ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಭರವಸೆಯ ಶಾಸಕಿ ನಯನ ಮೋಟಮ್ಮ ಮತ್ತು ತಂಡದಿಂದ ಸ್ವಚ್ಛತಾ ಕಾರ್ಯಕ್ರಮ.*…
1 min read


ಅವಿನ್ ಟಿವಿ ಸುದ್ದಿಜಾಲ ✒️: *ವಿಜೃಂಭಿಸಿ ಮೆರೆದು ಮರೆಯಾದ ಕಬ್ಬಿಣದ ಸಾಮ್ರಾಜ್ಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಭರವಸೆಯ ಶಾಸಕಿ ನಯನ ಮೋಟಮ್ಮ ಮತ್ತು ತಂಡದಿಂದ ಸ್ವಚ್ಛತಾ ಕಾರ್ಯಕ್ರಮ.*
ಒಂದು ಕಾಲದಲ್ಲಿ ವಿಜ್ರಂಬಿಸಿ ಮೆರೆದ ಕಬ್ಬಿಣದ ಐರನ್ ಸಾಮ್ರಾಜ್ಯ ಕುದುರೆಮುಖ ಈಗ ಅಕ್ಷರಶಃ ನಿಶಬ್ದವಾಗಿದೆ, ಇಷ್ಟು ಮಾತ್ರವಲ್ಲ, ಅಸಂಖ್ಯಾತವಲ್ಲದಿದ್ದರೂ ಈ ಜಾಗ ಇಂದಿಗೂ ಅನೇಕ ವನ್ಯ ಪ್ರಾಣಿಗಳನ್ನು, ಅಗಾಧವಾದ ಸಸ್ಯ ಸಂಕುಲಗಳನ್ನು, ಪರಿಶುದ್ಧವಾದ ನದಿ ಜಲಪಾತಗಳನ್ನು ತನ್ನ ಒಡಲೊಳಗಿಟ್ಟುಕೊಂಡು ಸಲಹುತ್ತಿದೆ.
1969ರ ಹೊತ್ತಿಗೆ, ಸೌದಿ ಮತ್ತು ಇರಾನ್ ಸೇರಿದಂತೆ ಅನೇಕ ದೇಶಗಳ ಬೇಡಿಕೆ ಮತ್ತು ಒತ್ತಡ ಬಂದ ಕಾರಣ KIOCL ಎಂಬ ಸಂಸ್ಥೆ ಹುಟ್ಟಿ, ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದು ಎನ್ನಲಾದ ಈ ಕುದುರೆಮುಖದ ನಿಸರ್ಗದ ಗರ್ಭವನ್ನು ಸೀಳುವ ಕೆಲಸವನ್ನು ಆರಂಭ ಮಾಡುತ್ತದೆ.
ಪರಿಸರಪ್ರಿಯರ ಹೋರಾಟದ ಫಲವಾಗಿ ಸುಮಾರು ಮೂವತ್ತಾರು ವರ್ಷಗಳ ನಂತರ 2006ರ ಹೊತ್ತಿಗೆ ದೇಶದ ಸರ್ವೋಚ್ಚ ನ್ಯಾಯಾಲಯ ಸುಪ್ರೀಂ ಕೋರ್ಟ್ ಕುದುರೆಮುಖದ ಗರ್ಭವನ್ನು ಸೀಳುವುದಕ್ಕೆ ಅಂತ್ಯ ಹಾಡುತ್ತದೆ.
ಈ ಗಣಿಗಾರಿಕೆಗಾಗಿ ಕುದುರೆ ಮುಖದಲ್ಲಿ ಅಂದು ಒಂದು ಸುಂದರವಾದ ನಗರವನ್ನು ನಿರ್ಮಾಣ ಮಾಡಲಾಗಿತ್ತು, ಅಲ್ಲಿ ಶಾಲಾ-ಕಾಲೇಜುಗಳು ಆಸ್ಪತ್ರೆಗಳು ಬ್ಯಾಂಕುಗಳು ಮಾರುಕಟ್ಟೆಗಳು ತೆರೆದಿದ್ದವು. ಸುಂದರವಾದ ರಸ್ತೆಗಳು ಒಂದು ಗುಣಮಟ್ಟದ ಕೆಲಸದೊಂದಿಗೆ ನಿರ್ಮಾಣಗೊಂಡಿದ್ದವು.
