day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಜಿ.ಎಸ್.ಎಸ್. ಪ್ರಶಸ್ತಿಯ ಸಾರ್ಥಕತೆ – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಜಿ.ಎಸ್.ಎಸ್. ಪ್ರಶಸ್ತಿಯ ಸಾರ್ಥಕತೆ

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಜಿ.ಎಸ್.ಎಸ್. ಪ್ರಶಸ್ತಿಯ ಸಾರ್ಥಕತೆ
ಡಾ. ಬಿ.ಎಂ. ಪುಟ್ಟಯ್ಯ,
ಹಿರಿಯ ಪ್ರಾಧ್ಯಾಪಕರು, ಕನ್ನಡ ವಿಶ್ವವಿದ್ಯಾಲಯ, ಹಂಪಿ,
ಮೊ: ೯೪೪೮೯೮೦೧೦೫

ಈ ಸಲದ ಜಿ.ಎಸ್. ಶಿವರುದ್ರಪ್ಪ ಪ್ರಶಸ್ತಿ ನಮ್ಮೆಲ್ಲರ ನೆಚ್ಚಿನ ಪ್ರೊ. ಶ್ರೀಕಂಠ ಕೂಡಿಗೆಯವರಿಗೆ ಬಂದಿದೆ. ಕೂಡಿಗೆ ಸರ್ಗೆ ಗೌರವಪೂರ್ವಕ ಅಭಿನಂದನೆಗಳು.

ಜಿ.ಎಸ್.ಎಸ್. ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರವನ್ನು ಕಟ್ಟಿಬೆಳೆಸಿದ್ದು ಕನ್ನಡ ಸಾಹಿತ್ಯ ಸಂಸ್ಕೃತಿ ಇತಿಹಾಸದಲ್ಲಿ ದೊಡ್ಡ ಮೈಲಿಗಲ್ಲು. `ಸಾಧನೆ’ ಪತ್ರಿಕೆ, ವಿಚಾರ ಸಂಕಿರಣಗಳು, ವಿಚಾರ ಸಂಕಿರಣದ ಕೃತಿಗಳು, ಸಾಮಾನ್ಯನಿಗೆ ಕನ್ನಡ ಸಾಹಿತ್ಯ ಚರಿತ್ರೆಯ ಸಂಪುಟಗಳು ಇಂತಹವು ಮುಖ್ಯ ಅಕಾಡೆಮಿಕ್ ಕೊಡುಗೆಗಳು. ಕನ್ನಡ ಅಧ್ಯಯನ ಕೇಂದ್ರದ ಅಧ್ಯಾಪಕರ ಬಳಗದ ವಿದ್ವತ್ತು ಇಡೀ ನಾಡಿನ ಪ್ರಜ್ಞಾವಂತರನ್ನು ಬೆಳೆಸಿದೆ.
ಜಿ.ಎಸ್.ಎಸ್. ಅವರು ಆಧುನಿಕಪೂರ್ವ ಮತ್ತು ಆಧುನಿಕ ಸಾಹಿತ್ಯ, ಸಾಹಿತ್ಯ ವಿಮರ್ಶೆ, ಕಾವ್ಯಮೀಮಾಂಸೆಗಳ ಅಧ್ಯಯನಕ್ಕೆ ವೈಚಾರಿಕ ಸ್ಪರ್ಶ ನೀಡಿದವರು. ಕುವೆಂಪು ಅವರ ಶಿಷ್ಯರಾಗಿದ್ದ ಜಿ.ಎಸ್.ಎಸ್. ಅವರು ಕುವೆಂಪು ದರ್ಶನಕ್ಕಿಂತ ಭಿನ್ನವಾದ ವೈಚಾರಿಕತೆಯನ್ನು ರೂಪಿಸಿಕೊಂಡವರು.

