ಕುಡಿಯುವ ನೀರಿನ ಸಮಸ್ಯೆ ಪ್ರಶ್ನಿಸಿದ ಎಸ್‌ಸಿ ಮಹಿಳೆಗೆ ಅಧ್ಯಕ್ಷರಿಂದ ಉಡಾಫೆ ಉತ್ತರ
1 min read
ಮುಂಡ್ಕೂರು ಗ್ರಾಮ ಸಭೆ: ಕುಡಿಯುವ ನೀರಿನ ಸಮಸ್ಯೆ ಪ್ರಶ್ನಿಸಿದ ಎಸ್‌ಸಿ ಮಹಿಳೆಗೆ ಅಧ್ಯಕ್ಷರಿಂದ ಉಡಾಫೆ ಉತ್ತರ
ಕಾರ್ಕಳ: ತಾಲೂಕಿನ ಮುಂಡ್ಕೂರು ಗ್ರಾಮ ಪಂಚಾಯತ್‌ನ 2024 -25ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಗ್ರಾಮ ಪಂ. ಅಧ್ಯಕ್ಷ ದೇವಪ್ಪ ಸಪಳಿಗರ ಅಧ್ಯಕ್ಷತೆಯಲ್ಲಿ ಮುಂಡ್ಕೂರು ಗ್ರಾ. ಪಂ.ನ ಅಟಲ್ ಬಿಹಾರಿ ಸಭಾಂಗಣದಲ್ಲಿ ಬುಧವಾರ ನಡೆಯಿತು.
ಈ ಸಂದರ್ಭದಲ್ಲಿ ಮುಕಲ್ದಿಪದವು ಎಂಬಲ್ಲಿಯ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಎಸ್‌ಸಿ ಮಹಿಳೆಯೋರ್ವರು ಪ್ರಶ್ನಿಸಿದಾಗ, ನೀರು ಬರುವುದಿಲ್ಲವಾದರೆ ಅಲ್ಲಿ ಮನೆ ಏಕೆ ಕಟ್ಟಿದ್ದು ಎಂದು ಅಧ್ಯಕ್ಷರು ಉಡಾಫೆಯಾಗಿ ಉತ್ತರಿಸಿದ್ದಾರೆ. ಬಡವರಿಗೆ ಸರಕಾರ ಕೊಟ್ಟ ನಿವೇಶನದಲ್ಲಿ ನಾವು ಮನೆ ಕಟ್ಟಿದ್ದೇವೆ. ನಮಗೆ ನೀರಿನ ಸಮಸ್ಯೆ ಇದೆ, ಅದನ್ನು ನೀವು ಪರಿಹರಿಸಿಕೊಳ್ಳಬೇಕು, ನೀರಿನ ಸಮಸ್ಯೆಗಾಗಿ ನಾವು ಅಲ್ಲಿಂದ ಮನೆ ಬಿಡಬೇಕೇ? ಎಂದು ಮಹಿಳೆ ನೊಂದು ಹೇಳಿದರು.
ಸ್ವಜಲದಾರ ಯೋಜನೆಗೆ ಪೈಪ್ ಲೈನ್ ಅಳವಡಿಸಲು ತಮ್ಮ ಜಮೀನು ನೀಡಿದ್ದು ಇದೀಗ ನಿರಂತರವಾಗಿ ಪೈಪು ಹೊಡೆದು ನೀರು ತುಂಬಿ ತೋಟ ಹಾಳಾಗಿದೆ. ಇದನ್ನು ಸರಿಪಡಿಸದಿದ್ದರೆ ಪಂಪು ಶೆಡ್ಡಿಗೆ ಬೀಗ ಜಡೆಯುವುದಾಗಿ ಅಶೋಕ್ ಶೆಟ್ಟಿ ಹೇಳಿದರು.
ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಪಂ.ನ 18 ಸದಸ್ಯರ ಪೈಕಿ 8 ಮಂದಿ ಗೈರು ಹಾಜರಾದ ಬಗ್ಗೆ ಡೆಂಜಿಲ್ ಹಾಗೂ ಅಶೋಕ್ ಶೆಟ್ಟಿ ಗ್ರಾಮಸ್ಥರ ಪರವಾಗಿ ಪಂಚಾಯತ್ ಆಡಳಿತವನ್ನು ತರಾಟೆಗೆ ತೆಗೆದುಕೊಂಡು, ಮುಂದೆ ಈ ರೀತಿ ಆದರೆ ಗ್ರಾಮ ಸಭೆ ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಕಂದಾಯ ಇಲಾಖೆಯ ಹನುಮಂತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಗುಣವತಿ, ಶಿಕ್ಷಣ ಇಲಾಖೆಯ ರಂಗಸ್ವಾಮಿ, ಅರಣ್ಯ ಇಲಾಖೆಯ ಮನಿಷ್ ಮಾಹಿತಿ ನೀಡಿದರು. ಪಶು ಇಲಾಖೆಯ ಸುನಿಲ್ ಕುಮಾರ್ ನೋಡಲ್ ಅಧಿಕಾರಿಯಾಗಿದ್ದರು. ಪಂ. ಉಪಾಧ್ಯಕ್ಷೆ ಸುಶೀಲಾ ಬಾಬು ಉಪಸ್ಥಿತರಿದರು. ಪಿಡಿಒ ಸತೀಶ್ ಸ್ವಾಗತಿಸಿ, ಗುಮಸ್ತೆ ಮಲ್ಲಿಕಾ ವರದಿ ವಾಚಿಸಿದರು.