लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಭಾರತದ ರಿಪೋರ್ಟ್ ಕಾರ್ಡ್…….. ಇಲ್ಲಿದೆ ನೋಡಿ ಕೆಲವು ಕುತೂಹಲಕರ ಅಂಕಿಅಂಶಗಳು ಮತ್ತು ನಮ್ಮ ದೇಶದ ರಿಪೋರ್ಟ್ ಕಾರ್ಡ್…..

1 min read

ಭಾರತದ ರಿಪೋರ್ಟ್ ಕಾರ್ಡ್……..

ಇಲ್ಲಿದೆ ನೋಡಿ ಕೆಲವು ಕುತೂಹಲಕರ ಅಂಕಿಅಂಶಗಳು ಮತ್ತು ನಮ್ಮ ದೇಶದ ರಿಪೋರ್ಟ್ ಕಾರ್ಡ್…..

ಇದು ಪಕ್ಷಾತೀವಾಗಿ ದೇಶದ ವಾಸ್ತವ ಪರಿಸ್ಥಿತಿ……‌.‌‌……..

ಭಾರತ ಸರ್ಕಾರದ ಬಳಿ ಇರುವ ಚಿನ್ನದ ಸಂಗ್ರಹ ಸುಮಾರು 880 ಮೆಟ್ರಿಕ್ ಟನ್.

ಅಮೆರಿಕ ಸರ್ಕಾರದ ಬಳಿ ಇರುವ ಚಿನ್ನದ ಸಂಗ್ರಹ ಸುಮಾರು 8133 ಮೆಟ್ರಿಕ್ ಟನ್.

ಭಾರತ ಇಲ್ಲಿಯವರೆಗೆ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಗೆದ್ದ ಒಟ್ಟು ಪದಕಗಳು ಸುಮಾರು 41.

ಅಮೆರಿಕ ಗೆದ್ದ ಒಟ್ಟು ಪದಕಗಳು ಸುಮಾರು 3000.

ಭಾರತದ ಒಟ್ಟು ಬಜೆಟ್ ಗಾತ್ರ ಸುಮಾರು 53 ಲಕ್ಷ ಕೋಟಿ.

ಅಮೆರಿಕದ ಬಜೆಟ್ ಗಾತ್ರ ಸುಮಾರು 500 ಲಕ್ಷ ಕೋಟಿ.

ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆ ಚೀನಾದ ಬಜೆಟ್ ಸುಮಾರು 150 ಲಕ್ಷ ಕೋಟಿ.

ಅಮೆರಿಕದ ರಕ್ಷಣಾ ಬಜೆಟ್ ಸುಮಾರು 200 ಲಕ್ಷ ಕೋಟಿ.

ಭಾರತದ ರಕ್ಷಣಾ ಬಜೆಟ್ ಸುಮಾರು ‌8 ಲಕ್ಷ ಕೋಟಿ.

ಭಾರತದ ಜನಸಂಖ್ಯೆ ಸುಮಾರು 148 ಕೋಟಿ.

ಅಮೆರಿಕದ ಜನಸಂಖ್ಯೆ ಸುಮಾರು 33 ಕೋಟಿ.

ವಿಸ್ತೀರ್ಣದಲ್ಲಿಯೂ ಅಮೆರಿಕ ಭಾರತಕ್ಕಿಂತ ಬಹಳ ದೊಡ್ಡದಾಗಿದೆ.
ಅಮೆರಿಕ 9.8 ಮಿಲಿಯನ್ ಸ್ಕೇರ್ ಕಿಲೋಮೀಟರ್.
ಭಾರತ 3.80 ಮಿಲಿಯನ್ ಸ್ಕೇರ್ ಕಿಲೋಮೀಟರ್…

ಭಾರತದ ನಿಜವಾದ ಆದಾಯ ಸುಮಾರು 33 ಲಕ್ಷ ಕೋಟಿಗಳು ಮಾತ್ರ. ಉಳಿದದ್ದು ಸಾಲ ಮತ್ತು ಇತರ ಮೂಲಗಳು.

