day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಹಳೇಕೋಟೆಯಲ್ಲಿದ್ದು….ಹೊಸ ಸಾಮ್ರಾಜ್ಯ ಕಟ್ಟಿದವರು. – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಹಳೇಕೋಟೆಯಲ್ಲಿದ್ದು….ಹೊಸ ಸಾಮ್ರಾಜ್ಯ ಕಟ್ಟಿದವರು.

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/
  • ಚಿಕ್ಕಮಗಳೂರು ಜಿಲ್ಲೆಯ ಸಮಕಾಲಿನ ಸಾಹಿತ್ಯ ವಲಯದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಹೆಸರು ಹಳೇಕೋಟೆ ರಮೇಶ್. ಸಾಹಿತ್ಯ ರಚನೆ, ಸಾಹಿತ್ಯ ಪೋಷಣೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆ ಮೂಲಕ ಅನೇಕ ದಶಕಗಳಿಂದ ಸಾರ್ವಜನಿಕ ಬದುಕಿನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.

    ಕೃಷಿಕ ಕುಟುಂಬ-ಶೈಕ್ಷಣಿಕ ಹಿನ್ನಲೆ
    ಮೂಡಿಗೆರೆ ತಾಲ್ಲೂಕು ಹಳೆಕೋಟೆ ಗ್ರಾಮದ ಶಿಕ್ಷಕ ದಂಪತಿಗಳಾದ ಹೆಚ್.ಬಿ. ನಂಜೇಗೌಡ ಮತ್ತು ಶ್ರೀಮತಿ ಸೀತಮ್ಮನವರ ಪುತ್ರರಾಗಿ 1952ರ ಆಗಸ್ಟ್ 26ರಂದು ಜನಿಸಿದ ರಮೇಶ್ ಬಾಲ್ಯದಿಂದಲೇ ತಮ್ಮ ತಾಯಿ ತಂದೆಗಳಿಂದ ಪ್ರಭಾವಿತರಾಗಿ ಕನ್ನಡ ಭಾಷೆ, ಸಾಹಿತ್ಯದ ಬಗೆಗೆ ಅಭಿಮಾನವನ್ನು ಮೈಗೂಡಿಸಿಕೊಂಡವರು.

    ಮೈಸೂರಿನಲ್ಲಿ ಪಿ.ಯು.ಸಿ. ಶಿಕ್ಷಣವನ್ನು, ರಾಯಚೂರಿನ ಕೃಷಿ ವಿಜ್ಞಾನ ಸಂಸ್ಥೆಯಿಂದ ಕೃಷಿ ಉಪಕರಣಗಳ ತಾಂತ್ರಿಕ ಡಿಪ್ಲೊಮೋ ಪಡೆದ ಇವರು ಮೈಸೂರಿನ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಿಂದ ಕನ್ನಡ ಎಂ.ಎ ಪದವಿ ಅಧ್ಯಯನ ಮಾಡಿದ್ದಾರೆ.

    ಇವರದು ಮೂಲತಃ ಕೃಷಿ ಕುಟುಂಬ. ತಮ್ಮ ಹಿರಿಯರ ಕೃಷಿ ವೃತ್ತಿಯನ್ನು ಮತ್ತಷ್ಟು ಎತ್ತರಕ್ಕೆ ಒಯ್ದು ಪ್ರಗತಿಪರ ಕೃಷಿಕರೆಂದು ಹಳೇಕೋಟೆ ರಮೇಶ್ ಅವರು ಗುರುತಿಸಿಕೊಂಡಿದ್ದಾರೆ. ಇಂದು ಮಲೆನಾಡಿನಲ್ಲಿ ಅಳಿವಿನಂಚಿಗೆ ತಲುಪಿರುವ ಭತ್ತದ ಕೃಷಿಯನ್ನು ವಿಶೇಷ ಆಸಕ್ತಿಯಿಂದ ಮಾಡುತ್ತಾ ಬಂದಿರುವ ರಮೇಶ್ ಹತ್ತಾರು ಎಕರೆಯಲ್ಲಿ ಭತ್ತವನ್ನು ಬೆಳೆಯುತ್ತಾ ಮಾದರಿಯಾಗಿದ್ದಾರೆ. ಶ್ರದ್ಧೆಯಿಂದ ಕೃಷಿ ಮಾಡಿದರೆ ಅದರಿಂದ ಉತ್ತಮ ಜೀವನವನ್ನು ರೂಪಿಸಿಕೊಳ್ಳಬಹುದು ಎಂಬುದನ್ನು ತೋರ್ಪಡಿಸಿದ್ದಾರೆ. ತಮ್ಮ ತೋಟದಲ್ಲಿ ಕಾಫಿ, ಕಾಳುಮೆಣಸು, ಅಡಿಕೆ, ಏಲಕ್ಕಿ, ತೆಂಗು, ನಿಂಬೆ, ಬಾಳೆ, ಮಾವು ಮುಂತಾದ ಬೆಳೆಗಳನ್ನು ಉತ್ಕøಷ್ಟವಾಗಿ ಬೆಳೆಯುತ್ತಿದ್ದಾರೆ.

