लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನಮ್ಮ ಮೇಲೆ ಯಾರಾದರೂ ಮಾಟ-ಮಂತ್ರ ಪ್ರಯೋಗಿಸಿದ್ದಾರೆ ಎಂದು ನೀವು ಭಾವಿಸಿದರೆ, ಅದನ್ನು ಕಾನೂನು ರೀತಿಯಲ್ಲಿ ಎದುರಿಸುವುದು ಹೇಗೆ?..

1 min read

ನಮ್ಮ ಮೇಲೆ ಯಾರಾದರೂ ಮಾಟ-ಮಂತ್ರ ಪ್ರಯೋಗಿಸಿದ್ದಾರೆ ಎಂದು ನೀವು ಭಾವಿಸಿದರೆ, ಅದನ್ನು ಕಾನೂನು ರೀತಿಯಲ್ಲಿ ಎದುರಿಸುವುದು ಹೇಗೆ?
✍️ಆಶಾ ಸಂತೋಷ್ ಮೂಡಿಗೆರೆ

ಈ ವಿಷಯಕ್ಕೆ ಸಂಬಂಧಿಸಿದಂತೆ, ಮೂರು ವರ್ಷಗಳ ಹಿಂದೆ ನನ್ನ ಸ್ನೇಹಿತೆ ಒಬ್ಬರ ಘಟನೆಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ನನ್ನ ಸ್ನೇಹಿತೆ ನನಗೆ ಕರೆ ಮಾಡಿ, ಆಸ್ತಿಯ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಗಂಡನ ಅಣ್ಣ ಮಾಟ-ಮಂತ್ರದ ವಸ್ತುಗಳನ್ನು ಅವರ ಮನೆಯ ಹಿಂಭಾಗದಲ್ಲಿ ಇಟ್ಟಿರುವ ಬಗ್ಗೆ ಹೇಳಿದರು. ಆ ವಸ್ತುಗಳನ್ನು ನೋಡಿದ ತಕ್ಷಣ ಅವರಿಗೆ ಗಾಬರಿಯಾಗಿ ಕೈ ಕಾಲುಗಳು ಚಲನೆ ನಿಲ್ಲಿಸಿದ ಅನುಭವವಾಗಿತ್ತು ಮತ್ತು ಜ್ವರ ಬಂದಿತ್ತು. “ಮೇಡಂ, ನನಗೆ ಭಯವಾಗುತ್ತಿದೆ, ನಾನು ಏನು ಮಾಡಲಿ?” ಎಂದು ಅವರು ಅಳುತ್ತಾ ಗೋಗರೆದರು. ನಾನು ಕೂಡಲೇ ಅವರನ್ನು ಸಮಾಧಾನಪಡಿಸಿ, “ಇದೆಲ್ಲ ಮೂಢನಂಬಿಕೆ, ನೀವು ಧೈರ್ಯವಾಗಿರಿ, ಭಯಪಡಬೇಡಿ. ಮೊದಲು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಿ. ನೀವು ಒಂಟಿಯಾಗಿರುವ ಕಾರಣ ಭಾವನಾತ್ಮಕವಾಗಿ ಖಿನ್ನತೆಗೆ ಒಳಗಾಗಿದ್ದೀರಿ. ಸೂಕ್ತ ಚಿಕಿತ್ಸೆ ಪಡೆಯಿರಿ,” ಎಂದು ಸಲಹೆ ನೀಡಿ ಫೋನ್ ಕಟ್ ಮಾಡಿದೆ.
ಒಂದು ವಾರದ ನಂತರ, ಮತ್ತೆ ಅದೇ ವಿಷಯವನ್ನು ಹೇಳಿ ಕರೆ ಮಾಡಿದಾಗ, ನಾನು ಅವರಿಗೆ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸುವಂತೆ ತಿಳಿಸಿದೆ. ನಾನು ಕೂಡ ಅವರ ಪರವಾಗಿ ಸ್ಥಳೀಯ ಪೊಲೀಸ್ ಅಧಿಕಾರಿಗೆ ಕರೆ ಮಾಡಿ, “ಸರ್, ಅವರು ನೊಂದ ಮಹಿಳೆ, ತುಂಬಾ ಭಯಭೀತರಾಗಿದ್ದಾರೆ. ದಯವಿಟ್ಟು ಅವರಿಗೆ ಧೈರ್ಯ ತುಂಬಿ. ಒಂದು ವೇಳೆ ಅವರಲ್ಲಿ ಸೂಕ್ತ ದಾಖಲಾತಿಗಳಿದ್ದರೆ, ಸಂಬಂಧಪಟ್ಟ ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಿ,” ಎಂದು ತಿಳಿಸಿದೆ.