೧೯೭೭ನೇ ಇಸವಿಯಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ, ಕನ್ನಡ ಅಧ್ಯಯನ ಕೇಂದ್ರದಲ್ಲಿ, ಕುವೆಂಪು ಸಾಹಿತ್ಯ ಕುರಿತ ವಿಚಾರ ಸಂಕಿರಣಕ್ಕೆ `ಕುವೆಂಪು ಕೃತಿಗಳಲ್ಲಿ ದಲಿತ ಪಾತ್ರ ಚಿತ್ರಣ’ ಎಂಬ ವಿಷಯ ಕುರಿತು ಪ್ರಬಂಧ ಮಂಡಿಸಲು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ಥಾಪಕರಾದ ಪ್ರೊ. ಬಿ. ಕೃಷ್ಣಪ್ಪ ಅವರನ್ನು ಜಿ.ಎಸ್.ಎಸ್. ಅವರು ಕರೆದಿದ್ದರು. ಆ ಪ್ರಬಂಧದಲ್ಲಿ ಪ್ರೊ. ಬಿ. ಕೃಷ್ಣಪ್ಪನವರು ಕುವೆಂಪು ಅವರ ಸಾಹಿತ್ಯ ಸೃಷ್ಟಿಯ ಬುಡವನ್ನು ಹಿಡಿದು ಅದರ ಮೂಲ ವೈರುಧ್ಯಗಳನ್ನು ಎತ್ತಿತೋರಿಸಿದರು. ಇದು ಆ ಇಡೀ ಸೆಮಿನಾರನ್ನು ಬೆಚ್ಚಿಬೀಳಿಸಿತು. ಇದನ್ನು ಆಲಿಸಿಕೊಂಡವರ ಪ್ರಕಾರ ಇಡೀ ಸಭೆ ಎರಡು ನಿಮಿಷ ಮೌನವಾಯಿತು. ಕುವೆಂಪು ಅವರನ್ನು ಮೇಲುಸ್ತರದಲ್ಲಿ ಓದುವ ಅಭಿಮಾನಿಗಳಿಗೆ ಇದು ನುಂಗಲಾರದ ತುತ್ತಾಯಿತು; ಇವತ್ತಿಗೂ ಕೂಡ. ಕೃಷ್ಣಪ್ಪನವರ ಆ ವಿಮರ್ಶಾ ಲೇಖನ ಸಾಹಿತ್ಯದ ಸಾಮಾಜಿಕ ನೆಲೆಯ ಪ್ರಾಯೋಗಿಕ ಅಧ್ಯಯನಕ್ಕೆ ಮತ್ತು ಮಹಿಳಾದೃಷ್ಟಿಯ ಅಧ್ಯಯನಕ್ಕೆ
ಭದ್ರವಾದ ಬುನಾದಿ ಹಾಕಿತು. ಸಾಹಿತ್ಯ ರಚನೆಯಲ್ಲಿ ಅಧಿಕೃತತೆಯ ಪ್ರಶ್ನೆಯನ್ನು ಇದು ವಿದ್ಯುಕ್ತವಾಗಿ ಆರಂಭಿಸಿತು. ಒಬ್ಬ ಹೋರಾಟಗಾರನನ್ನು ಸಾಹಿತ್ಯದ ಸೆಮಿನಾರಿಗೆ ಕರೆದ ಜಿ.ಎಸ್.ಎಸ್. ಸಾಹಿತ್ಯ ಅಧ್ಯಯನದ ದಿಕ್ಕನ್ನೇ ಬದಲಿಸಲು ಮುಖ್ಯ ಕಾರಣರಾದರು.

