लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

” DSS ಹೋರಾಟದ ಫಲವಾಗಿ ಚಂದವಾಗಿರುವ ಚಂಡುಗೋಡು”…

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕು ಆಲ್ದೂರು ಹೋಬಳಿಯ ಚಂಡುಗೋಡು ಗ್ರಾಮದಲ್ಲಿ ತಲಾತಲಾಂತರದಿಂದ ಸುಮಾರು 12 ಕುಟುಂಬಗಳು ವಾಸವಾಗಿರುತ್ತವೆ. 1978ರ ಹೊತ್ತಿಗೆ 40 ಕುಟುಂಬಗಳಾಗಿ ಸುಮಾರು ನೂರಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮವಾಗುತ್ತದೆ. ಆದರೆ ಯಾರೊಬ್ಬರಿಗೂ ಸ್ವಂತ ಭೂಮಿ ಇರುವುದಿಲ್ಲ. ಕೂಲಿನಾಲಿ ಮಾಡಿಕೊಂಡು ಗ್ರಾಮ ಠಾಣಾ ಪ್ರದೇಶದಲ್ಲಿ ಮನೆಯನ್ನು ಕಟ್ಟಿಕೊಂಡು ವಾಸವಾಗಿರುತ್ತಾರೆ. ಅಂತಹ ಸಂದರ್ಭದಲ್ಲಿ ಅದೇ ಗ್ರಾಮದ ಪಕ್ಕದಲ್ಲಿ ಕೆಸವಿನ ಹಕ್ಲು ಸರ್ವೆ ನಂಬರ್ 74 ರಲ್ಲಿ ಸುಮಾರು 200 ಎಕರೆ ಸರ್ಕಾರಿ ಖಾಲಿ ಗೋಮಾಳವಿರುತ್ತದೆ.

ಇದನ್ನು ಅಲ್ಲಿನ ಹಿರಿಯ ಸ್ಥಳೀಯರು ಪತ್ತೆಹಚ್ಚುತ್ತಾರೆ. ಈ ವಿಷಯವನ್ನು ಹೇಗಾದರೂ ಮಾಡಿ ಚಿಕ್ಕಮಗಳೂರು ಜಿಲ್ಲೆ ಶಾಖೆ ದಲಿತ ಸಂಘರ್ಷ ಸಮಿತಿಯ ಗಮನಕ್ಕೆ ತರಲು ಊರಿನವರೆಲ್ಲಾ ತೀರ್ಮಾನಿಸುತ್ತಾರೆ. ಊರಿನ ಹಿರಿಯರಲ್ಲಾ ಸಭೆ ಸೇರಿಕೊಂಡು ದಲಿತ ಸಂಘರ್ಷ ಸಮಿತಿಯ ಗಮನಕ್ಕೆ ತರಲು ನಿರ್ಧರಿಸುತ್ತಾರೆ.

ಆದರೆ ದಲಿತ ಸಂಘರ್ಷ ಸಮಿತಿಯ ನಾಯಕರ ಪರಿಚಯ ಅಷ್ಟಾಗಿ ಇವರಿಗೆ ಇರಲಿಲ್ಲ. ಆದರೆ ಆ ಕಾಲದಲ್ಲಿ ಚಂಡುಗೋಡು ಗ್ರಾಮದ ಗೋಪಾಲ್ ಎಂಬುವರು ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಅವರಿಗೆ ಪಟ್ಟಣದ ಪರಿಚಯ ಇದ್ದರಿಂದ ಅವರ ಮುಖಾಂತರ ಮಾಹಿತಿಯನ್ನು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾಗಿದ್ದ ಎಂ. ಡಿ ಗಂಗಯ್ಯನವರ ಗಮನಕ್ಕೆ ತರುತ್ತಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ಎಂ. ಡಿ ಗಂಗಯ್ಯನವರು ಜಿಲ್ಲಾ ಸಮಿತಿಯ ಎಲ್ಲಾ ಸದಸ್ಯರನ್ನು ಕರೆದುಕೊಂಡು ಚಂಡುಗೋಡು ಗ್ರಾಮಕ್ಕೆ ಮರುದಿನವೇ ಭೇಟಿ ನೀಡುತ್ತಾರೆ. ವಾಸ್ತವ ಸ್ಥಿತಿಯನ್ನು ಅಧ್ಯಯನ ಮಾಡಿದ ಎಂ.ಡಿ ಗಂಗಯ್ಯನವರು ಹೋರಾಟ ಮಾಡಿ ಭೂಮಿಯನ್ನು ಪಡೆಯಬಹುದೆಂದು ಜನರಿಗೆ ಮನವರಿಕೆ ಮಾಡುತ್ತಾರೆ.