    ಅವರ ತೋಟದ ಒಂದೊಂದು ಭಾಗಕ್ಕೆ ತಮ್ಮ ಹಿರಿಯರು ಹಾಗೂ ಕನ್ನಡ ಸಾಹಿತಿಗಳ ಹೆಸರನ್ನು ನಾಮಕರಣ ಮಾಡಿ, ನಾಮಫಲಕಗಳನ್ನು ಹಾಕಿರುವುದು ವಿಶೇಷವಾಗಿದೆ.

    ಕೃಷಿಯೊಂದಿಗೆ ಸಾಹಿತ್ಯ ಅಭಿರುಚಿ
    ಹಳೇಕೋಟೆ ಮನೆಯಲ್ಲಿ ಸಾಹಿತ್ಯ ವಾತಾವರಣ ಸಹಜವಾಗಿಯೇ ಇತ್ತು. ತಮ್ಮ ಪೋಷಕರಿಂದ ಬಂದಿದ್ದ ಸಾಹಿತ್ಯ ಪ್ರೀತಿಯನ್ನು ಮುಂದುವರಿಸಿ ಅದನ್ನು ಹೆಚ್ಚು ಆಸಕ್ತಿಯಿಂದ ಮುಂದೆ ಕೊಂಡೊಯ್ದ ರಮೇಶ್ ಅವರು ಇಂದು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿದ್ದಾರೆ.
    ‘ಮೂಡಿಗೆರೆ ತಾಲ್ಲೂಕು ದರ್ಶನ’ ಎಂಬ ಕೃತಿಯಿಂದ ಆರಂಭವಾದ ಇವರ ಬರವಣಿಗೆ ಇಂದು 28 ಪುಸ್ತಕಗಳನ್ನು ಬರೆದು ಪ್ರಕಟಿಸುವವರೆಗೆ ಮುಂದುವರೆದಿದೆ.

    ಆದರ್ಶ ಕೃಷಿಕರಾದ ಇವರು ಕೃಷಿಗೆ ಸಂಬಂಧಿಸಿದಂತೆ ಸಾಂಬಾರ ರಾಣಿ ಏಲಕ್ಕಿ, ಕಪ್ಪು ಬಂಗಾರ ಮೆಣಸು, ಭಾರತದಲ್ಲಿ ಕಾಫಿ ಕೃಷಿ, ಸಾವಯವ ಕೃಷಿ, ರೇಷ್ಮೆಕೃಷಿ, ಮರಳುಗಾಡಿನ ನಂದನವನ ಇಸ್ರೇಲ್, ನಾ ಕಂಡ ಬ್ರೆಜಿಲ್ ಕಾಫಿ, ನೈಸರ್ಗಿಕ ಕೃಷಿ, ವಿಯೆಟ್ನಾಮ್ ಕಾಫೀಯಂತಹ ಕೃತಿಗಳನ್ನು ರಚಿಸಿದ್ದಾರೆ. ಅಲ್ಲದೆ ಕೃಷಿಯ ಕುರಿತಂತೆ, ರೈತರ ಸಮಸ್ಯೆಗಳ ಕುರಿತಂತೆ ಆಕಾಶವಾಣಿ, ದೂರದರ್ಶನಗಳಲ್ಲಿ, ರಾಜ್ಯ ಸಮ್ಮೇಳನಗಳಲ್ಲಿ ವಿಚಾರ ಮಂಡಿಸಿರುತ್ತಾರೆ.