ಅಂದರೆ ನಮ್ಮ ಈಗಿನ ಸ್ಥಿತಿ ಮತ್ತು ಸಾಗಬೇಕಾದ ಹಾದಿಯ ಒಂದು ಕಲ್ಪನೆ ಮಾಡಿಕೊಳ್ಳಿ.

ಇಲ್ಲಿ ಇನ್ನೂ ಒಂದು ಮುಖ್ಯ ವಿಷಯವಿದೆ. ಅಮೆರಿಕ ಬಜೆಟ್ ನ ಬಹುಪಾಲು ಸದುಪಯೋಗವಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಭ್ರಷ್ಟಾಚಾರ ತುಂಬಾ ಇರುವುದರಿಂದ ಇರುವ ಹಣದ ಬಹುಪಾಲು ದುರುಪಯೋಗವಾಗುತ್ತದೆ ಅಥವಾ ವ್ಯರ್ಥವಾಗುತ್ತದೆ. ಇದು ಮತ್ತೊಂದು ಹೊಡೆತ.

ತಲಾ ಆದಾಯದ ವ್ಯತ್ಯಾಸವಂತೂ ಅಜಗಜಾಂತರವಿದೆ.

ರಾಷ್ಟ್ರೀಯ ತಲಾ ಆದಾಯ……..
NATIONAL PER CAPITA INCOME……

ಇದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾಗ ಗಮನಿಸಿದ ಕುತೂಹಲಕರ ಅಂಶವನ್ನು, ನಮ್ಮ ದೇಶದ ಜನರ ಆರ್ಥಿಕ ಪರಿಸ್ಥಿತಿ ತಿಳಿಯಲು ಸಹಾಯ ಆಗಬಹುದು ಎಂದು ಇಲ್ಲಿ ಬರೆಯುತ್ತಿದ್ದೇನೆ.

ಸರಳವಾಗಿ ಹೇಳುವುದಾದರೆ,
ಒಂದು ದೇಶದ ಒಟ್ಟು ಆದಾಯವನ್ನು ಆ ದೇಶದ ‌ಒಟ್ಟು ಜನಸಂಖ್ಯೆಯಿಂದ ಭಾಗಾಕಾರ ಮಾಡಿದಾಗ ಬರುವ ಮೊತ್ತವೇ ತಲಾ ಆದಾಯ. ಅಂದರೆ ಪ್ರತಿ ವ್ಯಕ್ತಿಯ ಸರಾಸರಿ ಆದಾಯ.

ಅಮೆರಿಕನ್ ಡಾಲರ್ ಗಳ ಲೆಕ್ಕದಲ್ಲಿ ವಿಶ್ವದ ಅತ್ಯಂತ ಹೆಚ್ಚು ತಲಾ ಆದಾಯ ಇರುವ ದೇಶಗಳು…..
* 2021 ರ ಅಂಕಿಅಂಶಗಳು. ಈಗ ಎಲ್ಲಾ ದೇಶಗಳ ಆದಾಯದಲ್ಲಿ ಸ್ವಲ್ಪಮಟ್ಟಿನ ಏರಿಕೆ ಆಗಿರುತ್ತದೆ.*

ಲಿಚ್ವೆನ್ಸ್ ಸ್ಟೈನ್ ( Liechtenstein ) — 139100.

ಕತಾರ್ — 124500.

ಮೊನಾಕೊ — 111600.

ವಿಸ್ತೀರ್ಣ ಮತ್ತು ಜನಸಂಖ್ಯೆಯಲ್ಲಿ ಇವು ಚಿಕ್ಕ ದೇಶಗಳು.

ವಿಸ್ತೀರ್ಣ ಮತ್ತು ಜನಸಂಖ್ಯೆಯ ದೊಡ್ಡ ದೇಶಗಳಾದ….

ಅಮೆರಿಕ — 60200.
ರಷ್ಯಾ — 24893.
ಚೈನಾ — 16760.
ಭಾರತ — 7060.
ಪಾಕಿಸ್ತಾನ – 5380.
ಬಾಂಗ್ಲಾದೇಶ – 4040.
ನೇಪಾಳ – 2710.

ಇನ್ನು ಆಫ್ರಿಕಾದ ಬುರುಂಡಿ, ಮೊಜಾಂಬಿಕ್ ಮುಂತಾದ ದೇಶಗಳ ತಲಾ ಆದಾಯ 1000 ಕ್ಕಿಂತ ಕಡಿಮೆ ಇದೆ.