ಆದರೆ ಆ ಸಂದರ್ಭದಲ್ಲಿ ಸಂಘಟನೆಯ ಬಗ್ಗೆ ಅರಿವು ಇಲ್ಲದ ಗ್ರಾಮದ ಜನ ಪ್ರತಿಭಟನೆಗೆ ಮುಂದಾಗಲು ಹೆದರುತ್ತಾರೆ. ಅಂತಹ ಕ್ಲಿಷ್ಟ ಸಂದರ್ಭದಲ್ಲಿ ಎಂ. ಡಿ ಗಂಗಯ್ಯನವರು ರಾಜ್ಯದಲ್ಲಿಯೇ ಡಿ.ಎಸ್.ಎಸ್ ನ ಎರಡನೇಯ ಗ್ರಾಮ ಶಾಖೆಯನ್ನು ಚಂಡುಗೋಡು ಗ್ರಾಮದಲ್ಲಿ ಪ್ರಾರಂಭಿಸುತ್ತಾರೆ. ಸಂಚಾಲಕರಾಗಿ ಗೋಪಾಲ್ ರನ್ನು ಆಯ್ಕೆ ಮಾಡಿ ಗ್ರಾಮದ ಜನರಲ್ಲಿ ಭೂಮಿಯ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗುತ್ತಾರೆ.

ಸ್ಥಳೀಯರನ್ನೇ ಬಳಸಿಕೊಂಡು ಕಲಾತಂಡವನ್ನು ರಚನೆ ಮಾಡುತ್ತಾರೆ. ಮೂರು ದಿನಗಳ ಕಾಲ ಅಧ್ಯಯನ ಶಿಬಿರವನ್ನು ಏರ್ಪಡಿಸುತ್ತಾರೆ. ಸಂಜೆಯ ವೇಳೆ ಸ್ಥಳೀಯರಿಗೆ ನಾಟಕ ಕಲಿಸುತ್ತಾರೆ. ಪ್ರಮುಖವಾಗಿ ರಾಜ್ಯದ ಮನೆ ಮಾತಾಗಿದ್ದ ಪತ್ರಸಂಗಪ್ಪನ ಕಗ್ಗೋಲೆ ನಾಟಕವನ್ನು ಪ್ರದರ್ಶನ ಮಾಡಿಸುತ್ತಾರೆ. ಸಂಗಪ್ಪನ ಪಾತ್ರದಲ್ಲಿ ರಮೇಶ್, ಜಮೀನ್ದಾರನ ಪಾತ್ರದಲ್ಲಿ ಮುದ್ದಣ್ಣನವರು ಪಾತ್ರ ನಿರ್ವಹಿಸುತ್ತಾರೆ. ಇನ್ನುಳಿದ ಪಾತ್ರವನ್ನು ಅಲ್ಲಿನ ಸ್ಥಳೀಯರೇ ಮಾಡುತ್ತಾರೆ. ಅನೇಕ ಹೋರಾಟದ ಗೀತೆಗಳನ್ನು ಹೇಳಿಕೊಡುತ್ತಾರೆ ಇದರಿಂದಾಗಿ ಸ್ಥಳೀಯರಿಗೆ ಧೈರ್ಯ ಮೂಡುತ್ತದೆ. ಶಿಬಿರಕ್ಕೆ ಪ್ರತಿದಿನ ಸ್ಥಳೀಯರೇ ಆಹಾರ ಪದಾರ್ಥಗಳನ್ನು ಒದಗಿಸುತ್ತಾರೆ.