    ರಾಷ್ಟ್ರಕವಿ ಕುವೆಂಪುವರವ ಸಾಹಿತ್ಯ ಮತ್ತು ವಿಚಾರಗಳಿಂದ ಪ್ರಭಾವಿತರಾಗಿರುವ ಹಳೇಕೋಟೆ ರಮೇಶ್ ಕುವೆಂಪುರವರ ಕುರಿತು ಕುವೆಂಪು ಸ್ಮರಣೆ, ಕುವೆಂಪು ನೂರು, ರಷಋಷಿ ಕುವೆಂಪು ಕೃತಿಗಳಲ್ಲದೆ ‘ಜ್ಞಾನಪೀಠ ಪ್ರಶಸ್ತಿ – ಕನ್ನಡ ಮಾಲೆ’ ಎಂಬ ಕೃತಿಯನ್ನು ರಚಿಸಿದ್ದಾರೆ. ಸಾಹಿತಿ ಪೂರ್ಣಚಂದ್ರತೇಜಸ್ವಿಯವರ ಮನೆ ರಮೇಶ್ ಅವರ ಹಳೇಕೋಟೆ ಮನೆಯ ಸಮೀಪವೇ ಇದುದರಿಂದ ಸಹಜವಾಗಿಯೆ ಇವರ ನಡುವೆ ನಿಕಟ ಸಂಪರ್ಕ ಇತ್ತು. ತೇಜಸ್ವಿಯವರೊಂದಿಗಿನ ಅನುಭವಗಳನ್ನು ‘ನೆನಪಿನಂಗಳದಲ್ಲಿ ತೇಜಸ್ವಿ’ ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ. ಡಾ. ರಾಜ್‍ಕುಮಾರ್‍ರವರ ‘ಬಂಗಾರದ ಮನುಷ್ಯ’ ಸಿನಿಮಾದಿಂದ ಪ್ರೇರಿತರಾಗಿಯೇ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ರಮೇಶ್‍ರವರು ‘ಬಂಗಾರದ ಮನುಷ್ಯ ಡಾ. ರಾಜ್‍ಕುಮಾರ್’ ಎಂಬ ಪರಿಚಯಾತ್ಮಕ ಹೊತ್ತಿಗೆಯನ್ನು ಹೊರತಂದಿದ್ದಾರೆ.

    ರಮೇಶ್ ಅವರು ಅನೇಕ ಪ್ರವಾಸಿ ಕಥನಗಳನ್ನು ರಚಿಸಿದ್ದಾರೆ. ಇವರು ದೇಶ ಸುತ್ತುವುದನ್ನು ಹವ್ಯಾಸವಾಗಿ ರೂಢಿಸಿ ಕೊಂಡವರು. ನಮ್ಮ ದೇಶದ ಉದ್ದಗಲಕ್ಕೂ ಯಾತ್ರೆ ಕೈಗೊಂಡಿರುವ ಇವರು, ವಿದೇಶಗಳನ್ನು ಸುತ್ತಿಬಂದವರು. ಅಮೆರಿಕಾ, ಕೆನಡಾ, ಮೆಕ್ಸಿಕೊ, ಈಜಿಪ್ಟ್, ಇಸ್ರೇಲ್, ಚೀನಾ, ಸಿಂಗಾಪುರ್, ಜಪಾನ್, ಬ್ರೆಜಿಲ್, ಇಟಲಿ, ಇಂಗ್ಲೆಂಡ್, ನೇಪಾಳ, ಬಾಂಗ್ಲಾ, ಇರಾನ್, ದುಬೈ, ಹಾಂಕಾಂಗ್, ಥೈಲಾಂಡ್, ಫ್ರಾನ್ಸ್, ಮಲೇಶಿಯಾ, ಬರ್ಮಾ, ಪಾಕಿಸ್ಥಾನ ಹೀಗೆ 30ಕ್ಕೂ ಹೆಚ್ಚು ದೇಶಗಳಿಗೆ ಪ್ರವಾಸ ಕೈಗೊಂಡಿರುವುದಲ್ಲದೆ ಪ್ರವಾಸದ ಅನುಭವಗಳನ್ನು ‘ಅಮೆರಿಕಾದಲ್ಲಿ ಹಳೆಕೋಟೆ, ನಾ ಕಂಡ ದ್ವೀಪಗಳು, ಹಿಮದ ಗಿರಿಯಲ್ಲಿ, ಪರ್ವತಗಳ ಸಾಲಿನಲ್ಲಿ, ಮರಳುಗಾಡಿನ ನಂದನವನ ಇಸ್ರೇಲ್, ವಿಯೆಟ್ನಾಮ್ ಕಾಫಿ, ಪ್ರಗತಿಯ ಶಿಖರದಲ್ಲಿ ಚೀನಾದಂತಹ ಪ್ರವಾಸ ಸಾಹಿತ್ಯ ಕೃತಿಗಳಲ್ಲಿ ದಾಖಲಿಸಿದ್ದಾರೆ. ಇತ್ತೀಚೆಗೆ ಅವರು ಪ್ರಕಟಿಸಿರುವ “ಅಮೃತ ಭಾರತ” ಕೃತಿಯು ಭಾರತ ಖಂಡದ ಪ್ರಾಚೀನತೆಯಿಂದ ಮೊದಲ್ಗೊಂಡು ಪ್ರಸ್ತುತ ದಿನಮಾನಗಳವರೆಗಿನ ಸಂಕ್ಷಿಪ್ತ ವಿವರಣೆಯನ್ನು ಒಳಗೊಂಡಿದೆ.

    ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸುದೀರ್ಘ ಸೇವೆ
    ಹಳೆಕೋಟೆ ರಮೇಶರವರು ಕನ್ನಡ ಸಾಹಿತ್ಯ ಪರಿಷತ್ತಿನ ಮೂಡಿಗೆರೆ ತಾಲ್ಲೂಕು ಅಧ್ಯಕ್ಷರಾಗಿ ಸತತ 24 ವರ್ಷ ಸೇವೆ ಸಲ್ಲಿಸಿದವರು. ಸಾಹಿತ್ಯ ಸಂಘಟನೆಯ ಬಗ್ಗೆ ಜನ ನಿರಾಸಕ್ತಿ ತೋರುತ್ತಿದ್ದ ಸಂದರ್ಭದಲ್ಲಿ ರಮೇಶ್ ಅವರು ಸುದೀರ್ಘ ಅವಧಿಗೆ ಪರಿಷತ್ತಿನ ಚುಕ್ಕಾಣಿ ಹಿಡಿದು ತಾಲ್ಲೂಕು ಕೇಂದ್ರವಲ್ಲದೆ ಹೋಬಳಿ, ಗ್ರಾಮಮಟ್ಟದಲ್ಲೂ ಸಾಹಿತ್ಯ ಸಂಬಂಧಿ ಚಟುವಟಿಕೆಗಳನ್ನು ಸಂಘಟಿಸಿ ಸಾಹಿತ್ಯದ ಕಂಪನ್ನು ಮನೆ-ಮನೆಗಳಿಗೆ ಹರಡಿದ ಕೀರ್ತಿ ಇವರದು. ಸಾಹಿತ್ಯ ಗೋಷ್ಠಿಗಳು, ಲೇಖಕರೊಡನೆ ಸಂವಾದ, ಮನೆಯಂಗಳದಲ್ಲಿ ಸಾಹಿತ್ಯ ಸಂಜೆ, ಸುಗಮ ಸಂಗೀತಗಳಲ್ಲದೆ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಕನ್ನಡ ಗೀತಗಾಯನ ಸ್ಪರ್ಧೆ, ಕವಿಗಳ ಜನ್ಮದಿನಾಚರಣೆ, ಚರ್ಚಾಸ್ಪರ್ಧೆಗಳು, ವಿಚಾರಸಂಕಿರಣಗಳನ್ನು ಆಯೋಜಿಸಿ ಭಾಷಾಭಿಮಾನದ ಜಾಗೃತಿಗೆ ಕಾರಣರಾಗಿದ್ದಾರೆ.