ಕಾಲ ಸರಿದು ಗಣಿಗಾರಿಕೆ ನಿಂತುಹೋದ ನಂತರ ಈ ನಗರ ಇಂದು ಸ್ತಬ್ಧವಾಗಿ ಹೋಗಿದೆ, ಅಂದು ನಿರ್ಮಾಣವಾದ ಆ ಕಟ್ಟಡಗಳು ಇಂದು ಪಾಳು ಬಿದ್ದಿದ್ದರೂ ಗಟ್ಟಿಮುಟ್ಟಾಗಿವೆ, ಸುಮಾರು ಮೂವತ್ತಾರು ವರ್ಷ ಕಳೆದರೂ ಕೂಡ ಅಲ್ಲಿನ ರಸ್ತೆಗಳು ಇಂದಿಗೂ ಹಾಳಾದಂತೆ ಕಂಡು ಬರುತ್ತಿಲ್ಲ, ಒಂದು ಒಳ್ಳೆಯ ಗುಣಮಟ್ಟದ ಕೆಲಸಕ್ಕೆ ಆ ರಸ್ತೆ ಇಂದಿಗೂ ಸಾಕ್ಷಿಯಾಗಿ ನಿಂತಿದೆ, ಇಂತಹ ಗುಣಮಟ್ಟದ ರಸ್ತೆಗಳ ನ್ನು ಈಗಿನ ಸರ್ಕಾರಗಳು, ಇಲ್ಲಿನ ಶಾಸಕರು ಸರಿಯಾಗಿ ಗ್ರಹಿಸಿ ಗುಣಮಟ್ಟದ ಕೆಲಸ ಅಂದರೆ ಏನು ಎಂಬ ಪಾಠವನ್ನು ಕಲಿಯಬೇಕಾಗಿದೆ.
ಅಂದು ಗಣಿಗಾರಿಕೆಗಾಗಿ ವಲಸೆ ಬಂದ ಕಾರ್ಮಿಕರು ಇಂದಿಗೂ ಈ ಪ್ರದೇಶದಲ್ಲಿ ಅತಂತ್ರವಾಗಿ ಸೂರಿಲ್ಲದೆ ಮನೆ ಇಲ್ಲದೆ ಅಲ್ಲೇ ನೆಲೆ ನಿಂತಿದ್ದಾರೆ,
ಒಂದು ಕಡೆ ಮನೆ ಇಲ್ಲದೆ ಸೋರುವ ಗುಡಿಸಲಿನಲ್ಲಿ ವಾಸಿಸುವ ಜನ, ಇನ್ನೊಂದೆಡೆ ಪಾಳು ಬಿದ್ದ ಭವ್ಯ ಬಂಗಲೆಗಳು, ಈ ಎರಡು ಇಲ್ಲಿ ಒಟ್ಟೊಟ್ಟಿಗೆ ಎದ್ದು ಕಾಣುತ್ತಿವೆ. ಸರ್ಕಾರದ ವಿಳಂಬ ನೀತಿಗೆ ಮನಸ್ಸುಗಳು ಕೆಂಡಮಂಡಲವಾಗುತ್ತವೆ.
ಇಂತಹ, ವಿಶ್ವ ಪಾರಂಪರಿಕ ತಾಣದಲ್ಲಿ ಒಂದು ಎನ್ನಲಾದ ರಾಷ್ಟ್ರೀಯ ಕುದುರೆಮುಖ ಉದ್ಯಾನವನವು ಮೂಡಿಗೆರೆ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿದ್ದು, ಇಂದು ಈ ಕುದುರೆಮುಖ ರಾಷ್ಟ್ರೀಯ ಅಭಯಾರಣ್ಯ ಮತ್ತು ಉದ್ಯಾನವನಕ್ಕೆ ಕ್ಷೇತ್ರದ ಶಾಸಕಿ ನಯನ ಮೊಟ್ಟಮ್ಮ ಮತ್ತು ತಂಡದವರು ಒಂದು ದಿನದ ಚಾರಣವನ್ನು ಹಮ್ಮಿಕೊಂಡು, ಈ ರಾಷ್ಟ್ರೀಯ ಉದ್ಯಾನವನದ ಸ್ವಚ್ಛತಾ ಕಾರ್ಯವನ್ನು ಕೈಗೊಂಡು ಪರಿಸರ ಜಾಗೃತಿ ಮೂಡಿಸಿದ್ದಾರೆ.
ಗಣಿಗಾರಿಕೆಗಾಗಿ ವಲಸೆ ಬಂದು, ಗಣಿಗಾರಿಕೆ ನಿಂತು ಹೋದ ನಂತರ ಅಲ್ಲಿಯೇ ನೆಲೆ ನಿಂತು ಅತಂತ್ರವಾಗಿ ಬದುಕುತ್ತಿರುವ ಅಲ್ಲಿನ ಕೂಲಿ ಕಾರ್ಮಿಕರ ಸ್ಥಿತಿಗತಿಯ ಬಗ್ಗೆ ಮತ್ತು ಕುದುರೆಮುಖದ ಗುಣಮಟ್ಟದ ರಸ್ತೆಯ ಕೆಲಸಗಳ ಬಗ್ಗೆ, ಅಳಿವಿನಂಚಿನಲ್ಲಿರುವ ಜೀವ ವೈವಿದ್ಯತೆಯ ಬಗ್ಗೆ ಕ್ಷೇತ್ರದ ಶಾಸಕಿಯಾಗಿ ಈ ಅಭಯಾರಣ್ಯದ ಬಗ್ಗೆ ಒಂದು ಅನ್ವೇಷಣೆಯ ಹೆಜ್ಜೆಯನ್ನು ಸದಾ ಅತ್ತಕಡೆ ಇಡುತ್ತಲೇ ಇರಲಿ ಎಂಬುದು ಅವಿನ್ ಟಿವಿ ಸುದ್ದಿಜಾಲದ ಆಶಯ .
•••••••••••ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ…. ✒️
ಚಿಕ್ಕಮಗಳೂರು