ಈ ಘಟನೆ ಮಾಟ-ಮಂತ್ರದ ಹೆಸರಿನಲ್ಲಿ ನಡೆಯುವ ಅಕ್ರಮಗಳನ್ನು ಹೇಗೆ ಎದುರಿಸಬಹುದು ಎಂಬುದಕ್ಕೆ ಒಂದು ಉದಾಹರಣೆಯಾಗಿದೆ. ಮಾಟ-ಮಂತ್ರದ ಬಗ್ಗೆ ಭಾರತೀಯ ಕಾನೂನುಗಳು ನೇರವಾಗಿ ಪ್ರಸ್ತಾಪಿಸುವುದಿಲ್ಲ. ಹಾಗಿದ್ದರೂ, ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಕಾನೂನುಗಳನ್ನು ಬಳಸಿಕೊಳ್ಳಬಹುದು.
ಕಾನೂನು ರೀತಿಯ ಕ್ರಮಗಳು
ಭಾರತೀಯ ದಂಡ ಸಂಹಿತೆಯ (IPC) ಅಡಿಯಲ್ಲಿ ಮಾಟ-ಮಂತ್ರದ ಕಾರಣದಿಂದಾಗಿ ಆಗುವ ಕೆಲವು ಪರಿಣಾಮಗಳಿಗೆ ಕ್ರಮ ತೆಗೆದುಕೊಳ್ಳಬಹುದು. ಇದನ್ನು ನೇರವಾಗಿ ಮಾಟ-ಮಂತ್ರ ಎಂದು ಪರಿಗಣಿಸದೆ, ಅದರ ಪರಿಣಾಮಗಳ ಮೇಲೆ ಕೇಂದ್ರೀಕರಿಸಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ.
1. ಮೋಸ ಮತ್ತು ವಂಚನೆ (Cheating and Fraud):
ಯಾರಾದರೂ ಮಾಟ-ಮಂತ್ರದ ಹೆಸರಿನಲ್ಲಿ ನಿಮ್ಮಿಂದ ಹಣ ಅಥವಾ ಆಸ್ತಿಯನ್ನು ಪಡೆದಿದ್ದರೆ, ಅದನ್ನು ಮೋಸ ಮತ್ತು ವಂಚನೆ ಎಂದು ಪರಿಗಣಿಸಬಹುದು. IPC ಸೆಕ್ಷನ್ 420 ಅಡಿಯಲ್ಲಿ ಇಂತಹವರ ವಿರುದ್ಧ ದೂರು ನೀಡಬಹುದು. ಈ ಸೆಕ್ಷನ್ ಅಡಿಯಲ್ಲಿ ವಂಚನೆಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು.
2. ಕ್ರಿಮಿನಲ್ ಬೆದರಿಕೆ (Criminal Intimidation):
ಮಾಟ-ಮಂತ್ರ ಮಾಡಿ ನಿಮಗೆ ತೊಂದರೆ ಕೊಡುತ್ತೇನೆ ಅಥವಾ ನಿಮ್ಮ ಕುಟುಂಬಕ್ಕೆ ಏನಾದರೂ ಕೆಟ್ಟದು ಮಾಡುತ್ತೇನೆ ಎಂದು ಯಾರಾದರೂ ಬೆದರಿಕೆ ಹಾಕಿದರೆ, ಅದನ್ನು ಕ್ರಿಮಿನಲ್ ಬೆದರಿಕೆ ಎಂದು ಪರಿಗಣಿಸಬಹುದು. IPC ಸೆಕ್ಷನ್ 503 ಮತ್ತು 506 ಅಡಿಯಲ್ಲಿ ಇವರ ವಿರುದ್ಧ ದೂರು ದಾಖಲಿಸಬಹುದು. ಇದಕ್ಕಾಗಿ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು.
3. ಜೀವಕ್ಕೆ ಅಪಾಯ (Endangering Life):
ಮಾಟ-ಮಂತ್ರದ ಹೆಸರಿನಲ್ಲಿ ಏನಾದರೂ ವಿಷಕಾರಿ ಪದಾರ್ಥಗಳನ್ನು ನಿಮಗೆ ಕುಡಿಯಲು ಕೊಡುವುದು ಅಥವಾ ಯಾವುದೇ ದೈಹಿಕ ಅಪಾಯ ಉಂಟುಮಾಡಿದರೆ, IPC ಸೆಕ್ಷನ್ 328 ಅಡಿಯಲ್ಲಿ ಕ್ರಮ ತೆಗೆದುಕೊಳ್ಳಬಹುದು. ಇಂತಹ ಕೃತ್ಯಕ್ಕೆ ಜೀವಾವಧಿ ಶಿಕ್ಷೆಯೂ ವಿಧಿಸಬಹುದು.

