ಬೆದರಿಕೆಗಳ ಮಹಾಪೂರ…..
1 min read
ಬೆದರಿಕೆಗಳ ಮಹಾಪೂರ…
ಕಾಳಿಂಗ ಸರ್ಪ ಸಂಶೋಧಕರಾದ ಗೌರಿಶಂಕರ್ ಮೊದಲಿಗೆ ಅವರ ಸ್ನೇಹಿತರಿಂದ ನನಗೆ ಕರೆ ಮಾಡಿಸಿ ಕೇಸ್ ಹಾಕುವುದಾಗಿ, ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬೆದರಿಸಿದರು. ನಂತರ ‘ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಹಾಗೂ ನಮ್ಮ ಸಂಸ್ಥೆಯ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನಾವು ಎಲ್ಲಾ ವಿಷಯಗಳಲ್ಲಿ ಪಾರದರ್ಶಕವಾಗಿದ್ದೇವೆ. ಈ ಬಗ್ಗೆ ಯಾವುದೇ ಸ್ಪಷ್ಟಿಕರಣ ಬೇಕಿದ್ದರೆ ನಮ್ಮನ್ನು ನೇರವಾಗಿ ಸಂಪರ್ಕಿಸಬಹುದು’ ಎಂದು ಪತ್ರಿಕಾ ಹೇಳಿಕೆ ಕೊಟ್ಟರು. ತಮ್ಮ ಕಾನೂನು ಬಾಹಿರ ಚಟುವಟಿಕೆಗಳನ್ನು ಮರೆಮಾಚಲು ‘ಪುನೀತ್ ರಾಜಕುಮಾರ್ ಜೊತೆ ಗಂಧಧ ಗುಡಿ ಸಿನಿಮಾ ಮಾಡಿದ್ದೀನಿ, ಕಾಳಿಂಗದ ನಾಲ್ಕು ಪ್ರಭೇದ ಗುರುತಿಸಿದ್ದೀನಿ’ ಎಂದರು. ಆದರೆ ಇದಾವುದೂ ಒಂದು ಪೈಸೆ ಕೂಡಾ ಫಲ ನೀಡಲಿಲ್ಲ!
ಈ ಮಧ್ಯೆ ಅಕಾಡೆಮಿಕ್ ವಲಯದಲ್ಲಿ ‘ಸಂಶೋಧನೆಗೆ ತೊಂದರೆ ಮಾಡಲಾಗುತ್ತಿದೆ’ ಎಂದು ಕಥೆ ಹೆಣೆಯಲು ಹೊರಟರು. ಅಷ್ಟರಲ್ಲಿ Deccan Herald ಕಾಳಿಂಗ ದಂಧೆಯ ಕುರಿತು ಮುಖಪುಟ ಲೇಖನ ಪ್ರಕಟಿಸಿ ಬಂಡವಾಳ ಬಯಲಿಗೆಳೆಯಿತು. ಅವರ ಮೇಲೆ ‘ಮಾನನಷ್ಟ ಮೊಕದ್ದಮೆ’ ಎಂದು ಹೂಂಕರಿಸಿದರು. Deccan Herald ಮತ್ತು ಅಲ್ಲಿನ ವರದಿಗಾರರಾದ ಚಿರಂಜೀವಿ ಕುಲಕರ್ಣಿ ಅದಕ್ಕೆ ಸೊಪ್ಪು ಹಾಕದೆ ಪುನಃ ‘ಕಾಳಿಂಗ ಹಗರಣ’ ಎಂದು ವಿವರವಾಗಿ ವರದಿ ಮಾಡಿದರು. ಈ ಎರಡೂ ವರದಿಯಲ್ಲಿ ಸ್ವತಃ ಗೌರಿಶಂಕರ್ ಪತ್ರಕರ್ತನ ಪ್ರಶ್ನೆಗಳಿಗೆ ಸಂಬಂಧವಿಲ್ಲದ ಉತ್ತರ ಕೊಟ್ಟರು. ‘ಯಾವುದೇ ಸ್ಪಷ್ಟನೆ ಬೇಕಿದ್ದರೂ ನಮ್ಮನ್ನು ನೇರವಾಗಿ ಸಂಪರ್ಕಿಸಬಹುದು’ ಎಂದವರು ‘KCRE/ಕಾಳಿಂಗ ಮನೆ’ಯ ಗೇಟ್ ಹಾಕಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿದರು.