    ನಾಡಿನ ಖ್ಯಾತ ಸಾಹಿತಿಗಳಾದ ಡಾ. ಕೆ. ಶಿವರಾಮ ಕಾರಂತ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಡಾ. ಜಿ.ಎಸ್. ಶಿವರುದ್ರಪ್ಪ, ಡಾ. ಚೆನ್ನವೀರಕಣವಿ, ಗೊ. ಚೆನ್ನಬಸಪ್ಪ, ಚಂದ್ರಶೇಖರ ಪಾಟೀಲ, ಹಂಪನಾ, ಶ್ರೀಮತಿ ಕಮಲಾ ಹಂಪನಾ, ಸಾ.ಶಿ. ಮರುಳಯ್ಯ, ಬರಗೂರು ರಾಮಚಂದ್ರಪ್ಪ, ದೇ ಜವರೇಗೌಡರು, ನಿಟ್ಟೂರು ಶ್ರೀನಿವಾಸರಾಯರು, ಪು.ತಿ.ನ, ಎಸ್. ಎಲ್. ಭೈರಪ್ಪ, ಡಾ. ಎಚ್. ಎಲ್. ನಾಗೇಗೌಡ್ರು, ಹಾ.ಮಾ. ನಾಯಕ, ಸುಮತೀಂದ್ರ ನಾಡಿಗ, ನಾ. ಡಿಸೋಜ, ಎ.ಎನ್. ಮೂರ್ತಿರಾವ್, ದೊಡ್ಡರಂಗೇ ಗೌಡ, ಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಚಿತ್ರನಟರಾದ ರಾಮಕೃಷ್ಣ, ಚಾರುಹಾಸನ್, ರಾಜ್ಯ ಪರಿಷತ್ತಿನ ಅಧ್ಯಕ್ಷರುಗಳಾಗಿದ್ದ ಹರಿಕೃಷ್ಣ ಪುನರೂರು, ನಲ್ಲೂರು ಪ್ರಸಾದ್ ಹೀಗೆ ನೂರಾರು ಮಹನೀಯರುಗಳನ್ನು ನಮ್ಮ ಮೂಡಿಗೆರೆಗೆ ಆಹ್ವಾನಿಸಿ ಸಾಹಿತ್ಯ ಕಾರ್ಯಕ್ರಮಗಳ ಮೂಲಕ ಅವರನ್ನು ಗೌರವಿಸಿದ ಕೀರ್ತಿ ಇವರದು. ಆ ಕಾಲದಲ್ಲಿ ಸರ್ಕಾರದಿಂದ ಪರಿಷತ್ತಿಗೆ ಯಾವುದೇ ಆರ್ಥಿಕ ನೆರವಿಲ್ಲದಿದ್ದು ಇವರೇ ಸ್ವಂತಃ ಹಣದಿಂದ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದುದು ವಿಶೇಷವಾಗಿತ್ತು. ಮೂಡಿಗೆರೆ ತಕ್ಷಶಿಲಾ ಸಾಂಸ್ಕೃತಿಕ ಸಂಘದ ಕೋಶಾಧ್ಯಕ್ಷರಾಗಿ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.

    ಸದಭಿರುಚಿ ಮತ್ತು ಸಮಯಪಾಲನೆ
    ಹಳೇಕೋಟೆ ರಮೇಶ್ ಅವರು ವಿಶಿಷ್ಟವಾಗಿ ತೋರುವುದು ಅವರ ಸದಭಿರುಚಿ ಹವ್ಯಾಸಗಳ ಮೂಲಕ. ರಾಷ್ಟ್ರೀಯ ಹಬ್ಬಗಳಂದು ತಮ್ಮೂರಿನ ಶಾಲೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ಸಿಹಿ ಹಂಚುವುದು. ತಮ್ಮ ಮನೆಯ ಅಂಗಳದಲ್ಲಿ ತೋಟದ ಕಾರ್ಮಿಕರನ್ನು ಸೇರಿಸಿ ಧ್ವಜಾರೋಹಣ ಮಾಡುವುದು, ದುರಾಭ್ಯಾಸಗಳ ಕೆಡುಕಿನ ಬಗ್ಗೆ ತಿಳಿಹೇಳುವುದು. ತಮ್ಮೂರಿನ ಶಾಲೆಯ ಪ್ರತಿಭಾವಂತ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸುವುದು, ತಮ್ಮ ಮನೆಯಂಗಳದಿ ಸಾಹಿತ್ಯ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವುದು ಹೀಗೆ ಸದಾ ಸದಭಿರುಚಿಯ ಕಾರ್ಯಗಳಲ್ಲಿ ನಿರತರಾಗಿದ್ದಾರೆ.

