*ಮಲೆನಾಡಿಗರ ಜೀವ ನಾಡಿ* …. *ಕಡ್ಬು* ….ಇಂದು ಒಂದು ತಿನಿಸು ಮಾತ್ರವಲ್ಲ…#avintvcom
1 min read
ಮಲೆನಾಡಿಗರ ಜೀವ ನಾಡಿ …. ಕಡ್ಬು ….
ಇಂದು ನಾ ಹೇಳ ಹೊರಟಿರುವುದು ಕೇವಲ ಒಂದು ತಿನಿಸು ಮಾತ್ರವಲ್ಲ…ಇದು ಮಲೆನಾಡಿಗರ ಜೀವ ನಾಡಿ….ಭಾವಕೋಶದಲ್ಲಿ ಉಳಿದ ಒಂದು ಸಂವೇದನೆ…. ಹೃದಯಾಂತರಾಳದಲ್ಲಿರುವ ಸೂಕ್ಷ್ಮ ನಿರುಮ್ಮಳ ಉನ್ಮಾದ…..
ಜಗತ್ತಿನಲ್ಲಿ ಕಡ್ಬುನ್ನು ನಾನು ಇಷ್ಟ ಪಟ್ಟಷ್ಟು ಉಳಿದವರಾರು ಇಷ್ಟಪಡುವುದಿಲ್ಲವೇನೋ….ಇನ್ನು ಈ ಜಾಯಮಾನದಲ್ಲಿ ಇಷ್ಟಪಡುವವನೆಂದರೆ ನನ್ನ ಅಳಿಯ ಸಿದ್ಧಾರ್ಥ …ಅವನಿಗೆ ಕಡ್ಬು ಹಾಲು ಬೆಲ್ಲ ಬಲು ಇಷ್ಟದ ತಿನಿಸು…. ಮೂರು ಹೊತ್ತು…. ಬಹುಶಃ ನನ್ನದೇ ಗುಣವಿರಬಹುದು…
ಕಡ್ಬು ಎಂದ ತಕ್ಷಣ ನೆನಪಾಗುವುದು ನನ್ನ ಬಾಲ್ಯದ ದಿನಗಳು..ನಮ್ಮದು ಕೂಡು ಕುಟುಂಬ…ಮಕ್ಕಳೆ ಒಂಬತ್ತು ಮಂದಿ…ಆಗ ನಮ್ಮ ಮನೆಯಲ್ಲಿ ಒಂದು ದೊಡ್ಡ ಸರಗೋಲಿನಲ್ಲಿ ಬೇಯಿಸುತ್ತಿದ್ದರು…ಹಿಟ್ಟು ಮಗಚಿ…ಅದರ ತಳದಲ್ಲಿ ಹೊತ್ತಿಡ್ದ (ಸೀದು)ಹೋದ ಹಿಟ್ಟಿಗಾಗಿ ನನಗೂ ನನ್ನ ಸಹೋದರಿಗೂ ಪ್ರತೀ ದಿನ ಗಲಾಟೆ…ಅದರೂ ಅದು ಸಿಗುತ್ತಿದ್ದುದು ನನಗೆ..
ಅದು ಅಮ್ಮನ ಕೃಪೆಯಿಂದ….
ನಾವೆಲ್ಲ ಶಾಲೆ ಬಿಟ್ಟು ಮನೆಗೆ ಬಂದ ಕೂಡಲೇ ಮೊದಲು ಹುಡುಕುತ್ತಿದ್ದುದ್ದೇ ಕಡ್ಬಿನ ಸರಗೋಲು….ಆ ಕಡ್ಬಿಗಾಗಿ ಸಂಜೆ ಒಂದು ದೊಡ್ಡ ರಣರಂಗವೇ ನಡೆದು ಹೋಗುತ್ತಿತ್ತು….ನಮ್ಮನ್ನು ಅದು ಹೇಗೆ ತಡೆದು ಕೊಂಡಿದ್ದರೋ…ಉಳಿದ ಕಡ್ಬನ್ನು ಒಲೆಯ ಕೆಂಡಕ್ಕೆ ಹಾಕಿ ಹದವಾಗಿ ಸುಟ್ಟು…ಜಡಿಮಳೆಯ ಚಳಿಯಲ್ಲಿ ಒಲೆಯ ಮುಂದೆ ತಿಂದ ಕಡ್ಬು ಅದೆಷ್ಟು ರುಚಿ ಇತ್ತು…ಇನ್ನು ಆಗೆಲ್ಲ ಎತ್ತುಗಳಿಗಾಗಿ ಮಳೆಗಾಲದಲ್ಲಿ ಬೇಯಿಸುತ್ತಿದ್ದ ಹುರುಳಿ ಇಂದ ತೆಗೆದ ಕಟ್ಟಿನ ಸಾರು… ಬೆಳಿಗ್ಗೆ ಖಾಯಂ ಆಗಿ ಇರುತಿತ್ತು…ಕಡ್ಬನ್ನು ಹುಳ್ಳಿ ಸಾರನ್ನು ಹಾಕಿ ಕಿವುಚಿ ಸಣ್ಣ ಸಣ್ಣ ಉಂಡೆ ಮಾಡಿ ಬಟ್ಟಲಲ್ಲಿ ಇಟ್ಟು ಅಮ್ಮ ಮೊಟ್ಟೆ ಎಂದು ತಿನ್ನಿಸಿದ್ದು ಇನ್ನೂ ನೆನಪಿದೆ….