ಜಿ.ಎಸ್.ಎಸ್. ತೀರಿಕೊಂಡಾಗ ಅವರನ್ನು ಕಲಾ ಗ್ರಾಮದಲ್ಲಿ ಯಾವುದೇ ಪೂಜೆ ಇತ್ಯಾದಿಗಳಿಲ್ಲದೆ ಸಂಸ್ಕಾರ ಮಾಡಲಾಯಿತು. ಆಗ ಅಲ್ಲಿ ಒಂದು ಕಡೆ ಜಿ.ಎಸ್.ಎಸ್. ಅವರ ಭಾವಗೀತೆಗಳನ್ನು, ಇನ್ನೊಂದು ಕಡೆ ತತ್ವಪದಗಳನ್ನು ಹಾಡುತ್ತಿದ್ದರು. ಮತ್ತೊಂದು ಕಡೆ
`ಜಾತಿ ಬಿಡಿ! ಮತ ಬಿಡಿ! – ಮಾನವತೆಗೆ ಜೀವ ಕೊಡಿ!’ ಎಂದು ಘೋಷಣೆ ಕೂಗುತ್ತಿದ್ದರು. ಶವ ಸಂಸ್ಕಾರದಲ್ಲಿ ಇಂತಹ ಘೋಷಣೆ ಸಾಧ್ಯವೆ? ಟಿ.ವಿ.ಯ ಲೈವ್‌ನಲ್ಲಿ ನೋಡುತ್ತಿದ್ದ ನನ್ನ ನರನಾಡಿಗಳನ್ನು ಈ ಘೋಷಣೆ ರೋಮಾಂಚನಗೊಳಿಸಿತು. ನಾನು ಭಾಗವಹಿಸಿದ್ದ ಎಷ್ಟೋ ಮೆರವಣಿಗೆಗಳು ಸಡನ್ನಾಗಿ ಕಣ್ಣಮುಂದೆ ಬಂದವು! ೮೦ರ ದಶಕದ ಆರಂಭದಲ್ಲಿ ಪ್ರೊ. ಬಿ. ಕೃಷ್ಣಪ್ಪನವರು ಡಿ.ಎಸ್.ಎಸ್. ಹೋರಾಟಕ್ಕೆ ಈ ಘೋಷಣೆಯನ್ನು ಬರೆದಿದ್ದರು. ಇದು ಆಗಿನ ಕರಪತ್ರಗಳಲ್ಲಿ, ಗೋಡೆ ಬರಹಗಳಲ್ಲಿ, ಪ್ರತಿಭಟನಾ ಮೆರವಣಿಗೆಗಳ ಘೋಷಣೆಗಳಲ್ಲಿ ಶಕ್ತಿಶಾಲಿಯಾದ ವೈಚಾರಿಕ ಸ್ಪೂರ್ತಿ ನೀಡಿತ್ತು. ಬುದ್ದ, ಬಸವ, ಡಾ. ಬಾಬಾಸಾಹೇಬರ ಆಶಯವೂ ಇದೇತಾನೆ? ಅಬ್ಬಾ! ಅಲ್ಲಿ ಕೂಗಿದ ಈ ಘೋಷಣೆಯನ್ನು ಕೇಳಿ ಜಿ.ಎಸ್.ಎಸ್. ಬದುಕು ಸಾರ್ಥಕ ಎನಿಸಿತು.

ಶ್ರೀಕಂಠ ಕೂಡಿಗೆಯವರು ೧೯೭೩ನೇ ಇಸವಿಯಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿ, ೧೯೭೪ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವು
ಭದ್ರಾವತಿ ತಾಲೂಕಿನ ಬಿ.ಆರ್. ಪ್ರಾಜೆಕ್ಟ್ನಲ್ಲಿ ಸುರುಮಾಡಿದ್ದ ಸ್ನಾತಕೋತ್ತರ ಕೇಂದ್ರದ ಕನ್ನಡ ಭಾರತಿಯಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಮುಂದುವರಿಸಿದರು. ೨೦೦೭, ಡಿಸೆಂಬರ್‌ನಲ್ಲಿ ನಿವೃತ್ತಿಯಾದರು. ೩೪ ವರ್ಷ ಅಧ್ಯಾಪನ ವೃತ್ತಿಯಲ್ಲಿ ದುಡಿದಿದ್ದಾರೆ. ಜನಪದ ಸಾಹಿತ್ಯ, ಮಹಾಕಾವ್ಯ, ಸಾಹಿತ್ಯ ವಿಮರ್ಶೆಯ ಪ್ರಕಾರಗಳಲ್ಲಿ ಹಲವು ಕೃತಿಗಳನ್ನು ರೂಪಿಸಿದ್ದಾರೆ. ಇವರ ಮುದ್ದಾದ ಅಕ್ಷರಗಳು ನಾಡಿನಲ್ಲಿ ಹೆಸರುವಾಸಿ.

