ವಿಧಾನ ಪರಿಷತ್ತಿಗೆ ಡಾ. ಬಿ ಎಲ್ ಶಂಕರ್ ಅವರ ಆಯ್ಕೆ ಖಚಿತ……
1 min read
ಅವಿನ್ ಟಿವಿ ಸುದ್ದಿಜಾಲ:
ಈ ಬಾರಿ ವಿಧಾನ ಪರಿಷತ್ತಿಗೆ ಡಾ. ಬಿ ಎಲ್ ಶಂಕರ್ ಅವರ ಆಯ್ಕೆ ಖಚಿತ 






ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಇತ್ತೀಚಿನ ದಿನಗಳವರೆಗೂ ಬಿಸಿ ಬಿಸಿಯಾಗಿ ಹರಿದಾಡುತ್ತಲೇ ಇತ್ತು. ಈಗ ಈ ಬಿಸಿ ಬಿಸಿ ಸುದ್ದಿ ತಣ್ಣಗಾಗಿ ಶಂಕರ್ ಅವರ ಅಭಿಮಾನಿಗಳ ಉತ್ಸಾಹಕ್ಕೆ ತಣ್ಣೀರು ಎರಚಿದಂತಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲೂ ಒಂದೇ ಪಕ್ಷದ ಶಾಸಕರಿದ್ದರೂ ಕೂಡ ಡಾ. ಬಿ ಎಲ್ ಶಂಕರ್ ಅವರು ವಿಧಾನ ಪರಿಷತ್ತಿಗೆ ಆಯ್ಕೆ ಆಗುವಲ್ಲಿ ಹಿಂದೆ ಬಿದ್ದಿದ್ದಾರೆ. ಇದರ ಹಿಂದಿನ ರಾಜಕೀಯ ಸೂತ್ರದ ಗಾಳಿಪಟದ ದಾರ ಯಾರ ಕೈಯೊಳಗಿತ್ತು ಎಂಬುದು ಈಗ ಗೌಪ್ಯವಾಗಿ ಉಳಿದಿಲ್ಲ. ಈ ಕುರಿತು ಹಿರಿಯ ಪತ್ರಕರ್ತರಾದ ಬಿ. ಮಹಮ್ಮದ್ ಹನೀಫ್ ಅವರ ಬರಹವೊಂದನ್ನು ಯಥವತ್ತಾಗಿ ಈ ಕೆಳಕಂಡಂತೆ ಅವಿನ್ ಟಿವಿ ಸುದ್ದಿಜಾಲ ತನ್ನ ಓದುಗರಿಗಾಗಿ ಕೂಡ ಮಾಡಿದೆ.
•••••••••••••••••••••••••• ಅಳೆದೂ ಸುರಿದೂ ಸಿದ್ದರಾಮಯ್ಯ ಸರ್ಕಾರ ವಿಧಾನ ಪರಿಷತ್ತಿಗೆ ನಾಲ್ವರ ಹೆಸರನ್ನು ಅಂತಿಮಗೊಳಿಸಿ ರಾಜ್ಯಪಾಲರಿಗೆ ಕಳುಹಿಸಿದೆ. ಇವರಲ್ಲಿ ಮೂವರು ನನಗೆ ಚಿರಪರಿಚಿತರು. ನಾಲ್ವರಿಗೂ ಅಭಿನಂದನೆಗಳು.
ದಿನೇಶ್ ಪತ್ರಿಕೋದ್ಯಮದಲ್ಲಿ ದಶಕಗಳ ಸಹೋದ್ಯೋಗಿ. ಪತ್ರಕರ್ತರಾಗಿ ನಿಷ್ಠುರ ಬರವಣಿಗೆ, ವ್ಯಾಪಕ ಓದು ಮತ್ತು ಸೈದ್ಧಾಂತಿಕ ಬದ್ಧತೆ ದಿನೇಶ್ ಹೆಗ್ಗಳಿಕೆ. ರಮೇಶ್ ಬಾಬು ಕೂಡಾ ತುಂಬಾ ತಿಳುವಳಿಕೆಯುಳ್ಳ, ಸಮಚಿತ್ತದ ರಾಜಕಾರಣಿ. ಸಾಗರ್ ದಲಿತ ಚಳವಳಿಯ ಮೂಲಬೇರುಗಳಲ್ಲಿ ಒಬ್ಬರು. ರಾಜ್ಯದಲ್ಲಿ ದಸಂಸ ಕಟ್ಟಿ ಬೆಳೆಸಿದವರಲ್ಲಿ ಸಾಗರ್ ಹೆಸರು ಮಹತ್ವದ್ದು.