ಕಡ್ಬಿನ ಒಂದು ವಿಶೇಷತೆ ಎಂದರೆ ಅದರ ಜೊತೆಗೆ ಇಂತದ್ದೆ ಬೇಕು ಎಂಬ ನಿಯಮವಿಲ್ಲ… ಎಲ್ಲದರ ಜೊತೆಗೂ ಸೇರಿ ಹೊಂದಿಕೊಂಡು ಹೋಗುವ ಗುಣ ಅದರದ್ದು….
ಕಾಯಿ ಚಟ್ನಿ… ಬದನೆಕಾಯಿ ಚಟ್ನಿ…ಕಾರೆಡಿ…ಬೆಳ್ಳೇಡಿ ಸಾರು..ಕೆಸಿನ ಸೊಪ್ಪಿನ ಪಲ್ಲೆ…ಕೆಸಿನ ದಡಿ..ಕೆಸಿನ ಕಾಲು..ಕೆಸಿನ ಗೆಡ್ಡೆ ಪಲ್ಲೆ… ಮಳೆಗಾಲದಲ್ಲಿ ಸಿಗುವ ಹತ್ತುಮೀನಿನ ಪಲ್ಲೆ…ಕಳಲೆ ಪಲ್ಲೆ..ಹುಳ್ಳಿ ಸಾರು..ಇನ್ನ ಇದರ ಖಾಯಂ ಜೊತೆಗಾರ ಮೊಟ್ಟೆ ಸಾರು…ಒಣಕು ಮೀನಿನ ಸಾರು..ಮೀನ್ ಚೆಟ್ನಿ.. ಕೋಳಿ ತುಂಡು …ಕುರಿತುಂಡು…ಶಿಕಾರಿ ತುಂಡು… ಹಿಂದಿನ ದಿನ ಮಾಡಿದ ಯಾವುದೇ ಸಾರು… ಇದಾವುದೂ ಇಲ್ಲದೇ ಇದ್ದರೆ ಬೆಲ್ಲ ಬೆಣ್ಣೆ…ಮೊಸರು ಬೆಲ್ಲ…ತುಪ್ಪ…ಒಂದೇ ಎರಡೇ…ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯೇ ಇದೆ…
ಮಲೆನಾಡಿನಲ್ಲಿ ಕಡ್ಬಿಗೊಂದು ಮಹಾ ಮರ್ಯಾದೆ ಇದೆ.. ವಿಶೇಷ ಸ್ಥಾನಮಾನವಿದೆ… ವ್ಯಕ್ತಿಯ ಗಟ್ಟಿತನ ಅಳೆಯುವುದೂ ಇದರಿಂದಲೇ ಅವನ್ ಹೊಟ್ಟಿಗೆ ವಾರ್ಲಿಹಿಡಿಕೆ ಹದನೈದ್ ಕಡ್ಬು ತಿಂತಾನೆ ಎಂದಿದ್ದೂ ಉಂಟು…ಇನ್ನು ಹೆಣ್ ಮಕ್ಳಿಗೆ ಕಡ್ಬು ಮಾಡೊಕೆ ಬರಲಿಲ್ಲ ಎಂದರೆ ದೊಡ್ಡ ಅಪರಾಧ…ವುಂದ್ ಕಡ್ಬು ಮಾಡುಕೂ ಬರಲ ನಮ್ಮನೆ ಮಗಿಗೆ…ಅದುನ್ನ ಮುಂದೆ ಮದೆ ಮಾಡ್ಬಕು…ಹೋದಲ್ಲಿ ಕತಿಏನು ಎಂದು ಚಿಂತಿತರಾದ ತಾಯಂದಿರು ಅದೆಷ್ಟೋ….