ಅಧ್ಯಾಪಕರು ಸಾಮಾನ್ಯವಾಗಿ, ೧. ತರಗತಿಗಳ ಅಧ್ಯಾಪನ, ೨. ಸಾಹಿತ್ಯ ನಿರ್ಮಾಣ, ೩. ವಿವಿಧ ಶೈಕ್ಷಣಿಕ ಮಂಡಳಿಗಳ ಕೆಲಸ, ೪. ಆಡಳಿತದ ಕೆಲಸ, ಈ ನಾಲ್ಕು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾರೆ. ಶ್ರೀಕಂಠ ಕೂಡಿಗೆಯವರು ಈ ನಾಲ್ಕೂ ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಇವಲ್ಲದೆ ಮತ್ತೊಂದು ಕೆಲಸವಿದೆ; ಅದು ಓರಿಯೆಂಟ್ ಮಾಡುವುದು; ವಿದ್ಯಾರ್ಥಿಗಳಲ್ಲಿ ಸಾಮಾಜಿಕ ದೃಷ್ಟಿಕೋನವನ್ನು ಮತ್ತು ಸಾಮಾಜಿಕ ಕಳಕಳಿಯನ್ನು ಹುಟ್ಟಿಸುವುದು, ಮೂಡಿಸುವುದು. ಪಿ.ಯು.ಸಿ.ವರೆಗಿನ ಅಧ್ಯಾಪಕರು ವಿದ್ಯಾರ್ಥಿಗಳನ್ನು ಎಜುಕೇಟ್ ಮಾಡುತ್ತಾರೆ. ಮುಂದಿನ ತರಗತಿಗಳ ಅಧ್ಯಾಪಕರು ವಿದ್ಯಾರ್ಥಿಗಳನ್ನು ಓರಿಯೆಂಟ್ ಮಾಡಬೇಕು. ಆದರೆ ಈ ಕೆಲಸ ಎಲ್ಲರಿಂದಲೂ ಸಾಧ್ಯವಿಲ್ಲ. ಶ್ರೀಕಂಠ ಕೂಡಿಗೆಯವರು ಈ ಕೆಲಸ ಮಾಡಿದ್ದಾರೆ ಎಂಬುದು ಬಹಳ ಮುಖ್ಯ.

ಇವರು ಅಧ್ಯಾಪಕರಾಗಿದ್ದ ಮೊದಲ ಹಂತದ ಕಾಲವು ಕರ್ನಾಟಕ ಮತ್ತು ಭಾರತದ ಸಾಮಾಜಿಕ ಬದುಕಿನಲ್ಲಿ ಹಲವು ಪಲ್ಲಟಗಳನ್ನು ಕಾಣುತ್ತಿದ್ದ ಕಾಲ. ಭಾರತಕ್ಕೆ ಅಧಿಕಾರ ಹಸ್ತಾಂತರವಾಗಿ ಎರಡು ಶತಮಾನ ಕಳೆದಿದ್ದರೂ ಕೂಡ ಪ್ರಭುತ್ವ ಜನಸಾಮಾನ್ಯರ ಬದುಕಿನಲ್ಲಿ ಯಾವುದೇ ಮಹತ್ವದ ಬದಲಾವಣೆಗಳನ್ನು ತರಲಿಲ್ಲ. ಇದು ಜನತೆಯ ನೆಲೆಯಲ್ಲಿ ಅಸಮಾಧಾನ, ಅಸಹನೆ ಮತ್ತು ಪ್ರತಿರೋಧಗಳನ್ನು ಹುಟ್ಟಿಸಿತು. ಪ್ರಜ್ಞಾವಂತ ಮತ್ತು ಸೂಕ್ಷ್ಮ ಅಧ್ಯಾಪಕರು, ಬುದ್ದಿಜೀವಿಗಳು ಇದರಿಂದ ಹೊರಗುಳಿಯುವ ಸಾಧ್ಯತೆ ಇರಲಿಲ್ಲ. ಆಗ ಕರ್ನಾಟಕದಲ್ಲಿ ದಲಿತ ಚಳುವಳಿ, ಕಾರ್ಮಿಕ ಚಳುವಳಿ, ರೈತ ಚಳುವಳಿ, ಹಂಗಾಮಿ ನೌಕರರ ಚಳುವಳಿಗಳು ಹುಟ್ಟಿಕೊಂಡವು. ಅನ್ಯ ಭಾಷೆಗಳಿಂದ, ಅಸಮಾನತೆ ಮತ್ತು ಮೂಢನಂಬಿಕೆಗಳನ್ನು ವಿರೋಧಿಸುವ ಸಾಹಿತ್ಯ ಕನ್ನಡಕ್ಕೆ ಬಂದಿತು. ಮುಖ್ಯವಾಗಿ, ಬಾಬಾಸಾಹೇಬ್ ಅಂಬೇಡ್ಕರ್, ಲೋಹಿಯಾ, ಪೆರಿಯಾರ್, ಕೌಂಟ್ ಕೊವೂರ್, ರಾಹುಲ ಸಾಂಸ್ಕೃತ್ಯಾಯನ ಮುಂತಾದವರ ಸಾಹಿತ್ಯ ಬಂದಿತು. ಕಾಲದ ಒತ್ತಡವೇ ಶ್ರೀಕಂಠ ಕೂಡಿಗೆಯವರು ಈ ಸಾಹಿತ್ಯವನ್ನು ಓದುವಂತೆ ಪ್ರೇರೇಪಿಸಿತು.