ದಿನ ಒಂದೊಂದು ಮನೆಯವರು ಒಂದೊಂದು ಆಹಾರ ಸಾಮಗ್ರಿಗಳನ್ನು ಒದಗಿಸುತ್ತಾರೆ. ಈ ಮೂಲಕ ಗ್ರಾಮದಲ್ಲಿ ಒಗ್ಗಟ್ಟನ್ನು ಮೂಡಿಸುತ್ತಾರೆ. ನಂತರ 1979ರಲ್ಲಿ ಜಿಲ್ಲೆಯಾದ್ಯಂತ ದಲಿತ ಮುಖಂಡರು ಸಭೆ ಸೇರಿ ಗ್ರಾಮದ ಪ್ರತಿಯೊಬ್ಬರು ಚಿಕ್ಕಮಗಳೂರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಬೃಹತ್ ಪ್ರತಿಭಟನೆಯನ್ನು ರೂಪಿಸುತ್ತಾರೆ. ದಲಿತ ಸಂಘರ್ಷ ಸಮಿತಿಯ ಹೋರಾಟಕ್ಕೆ ಮಣಿದ ಸರ್ಕಾರ ಎರಡು ವರ್ಷಗಳ ನಂತರ 200 ಎಕರೆಯಲ್ಲಿ 40 ಕುಟುಂಬಗಳಿಗೆ ತಲಾ 05 ಎಕರೆಯಂತೆ ಮನೆ ಹಿರಿಯರ ಹೆಸರಿಗೆ ಭೂಮಿಯನ್ನು ಮಂಜೂರು ಮಾಡುತ್ತದೆ. ಅದೇ ಸಂದರ್ಭದಲ್ಲಿ ಸಾಗುವಳಿ ಪತ್ರಕ್ಕೆಶುಲ್ಕವಿಧಿಸಿ ಪಾವತಿಸುವಂತೆ ಸಾಗುವಳಿ ಪತ್ರ ನೀಡಲು ಮುಂದಾಗುತ್ತಾರೆ. ಆದರೆ 40 ಕುಟುಂಬಗಳಲ್ಲಿ ಕೇವಲ 16 ಜನ ಮಾತ್ರ 250 ರೂ ಪಾವತಿಸಿ ಸಾಗುವಳಿ ಪಡೆಯುತ್ತಾರೆ.

ಉಳಿದವರು ಶುಲ್ಕ ಪಾವತಿಸಲು ಸಾಧ್ಯವಾಗದೆ ಸಾಗುವಳಿ ಪತ್ರವನ್ನು ಪಡೆಯುವುದಿಲ್ಲ. ಚಂಡುಗೋಡು ಗ್ರಾಮದ ಕೆಲವು ಬುದ್ಧಿವಂತರು ಸಾಗುವಳಿ ಮಾಡಲು ಪ್ರಾರಂಭಿಸುತ್ತಾರೆ. ಮತ್ತೆ ಕೆಲವರು ಸರ್ಕಾರ ಕೊಟ್ಟರೂ ಸಹ ಸಾಗುವಳಿ ಮಾಡದೆ ಪಾಳು ಬಿಡುತ್ತಾರೆ. ಈ ಅವಕಾಶಕ್ಕಾಗಿ ಕಾಯುತ್ತಿದ್ದ ಅಲ್ಲಿಯ ಸ್ಥಳೀಯ ಭೂ ಮಾಲೀಕರು ಆ ಪ್ರದೇಶವನ್ನು ಒತ್ತುವರಿ ಮಾಡಿಕೊಳ್ಳುತ್ತಾರೆ……..