ಇನ್ನು ಸಾಯಲು ಸಿದ್ಧರಾದವರಿಗೂ ಹೇಳುವುದು ಕಡ್ಬಿನಿಂದಲೇ…ನಿನ್ ಅಜೆಯ ವುಂದ್ ಕಡ್ಬು ತಿನಲಂತೆ ಕಣಾ …ಹೋಗ್ ನೋಡ್ಕಿ ಬಾರಾ…..ಎಂದಿದ್ದೂ ಇದೆ…ಇನ್ನ ಸತ್ತ ಮೇಲೆ ಸೂತ್ಕಕ್ಕೆ ಕಡ್ಬು ಆಗ್ಲೇಬೇಕು..ಇಂತ ಜೀವತೆತ್ತವರ ಕಡ್ಬಿಗಾಗಿ ಕಾದವರೆಷ್ಟೋ…ಕಡ್ಬು ನುರಿದವರೆಷ್ಟೋ…. ಗೊತ್ತಿಲ್ಲ…
.ಹಬ್ಬ ಹುಣ್ಣಿಮೆಲಿ…ಕೊಲಿಗಿಡುಕೆ(ಎಡೆ) ಕಡ್ಬು ಬೇಕೆ ಬೇಕು….
ಇನ್ನ ಕೋಳಿ ತುಂಡು ಮಾಡಿದಾಗಲೆಲ್ಲ ಕಡ್ಬು ಬೇಕೇಬೇಕು…. ನೆಂಟರು ಬಂದಾಗ…ಮನೆ ಕೋಳಿ ಮುರಿದಾಗ…ಎತ್ತಿನ ಹೂಟಿಯವರಿಗೆ …ತೋಟದ ಔಷಧಿ ಹೋಡಿಯೋರಿಗೆ….ಕೊನೆ ತಗಿಯೋರಿಗೆ.. ಗದ್ದೆ ಅಂಚ್ ಕಡಿಯೋರಿಗೆ…ಕಡ್ಬೇ ಬಲ…ಕಡೆ ನರ್ಗು…ಕೊನೆ ಕಡಗ್ಟ್ಲು…ಅವತ್ತು ಎರಡು ಸರಗೋಲು ಕಡ್ಬು ಸಾಕಾಗೋದಿಲ್ಲ….ಇನ್ನ ಜಾತ್ರೆ ಹಬ್ಬಕ್ಕೆ ಕಡ್ಬು ಮಾಡೋದೆ ಒಂದು ಹಬ್ಬ…
ಇನ್ನು ಮನೆಗೆ ಅನಿರೀಕ್ಷಿತವಾಗಿ ಬರುವ ಅತಿಥಿಗಳಿಗೆ ಬೆಳಿಗ್ಗಿನ ಎರಡು ಕಡ್ಬು ಕೊಟ್ರೆ…ಅದರ ಖುಷಿಯೇ ಬೇರೆ…
ಹೊಡೆದಾಟದಲ್ಲಿ ಸರೀ ಕಡ್ಬು ತಿಂದು ಬಂದವರೂ ಇದ್ದಾರೆ…
ಇನ್ನು ಕಡ್ಬಿನ ಜೊತೆ ಅವಿನಾಭಾವ ಸಂಬಂಧ ಇರುವುದು ದೆಯ್ಯದ ಹರಕೆ ಜೊತೆ….ಇದರಲ್ಲಿ ಮಾಡುವ ವಿಶೇಷ ಕಡ್ಬು…. ಪ್ರಪಂಚದ ಯಾವ ಹೋಟ್ಲಿನಲ್ಲೂ ಸಿಗಲ್ಲ….