    ಅವರು ಸಮಯಕ್ಕೆ ಅತಿಹೆಚ್ಚಿನ ಮಹತ್ವವನ್ನು ನೀಡುತ್ತಾರೆ. ಅವರು ಆಯೋಜಿಸುವ ಕಾರ್ಯಕ್ರಮಗಳಿರಲಿ, ಅಥವಾ ಅವರು ಭಾಗವಹಿಸುವ ಕಾರ್ಯಕ್ರಮಗಳಿರಲಿ ಎಲ್ಲಾ ಕಡೆ ಸಮಯಕ್ಕೆ ಅತಿಹೆಚ್ಚಿನ ಮಹತ್ವವನ್ನು ನೀಡುತ್ತಾರೆ. ಬೇರೆಯವರಿಗೂ ಸಮಯ ಪರಿಪಾಲನೆಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

    ನಾಡು-ನುಡಿ-ರೈತರ ಪರವಾಗಿ ಧ್ವನಿ
    ನಾಡು-ನುಡಿಯ ರಕ್ಷಣೆಗೆ ಸದಾ ಬದ್ಧರಾಗಿರುವ ಇವರು ಕನ್ನಡದ, ಕನ್ನಡಿಗರ ಹಿತಕ್ಕೆ ಧಕ್ಕೆ ಬಂದಾಗಲೆಲ್ಲಾ ಹೋರಾಟಕ್ಕೆ ಮುಂದಾದವರು. ಗೋಕಾಕ್ ಚಳುವಳಿ, ಕಾವೇರಿ ನದಿ ನೀರಿನ ಸಂಘರ್ಷ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ, ಕಾಫಿ ಮುಕ್ತ ಮಾರುಕಟ್ಟೆ ವ್ಯವಸ್ಥೆಯ ಬಗೆಗೆ ನಡೆದ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗಹಿಸಿ ದ್ದಾರೆ. ಸರೋಜಿನ ಮಹಿಷಿ ವರದಿ, ನಂಜುಂಡಸ್ವಾಮಿ ವರದಿ, ಮಹಾಜನ್ ವರದಿಗಳ ಅನುಷ್ಠಾನಕ್ಕಾಗಿ ನಡೆದ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ.

    ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ
    ಕನ್ನಡ ಸಾಹಿತ್ಯ ಪರಿಷತ್ತು ಅಲ್ಲದೆ ಕನ್ನಡ ಶಕ್ತಿಕೇಂದ್ರ, ಗಮಕ ಕಲಾ ಪರಿಷತ್ತು, ಕೃಷಿಕ ಸಮಾಜ, ಜೆಸಿಐ, ಲಯನ್ಸ್ ಸಂಸ್ಥೆ, ನೇಚರ್ ಕ್ಲಬ್, ತಕ್ಷಶಿಲಾ ಸಂಸ್ಥೆ, ಸ್ಕೌಟ್ ಅಂಡ್ ಗೈಡ್ಸ್ ಸಮಿತಿ ಹೀಗೆ ನಾನಾ ಸಂಘ-ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು, ಪದಾಧಿಕಾರಿಗಳಾಗಿ ವಿವಿಧ ಜವಾಬ್ದಾರಿ ಗಳನ್ನು ಸಮರ್ಥವಾಗಿ ನಿಭಾಯಿಸಿ ತಮ್ಮದೇ ಛಾಪು ಮೂಡಿಸಿದ್ದಾರೆ.

    ಮೂಡಿಗೆರೆ ಜೆ.ಸಿ.ಐ ನ ಅಧ್ಯಕ್ಷರಾಗಿ, ಮೂಡಿಗೆರೆ ಲಯನ್ಸ್ ಸಂಸ್ಥೆ ಅಧ್ಯಕ್ಷರಾಗಿ ಉತ್ತಮ ಕಾರ್ಯಕ್ರಮಗಳ ಮೂಲಕ ಹೆಸರು ಮಾಡಿದ್ದಾರೆ. 1982ರಲ್ಲಿ ಫ್ಲಾರಿಡಾದಲ್ಲಿ ಆಯೋಜಿತವಾಗಿದ್ದ ಜೆಸಿಐ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ, 1991ರಲ್ಲಿ ಹಾಂಕಾಂಗ್ ನಲ್ಲಿ ನಡೆದ ಅಂತರಾಷ್ಟ್ರೀಯ ಲಯನ್ಸ್ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿರುತ್ತಾರೆ.

