लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಹುಲಿಗಳು ನಮಗೆ ಏಕೆ ಮುಖ್ಯ..???
ನಮ್ಮ ಮನೆಯಲ್ಲಿ ನಲ್ಲಿ ತಿರುಗಿಸಿದ ತಕ್ಷಣ ನೀರು ಬರುತ್ತದೆ. ನಮ್ಮ ನಲ್ಲಿಯಲ್ಲಿ ನೀರು ಬರಬೇಕು ಎಂದರೆ, ದೂರದ ಕಾಡಿನಲ್ಲಿ ಹುಲಿ ಇರಬೇಕು. ಅಂದರೆ, ನಮ್ಮ ಅಳಿವು ಮತ್ತು ಉಳಿವು ಹುಲಿಯ ಅಸ್ತಿತ್ವದ ಜೊತೆಗೆ ನೇರ ಸಂಬಂಧ ಹೊಂದಿದೆ.

ನಮ್ಮ ಪರಿಸರ ವ್ಯವಸ್ಥೆಯಲ್ಲಿ ಹುಲಿ ಅಗ್ರ ಪರಭಕ್ಷಕ ಪ್ರಾಣಿ. ಅಂದರೆ, ಆಹಾರ ಸರಪಳಿಯಲ್ಲಿ ಹುಲಿಗೆ ಯಾವುದೇ ನೈಸರ್ಗಿಕ ಶತ್ರುಗಳು ಇಲ್ಲ. ಅಗ್ರ ಪರಭಕ್ಷಕ ಪ್ರಾಣಿಯಾಗಿರುವುದರಿಂದ ಹುಲಿ ತಾನು ವಾಸಿಸುವ ಕಾಡಿನ ಉಳಿದೆಲ್ಲ ಜೀವಿಗಳ ಸಂಖ್ಯೆಯನ್ನೂ ನಿಯಂತ್ರಿಸುತ್ತದೆ. ವಿಶೇಷವಾಗಿ ಜಿಂಕೆ, ಕಡವೆ ಮತ್ತು ಕಾಡೆಮ್ಮೆ, ಕೆಲವೊಮ್ಮೆ ಆನೆ ಮರಿಗಳನ್ನೂ ಬೇಟೆಯಾಡುವ ಮೂಲಕ ಅವುಗಳ ಸಂಖ್ಯೆ ಹೆಚ್ಚಾಗದಂತೆ, ಆ ಮೂಲಕ ಕಾಡಿನ ಸಸ್ಯ ಸಂಪತ್ತು ನಾಶವಾಗದಂತೆ ತಡೆಯುತ್ತದೆ. ಒಂದೊಮ್ಮೆ ಸಸ್ಯಹಾರಿ ಪ್ರಾಣಿಗಳ ಸಂಖ್ಯೆ ಹೆಚ್ಚಾಗಿಬಿಟ್ಟರೆ, ಹುಲ್ಲು ಮತ್ತು ಇತರೆ ಸಣ್ಣ ಪುಟ್ಟ ಗಿಡಗಳನ್ನು ಅವು ಸಿಕ್ಕಾಪಟ್ಟೆ ತಿಂದು ಹಾಕಿ, ಮಳೆ ಬಂದಾಗ ಮಣ್ಣಿನ ಸವಕಳಿ ಹೆಚ್ಚಾಗಿಬಿಡುತ್ತದೆ. ಕಾಡು ಕ್ರಮೇಣ ನಾಶವಾಗುತ್ತಾ, ಮಳೆಯನ್ನು ಹಿಡಿದಿಡುವ ಸಾಮರ್ಥ್ಯ ಕಳೆದುಕೊಂಡು ಬಿಡುತ್ತದೆ. ಆದ್ದರಿಂದ ಸಸ್ಯಹಾರಿ ಪ್ರಾಣಿಗಳನ್ನು ಮತ್ತು ಸಸ್ಯ ಸಂಕುಲವನ್ನು ಸಮತೋಲನದಲ್ಲಿ ಇಡಲು ಹುಲಿ ಪ್ರಮುಖ ಪಾತ್ರ ವಹಿಸುತ್ತದೆ.