ಕರ್ನಾಟಕದಲ್ಲಿನ ವಿಶೇಷ ಕಾನೂನು:
💙Karnataka prevention of superstitious practices act 2017💙

ಮಾಟ-ಮಂತ್ರದಂತಹ ಮೂಢನಂಬಿಕೆಗಳನ್ನು ತಡೆಯುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಈ ಕಾಯಿದೆಯನ್ನು ಜಾರಿಗೆ ತಂದಿದೆ. ಇದರ ಮುಖ್ಯ ಉದ್ದೇಶ ಅಮಾನವೀಯ ಮತ್ತು ದುಷ್ಕೃತ್ಯದ ಆಚರಣೆಗಳನ್ನು ನಿರ್ಮೂಲನ ಮಾಡುವುದು ಹಾಗೂ ಇದರಿಂದ ಪ್ರಾಣ ಮತ್ತು ಆಸ್ತಿ ಹಾನಿಯಾಗುವುದನ್ನು ತಡೆಯುವುದು.
ಕಾಯಿದೆಯ ಮುಖ್ಯ ಅಂಶಗಳು:
* ನಿಷೇಧಿತ ಆಚರಣೆಗಳು: ಈ ಕಾಯಿದೆಯು ಕೆಲವು ನಿರ್ದಿಷ್ಟ ಅಮಾನವೀಯ ಮತ್ತು ದುಷ್ಕೃತ್ಯದ ಆಚರಣೆಗಳನ್ನು ನಿಷೇಧಿಸುತ್ತದೆ. ಅವುಗಳಲ್ಲಿ ಕೆಲವು ಹೀಗಿವೆ:
* ಮಾನವ ಬಲಿ: ಮಾಟ-ಮಂತ್ರದ ಹೆಸರಿನಲ್ಲಿ ಯಾವುದೇ ವ್ಯಕ್ತಿಯನ್ನು ಬಲಿ ಕೊಡುವುದು ಅಥವಾ ದೇಹಕ್ಕೆ ಗಾಯ ಮಾಡುವುದು.
* ಭೂತ-ಪ್ರೇತದ ಹೆಸರಿನಲ್ಲಿ ಭಯ ಹುಟ್ಟಿಸುವುದು: ಮಾಟ-ಮಂತ್ರದಂತಹ ಶಕ್ತಿಗಳನ್ನು ಬಳಸಿ ಜನರಿಗೆ ಮಾನಸಿಕ ಅಥವಾ ದೈಹಿಕ ಹಿಂಸೆ ನೀಡುವುದು.
* ಅಮಾನವೀಯ ಆಚರಣೆಗಳು: ಬೆಂಕಿಯ ಮೇಲೆ ನಡೆಯುವಂತೆ ಬಲವಂತ ಮಾಡುವುದು, ಹಲ್ಲುಕಡಿದು ಮಲ ವಿಸರ್ಜನೆ ಮಾಡಿಸುವುದು, ಸತ್ತ ಪ್ರಾಣಿಗಳನ್ನು ಬಲಿ ಕೊಡುವುದು.
* ಮಹಿಳೆಯರಿಗೆ ದೌರ್ಜನ್ಯ: ಮಾಟ-ಮಂತ್ರದ ಹೆಸರಿನಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸುವುದು, ಲೈಂಗಿಕ ದೌರ್ಜನ್ಯ ಎಸಗುವುದು ಅಥವಾ ಅಮಾನುಷವಾಗಿ ನಡೆದುಕೊಳ್ಳುವುದು.
* ವೈಜ್ಞಾನಿಕವಾಗಿ ನಿರೂಪಿಸದ ಔಷಧಿಗಳು: ಮಾಟ-ಮಂತ್ರದ ಹೆಸರಿನಲ್ಲಿ ಜನರಿಗೆ ರೋಗಗಳನ್ನು ಗುಣಪಡಿಸುವುದಾಗಿ ಸುಳ್ಳು ಹೇಳಿ, ವೈದ್ಯಕೀಯ ಚಿಕಿತ್ಸೆಯನ್ನು ತಪ್ಪಿಸುವುದು.
* ಶಿಕ್ಷೆ: ಈ ಕಾಯಿದೆಯ ಅಡಿಯಲ್ಲಿ ಅಪರಾಧ ಸಾಬೀತಾದಲ್ಲಿ, ಕನಿಷ್ಠ 1 ವರ್ಷದಿಂದ ಗರಿಷ್ಠ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹5,000 ದಿಂದ ₹50,000 ವರೆಗೆ ದಂಡ ವಿಧಿಸಬಹುದು. ಇಂತಹ ದುಷ್ಕೃತ್ಯಗಳನ್ನು ಪ್ರೋತ್ಸಾಹಿಸುವವರಿಗೂ ಇದೇ ರೀತಿಯ ಶಿಕ್ಷೆಗಳು ಅನ್ವಯವಾಗುತ್ತವೆ.
* ಯಾವುದು ನಿಷೇಧಿಸಲ್ಪಟ್ಟಿಲ್ಲ?: ಈ ಕಾಯಿದೆ ಎಲ್ಲಾ ಧಾರ್ಮಿಕ ಆಚರಣೆಗಳನ್ನು ನಿಷೇಧಿಸುವುದಿಲ್ಲ. ದೇವರ ಪೂಜೆ, ಯಾಗಗಳು, ಜ್ಯೋತಿಷ್ಯ, ವಾಸ್ತು, ಸಂಖ್ಯಾಶಾಸ್ತ್ರ, ಪಾರಂಪರಿಕ ವೈದ್ಯಪದ್ಧತಿಗಳು (ಹಾನಿಕಾರಕವಲ್ಲದಿದ್ದರೆ) ಈ ಕಾಯಿದೆಯ ವ್ಯಾಪ್ತಿಯಿಂದ ಹೊರಗಿವೆ. ಈ ಕಾಯಿದೆಯ ಮುಖ್ಯ ಗುರಿ, ಧರ್ಮದ ಹೆಸರಿನಲ್ಲಿ ನಡೆಯುವ ಅಮಾನುಷ ಮತ್ತು ದೌರ್ಜನ್ಯದ ಕೃತ್ಯಗಳನ್ನು ತಡೆಗಟ್ಟುವುದು ಮಾತ್ರ.

