ಸ್ವಚ್ಚತೆಗೆ ಆದ್ಯತೆ ನೀಡಿದರೆ ಆರೋಗ್ಯಕರ ಜೀವನ
ಮೂಡಿಗೆರೆ: ಸ್ವಚ್ಛತೆಗೆ ಆದ್ಯತೆ ನೀಡಿದಷ್ಟೂ ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂದು ಎಂಜಿಎಂ ಸರಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಪ್ರಿಯಾಂಕ ಹೇಳಿದರು.
ಅವರು ಮಂಗಳವಾರ ಪಟ್ಟಣದ ಜೇಸಿ ಭವನದಲ್ಲಿ ಜೇಸಿಐ ಸಂಸ್ಥೆ ಹಮ್ಮಿಕೊಂಡಿದ್ದ ಪ್ರತಿಷ್ಠ ಜೇಸಿ ಸಪ್ತಾಹ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಸಂಘ ಸಂಸ್ಥೆಗಳು ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು. ಮಲೆನಾಡು ಭಾಗದಲ್ಲಿ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಬೆಳವಣಿಗೆ ಹೆಚ್ಚಾದಂತೆ ಕಸದ ರಾಶಿಗಳು ಅಧಿಕವಾಗುತ್ತಿದೆ.
ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ವಸ್ತುಗಳು ಕಂಡುಬರುತ್ತಿವೆ. ಇದರಿಂದ ನಮ್ಮ ಜಲಮೂಲ ಹಾಗೂ ಪರಿಸರ ಮಾಲಿನ್ಯವಾಗುತ್ತಿದ್ದು, ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಹಾಗಾಗಿ ಸಂಘ ಸಂಸ್ಥೆಗಳು ಜನರಲ್ಲಿ ಸ್ವಚ್ಚತೆಯ ಅರಿವು ಮೂಡಿಸಬೇಕೆಂದು ಸಲಹೆ ನೀಡಿದರು.
ಚಂದ್ರಸುತ ಯುಟೂಬ್ ಮಾಲೀಕ ನವೀನ್ ಮಂಜುನಾಥ್ ಮಾತನಾಡಿ, ಜೇಸಿ ಸಂಸ್ಥೆ ಬಹಳ ವರ್ಷದಿಂದ ಜನರ ನಡುವೆ ಕೆಲಸ ಮಾಡುತ್ತಿದ್ದು, ಅನೇಕ ಸಮಾಜಪರವಾದ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಯುವಜನರಿಗೆ ನಮ್ಮ ಸಂಸ್ಕೃತಿಯ, ಪರಂಪರೆಯ ಅರಿವು ಮೂಡಿಸಬೇಕು. ಇತಿಹಾಸ ಪುಟಗಳ ಪರಿಚಯ ಮಾಡಿಸಬೇಕು. ಸಾಮಾಜಿಕ ಮಾಧ್ಯಮಗಳನ್ನು ವ್ಯಕ್ತಿತ್ವ ರೂಪಿಸಿಕೊಳ್ಳಲು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕೆಂದು
ಹೇಳಿದರು.
ತಹಸೀಲ್ದಾರ್ ಎಸ್.ಅಶ್ವಿನಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಜೇಸಿಐ ಅಧ್ಯಕ್ಷ ಪ್ರದೀಪ್ ಕುನ್ನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ಸುಪ್ರಿತ್ ಕಾರ್ಬೈಲ್, ಸಪ್ತಾಹದ ನಿರ್ದೇಶಕಿ ಕೃತಿ ಪ್ರದೀಪ್, ಜೇಸಿಐ ಕಾರ್ಯದರ್ಶಿ ಹಮೀದ್ ಸಬ್ಬೇನಹಳ್ಳಿ, ಲೇಡಿ ಜೇಸಿ ಅಧ್ಯಕ್ಷೆ ರೇಖಾ ನಾಗರಾಜ್, ನಿರ್ದೇಶಕಿ ರೇಖಾ ರವಿರಾಜ್ ಮತ್ತಿತರರಿದ್ದರು.

