಳಿಗೆ ಫಲಕಾರಿಯಾದ ಚಿಕೆತ್ಸೆ ನೀಡಿ ಅನೇಕ ಮನೆಗಳಿಗೆ ಬೆಳಕಾಗಿ, ಆ ಕುಟುಂಬದ ಕಣ್ಣೀರನ್ನು ಒರೆಸಿದ ಡಾ. ಬಿ.ಟಿ ರುದ್ರೇಶ್ ಅವರು ಮಹಿಳಾ ಸಮಸ್ಯೆ ಕುರಿತು ಸಂಶೋಧನೆ ಮಾಡಿ ಮಹಾಪ್ರಬಂದ ಮಂಡಿಸಿ ಡಾಕ್ಟರೇಟ್ ಪದವಿ ಪಡೆದವರು.
ಬೆಂಗಳೂರಿನ ಮಹಾರಾಣಿ ಮಹಿಳಾ ಕ್ಲಸ್ಟರ್ ವಿಶ್ವವಿದ್ಯಾಲಯವು ಡಾ. ಬಿ.ಟಿ. ರುದ್ರೇಶ್ ಅವರ ಈ ಸಂಶೋಧನೆ ಮತ್ತು ವೈದ್ಯಕೀಯ ಸೇವೆಯನ್ನು ಪರಿಗಣಿಸಿ ಮಹಿಳಾ ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಪ್ರಪ್ರಥಮವಾಗಿ ಪುರುಷರೊಬ್ಬರಿಗೆ ಗೌರವ ಡಾಕ್ಟರೇಟ್ ಪದವಿ ಕೊಡಮಾಡಿರುವುದು ಹೆಗ್ಗಳಿಕೆಯ ವಿಚಾರವಾಗಿದೆ.
ಡಾ. ರುದ್ರೇಶ್ ಹೋಮಿಯೋಪತಿ ವೈದ್ಯಕೀಯ ಪದ್ಧತಿಯಲ್ಲಿ ಮಾಡಿರುವ ಅನನ್ಯ ಸೇವೆ, ವಿಶೇಷವಾಗಿ ಸಂತಾನಹೀನ ಮೂರು ಸಾವಿರ ದಂಪತಿಗಳಿಗೆ ನೀಡಿರುವ ಯಶಸ್ವಿ ಚಿಕಿತ್ಸೆಯ ವಿಶ್ವ ದಾಖಲೆಯನ್ನು ಪರಿಗಣಿಸಲಾಗಿದೆ.
“ಮಹಿಳಾ ಸಂತಾನ ಹೀನತೆಗೆ ಹೋಮಿಯೋಪತಿ
ಚಿಕಿತ್ಸೆ” ಎಂಬ ವಿಷಯವನ್ನು ಕುರಿತು ಪೂನಾ ವಿಶ್ವವಿದ್ಯಾನಿಲಯದಿಂದ ಎಪ್ಪತ್ತನೆಯ ವಯಸ್ಸಿನಲ್ಲಿ ಪಿ.ಎಚ್.,ಡಿ ಪದವಿ ಪಡೆದ ಹಿರಿಮೆ ಅವರದ್ದು. 32 ದೇಶಗಳ ಪ್ರತಿನಿಧಿಗಳಿದ್ದ ಗ್ರೀಸ್ ಅಂತಾರಾಷ್ಟ್ರೀಯ ಕಾರ್ಯಾಗಾರ. ದುಬೈನಲ್ಲಿ ನಡೆದ ಕೊಲ್ಲಿ
ದೇಶಗಳು ಮತ್ತು ಮಲೇಷಿಯಾದ ಎಂಟು ರಾಷ್ಟ್ರಗಳ ವೈದ್ಯರ ಕಾರ್ಯಾಗಾರದಲ್ಲಿ ಸಂತಾನಹೀನತೆ ಮತ್ತು ಪರಿಹಾರದ ಬಗ್ಗೆ ಪ್ರಕರಣಗಳ ಮಂಡಿಸಿರುವುದು ವಿಶೇಷ.
ಭಾರತ ದೇಶದ ವಿವಿಧ
ವಿಶ್ವವಿದ್ಯಾನಿಲಯಗಳು ಮತ್ತು ಕಾರ್ಯಾಗಾರಗಳಲ್ಲಿ. ಸಂಶೋಧನಾತ್ಮಕ ಪ್ರಬಂಧ ಮಂಡಿಸಿರುವುದು ಅವರ ಅಧ್ಯಯನದ ಹರಹು ಮತ್ತು ಆಸಕ್ತಿಯ ದ್ಯೋತಕ .ಮಹಿಳೆಯರ ಗಹನವಾದ ಸಮಸ್ಯೆಗಳ ಬಗ್ಗೆ ನಡೆಸಿರುವ ಸಂಶೋಧನೆ ಹಾಗೂ ಚಿಕಿತ್ಸೆಗಾಗಿ ಮಹಿಳಾ ವಿಶ್ವವಿದ್ಯಾನಿಲಯವು ಪುರುಷರೊಬ್ಬರಿಗೆ ಉನ್ನತ ಗೌರವವನ್ನು ಸಲ್ಲಿಸುತ್ತಿದೆ.