    ಲಯನ್ಸ್ ಸಂಸ್ಥೆಯ ಸಹಯೋಗದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಉಚಿತ ನೇತ್ರಾ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸುವುದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ತಮ್ಮ ಅರವತ್ತನೇ ವರ್ಷದ ಸವಿನೆನಪಿಗಾಗಿ ತಮ್ಮ ಮತ್ತು ಪತ್ನಿ ಜೈಶ್ರೀ ಅವರ ನೇತ್ರಗಳನ್ನು ದಾನ ಮಾಡುವುದಾಗಿ ಘೋಷಿಸಿದ್ದಾರೆ.

    ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ
    ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ನೂರು ವರ್ಷಗಳನ್ನು ಆಚರಿಸಿಕೊಂಡ ಸವಿನೆನಪಿನಲ್ಲಿ 2015ರಲ್ಲಿ ಮೂಡಿಗೆರೆಯಲ್ಲಿ ಅದ್ದೂರಿಯಾಗಿ ನಡೆದ 5ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಳೇಕೋಟೆ ರಮೇಶ್ ಅವರು ಆಯ್ಕೆಯಾಗಿ ತಾಲೂಕಿನ ಸಾಹಿತ್ಯ ಪ್ರೇಮಿಗಳ ಗೌರವ, ಪ್ರೀತಿಗೆ ಪಾತ್ರರಾಗಿದ್ದರು.

    ರಮೇಶ್ ಅವರು ಇಪ್ಪತ್ತೈದಕ್ಕೂ ಹೆಚ್ಚು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲದೆ ದೆಹಲಿಯಲ್ಲಿ ನಡೆದ 50ನೇ ಕನ್ನಡ ಸಾಹಿತ್ಯ ಸಮ್ಮೇಳನ, ಮೈಸೂರಿನಲ್ಲಿ ನಡೆದ ಪ್ರಥಮ ವಿಶ್ವ ಕನ್ನಡ ಸಮ್ಮೇಳನ, ಬೆಳಗಾವಿಯಲ್ಲಿ ನಡೆದ 2ನೇ ವಿಶ್ವಕನ್ನಡ ಸಮ್ಮೇಳನದಲ್ಲೂ ಭಾಗಹಿಸಿದ ಗರಿಮೆ ಇವರದು. ಅಮೆರಿಕಾದಲ್ಲಿ ನಡೆದ 8ನೇ ‘ಅಕ್ಕ’ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.

    ತಾವು ಬರೆದ ಕೃತಿಗಳನ್ನು ಬಿಡುಗಡೆ ಮಾಡುವ ಸಂದರ್ಭ ನಾಡಿನ ಹಿರಿಯ ಸಾಹಿತಿಗಳನ್ನು ಕರೆಸಿ ತಮ್ಮ ಬಂಧುಗಳು, ಸ್ನೇಹಿತರು ಮತ್ತು ಸಾಹಿತ್ಯ ಅಭಿಮಾನಿಗಳನ್ನು ಒಟ್ಟುಸೇರಿಸಿ ಉತ್ತಮ ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದಾರೆ.

    ಇದೀಗ ಮೂಡಿಗೆರೆಯಲ್ಲ ನಡೆಯುತ್ತಿರುವ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸುತ್ತಿದ್ದಾರೆ. ಅವರ ಸಾಹಿತ್ಯ ಸಾಂಗತ್ಯದ ಕರ್ಮಭೂಮಿ ಮೂಡಿಗೆರೆಯಲ್ಲಿಯೇ ನಡೆಯುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸುತ್ತಿರುವುದು ಅವರಿಗೆ ದೊರೆತ ಅತ್ಯುನ್ನತವಾದ ಗೌರವವಾಗಿದೆ.

    ಅರಸಿ ಬಂದಿರುವ ಪ್ರಶಸ್ತಿಗಳು
    ಹಳೇಕೋಟೆ ರಮೇಶ್ ಅವರ ಈ ಎಲ್ಲಾ ಕಾರ್ಯಗಳಿಗಾಗಿ ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ಸರ್ಕಾರದ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ತಾಲ್ಲೂಕು, ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ಗೌರವಕ್ಕೆ ಭಾಜನರಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ 77ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿತರಾಗಿದ್ದಾರೆ.