ಮಹಿಳಾ ಪ್ರತಿನಿಧಿಯಾಗಿ ಬೂಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಅವರು ವಿಧಾನ ಪರಿಷತ್ವಿಗೆ ಆಯ್ಕೆ ಆಗಿದ್ದರೆ ನನ್ನಂಥವರಿಗೆ ಹೆಚ್ಚು ಸಂತೋಷವಾಗುತ್ತಿತ್ತು. ಸರಕಾರಕ್ಕೂ ಅದೊಂದು ಅತಿ ಗೌರವದ ಸಂಗತಿ ಆಗುತ್ತಿತ್ತು. ಹಾಗೆಂದು ಆರತಿ ಕೃಷ್ಣ ಅವರನ್ನು ತೆಗಳುತ್ತಿಲ್ಲ. ಹಿರಿಯ ಸಜ್ಕನ ರಾಜಕಾರಣಿ ಬೇಗಾನೆ ರಾಮಯ್ಯ ಅವರ ಪುತ್ರಿ ಎನ್ನುವ ನೆಲೆಯಲ್ಲಿ ಆರತಿ ಕೃಷ್ಣ ಅವರಿಗೆ ಒಂದು ಅವಕಾಶ ಸಿಕ್ಕಿರಬಹುದು. ಅವರ ಸಾಧನೆಯನ್ನು ಪರಿಷತ್ತಿನಲ್ಲಿ ಕಾದು ನೋಡಬೇಕು. ಅನಿವಾಸಿ ಭಾರತೀಯರ ಸಮಸ್ಯೆಗಳ ಕುರಿತು ಅವರ ಸಾಧನೆ ಹೇಳಿಕೊಳ್ಳುವಂತಿಲ್ಲ ಎಂದು ನನ್ನ ಕೊಲ್ಲಿ ಪ್ರವಾಸದ ಸಂದರ್ಭದಲ್ಲಿ ಕಂಡುಕೊಂಡ ಸತ್ಯ.
ಈ ಸಲ ವಿಧಾನ ಪರಿಷತ್ತಿಗೆ ಆಯ್ಕೆ ಮಾಡುವಾಗ ಕಾಂಗ್ರೆಸ್ ಪಟ್ಟಿಯಲ್ಲಿ 10 ಕ್ಕೂ ಹೆಚ್ಚು ಅತ್ಯಂತ ಅರ್ಹ ಹೆಸರುಗಳಿದ್ದವು.
ನನಗೆ ಚಿರಪರಿಚಿತರೇ ಆಗಿರುವ ಎಲ್.ಹನುಮಂತಯ್ಯ, ದ್ವಾರಕಾನಾಥ್, ಬಿ.ಎಲ್.ಶಂಕರ್ ಮತ್ತು ಮಾವಳ್ಳಿ ಶಂಕರ್ ಇವರು ಕೂಡಾ ಪರಿಷತ್ತಿಗೆ ಅರ್ಹ ಆಯ್ಕೆಯೇ ಆಗುತ್ತಿದ್ದರು. ಆದರೆ ಪಕ್ಷದ ಅನಿವಾರ್ಯತೆ ಏನು ಅನ್ನುವುದು ಹೊರಗಿರುವ ನಮಗೆ ಗೊತ್ತಿರುವುದಿಲ್ಲ.
ರಾಜಕೀಯವಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಇದು ಏರುಕಾಲ. ಪಕ್ಷವನ್ನು ಕಳೆದ ಚುನಾವಣೆಯಲ್ಲಿ ಅಧಿಕಾರಕ್ಕೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಸಿದ್ದರಾಮಯ್ಯ ಬಹುತೇಕ ನಿವೃತ್ತಿಯ ಅಂಚಿನಲ್ಲಿದ್ದಾರೆ. ಅದೂ ಅಲ್ಲದೆ ಹಿಂದಿನ ಅವರ ಚರಿಷ್ಮಾ ಈಗ ಅಷ್ಟಾಗಿ ಉಳಿದಿಲ್ಲ.
ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ನೋಡಿದರೆ, ಈಗ ವಿಧಾನಸಭಾ ಚುನಾವಣೆ ನಡೆದರೆ ಕಾಂಗ್ರೆಸ್ 60 ಸ್ಥಾನಗಳಿಗೆ ಕುಸಿಯುವಂತೆ ಕಾಣುತ್ತಿದೆ. ಇದು ನಾನು ಮಾತ್ರ ಹೇಳುತ್ತಿರುವುದಲ್ಲ. ನನಗೆ ಆತ್ಮೀಯರಾಗಿರುವ ಕಾಂಗ್ರೆಸ್ಸಿನ ಹಲವು ಹಿರಿಯ ನಾಯಕರು ವೈಯಕ್ತಿಕ ಮಾತುಕತೆಯಲ್ಲಿ ಇದನ್ನೇ ಹೇಳುತ್ತಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಅಗ್ರೆಸಿವ್ ಹಿಂದುತ್ವ ಪ್ರೇರಿತ ಮಾತಿನ ದಾಳಿ ಎದುರಿಸುವಲ್ಲಿ ದಿನೇಶ್ ಅಮೀನ್ ಮತ್ತು ರಮೇಶ್ ಬಾಬು ಪಕ್ಷಕ್ಕೆ ಬಹುದೊಡ್ಡ ಆಸ್ತಿ ಆಗಬಲ್ಲರು ಎನ್ನುವುದರಲ್ಲಿ ಸಂಶಯವಿಲ್ಲ.
ಚಳವಳಿಯ ಮೂಲಕವೇ ಬೆಳೆದು ಬಂದಿರುವ ಅತ್ಯುತ್ತಮ ಸಂಘಟಕ, ಸಾಗರ್ ಪರಿಷತ್ತಿನಲ್ಲಿ ಪಕ್ಷಕ್ಕೆ ಹೇಗೆ ಆಧಾರ ಆಗಬಲ್ಲರು ಎನ್ನುವುದನ್ನು ಕಾದು ನೋಡಬೇಕು.
•••••••••••••••••••••••••••
D. M. Manjunathaswamy
Chikkamagaluru