ಕಳೆದ ನಾಲ್ಕೂವರೆ ದಶಕಗಳಿಂದ ಸುಮಾರು ನಲವತ್ತು ಲಕ್ಷ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಕೆಮ್ಮಿನಿಂದ ಕ್ಯಾನ್ಸರ್ ವರೆಗೆ ಆರೈಕೆ ಮಾಡಿರುವುದು ಅವರ ವೃತ್ತಿ ಪರಿಣತಿ ಮತ್ತು ಕಾರ್ಯಕ್ಷಮತೆಗೆ ಸಾಕ್ಷಿ.
ಹದಿನೈದು ಸಾವಿರ ವೈದ್ಯರಿರುವ ಕರ್ನಾಟಕ ಹೋಮಿಯೋಪತಿ ಮಂಡಳಿಗೆ ಚುನಾಯಿತ ಅಧ್ಯಕ್ಷರಾಗಿದ್ದು ರಾಜ್ಯಸಚಿವ ಸ್ಥಾನ-ಮಾನ ಹೊಂದಿದ್ದರೂ ಯಾವುದೇ ಸಂಭಾವನೆ, ಸೌಲಭ್ಯಗಳನ್ನು ಸ್ವಂತಕ್ಕೆ ಬಳಸಿಕೊಳ್ಳದೆ ಹೋಮಿಯೋಪತಿ ಭವನ ಕಟ್ಟಿಸಿದ್ದು , ಒಂದು ದಶಕದ ಕಾಲ ಕೇಂದ್ರೀಯ ಹೋಮಿಯೋ ಪರಿಷತ್ ಹಾಗು ಬೋರ್ಡ್ ಆಫ್ ಗವರ್ನರ್ಸ್ ಮಂಡಳಿಯ ಸದಸ್ಯರಾಗಿ ಮಾಡಿದ ಸೇವೆ ಗಣನೀಯ.
ಡಾ. ರುದ್ರೇಶ್ ಕರ್ನಾಟಕ ರಾಜ್ಯ ಜ್ಞಾನ ಆಯೋಗ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಸೆನೆಟ್ ಮತ್ತು
ಸಿಂಡಿಕೇಟ್ ನ
ನಿಕಟಪೂರ್ವ ಸದಸ್ಯರಾಗಿ ರಾಷ್ಟ್ರದ ವಿವಿಧ ವಿಶ್ವವಿದ್ಯಾನಿಲಯಗಳ ಬೋರ್ಡ್ ಆಫ್ ಸ್ಟಡೀಸ್ ನ ಸದಸ್ಯರಾಗಿ, ಪರಿವೀಕ್ಷಕರಾಗಿ ಮಾನ್ಯರಾಗಿದ್ದಾರೆ.
ವೈದ್ಯ ಲೇಖಕರಾಗಿ ನೋವು ನೀಗುವ ಕಾಯಕದಲ್ಲಿ, ರುದ್ರೇಶ್ ಡೈರಿ. ಅಶ್ವಿನಿ ಸ್ಪರ್ಶ, ಹೀಲಿಂಗ್ ಟಚ್. ಬಡವರ ಬಾದಾಮಿ ಮೊದಲಾದ ಕೃತಿಗಳನ್ನು ರಚಿಸಿದ್ದು ಇವು ಬಹು ಮುದ್ರಣವನ್ನು ಕಂಡಿವೆ.
ಮಾಧ್ಯಮಗಳಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಸಂದರ್ಶನಗಳು.ಲೇಖನಗಳು ಪ್ರಸಾರವಾಗಿವೆ.
ಡಾ. ರುದ್ರೇಶ್ ಅವರು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಾಡೋಜ ಪದವಿ, ಕುವೆಂಪು ವಿ.ವಿಯ ಗೌರವ ಡಾಕ್ಟರೇಟ್, ರಾಜ್ಯೋತ್ಸವ ಪ್ರಶಸ್ತಿ,
ಹಾನಿಮನ್ ಚಿನ್ನದ ಪದಕ, ಅನುಪಮ ನಿರಂಜನ ಪ್ರಶಸ್ತಿ
ಮೊದಲಾದ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಉತ್ತಮ ವಾಗ್ಮಿ. ಆಪ್ತ ಸಲಹೆಗಾರ, ಪ್ರಭಾವಿ ಸಂವಾದಕ, ಚಿತ್ರಗಳ ನಿರ್ದೇಶಕ, ನಟ, ನೇರ ನುಡಿಗೆ ಹೆಸರಾದ ಬಹುಮುಖ ಪ್ರತಿಭಾವಂತ ವೈದ್ಯ ಡಾ. ಬಿ.ಟಿ ರುದ್ರೇಶ್ ಅವರ ವೈದ್ಯಕೀಯ ಸೇವೆಗೆ ಮತ್ತೊಂದು ಗರಿ ಮೂಡಿದೆ.
•••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ✒️
ಚಿಕ್ಕಮಗಳೂರು