ಇದರ ಆಧಾರದ ಮೇಲೆ ನಾವುಗಳು ಬಡವರೋ ಶ್ರೀಮಂತರೋ ನೀವೇ ನಿರ್ಧರಿಸಿ. ಅಲ್ಲದೆ ಭಾರತದಲ್ಲಿ ಬಹುಶಃ ಲೆಕ್ಕಕ್ಕೆ ಸಿಗದ 3/4 ಕೋಟಿಗೂ ಹೆಚ್ಚು ಜನ ಇದ್ದಾರೆ ಮತ್ತು ಅಂಬಾನಿ, ಅದಾನಿ, ಟಾಟಾ, ಬಿರ್ಲಾ, ಅಜೀಂ ಪ್ರೇಮ್ಜಿ ಮುಂತಾದ ಬಹುದೊಡ್ಡ ಶ್ರೀಮಂತರು ಮತ್ತು ಊಟಕ್ಕೂ ಪರದಾಡುವ ಅನೇಕ ಬಡವರ ನಡುವಿನ ಅಂತರ ತುಂಬಾ ಇದೆ.

ಸುಮ್ಮನೆ ಭ್ರಮಾಲೋಕದಲ್ಲಿ ಯಾರೋ ಅಂಕಣಕಾರರು, ಭಾಷಣಕಾರರು, ಪ್ರವಚನಕಾರರುಗಳು ಹೇಳುವುದು ಭಾರತ ವಿಶ್ವದ ಬಲಿಷ್ಠ ದೇಶ ಎಂದು.

ವೈಯಕ್ತಿಕವಾಗಿ ಹೇಳಬೇಕೆಂದರೆ ಈ ಅಂಕಿಅಂಶಗಳಿಗಿಂತ ಹೆಚ್ಚಿನ ಬಡತನ ಭಾರತದಲ್ಲಿ ಇದೆ.

ಈ ಅಂಶಗಳನ್ನು ನಾವು ಸರಿಯಾಗಿ ಅರ್ಥಮಾಡಿಕೊಂಡರೆ ನಾವು ಸಾಗಬೇಕಾದ ಹಾದಿ, ನಮ್ಮ ಆದ್ಯತಾ ವಲಯಗಳು, ಅದಕ್ಕಾಗಿ ನಾವು ಪಡಬೇಕಾಗಿರುವ ಶ್ರಮ, ನಮ್ಮ ಜವಾಬ್ದಾರಿ ಎಲ್ಲವೂ ಸ್ಪಷ್ಟವಾಗುತ್ತದೆ.

ಚುನಾವಣೆ ಗೆಲ್ಲುವುದೇ ಒಂದು ದೊಡ್ಡ ಸಾಧನೆ ಎಂದು ನಮ್ಮ ರಾಜಕೀಯ ಪಕ್ಷಗಳು ಭಾವಿಸುವುದಾದರೆ ನಮ್ಮ ನಿಜವಾದ ಅಭಿವೃದ್ಧಿ ಕನಸೇ ಆಗಬಹುದು.

ಸಣ್ಣ ಪ್ರಮಾಣದಲ್ಲೇ ಆದರೂ ನಾವು ಬದಲಾವಣೆಯತ್ತ ಸಾಗೋಣ…..

ಬಜೆಟ್ ಗಳು ಮತ್ತು ನಮ್ಮ ದೇಶದ ಅಭಿವೃದ್ಧಿ…..

ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳು ಸ್ವಾತಂತ್ರ್ಯ ನಂತರ ಇಲ್ಲಿಯವರೆಗೂ ಸುಮಾರು 75 ಕ್ಕಿಂತ ಹೆಚ್ಚು ವಾರ್ಷಿಕ ಬಜೆಟ್ ಗಳನ್ನು ಮಂಡಿಸಿವೆ. ಪಂಚವಾರ್ಷಿಕ ಯೋಜನೆಗಳು ಮತ್ತು ಅದನ್ನು ಮೇಲ್ವಿಚಾರಣೆ ಮಾಡುವ ನೀತಿ ಆಯೋಗ ಸಹ ಇದೆ. ಅಪಾರ ಪ್ರಮಾಣದ ಎಲ್ಲಾ ದರ್ಜೆಯ ಆಡಳಿತ ಯಂತ್ರ ಸಹ ಕೆಲಸ ಮಾಡುತ್ತಲೇ ಇದೆ………….