ಶ್ರೀಕಂಠ ಕೂಡಿಗೆಯವರು ಪ್ರತಿಭಾವಂತ ಮತ್ತು ಪರಿಣಾಮಕಾರಿ ಸಾರ್ವಜನಿಕ ಭಾಷಣಕಾರರು. ಸೊಗಸಾದ ಭಾಷೆ, ನವಿರಾದ ಹಾಸ್ಯ, ಅಸಮಾನತೆ ಮತ್ತು ಶೋಷಣಾ ವ್ಯವಸ್ಥೆಯನ್ನು ಕಟುವಾಗಿ ಹಾಗೂ ರಚನಾತ್ಮಕವಾಗಿ ಟೀಕೆ ಮಾಡುವಿಕೆ, ರಾಜಿರಹಿತವಾದ ಬದ್ದತೆ ಇವು ಇವರ ಭಾಷಣದ ಮುಖ್ಯ ಸ್ವರೂಪ. ಇಡೀ ರಾಜ್ಯದ ವಿಶ್ವವಿದ್ಯಾನಿಲಯಗಳ ಅಧ್ಯಾಪಕರಲ್ಲಿ ಈ ಪ್ರತಿಭೆ ಇದ್ದುದು ಶ್ರೀಕಂಠ ಕೂಡಿಗೆಯವರಲ್ಲಿ ಮಾತ್ರ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಇವರು ಕರ್ನಾಟಕದ ಬೀದರ್‌ನಿಂದ ಕೊಡಗಿನವರೆಗೆ, ಕೋಲಾರದಿಂದ ಬೆಳಗಾಂವರೆಗೆ, ಕಾಲೇಜುಗಳ, ಟಿ.ಸಿ.ಎಚ್.ಗಳ, ಬಿ.ಎಡ್. ಕಾಲೇಜುಗಳ ಹಲವು ಕಾರ್ಯಕ್ರಮಗಳಲ್ಲಿ ಮತ್ತು ವಿಶ್ವವಿದ್ಯಾನಿಲಯಗಳು, ಇತರೆ ಸಂಸ್ಥೆಗಳಲ್ಲಿ, ಹಲವು ಹೋರಾಟದ ವೇದಿಕೆಗಳಲ್ಲಿ, ಸರಳ ಮದುವೆಯ ವೇದಿಕೆಗಳಲ್ಲಿ ಉಪನ್ಯಾಸ ನಿಡಿದ್ದಾರೆ. ಸಾಮಾಜಿಕ ಆರ್ಥಿಕ ನೆಲೆಯ ಅಸಮಾನತೆಯ ಪರಿಣಾಮಗಳು, ಅನಕ್ಷರತೆ ಮತ್ತು ಮೂಢನಂಬಿಕೆಗಳ ಪರಿಣಾಮಗಳು, ಆಳುವ ರಾಜಕಾರಣಿಗಳ ಶೋಷಕ ಪ್ರವೃತ್ತಿಗಳನ್ನು ತಮ್ಮ ಉಪನ್ಯಾಸಗಳಲ್ಲಿ ಹಸಿಹಸಿಯಾಗಿ ಬಿಡಿಸಿಟ್ಟಿದ್ದಾರೆ. ಬುದ್ದ, ಬಸವ, ಬಾಬಾಸಾಹೇಬ್ ಅಂಬೇಡ್ಕರ್, ಲೋಹಿಯಾ, ಕುವೆಂಪು ಮುಂತಾದವರ ವೈಚಾರಿಕ ತಿಳುವಳಿಕೆಯನ್ನು ಹಂಚಿದ್ದಾರೆ. ಇವರ ಉಪನ್ಯಾಸಗಳನ್ನು ವಿಡಿಯೋ ರೆಕಾರ್ಡ್ ಮಾಡಿದ್ದಿದ್ದರೆ ಇದೊಂದು ಅದ್ಭುತವಾದ ಬೌದ್ಧಿಕ ಸಂಪನ್ಮೂಲವಾಗುತ್ತಿತ್ತು. ಶ್ರೀಕಂಠ ಕೂಡಿಗೆಯವರ ಬೌದ್ದಿಕ ಸಂಪನ್ಮೂಲ ಇವರ ಆಕರ್ಷಕವಾದ ಭಾಷಣಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಇದು ಇವರ ಪ್ರಕಟಿತ ಸಾಹಿತ್ಯವನ್ನು ಮೀರಿದ ಬೌದ್ಧಿಕ ಪರಿಣಾಮವನ್ನು ಬೀರಿದೆ. ನಾಡಿನ ಎಷ್ಟೋ ಟಿ.ಸಿ.ಎಚ್. ಮತ್ತು ಬಿ.ಎಡ್. ವಿದ್ಯಾರ್ಥಿಗಳು ಇವತ್ತೂ ಕೂಡ ಶ್ರೀಕಂಠ ಕೂಡಿಗೆಯವರ ಭಾಷಣದ ತುಣುಕುಗಳನ್ನು ನೆನಪಿಸುತ್ತಾರೆ.