ನಂತರ 2008ರಲ್ಲಿ ಎರಡನೇ ಹಂತದಲ್ಲಿ ಚಂಡುಗೋಡು ಭೂ ಹೋರಾಟ ವೇದಿಕೆ ಕಟ್ಟಿಕೊಂಡು ಹೋರಾಟವನ್ನು ರೂಪಿಸುತ್ತಾರೆ. ದಲಿತ ಸಂಘರ್ಷ ಸಮಿತಿಯ ಹೋರಾಟದ ಫಲವಾಗಿ ಚಂಡುಗೋಡು ಗ್ರಾಮಕ್ಕೆ ಸರ್ಕಾರದಿಂದ ಮಂಜೂರಾಗಿದ್ದ ಸುಮಾರು 40 ಕುಟುಂಬಗಳಲ್ಲಿ ತಲಾ 05 ಎಕರೆಯಂತೆ 200 ಎಕರೆ ಭೂಮಿ ಮಂಜೂರಾಗಿದ್ದು, 1978 ರಲ್ಲಿಯೇ ಆದರೆ ಹೊಟ್ಟೆ ಬಟ್ಟೆಗೆ ಪರದಾಡುತ್ತಿದ್ದ ದಲಿತರಿಗೆ ಮಂಜೂರಾಗಿದ್ದ ಭೂಮಿಯ ಸಾಗುವಳಿ ಪತ್ರವನ್ನು ತೆಗೆದುಕೊಳ್ಳಲು 250 ಗಳನ್ನು ಸರ್ಕಾರಕ್ಕೆ ಕಟ್ಟಬೇಕಾಗಿತ್ತು. 40 ಕುಟುಂಬಗಳಲ್ಲಿ ಕೇವಾಲ 16 ಜನ ಮಾತ್ರ ಸಾಗುವಳಿ ಪತ್ರವನ್ನು ತೆಗೆದುಕೊಂಡರು. ಉಳಿದ 24 ಜನ ಸಾಗುವಳಿ ತೆಗೆದುಕೊಳ್ಳುವುದಿಲ್ಲ ಆದರೂ ಎಲ್ಲಾ ೪೦ ಕುಟುಂಬಗಳಿಗೆ ಸರ್ಕಾರ ಮಂಜೂರು ಮಾಡಿತ್ತು. ಆದರೆ ಆರ್ಥಿಕ ತೊಂದರೆಯಿಂದ ಕೆಲವರು ಸಾಗುವಳಿ ಮಾಡಿಕೊಂಡರೆ ಕೆಲವರು ಪಾಳು ಬಿಟ್ಟಿರುತ್ತಾರೆ.

ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ನೂರ್ ಹುಸೇನ್, ಅಬ್ದುಲ್ ಅಹ್ಮದ್, ಜಿ. ತಿಪ್ಪೆಗೌಡ, ಸುರೇಶ ಗೌಡ, ಮರಿ ಸಿದ್ದೇಗೌಡ, ತನ್ವೀರ್ ಎಂಬ ಭೂ ಮಾಲೀಕರು 125 ಎಕರೆ ಒತ್ತುವರಿ ಮಾಡಿಕೊಂಡಿರುತ್ತಾರೆ. ಕೆಲವು ವರ್ಷಗಳ ನಂತರ ಚಂಡುಗೋಡು ಗ್ರಾಮದ ಹಿರಿಯ ಸಿದ್ದಯ್ಯನವರ ಮನೆಯಲ್ಲಿ 1978 ರಲ್ಲಿ 40 ಕುಟುಂಬಗಳಿಗೆ ಮಂಜೂರಾಗಿದ್ದ ಪತ್ರ ದೊರೆಯುತ್ತದೆ. ಇದನ್ನು ಆಧಾರವಾಗಿಟ್ಟುಕೊಂಡು ಮತ್ತೊಮ್ಮೆ ಸ್ಥಳಿಯರು ದಲಿತ ಸಂಘರ್ಷ ಸಮಿತಿ, ಕಾರ್ಮಿಕ ಸಂಘಟನೆ ನೆರವಿನಿಂದ ಭೂ ಹೋರಾಟವನ್ನು ಕಟ್ಟಿಕೊಂಡು ಅಧ್ಯಕ್ಷರಾಗಿ ರಮೇಶ್ ಆಯ್ಕೆಯಾಗುತ್ತಾರೆ .

