ಎಸ್ಪಿ ವಿಕ್ರಂ ಅಮಟೆ ಮುಂದೆ ಶರಣಾದ ನಕ್ಸಲ್ ರವೀಂದ್ರ
1 min read
ಎಸ್ಪಿ ವಿಕ್ರಂ ಅಮಟೆ ಮುಂದೆ ಶರಣಾದ ನಕ್ಸಲ್ ರವೀಂದ್ರ
ಚಿಕ್ಕಮಗಳೂರು: ನಕ್ಸಲ್ ಶರಣಾಗತಿ ಹಿನ್ನೆಲೆ, ನಕ್ಸಲ್ ರವೀಂದ್ರ ಫೆ.1 ರ ಶನಿವಾರ ಚಿಕ್ಕಮಗಳೂರು ಎಸ್ಪಿ ಕಚೇರಿಗೆ ಆಗಮಿಸಿದ್ದಾರೆ.
ಎಸ್ಪಿ ವಿಕ್ರಂ ಅಮಟೆ ಮುಂದೆ ಶರಣಾದ ನಕ್ಸಲ್ ರವೀಂದ್ರ, ನಾಗರೀಕ ಶಾಂತಿಗಾಗಿ ವೇದಿಕೆ ಸದಸ್ಯರ ಜೊತೆ ಆಗಮಿಸಿಸದ್ದು, ಜಿಲ್ಲೆಯಲ್ಲಿ ಈತನ ಮೇಲೆ 14 ಕೇಸ್ ಗಳಿವೆ ಎನ್ನಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕೋಟೆಹೊಂಡ ಗ್ರಾಮದ ರವೀಂದ್ರ, ಒಂದೂವರೆ ದಶಕದಿಂದ ಭೂಗತನಾಗಿದ್ದ.
ಜ.8ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ 6 ಜನ ನಕ್ಸಲರಾದ ಲತಾ ಮುಂಡಗಾರು, ವನಜಾಕ್ಷಿ ಬಾಳೆಹೊಳೆ, ಸುಂದರಿ ಕುತ್ಲೂರು, ಮಾರೆಪ್ಪ ಅರೋಲಿ, ಕೆ.ವಸಂತ(ತಮಿಳುನಾಡು), ಟಿ.ಎನ್.ಜಿಷಾ(ಕೇರಳ) ಒಳಗೊಂಡ ತಂಡ ಮುಖ್ಯವಾಹಿನಿಗೆ ಬಂದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಎಲ್ಲರನ್ನು ಸ್ವಾಗತಿಸಲಾಗಿತ್ತು. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ತಂಡದಿಂದ ಬೇರ್ಪಟ್ಟಿದ್ದ ರವೀಂದ್ರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅವರನ್ನು ಸಂಪರ್ಕಿಸುವ ಪ್ರಯತ್ನವನ್ನು ಶಾಂತಿಗಾಗಿ ನಾಗರಿಕ ವೇದಿಕೆ ಮತ್ತು ನಕ್ಸಲ್ ಶರಣಾಗತಿ ಸಮಿತಿ ಮಾಡಿದೆ. ಶಾಂತಿಗಾಗಿ ನಾಗರಿಕ ವೇದಿಕೆ ಮುಖಂಡ ರವೀಂದ್ರನೊಂದಿಗೆ ಮಾತುಕತೆ ನಡೆಸಿ, ಮನವೊಲಿಸಿದ್ದು, ಶರಣಾಗತಿಗೆ ಮುಂದಾಗಿದ್ದನು.
ಬಳಿಕ ಇಂದು ಎಸ್ಪಿ ಕಚೇರಿಯಲ್ಲಿ ಶರಣಾಗಲಿದ್ದಾರೆ ಎಂದು ನಕ್ಸಲ್ ಶರಣಾಗತಿ ಸಮಿತಿ ಸದಸ್ಯ ಕೆ.ಪಿ.ಶ್ರೀಪಾಲ್ ಮತ್ತು ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯ ಕೆ.ಎಲ್.ಅಶೋಕ್ ತಿಳಿಸಿದ್ದರು.