ಶ್ರೀಕಂಠ ಕೂಡಿಗೆಯವರ ತರಗತಿಯೊಳಗಿನ ಪಾಠಗಳ ವಿಶಿಷ್ಟತೆ ಅನನ್ಯವಾದುದು. ಕೇವಲ ಪರೀಕ್ಷೆಗಳಿಗೆ ಸಿದ್ದತೆ ಮಾಡಿಸುವುದು ಇದರ ಗುರಿಯಾಗಿರಲಿಲ್ಲ. ಪ್ರತಿಯೊಂದು ತರಗತಿಯಲ್ಲೂ ಕನಿಷ್ಠ ಹತ್ತಕ್ಕಿಂತ ಹೆಚ್ಚು ಪುಸ್ತಕಗಳ ಸಂಪೂರ್ಣ ಮಾಹಿತಿ ಕೊಡುತ್ತಿದ್ದರು. ಕೆಲವು ಪುಸ್ತಕಗಳ ಮುಖ್ಯ ಭಾಗಗಳನ್ನು ಉಲ್ಲೇಖ ಮಾಡುತ್ತಿದ್ದರು. ನಮ್ಮ ಎಂ.ಎ. ತರಗತಿಯ ಬೆಳಗಿನ ಅವಧಿಯಲ್ಲಿ ಒಂದು ದಿನ `ಭರತೇಶ ವೈಭವ’ದ
‘ಉಪ್ಪರಿಗೆ ಸಂಧಿ’ ಮತ್ತು `ಸಂಭೋಗ ಸಂಧಿ’ಯ ಕೆಲವು ಸಾಲುಗಳನ್ನು ಅತ್ಯಂತ ರಸವತ್ತಾಗಿ, ಭಾವತುಂಬಿ ಹೇಳಿದರು. ಅದೇ ದಿನ ಮದ್ಯಾನ ನೋಡಿದರೆ, ನಮ್ಮ ತರಗತಿಯ ಅಷ್ಟೂ ಸಹಪಾಠಿಗಳು ಗ್ರಂಥಾಲಯಕ್ಕೆ ಮುತ್ತಿಗೆ ಹಾಕಿ, `ಭರತೇಶ ವೈವಭ’ ಕಾವ್ಯದ ಹುಡುಕಾಟದ ತೀವ್ರ ಪೈಪೋಟಿಯಲ್ಲಿ ಮುಳುಗಿದ್ದರು. ಒಬ್ಬ ಸೃಜನಶೀಲ ಅಧ್ಯಾಪಕ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಸಂವೇದನೆಯನ್ನು ಹುಟ್ಟಿಸುವ ಪರಿಣಾಮಕಾರಿ ಮತ್ತು ಶಕ್ತಿಶಾಲಿ ಕೆಲಸಕ್ಕೆ ಇದೊಂದು ಉದಾಹರಣೆ ಅಷ್ಟೆ.