ಮೊದಲಿಗೆ ತಮ್ಮ ಪ್ರಭಾವ ಬಳಸಿ ತನಿಖೆ ನಡೆಯದಂತೆ ನೋಡಿಕೊಂಡರು. ಕೆಲವರ ಕೈ ಬಿಸಿ ಮಾಡಲು ಪ್ರಯತ್ನಿಸಿದರು. ಅರಣ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಡೀಲ್ ಮಾಡಲು ನೋಡಿದರು. ಈ ಮಧ್ಯೆ ವಿದೇಶಿ ಪ್ರವಾಸ ಮೊಟಕುಗೊಳಿಸಿ ಭಾರತಕ್ಕೆ ವಾಪಾಸ್ಸಾದರು. ಸ್ಥಳಕ್ಕೆ ಹೋದ ಪತ್ರಕರ್ತರ ಪ್ರಶ್ನೆಗಳಿಗೆ ಸೂಕ್ತ ದಾಖಲೆಗಳೊಂದಿಗೆ ಉತ್ತರ ಹೇಳುವುದು ಬಿಟ್ಟು ‘ಕಾಳಿಂಗ ಹಿಡಿಯಲು ನಾನೇ ಬೇಕು, ನಮ್ಮಿಂದಲೇ ಕಾಳಿಂಗದ ಸಂರಕ್ಷಣೆ…’ ಅದು ಇದು ‘ಜಂಬದ ಅಜ್ಜಿ’ ಯ ಕಥೆ ಹೇಳಿ ‘ನಮ್ಮ ಕೋಳಿಯಿಂದಲೇ ಬೆಳಗಾಗುತ್ತಿದೆ’ ಎಂದು ಪತ್ರಕರ್ತರನ್ನು ಸಾಗ ಹಾಕಿದರು.
ಮೊದಲಿನಿಂದಲೂ ಪತ್ರಿಕೆಗಳಲ್ಲಿ ಅವರ ಸುದ್ದಿ ಪ್ರಕಟವಾಗದಂತೆ ನೋಡಿಕೊಂಡರು. ಕೆಲವರಿಗೆ ಭಕ್ಷೀಸು ತಲುಪಿತು. ತಮ್ಮ ವಂಧಿ ಮಾಗದರಿಂದ ‘ಸುಳ್ಳು ಆರೋಪ’ ಎಂದು ಅಲ್ಲಲ್ಲಿ ಹೇಳಿಸುವ ಪ್ರಯತ್ನ ಪಟ್ಟರು. ಅಲ್ಲದೇ ಶಿಷ್ಯಂದಿರನ್ನು ಬಿಟ್ಟು ಫೇಸ್ಬುಕ್ ಪೋಸ್ಟ್ ಗಳಿಗೆ ಕಮೆಂಟ್ ಹಾಕಿಸಿದರು. ಆ ಶಿಷ್ಯಂದಿರೋ Google Translate ಗಿರಾಕಿಗಳು. ಇನ್ನು, ತಮ್ಮ ವ್ಯವಹಾರದ ಭಾಗಿದರರಿಂದಲೂ ಅಲ್ಲಲ್ಲಿ ಬೆದರಿಸುವ ಪ್ರಯತ್ನ ಪಟ್ಟರು. ಕೆಲವರಿಗೆ ಮೌನವಾಗಿ ಅಲ್ಲಲ್ಲಿ ದಾರಿ ತಪ್ಪಿಸುವ ಕೆಲಸ ಮಾಡುವಂತೆ ಸೂಚಿಸಿದರು. ಅವರ ಕೆಲವು ಚೇಲಾಗಳು ಕರೆ ಮಾಡಿ ಅಸಂಬದ್ಧ ಮಾತನಾಡಿದವು. ಕೆಲವಂತೂ ನಯಾಪೈಸೆ ವಾಸ್ತವ ಅರಿಯದೆ ಕಾಳಿಂಗ ಸರ್ಪ ಸಂರಕ್ಷಣೆ ಬಗೆಗೆ ಉಪನ್ಯಾಸ ಶುರು ಹಚ್ಚಿದವು. ಕೆಲವೆಡೆ ‘ನನ್ನ ಮೇಲೆ ವೈಯಕ್ತಿಕ ದ್ವೇಷ, Personal attack’ ಅಂತೆಲ್ಲಾ ಸುದ್ದಿ ಹಬ್ಬಿಸಿ ತಮ್ಮನ್ನು ರಕ್ಷಿಸಿಕೊಳ್ಳಲು, ಬೆಂಬಲಿಗರರ ಸಹಾನುಭೂತಿ ಗಿಟ್ಟಿಸಲು ಪ್ರಯತ್ನ ಪಟ್ಟರು. ಹೇಳುತ್ತಾ ಹೋದರೆ ಇನ್ನೂ ಇದೆ ಬಿಡಿ…ಆದರೆ, ಹೋರಾಟ ಹತ್ತಿಕ್ಕುವ ಪ್ರಯತ್ನಕ್ಕೆ ವಿರುದ್ಧವಾಗಿ ಅರಣ್ಯ ಮಂತ್ರಿಗಳಿಗೆ ಹಲವು ದೂರುಗಳು ಸಲ್ಲಿಕೆಯಾದವು. ತಪ್ಪಿಗೆ ಸಾಕ್ಷಿಗಳು ಅವರ ಸೋಷಿಯಲ್ ಮೀಡಿಯಾದಲ್ಲೇ ಭರಪೂರವಾಗಿ ಸಿಕ್ಕಿದ್ದರಿಂದ ಹಲವರು ಧ್ವನಿ ಎತ್ತಿದರು. ತಮ್ಮ ವಿರುದ್ಧ ಸುದ್ದಿ ಪ್ರಸಾರವಾಗದಂತೆ ತಡೆದರೂ ಕೂಡಾ News 18 ವಿಡಿಯೋ ತುಣುಕುಗಳ ಸಮೇತ ಸುದ್ದಿ ಪ್ರಕಟಿಸಿ ನಿಷ್ಪಕ್ಷಪಾತ ವರದಿ ಮಾಡಿತು.
ಇವತ್ತು ದಿನದಿಂದ ದಿನಕ್ಕೆ ಬೆಂಬಲ ಹೆಚ್ಚುತ್ತಿದೆ. ಇನ್ನಷ್ಟು ಕಾನೂನು ಬಾಹಿರ ಕೃತ್ಯಗಳು ಹೊರ ಬರುತ್ತಿವೆ. ಆರೋಪಗಳಿಗೆಲ್ಲಾ ಸೂಕ್ತ ದಾಖಲೆಗಳೊಂದಿಗೆ ಉತ್ತರ ಕೊಡುವುದನ್ನು ಬಿಟ್ಟು, ತಪ್ಪೇ ಮಾಡಿಲ್ಲ ಎಂದ ಮೇಲೆ ನೇರವಾಗಿ ತನಿಖೆ ಎದುರಿಸುವುದನ್ನು ಬಿಟ್ಟು ಈ ದಾರಿ ತಪ್ಪಿಸುವ ಕಳ್ಳಾಟಗಳು ಏನಕ್ಕೆ? ಇಲ್ಲಿ ಯಾರ ಯಾವ ಸ್ವರೂಪದ ಬೆದರಿಕೆಗೂ ಹೆದರುವ ಪ್ರಶ್ನೆಯೇ ಇಲ್ಲ. ಏಕೆಂದರೆ ನನ್ನ ಧ್ವನಿ ಕಾಳಿಂಗದ ಪರ, ಪರಿಸರದ ಪರ.
– ನಾಗರಾಜ ಕೂವೆ