ಮೊದಲಿಗೆ ಅಕ್ಕಿ ಅಳೆದು ನೆನೆಸಿ… ಆಮೇಲೆ ಅದನ್ನ ನೀರು ಅರಿತು…ಒಳ್ಳಿಗೆ ಹಾಕಿ ಒನಕೆಲಿ ಕುಟ್ಟಿ…ಹುಡಿಯಾದ ನಂತರ ಅದನ್ನ ಸಾಧಾರಣ ಗಾತ್ರದ ಉಂಡೆ ಕಟ್ಟಿ ಸರಗೋಲಿನಲ್ಲಿ ಬೇಯಿಸಿ …ಬೆಂದ ನಂತರ ಅದನ್ನು ಉಪ್ಪಿನ ನೀರಿನಲ್ಲಿ ಅದ್ದಿ ತೆಗೆದು ಆಮೇಲೆ ಅದನ್ನ ಬಟ್ಲು ಮರಿಗೆಗೆ ಹಾಕಿ ಅದೇ ಉಪ್ಪಿನ ನೀರು ಹದವರಿತು ಹಾಕಿ ಚೆನ್ನಾಗಿ ಹಿಟ್ಟು ಮಗ್ಚಿ… ಒಂದುಅಂಗೈ ಹಿಡಿಕೆ ಗಾತ್ರದಲ್ಲಿ ಹಿಚುಕಿ ಮತ್ತೆ ಸರಗೋಲಿಗೆ ಹಾಕಿ ಬೇಯಿಸುತ್ತಾರೆ…ಇದು ಬಲು ರುಚಿಯಾದುದು…ನೀರು ಹೆಚ್ಚು ಕಡಿಮೆ ಆದ್ರೆ ಕಡ್ಬು ಕಟ್ಟೆ ಕಲ್ಲಾಗುತ್ತದೆ….ಇದರ ಜೊತೆ ಸೌತೇಕಾಯಿ ಪಚಿಡಿ…ಕೋಳಿ ಹುರ್ತುಂಡು…ಇದರ ಮುಂದೆ ಜಗತ್ತಿನ ಯಾವ ತಿನಿಸೂ ಇಲ್ಲ…
ದೆಯ್ಯದ ಹರಕೆಲಿ ಕಡ್ಬು ಮಾಡೋದೆ ಒಂದು ಸಾಹಸ….ಅಷ್ಟು ಕಡ್ಬು ತಿನ್ನುವ ಜನ…ಯಾವಗಲೋ ಒಮ್ಮೆ ದೆಯ್ಯದ ಹರಕೆಲಿ ಇಬ್ರು ಹಿರಿಯರು ಪಂದ್ಯ ಕಟ್ಟಿದರು ಯಾರು ಹೆಚ್ಚು ಕಡ್ಬು ತಿಂತಾರೆ ಅಂತ…ಹಾಕುದ್ರು ಕಡ್ಬು …ಒಂದೇ ಎರಡೇ… ಹದಿನೈದು ಇಪ್ಪತ್ತು…ತಿನ್ನೋ ಬರಾಟೆಲಿ ಒಬ್ರಿಗೆ ಗಂಟ್ಲಲ್ಲಿ ಸಿಕ್ಕಾಕೊಂಡು ಜೀವ ಹೋಗೋ ಪರಿಸ್ಥಿತಿ… ತಕ್ಷಣ ಪಕ್ಕದಲ್ಲಿ ಕುಳಿತೋರು ಒಂದು ಬೆನ್ ಮೇಲೆ ಗುದ್ದಿದ ಬರಾಟೆಗೆ ಕಡ್ಬು ಹೊರ್ಗ್ ಬಂದು ಜೀವ ಉಳಿತು…
ಇನ್ನ ಕೊಟ್ಟೇಕಡ್ಬು…ಕೆಸೀನ ಕಡ್ಬು…ಚೀನೇಕಾಯಿ ಕಡ್ಬು…ಅರಶಿಣದೆಲೆ ಕಡ್ಬು… ಮುಂತಾದವು…ಕಡ್ಬಿನ ಸಂಬಂಧಿಕರು….
ಕಡ್ಬಿನ ಕಥೆ ಒಂದೇ ಎರಡೇ.. ಹಗಲಿರುಳು ಸಾಲದು…ಮೊನ್ನೆ ಎಲ್ಲೋ ಓದಿದ ನೆನಪು…ಜಗತ್ತಿನ ಎಲ್ಲರ ಹೃದಯ ಲಬ್ ಡಬ್ ಎಂದು ಹೊಡೆದುಕೊಂಡರೆ ಮಲೆನಾಡಿಗರ ಹೃದಯ ಕಡ್ಬ್ ಕಡ್ಬ್ ಎನ್ನುತ್ತೆ….ನಿಜ ಅಲ್ಲವೇ…ಸರಿ ನಮ್ಮನೆ ಅಮ್ಮ ಕಡ್ಬ್ ತಿನ್ನೋಕೆ ಕರಿತಾ ಅದೆ ನಾ ಹೋತಿನಿ ಅತಾ…
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್