ಮುದ್ದಣ್ಣ ಮುತ್ತಯ್ಯ, ಗೋಪಾಲ್ ಮುದ್ದಯ್ಯ, ರುದ್ರಯ್ಯ ,ವಸಂತ್ ಕುಮಾರ್ , ನಾರಾಯಣ .ಸಿ, ಪರಮೇಶ್, ರವಿ, ಭದ್ರಮ್ಮ, ಚಿಕ್ಕಮ್ಮ, ಸುಶೀಲ, ಪುಟ್ಟಸ್ವಾಮಿ ಇವರುಗಳ ನೇತೃತ್ವದಲ್ಲಿ ದಲಿತ ಸಂಘರ್ಷ ಸಮಿತಿ, ಹಾಗೂ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ಮೂರು ವರ್ಷಗಳ ಕಾಲ ಹೋರಾಟ ರೂಪಿಸಿತು. ಅಲ್ಲದೆ 2007 ರಲ್ಲಿ 27 ಕಿಲೋಮೀಟರ್ ಕಾಲ್ನಡಿಗೆ ಜಾಥಾ ಮಾಡಿ ಚಿಕ್ಕಮಗಳೂರಿನ ತಾಲ್ಲೂಕು ಕಚೇರಿಯಲ್ಲಿ 17 ದಿನಗಳ ಕಾಲ ಮುಷ್ಕರ ನಡೆಸಲಾಯಿತು. ಈ ಮುಷ್ಕರದಲ್ಲಿ ಲಕ್ಯಾ ಸಣ್ಣಯ್ಯ ಎನ್ನುವರು ಉಪವಾಸ ಸತ್ಯಾಗ್ರಹ ನಡೆಸುತ್ತಾರೆ.

17 ದಿನಗಳ ನಂತರ ಜಿಲ್ಲಾಧಿಕಾರಿಗಳು ಹೋರಾಟಗಾರರ ಬೇಡಿಕೆ ಈಡೇರಿಸಲು ಭರವಸೆ ನೀಡಿದ ನಂತರ ಹೋರಾಟ ವಾಪಾಸ್ ತೆಗೆದುಕೊಳ್ಳುತ್ತದೆ. ನಂತರ 2008 ರಲ್ಲಿ ಜಿಲ್ಲಾಧಿಕಾರಿಗಳಾಗಿದ್ದ ನವೀನ್ ರಾಜ್ ಸಿಂಗ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿದ್ದ ವಿಪುಲ್ ಕುಮಾರ್ ನೇತೃತ್ವದಲ್ಲಿ ಮುಂಜಾನೆ ಆರು ಗಂಟೆಗೆ ಸ್ಥಳಕ್ಕೆ ಆಗಮಿಸಿ ಅಳತೆ ಮಾಡಿ ವಾಪಸ್ ಆಗುತ್ತಾರೆ. ದಲಿತ ಸಂಘರ್ಷ ಸಮಿತಿಯ ಹೋರಾಟದ ಪ್ರತಿಫಲವಾಗಿ ಚಿಕ್ಕಮಗಳೂರು ಜಿಲ್ಲೆಯ ಉಪ ವಿಭಾಗಾಧಿಕಾರಿಗಳಾದ ದಯಾನಂದ, ತಹಶೀಲ್ದಾರರು ರಂಗಸ್ವಾಮಯ್ಯ, ರಾಜಸ್ಟ ನಿರೀಕ್ಷಕರಾದ ಹೇಮಂತ್ ಕುಮಾರ್, ಗ್ರಾಮ ಲೆಕ್ಕಾಧಿಕಾರಿಗಳಾದ ಬಸವರಾಜ್ ರವರು ಚಂಡುಗೋಡು ಗ್ರಾಮಕ್ಕೆ ಸ್ವತಹ ಅವರೇ ಬಂದು ಉಳಿದ 24 ಕುಟುಂಬಗಳಿಗೆ ತಲಾ 03 ಎಕರೆಯಂತೆ ಸಾಗುವಳಿ ಪತ್ರವನ್ನು ವಿತರಿಸಿದ್ದು, ದಲಿತ ಸಂಘರ್ಷ ಸಮಿತಿಯ ಹೋರಾಟದ ಪ್ರತಿಫಲವಾಗಿಯೇ…. ಚಿಕ್ಕಮಗಳೂರು ಜಿಲ್ಲೆಯಲ್ಲಿ 1978 ರಲ್ಲಿ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ನಡೆದ ಅತಿ ದೊಡ್ಡ ಭೂ ಹೋರಾಟ ಚಂಡುಗೋಡು ಭೂ ಹೋರಾಟ ಈ ಹೋರಾಟ ರಾಜ್ಯದ ಗಮನವನ್ನು ಸೆಳೆದಂತಹ ಹೋರಾಟ ವಾಗಿದೆ .