ವೈಜ್ಞಾನಿಕವಾಗಿ ಒಂದು ಸಲಹೆ
ಭಯ ಮತ್ತು ಆತಂಕ ನಮ್ಮ ದೇಹದ ಮೇಲೆ ನೇರ ಪರಿಣಾಮ ಬೀರುತ್ತವೆ. ನನ್ನ ಸ್ನೇಹಿತೆಯ ಉದಾಹರಣೆಯಲ್ಲಿ, ಮಾಟ-ಮಂತ್ರದ ವಸ್ತುಗಳನ್ನು ನೋಡಿದ ತಕ್ಷಣ ಅವರ ಮನಸ್ಸಿನಲ್ಲಿ ಮೂಡಿದ ಭಯ, ಅವರ ಮೆದುಳಿನಲ್ಲಿ ‘ಫೈಟ್ ಆರ್ ಫ್ಲೈಟ್’ (ಹೋರಾಟ ಅಥವಾ ಓಡಿ ಹೋಗುವಿಕೆ) ಪ್ರತಿಕ್ರಿಯೆಯನ್ನು ಪ್ರಚೋದಿಸಿತು. ಇದು ವೈಜ್ಞಾನಿಕವಾಗಿ ಸಾಬೀತಾದ ಒಂದು ಪ್ರಕ್ರಿಯೆ.
ಈ ಪ್ರತಿಕ್ರಿಯೆಯಿಂದಾಗಿ ದೇಹದಲ್ಲಿ ಅಡ್ರಿನಾಲಿನ್‌ನಂತಹ ಹಾರ್ಮೋನ್‌ಗಳು ಬಿಡುಗಡೆಯಾಗಿ, ಕೈಕಾಲುಗಳ ಸ್ನಾಯುಗಳು ಬಿಗಿಯಾಗಿ, ರಕ್ತ ಸಂಚಾರ ಹೆಚ್ಚಾಗಿ, ಹೃದಯ ಬಡಿತ ವೇಗಗೊಳ್ಳುತ್ತದೆ. ತೀವ್ರ ಭಯದಿಂದ ಕೈ-ಕಾಲುಗಳು ಚಲಿಸಲಾಗದಂತೆ ಅನಿಸಬಹುದು ಅಥವಾ ಜ್ವರ ಬಂದಂತೆ ಭಾಸವಾಗಬಹುದು. ಮಾಟ-ಮಂತ್ರದಲ್ಲಿ ಯಾವುದೇ ದೈವಿಕ ಶಕ್ತಿ ಇಲ್ಲ, ಆದರೆ ನಮ್ಮ ಮನಸ್ಸಿನ ಪ್ರತಿಕ್ರಿಯೆ ಮಾತ್ರ ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ.

