ಸರ್ಕಾರಿ ಶಾಲೆಗೆ ಗ್ರಾಮದ ಹುಡುಗರಿಂದ ಆಕರ್ಷಕ ಚಿತ್ತಾರ
1 min read
ಸರ್ಕಾರಿ ಶಾಲೆಗೆ ಗ್ರಾಮದ ಹುಡುಗರಿಂದ ಆಕರ್ಷಕ ಚಿತ್ತಾರ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೌಡಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಗ್ರಾಮದ ಪ್ರದೀಪ್ ಬೈದುವಳ್ಳಿ ನೇತೃತ್ವದಲ್ಲಿ ಗ್ರಾಮದ ಯುವಕರು ಮತ್ತು ವಿವಿಧ ಸಂಘ ಸಂಸ್ಥೆಗಳು ಸೇರಿ ಆಕರ್ಷಕ ರೂಪ ನೀಡಿದ್ದಾರೆ.
ಸರ್ಕಾರಿ ಶಾಲೆಗಳನ್ನು ಉಳಿಸಬೇಕು, ಸರ್ಕಾರಿ ಶಾಲೆಗಳ ಕಡೆಗೆ ಮಕ್ಕಳನ್ನು ಪೋಷಕರನ್ನು ಆಕರ್ಷಿಸಬೇಕು, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕು, ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಬೆಳೆಸಬೇಕು ಎಂಬ ಧ್ಯೇಯದೊಂದಿಗೆ ಗ್ರಾಮದ ಹುಡುಗರು ವಾಟ್ಸಾಪ್ ಗ್ರೂಪ್ ತಂಟದವರು ವಿವಿಧ ಸಂಘಸಂಸ್ಥೆಗಳ ಮತ್ತು ದಾನಿಗಳ ನೆರವು ಪಡೆದು ಗೌಡಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಸುಣ್ಣ ಬಣ್ಣ ಬಳಿದು ಆಕರ್ಷಕವಾದ ಚಿತ್ತಾರಗಳನ್ನು ಮೂಡಿಸಿ ಶಾಲೆಗೆ ವಿಶಿಷ್ಟ ರೂಪ ನೀಡಿದ್ದಾರೆ.
ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ದಿನನಿಂದ ದಿನಕ್ಕೆ ಬಾಗಿಲು ಮುಚುತಿದ್ದು, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಬಹುತೇಕ ಕಡೆ ಬಂದ್ ಆಗುತ್ತಿವೆ. ಕೆಲವು ಕಡೆ ಶಾಲೆ ನಡೆಯುತ್ತಿದ್ದರು ವಿದ್ಯಾರ್ಥಿಗಳಿಲ್ಲದೆ ಬಿಕೋ ಎನ್ನುತ್ತಿವೆ. ಇಂಥ ಸನ್ನಿವೇಶದಲ್ಲಿ ಸರ್ಕಾರಿ ಶಾಲೆಗೆ ನವರೋಪ ನೀಡಲು ಗ್ರಾಮೀಣ ಯುವಕರ ತಂಡದ ಪ್ರಯತ್ನ ಸ್ಥಳಿಯರಿಂದ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.
ಮೂಡಿಗೆರೆ ತಾಲೂಕಿನ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯುವಕರು ಸೇರಿ ಸಂಘಟಿಸಿರುವ “ಗ್ರಾಮದ ಹುಡುಗರು” ವಾಟ್ಸಪ್ ಗ್ರೂಪ್ ತಂಡವು ಗ್ರಾಮ ಪಂಚಾಯತಿ ವ್ಯಾಪ್ತಿಯ ಗೌಡಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ನವರೂಪ ನೀಡುವುದರಲ್ಲಿ ಯಶಸ್ವಿಯಾಗಿದೆ.
ಶಾಲೆಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಆಕರ್ಷಿತವಾಗಬೇಕಾದರೆ ಶಾಲೆಯ ಪರಿಸರವು ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಗೌಡಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ವಿಶಿಷ್ಟವಾದ ಚಿತ್ರಕಲೆಗಳೊಂದಿಗೆ ಗೋಡೆಗಳನ್ನು ಸಿಂಗರಿಸಿ ಶಾಲೆಗೆ ಆಕರ್ಷಕ ರೂಪ ನೀಡಿದ್ದಾರೆ.
ರಾಜ್ಯದ ಹೆಸರಾಂತ ವರ್ಣಚಿತ್ರ ಕಲಾವಿದ ಹುಬ್ಬಳ್ಳಿ ಮೂಲದ ಯಲ್ಲಪ್ಪ ವೈ ಕುಂಬಾರ, ಚಿತ್ರದುರ್ಗ ಶಿವಕುಮಾರ್ ಕಂದಿಗೆರೆ, ತುಮಕೂರು ಮೂಲದ ಕಾರ್ತಿಕ್ ಅವರ ತಂಡ ಎರಡು ದಿನಗಳ ಕಾಲ ಗ್ರಾಮದಲ್ಲಿ ಇದ್ದು, ಕರ್ಣಾಟ ಬಲಸೇನೆ ತಂಡದ ಸದಸ್ಯರು ಸ್ವಯಂಪ್ರೇರಿತರಾಗಿ ಶಾಲೆಯ ಗೋಡೆ ಮತ್ತು ಕಾಂಪೌಂಡ್ ಗಳ ಮೇಲೆ ಆಕರ್ಷಕ ವರ್ಣಚಿತ್ರಗಳನ್ನು ಮೂಡಿಸಿದ್ದಾರೆ.
ಪಶ್ಚಿಮ ಘಟ್ಟಗಳ ಪರ್ವತ ಸಾಲು, ಪೂರ್ಣಚಂದ್ರ ತೇಜಸ್ವಿ, ದ.ರಾ. ಬೇಂದ್ರೆ, ಡಾ. ರಾಜಕುಮಾರ್, ಭಗತ್ ಸಿಂಗ್ ಸೇರಿದಂತೆ ಅನೇಕ ಮಹನೀಯರ ಚಿತ್ರಗಳನ್ನು ಗೋಡೆಯ ಮೇಲೆ ಮೂಡಿಸಿದ್ದಾರೆ.
ನಮ್ಮೂರ ಸರ್ಕಾರಿ ಕನ್ನಡ ಶಾಲೆ ಉಳಿಸೋಣ ಬನ್ನಿ ಎಂಬ ಕರೆಯೊಂದಿಗೆ ಗ್ರಾಮೀಣ ಪ್ರದೇಶದ ಯುವಕರು ಸರ್ಕಾರಿ ಶಾಲೆಗಳ ಕಡೆ ಮುತುವರ್ಜಿ ತೋರಿರುವುದು ಒಂದು ಸಕಾರಾತ್ಮಕ ಬೆಳವಣಿಗೆಯಾಗಿದೆ.