ತಾಲೂಕು ಕಚೇರಿಯಲ್ಲಿ ಜನಸಾಮಾನ್ಯರ ಕಷ್ಟ ಕೇಳುವವರಿಲ್ಲದಂತಾಗಿದೆ…..
1 min read

ತಾಲೂಕು ಕಚೇರಿಯಲ್ಲಿ ಜನಸಾಮಾನ್ಯರ ಕಷ್ಟ ಕೇಳುವವರಿಲ್ಲದಂತಾಗಿದೆ
ಮೂಡಿಗೆರೆ:ತಾಲೂಕು ಇಲ್ಲಿನ ಕಚೇರಿಯಲ್ಲಿ ಜನ ಸಾಮಾನ್ಯರ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಜತೆಗೆ ತಹಸೀಲ್ದಾರ್ ಎಸ್.ಅಶ್ವಿನಿ ಅವರು ಕೂಡ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲವೆಂದು ಡಿಎಸ್ಎಸ್ ಅಂಬೇಡ್ಕರ್ ಧ್ವನಿ ತಾಲೂಕು ಅಧ್ಯಕ್ಷ ಪೂರ್ಣೇಶ್ ಆರೋಪಿಸಿ ದ್ದಾರೆ.
ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿರುವ ಅವರು, ತಾಲೂಕಿನ ಚಂದ್ರಾಪುರ ಗ್ರಾಮದ ಗ್ರಾಮಸ್ಥರು ಸುಮಾರು 10 ವರ್ಷದಿಂದ ನಿವೇಶನ ಹಕ್ಕು ಪತ್ರಕ್ಕಾಗಿ ಗ್ರಾ.ಪಂ. ಸೇರಿದಂತೆ ತಾಲೂಕು ಕಚೇರಿಗೆ ಅಲೆದಾಡುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸಿಕೊಳ್ಳಲು ನಮ್ಮ ಸಂಘದ ಹೋಬಳಿ ಅಧ್ಯಕ್ಷ ಕೆ.ಎಲ್.ಚಂದ್ರಶೇಖರ್ ಅವರೊಂದಿಗೆ ತಾನು ತಹಸೀಲ್ದಾರ್ ಅಶ್ವಿನಿ. ಅವರನ್ನು ಭೇಟಿ ಮಾಡಿದಾಗ, ತಹಸೀಲ್ದಾರರು ತಮಗೆ ಸಂಬಂಧವೇ ಇಲ್ಲದಂತೆ ನೀವು ಗ್ರಾಮ ಲೆಕ್ಕಾಧಿಕಾರಿ ಬಳಿ ವಿಚಾರಿಸಿ ಎಂದು ಹೇಳುವ ಮೂಲಕ ಜನ ಸಾಮಾನ್ಯರ ಕೆಲಸ ಕಡೆಗಣಿಸುವಂತೆ ಮಾತನಾಡಿದರು ಎಂದು ದೂರಿದ್ದಾರೆ.
ಹಿಂದೆ ಈ ಬಗ್ಗೆ ಉಪವಿಭಾಗಾಧಿಕಾರಿ ಅವರ ಗಮನ ಸೆಳೆದಾಗ, ಸಮಸ್ಯೆ ಕೂಡಲೇ ಬಗೆಹರಿಸಲು ಎಸಿ ತಹಸೀಲ್ದಾರರಿಗೆ ಸೂಚನೆ ನೀಡಿದ್ದರು. ಆದರೆ ಪ್ರಯೋಜನವಾಗಲಿಲ್ಲ. ಈಗ ತಹಸೀಲ್ದಾರರನ್ನು ಭೇಟಿ ಮಾಡಿದಾಗ ಯಾವುದೇ ಸ್ಪಂದನೆ ಸಿಗದಿದ್ದರೆ ಜನ ಸಾಮಾನ್ಯರ ಸಮಸ್ಯೆ ಬಗೆಹರಿಸಿಕೊಳ್ಳುವುದಾದರೂ ಹೇಗೆ? ಅಧಿಕಾರಿಗಳು ಇಂತಹ ತಾತ್ಸಾರ ಮನೋಭಾವ ಬಿಟ್ಟು ಜನಸಾಮಾನ್ಯರೊಂದಿಗೆ ಸೌಜನ್ಯದಿಂದ ಮಾತನಾಡಿಸಿ, ಅವರ ಕೆಲಸ ಕೂಡಲೇ ಮಾಡಿಕೊಡಬೇಕು. ಇಲ್ಲವಾದರೆ ಪ್ರತಿಭಟನೆ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.