ಸಾಹಿತ್ಯವನ್ನು ಕುರಿತ ಇವರ ತರಗತಿಗಳಲ್ಲಿ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ವಿಷಯಗಳು ಸಾಹಿತ್ಯವನ್ನು ಅಪ್ಪಿಕೊಂಡು ಬರುತ್ತಿದ್ದವು. ೧೯೯೦ರಿಂದ ೧೯೯೨ರಲ್ಲಿ ನಾನು ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಎಂ.ಎ. ಓದಿದವನು. ಆಗ ಇವರ ಪಾಠದಲ್ಲಿ, ಕೊಲ್ಲಿ ವಾರ್, ಬಾಬ್ರಿ ಮಸೀದಿಯ ಧ್ವಂಸ, ಐ.ಎಂ.ಎಫ್. ಸಾಲದ ಪರಿಣಾಮಗಳು, ಮಂಡಲ್ ವರದಿ ಜಾರಿಯ ವಿಷಯ ಇವೆಲ್ಲವೂ ಸಾಹಿತ್ಯದ ಚರ್ಚೆಯೊಳಗೆ ಬೆರೆತುಬರುತ್ತಿದ್ದವು. ಕೆಲವು ಸಲ ಇವರ ತರಗತಿಗಳಿಗೆ ಬೇರೆ ವಿಭಾಗದ ವಿದ್ಯಾರ್ಥಿಗಳೂ ಬರುತ್ತಿದ್ದರು.

ಹಳ್ಳಿಗಳಲ್ಲಿ ಜಮೀನ್ದಾರರು ದಲಿತರನ್ನು, ಮಹಿಳೆಯರನ್ನು ನಡೆಸಿಕೊಳ್ಳುವ ಬಗೆಗೆ ಇವರ ವರ್ಣನೆ; ಅನಕ್ಷರಸ್ಥರ ಭಾಷೆ, ಗದ್ದೆಗಳಲ್ಲಿ ಮಾಡುವ ನಾನಾ ಕೆಲಸಗಳ ವರ್ಣನೆ ಒಂದೇ ಎರಡೇ! ನೂರಾರು! ಕನ್ನಡದ ಯಾವ ಕಥೆಗಳಲ್ಲೂ, ಕಾದಂಬರಿಗಳಲ್ಲೂ ಇವು ಇಷ್ಟೊಂದು ಸೂಕ್ಷ್ಮವಾಗಿ ಬಂದಿಲ್ಲ ಎಂದು ನಾನು ಧೈರ್ಯವಾಗಿ ಹೇಳಬಲ್ಲೆ. ಬರೆದರೆ `ಕೂಡಿಗೆ ಮೇಷ್ಟ್ರ ತರಗತಿಯ ಜಗತ್ತು’ ಎಂಬ ಕಿರುಪುಸ್ತಕವನ್ನೇ ಬರೆಯಬಹುದೇನೋ. ಜನ್ನನ `ಯಶೋದರ ಚರಿತೆ’ಯನ್ನು ಪಾಠ ಮಾಡುತ್ತಾ, ಹಳ್ಳಿಗಳಲ್ಲಿ ಹುಡುಗರು ಮುತ್ತುಗದ ಹೂವುಗಳ ಮಧ್ಯದಲ್ಲಿರುವ ದಂಟಿನಿಂದ ಪೀಪಿ ಮಾಡಿ ಊದುವುದನ್ನು ವರ್ಣಿಸುತ್ತಿದ್ದರು. ನಾನೂ ಕೂಡ ಹೀಗೆ ಪೀಪಿ ಮಾಡಿ ಊದಿದವನೆ. ಹಾಗಾಗಿ ಅಂತಹದ್ದೆಲ್ಲ ನನಗೆ ಬಹಳ ಇಷ್ಟವಾಗುತ್ತಿತ್ತು.