ಈ ಹೋರಾಟದಲ್ಲಿ 40 ಕುಟುಂಬಗಳಿಗೆ ಭೂಮಿ ಸಿಕ್ಕಿದೆ ಆದರೆ ಪ್ರಾಕೃತಿಕ ವಿಕೋಪದಿಂದಾಗಿ ಕೆಲವರು ಸಾಗುವಳಿ ಮಾಡಿಕೊಂಡರೆ ಕೆಲವರು ಪಾಳು ಬಿಟ್ಟಿದ್ದಾರೆ. ಪ್ರಸ್ತುತ ಈ ಗ್ರಾಮದಲ್ಲಿ 70 ಕುಟುಂಬಗಳಿವೆ ಸುಮಾರು 370 ಜನರಿದ್ದಾರೆ. ನೂರಕ್ಕೂ ಹೆಚ್ಚು ಜನ ಶಾಲಾ-ಕಾಲೇಜು ಶಿಕ್ಷಣ ಪಡೆದಿದ್ದಾರೆ. 30 ಕ್ಕೂ ಹೆಚ್ಚು ಮಂದಿ ಪದವಿ ಪಡೆದಿದ್ದಾರೆ. ಮಾತ್ರವಲ್ಲದೆ 12 ಜನ ಸರ್ಕಾರಿ ನೌಕರಿಯಲ್ಲಿದ್ದಾರೆ. ಸುಸರ್ಜಿತ ರಸ್ತೆ ಸಂಪರ್ಕವಿದ್ದು ಸಾರಿಗೆ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ದಲಿತರ ಪ್ರತ್ಯೇಕ 10 ಗುಂಟೆ ಸ್ಮಶಾನ ಭೂಮಿ ಇದೆ. ಊರಿನ ಮಧ್ಯದಲ್ಲಿಯೇ ಅಂಗನವಾಡಿ ಕೇಂದ್ರ ಹಾಗೂ ಪ್ರಾಥಮಿಕ ಪಾಠಶಾಲೆ ಇದ್ದು ಪ್ರಸ್ತುತ 29 ವಿದ್ಯಾರ್ಥಿಗಳು ಶಾಲೆಯಲ್ಲಿದ್ದು, ಎರಡು ಜನ ಶಿಕ್ಷಕರು ಇರುತ್ತಾರೆ.

ಸಂಶೋಧನಾ ಕ್ಷೇತ್ರ ಕಾರ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನನಗೆ ಊಟ ಉಪಚಾರವನ್ನು ನೀಡಿ ತುಂಬಾ ಆತ್ಮೀಯವಾಗಿ ಗೌರವಿಸಿ ಪ್ರತಿದಿನ ನನ್ನೊಂದಿಗೆ ಸಂಶೋಧನಾ ಅವಧಿಯಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಪ್ರಮುಖವಾಗಿ ಸಹಕಾರ ನೀಡಿದ ಚಂಡುಗೋಡು ಗ್ರಾಮದ ಸಂಪೂರ್ಣ ಮಾಹಿತಿಯನ್ನು ನೀಡಿದ ಪ್ರಮುಖರೆಂದರೆ, ರವಿ ಸಿ.ಬಿ 39 ವರ್ಷ, ನಾರಾಯಣ ಸಿ.ಬಿನ್ 45 ವರ್ಷ, ವಸಂತ್ ಕುಮಾರ್ ಸಿ.ಪಿ 43 ವರ್ಷ, ಪರಮೇಶ್ 42 ವರ್ಷ, ರಮೇಶ್ 65 ವರ್ಷ, ಇವರುಗಳು ಹಲವಾರು ದಾಖಲೆ ಪತ್ರಗಳನ್ನು ನೀಡಿ ಸಂಶೋಧನಾ ಅವಧಿಯಲ್ಲಿ ಸಹಕಾರ ನೀಡಿರುತ್ತಾರೆ. ದಲಿತ ಸಂಘರ್ಷ ಸಮಿತಿಯ ಹೋರಾಟದ ಪ್ರತಿಫಲವಾಗಿಯೇ “ಚಂದವಾಗಿರುವ ಚಂಡುಗೋಡು”…. ✍️ ಹರೀಶ್ ನಲ್ಕೆ ಸಂಶೋಧನಾ ಬರಹಗಾರರು

About Author

Leave a Reply

Your email address will not be published. Required fields are marked *

You may have missed