    ಜಿಲ್ಲಾ ಸಾಹಿತ್ಯ ಸಿರಿ ಪ್ರಶಸ್ತಿ ಅಲ್ಲದೆ ಉದ್ಭವಶ್ರೀ ಪ್ರಶಸ್ತಿ, ಸರ್. ಎಂ. ವಿಶ್ವೇಶ್ವರಯ್ಯ ರಾಜ್ಯ ಪ್ರಶಸ್ತಿ, ಬುದ್ಧ ಅಂತರರಾಷ್ಟ್ರೀಯ ಪ್ರಶಸ್ತಿ, ಉತ್ಕೃಷ್ಟ ಭತ್ತದ ಬೆಳೆಗಾಗಿ ಕೃಷಿ ಇಲಾಖೆ ಪ್ರಶಸ್ತಿ, ಕಾಫಿ ಮಂಡಳಿ ಪುರಸ್ಕಾರ, ಏಲಕ್ಕಿ ಬೆಳೆಗಾಗಿ ಸಂಬಾರ ಮಂಡಳಿಯ ಪುರಸ್ಕಾರ, ರೇಷ್ಮೆ ಇಲಾಖೆಯ ಪುರಸ್ಕಾರ ಹೀಗೆ ಇವರ ಸಾಧನೆಯನ್ನರಸಿ ಬಂದ ಪ್ರಶಸ್ತಿ ಪರಸ್ಕಾರಗಳು ಹಲವು.

    ಈ ಎಲ್ಲಾ ಸಾಧನೆಗಳ ಹಿಂದೆ ಇವರ ಕುಟುಂಬ ವರ್ಗದವರ ಸಹಕಾರ, ಬೆಂಬಲವೂ ಅಪಾರ. ಪತ್ನಿ ಶ್ರೀಮತಿ ಜೈಶ್ರೀ ಅವರು ರಮೇಶ್ ಅವರ ಎಲ್ಲಾ ಕಾರ್ಯಗಳಲ್ಲಿ ಸದಾ ಸಹಕಾರ ನೀಡುತ್ತಾ ಬಂದಿದ್ದಾರೆ. ಪುತ್ರರಾದ ಡಾ. ಗಾಂಢೀವ ವೈದ್ಯಕೀಯ ವೃತ್ತಿಯಲ್ಲಿದ್ದಾರೆ. ಯುಗಂಧರ ಆರ್.ಬಿ.ಐ. ಅಧಿಕಾರಿಯಾಗಿದ್ದಾರೆ. ರಮೇಶ್ ಅವರ ಅಣ್ಣಂದಿರು ಡಾ. ಹಳೇಕೋಟೆ ಕುಮಾರ, ಡಾ. ಹಳೇಕೋಟೆ ವಿಶ್ವಾಮಿತ್ರ. ಡಾ. ವಿಶ್ವಾಮಿತ್ರ ಅವರು ಅಮೇರಿಕಾದ ಅಕ್ಕ ಸಂಘಟನೆಯ ಅಧ್ಯಕ್ಷರಾಗಿ ಉತ್ತಮ ಹೆಸರು ಮಾಡಿದ್ದಾರೆ.

    ಓರ್ವ ಕೃಷಿಕರಾಗಿ ತಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ಸಾಹಿತ್ಯ ಮತ್ತು ಸಮಾಜದ ನಡುವೆ ಸಕ್ರಿಯರಾಗಿ ತೊಡಗಿಸಿಕೊಂಡಿರುವ ಹಳೇಕೋಟೆ ರಮೇಶ್ ಸಾಧನೆಗಳು ಇನ್ನೂ ಎತ್ತರಕ್ಕೇರಲಿ ಎಂದು ಅವರು ಚಿಕ್ಕಮಗಳೂರು ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸುತ್ತಿರುವ ಸಂದರ್ಭದಲ್ಲಿ ಪತ್ರಿಕಾ ಬಳಗ ಹಾಗೂ ಓದುಗರ ಪರವಾಗಿ ಹಾರೈಸುತ್ತೇವೆ.

About Author

Leave a Reply

Your email address will not be published. Required fields are marked *