ಒಂದು ಕಾಡಿನಲ್ಲಿ ಹುಲಿ ಇದೆ ಅಂದರೆ, ಆ ಕಾಡು ಪರಿಪೂರ್ಣ ಅರೋಗ್ಯದಿಂದ ಇದೆ ಎಂದು ಅರ್ಥ. ಕಾಡು ಚೆನ್ನಾಗಿದೆ ಎಂದರೆ ಅಲ್ಲಿನ ಜೀವಪರಿಸರ ವ್ಯವಸ್ಥೆ ಸಮತೋಲಿತವಾಗಿ ಇದೆ ಅನ್ನೋದು ಗ್ಯಾರಂಟಿ. ಸರ್ವ ರೀತಿಯಲ್ಲೂ ಸಮೃದ್ಧವಾಗಿರುವ ಕಾಡು ಉತ್ತಮವಾದ ಮಳೆ ಬೀಳುವುದಕ್ಕೆ ಕಾರಣವಾಗುವುದರ ಜೊತೆಗೆ ಅಲ್ಲಿನ ಹಕ್ಕಿಗಳು, ಜೇನು ನೊಣಗಳು, ಬೇರೆ ಬೇರೆ ಜೀವಿಗಳು ಅತ್ಯಂತ ಸಮರ್ಪಕವಾಗಿ ಬೀಜ ಪ್ರಸರಣ ಮಾಡುತ್ತಿವೆ ಎಂದು ಅರ್ಥ.

ಈ ಇಡಿ ವ್ಯವಸ್ಥೆ ನಮಗೆ ಬೇಕಾದ ನೀರು, ಗಾಳಿ ಜೊತೆಗೆ ನಾವು ಉತ್ಪಾದಿಸುವ ಮಾಲಿನ್ಯವನ್ನು ಹೀರಿಕೊಂಡು ನಮಗೆ ಸದೃಢ ಜೀವಜಾಲ ವ್ಯವಸ್ಥೆಯನ್ನು ನಿರ್ಮಿಸಿಕೊಡುತ್ತದೆ.

ನಮ್ಮ ದೇಶದಲ್ಲಿ ಹರಿಯುವ ಶೇ 99 ರಷ್ಟು ನದಿಗಳ ಮೂಲ ಹುಲಿ ಕಾಡಿನಲ್ಲೇ ಇರೋದು ಅಂದರೆ ಹುಲಿ ಸಂರಕ್ಷಣೆ ಅವುಗಳ ಸಂತತಿ ಹೆಚ್ಚಳ ಎಷ್ಟು ಮುಖ್ಯ ಎನ್ನುವುದು ನಮಗೆ ಅರಿವಾಗುತ್ತದೆ. ಕಾವೇರಿ, ಕಬಿನಿ, ಶರಾವತಿ, ಕಾಳಿ, ಕೃಷ್ಣಾ, ತುಂಗಭದ್ರಾ ಹೀಗೆ ಎಲ್ಲಾ ನದಿಗಳ ಮೂಲ ಎಲ್ಲಿದೆಯೋ ಅದು ಖಂಡಿತವಾಗಿಯೂ ಹುಲಿಯ ಅವಾಸಸ್ಥಾನ ಆಗಿರಲೇಬೇಕು. ಬೇಕಾದ್ರೆ ಒಮ್ಮೆ ಪರಿಶೀಲಿಸಿ ನೋಡಿ. ಮಲೈ ಮಹದೇಶ್ವರ ವನ್ಯಜೀವಿಧಾಮ ರಚನೆ ಮಾಡಿದ್ದು ಸಹ ಇಂತಹದೇ ಒಂದು ಉತ್ತಮ ಯೋಚನೆ ಮತ್ತು ವೈಜ್ಞಾನಿಕ ತಳಹದಿಯ ಮೇಲೆ. ಪೂರ್ಣವಾಗಿ ಹಾಳಾಗಿದ್ದ ಈ ಕಾಡನ್ನು ರಕ್ಷಣೆ ಮಾಡುತ್ತಾ ಬಂದಿದ್ದರಿಂದ ಇಲ್ಲಿ ಜಿಂಕೆ, ಕಡವೆ ಮತ್ತು ಕಾಟಿಯಂತಹ ಬಲಿ ಪ್ರಾಣಿಗಳ ಸಂಖ್ಯೆ ಮೆಲ್ಲಗೆ ಹೆಚ್ಚಾಗುತ್ತಿದೆ. ತನ್ನ ಆಹಾರ ಇಲ್ಲಿ ಸಿಗುತ್ತದೆ ಎನ್ನುವ ಖಾತರಿ ಆದ ಮೇಲೆಯೇ ಈ ಕಾಡಿಗೆ ಹುಲಿ ರಾಯನ ಪ್ರವೇಶವೂ ಆಗಿದೆ. ಹುಲಿ ಕ್ರಮೇಣ ತನ್ನ ಸಂತತಿ ಹೆಚ್ಚಿಸಿಕೊಳ್ಳುತ್ತಾ, ಸಸ್ಯಾಹಾರಿ ಪ್ರಾಣಿಗಳು ಮತ್ತು ಸಸ್ಯ ಸಂಕುಲವನ್ನು ಪೋಷಣೆ ಮಾಡುತ್ತಾ, ಕಾಡನ್ನು ಸಮೃದ್ಧಿ ಮಾಡಿ ಚೆನ್ನಾಗಿ ಮಳೆ ಮೋಡಗಳನ್ನ ಆಕರ್ಷಣೆ ಮಾಡುತ್ತದೆ. ಹದವಾದ ಮಳೆಯನ್ನು ಹಿಡಿದಿಡುವ ಸಾಮರ್ಥ್ಯ ಹೊಂದಿರುವ ಕಾಡು ನಮಗೆ ನೀರನ್ನು ಕೊಡುತ್ತದೆ. ಕುಡಿಯಲು, ಕೃಷಿಗೆ, ನಮ್ಮ ಉದ್ಯಮಗಳಿಗೂ ಹುಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಾಯ ಮಾಡುತ್ತಾ ಹೋಗುತ್ತದೆ.