ಭಾವನಾತ್ಮಕ ಮತ್ತು ಸಾಮಾಜಿಕ ಅಂಶಗಳು

ಮಾಟ-ಮಂತ್ರದಂತಹ ಭಯ ಮತ್ತು ಮೂಢನಂಬಿಕೆಗಳನ್ನು ಎದುರಿಸಲು ಕಾನೂನು ಕ್ರಮದಷ್ಟೇ ಮಾನವೀಯ ಸ್ಪರ್ಶ ಕೂಡ ಮುಖ್ಯ. ಪೊಲೀಸ್ ಠಾಣೆಗೆ ಬರುವ ನೊಂದ ಮಹಿಳೆಯರು, ನೊಂದ ಮಕ್ಕಳು, ಅಥವಾ ಬಡವರು ಭಯದಲ್ಲಿರುತ್ತಾರೆ. ಅಂತಹ ಸಮಯದಲ್ಲಿ ಪೊಲೀಸರು ಸ್ನೇಹಯುತವಾಗಿ ಮತ್ತು ಸಹಾನುಭೂತಿಯಿಂದ ವರ್ತಿಸಬೇಕು.
ವೈದ್ಯರು ರೋಗಿಗೆ ಚಿಕಿತ್ಸೆ ಕೊಡುವ ಮೊದಲು, “ನಿನಗೇನೂ ಆಗುವುದಿಲ್ಲ, ಧೈರ್ಯವಾಗಿರು” ಎಂದು ಹೇಳಿದರೆ, ಆ ಮಾತು ರೋಗಿಯನ್ನು ಶೇ.90ರಷ್ಟು ಗುಣಪಡಿಸಿದಂತೆ. ಉಳಿದ ಶೇ.10ರಷ್ಟು ಚಿಕಿತ್ಸೆಯಿಂದ ಗುಣವಾಗುತ್ತಾರೆ. ಅದೇ ರೀತಿ, ಪೊಲೀಸರು ಕೂಡ ನೊಂದವರನ್ನು ಮಾನವೀಯತೆಯಿಂದ ಕಾಣಬೇಕು. ಅವರ ಸಮಸ್ಯೆಯನ್ನು ತಾಳ್ಮೆಯಿಂದ ಕೇಳಿ, ಧೈರ್ಯ ತುಂಬಬೇಕು. ಕಾನೂನುಬದ್ಧವಾಗಿ ನೆರವು ನೀಡುವ ಭರವಸೆ ನೀಡಿದರೆ, ಅದು ಅವರಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ.
ಈ ರೀತಿಯ ಮಾನವೀಯ ವರ್ತನೆಯಿಂದ ನಮ್ಮ ಅಪ್ಪಾಜಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಮಸಮಾಜದ ಕನಸು ನನಸಾಗುತ್ತದೆ. ಮತ್ತು ಆಗ ಮಾತ್ರ ಪೊಲೀಸ್ ಇಲಾಖೆಯು ಕೇವಲ ಕಾನೂನು ಪಾಲಕರಾಗಿರದೆ, ಸಮಾಜದ ರಕ್ಷಕರಾಗಿಯೂ ನಿಲ್ಲುತ್ತದೆ. ಎಂಬ ಮಾತು ಸತ್ಯವಾಗುತ್ತದೆ

ಒಂದು ಚಿಕ್ಕ ಸಲಹೆ ಅಷ್ಟೇ…

ಜೈ ಭೀಮ್💙
✍️ ಆಶಾ ಸಂತೋಷ್ ಮೂಡಿಗೆರೆ

About Author

Leave a Reply

Your email address will not be published. Required fields are marked *

You may have missed