ನಾನು ಎಂ.ಎ.ಗೆ ಬರುವಾಗಲೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ದಲಿತ ವಿದ್ಯಾರ್ಥಿ ಒಕ್ಕೂಟದ ಒಳಗಿನವನಾಗಿದ್ದೆ. ಕೂಡಿಗೆ ಮೇಷ್ಟ್ರ ತರಗತಿಯ ಪಾಠಗಳ ದೃಷ್ಟಿಕೋನಕ್ಕೂ ಮತ್ತು ಡಿ.ಎಸ್.ಎಸ್.ನ ದೃಷ್ಟಿಕೋನಕ್ಕೂ ಸಾಮ್ಯತೆ ಇತ್ತು. ಇದರಿಂದ ಇವರ ವಿಚಾರಗಳು ನನಗೆ ಇಷ್ಟವಾದವು. ಸುಮಾರು ೫೦ ವರ್ಷಗಳ ಕಾಲ ನಾಡಿನಾದ್ಯಂತ ಇವರು ತಮ್ಮ ವಿಚಾರಗಳನ್ನು ಹಂಚಿದ್ದಾರೆ. ಇವರ ಆಲೋಚನೆಗಳಿಂದ ಪ್ರಭಾವಿತರಾದ ಹಲವರು ಅಧ್ಯಾಪಕರಾಗಿದ್ದಾರೆ; ಅಧಿಕಾರಿಗಳಾಗಿದ್ದಾರೆ; ನೌಕರರಾಗಿದ್ದರೆ. ಇವರಲ್ಲೇ ಕೆಲವರು ಕೂಡಿಗೆ ಮೇಷ್ಟ್ರ ಜೀವನದೃಷ್ಟಿಯ ಸಾಮಾಜಿಕ ನೈತಿಕತೆಯ ಚೌಕಟ್ಟಿನ ಆಚೆಗೆ ವ್ಯವಹಾರ ನಡೆಸಿದ್ದಾರೆ. ಅಂತಹವರನ್ನು ನೆನೆಸಿಕೊಂಡು ಮೇಷ್ಟ್ರು `ಅಯ್ಯೊ, ಅವರು ಹಾಗಾದರಲ್ಲ’ ಎಂದು ವ್ಯಥೆ ಪಡುತ್ತಾರೆ. ಇರಲಿ.

ಕೂಡಿಗೆ ಮೇಷ್ಟ್ರನ್ನು ಪ್ರೀತಿಸುವ, ಗೌರವಿಸುವ, ಇವರ ಆರೋಗ್ಯ ಚೆನ್ನಾಗಿರಲಿ ಎಂದು ಆಶಿಸುವ ನೂರಾರು ಮನಸ್ಸುಗಳು ನಾಡಿನಲ್ಲಿವೆ. ಮೇಷ್ಟ್ರಿಗೆ ನಾಳೆ ಜಿ.ಎಸ್.ಎಸ್. ಪ್ರಶಸ್ತಿ ಪ್ರದಾನ ಎಂಬುದು ಅವರ ಜೊತೆಗೆ ನಮಗೆಲ್ಲರಿಗೂ ಸಂತೋಷ.

ಜಿ.ಎಸ್.ಎಸ್. ಅವರ ಸಾಹಿತ್ಯಕ ಮತ್ತು ಸಾಮಾಜಿಕ ಬದ್ದತೆಯನ್ನು ಕಾಯ್ದುಕೊಂಡಿರುವ ಕೂಡಿಗೆ ಮೇಷ್ಟ್ರಿಗೆ ಜಿ.ಎಸ್.ಎಸ್. ಪ್ರಶಸ್ತಿ ಬಂದು, ಆ ಪ್ರಶಸ್ತಿ ತನೆಗತಾನೆ ಸಾರ್ಥಕವಾಗಿದೆ.

About Author

Leave a Reply

Your email address will not be published. Required fields are marked *