ಮಲೈ ಮಹದೇಶ್ವರ ಕಾಡಿನಲ್ಲಿ ಐದು ಹುಲಿಗಳನ್ನು ವಿಷ ಹಾಕಿ ಕೊಲ್ಲುವ ಮೂಲಕ ನಾವು ನಮ್ಮ ಜೀವಜಲವನ್ನು, ನಮ್ಮ ಆಹಾರ ಭದ್ರತೆಯನ್ನು ಮತ್ತು ಇಡಿ ಜೀವಪರಿಸರ ವ್ಯವಸ್ಥೆಯನ್ನು ಒಂದೇ ಏಟಿಗೆ ನಾಶ ಮಾಡುವ ದುಸ್ಸಾಹಸ ಮಾಡಿದ್ದೇವೆ. ಈ ಐದು ಹುಲಿಗಳ ಸಾವು ನಿಸರ್ಗಕ್ಕೆ ಶಕ್ತಿ ತುಂಬುವ ಪ್ರಕ್ರಿಯೆಯನ್ನು 10 ವರ್ಷಗಳಷ್ಟು ಹಿಂದಕ್ಕೆ ಹಾಕಿದಂತಾಗಿದೆ.

ನಮ್ಮ ಉಳಿವಿಗಾದರೂ ಹುಲಿಗಳನ್ನು ನಾವು ಕಾಡಿನಲ್ಲಿ ಉಳಿಸಬೇಕು. ಕಾಡು ಅಂದರೆ ಅದು ಕೇವಲ ಹುಲಿ ಅಥವಾ ಇತರೆ ಕಾಡುಪ್ರಾಣಿಗಳ ಆವಾಸ ಸ್ಥಾನ ಮಾತ್ರ ಅಲ್ಲ, ಕಾಡು ನಮ್ಮ ಮುಂದಿನ ಜೀವನವನ್ನು ರೂಪಿಸುವ , ನಮ್ಮನ್ನು ಪೋಷಿಸುವ ತಾಯಿಯೂ ಹೌದು.

ಬರಹ ಕೃಪೆ.

ಕೃತೇಶ್.ಬಿ.ಅರ್.ಸಕಲೇಶಪುರ.

About Author

Leave a Reply

Your email address will not be published. Required fields are marked *

You may have missed