ಯಾವ ಸರ್ಕಾರಗಳು ಸಹ ಸಾಮಾನ್ಯವಾಗಿ ಜನರಿಗೆ ತೊಂದರೆ ಕೊಡುವ ಅಥವಾ ಜನರನ್ನು ನಾಶ ಮಾಡುವ ಯೋಜನೆಗಳನ್ನು ರೂಪಿಸುವುದಿಲ್ಲ. ಬಹಳ ಜನರಿಗೆ ಒಳ್ಳೆಯದಾಗಲಿ ಎಂಬ ಆಶಯವನ್ನೇ ಹೊಂದಿರುತ್ತವೆ.

1950 ಮತ್ತು 2025 ರ ನಡುವೆ ಭಾರತದ ಅಭಿವೃದ್ಧಿ ಸುಮಾರಾಗಿ ಆಗಿದೆ. ವಿಶ್ವ ಸಮುದಾಯ ಕೂಡಾ ತಂತ್ರಜ್ಞಾನದ ಸಹಾಯದಿಂದ ಪ್ರಗತಿಯ ಪಥದಲ್ಲಿದೆ.

ಭಾರತದ ಮಟ್ಟಿಗೆ‌ ಅಭಿವೃದ್ಧಿ ಸಮಾನಾಂತರವಾಗಿಲ್ಲ ಮತ್ತು ಸಮಾಧಾನಕರವಾಗಿಲ್ಲ. ದೇಶದ ಶೇಕಡಾ 50% ಕ್ಕೂ ಹೆಚ್ಚು ಜನ ತಾವು ಇಷ್ಟಪಟ್ಟ ದೈನಂದಿನ ಊಟ ಬಟ್ಟೆ ವಾಸ ಮಕ್ಕಳ ಯೋಗಕ್ಷೇಮ ಮತ್ತು ಸಾಧಾರಣ ಆರೋಗ್ಯ ವ್ಯವಸ್ಥೆ ಮಾಡಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ.

ಇದನ್ನು ನಾವು ಪಕ್ಷಾತೀತವಾಗಿ ಮತ್ತು ನಿಷ್ಪಕ್ಷಪಾತವಾಗಿ ಭಾರತದ ನಿಜವಾದ ಹಿತಾಸಕ್ತಿಯಿಂದ ನೋಡಬೇಕು. ಯಾವುದೋ ಪಕ್ಷದ ವಕ್ತಾರರಂತೆ ಒಬ್ಬರಿಗೊಬ್ಬರು ಆಪಾದನೆ ಮಾಡುತ್ತಾ ಕೆಸರೆರಚಾಟ ಮಾಡಿದರೆ ಸತ್ಯ ಮತ್ತು ವಾಸ್ತವ ಮರೆಯಾಗಿ ಕೇವಲ ಒಣ ಚರ್ಚೆ ಮತ್ತು ಅಂಕಿಅಂಶಗಳು ಮಹತ್ವ ಪಡೆಯುತ್ತವೆ.

ಸರ್ಕಾರ ಘೋಷಿಸುವ ಯಾವುದೇ ಯೋಜನೆಗಳು ಜಾರಿಯಾಗುವುದು ನಮ್ಮ ಸರ್ಕಾರಿ ಆಡಳಿತ ಯಂತ್ರದ ಮುಖಾಂತರ. ಅದು ಈಗಾಗಲೇ ಕಿಲುಬು ಹಿಡಿದಿದೆ. ಅದನ್ನು ಸರಿ ಮಾಡದೆ ಯಾವ ಯೋಜನೆ ಘೋಷಿಸಿದರು ಸಂಪೂರ್ಣ ಉಪಯೋಗ ಆಗುವುದಿಲ್ಲ. ಅದನ್ನು ಸರಿ ದಾರಿಗೆ ತರಲು ರಾಜಕಾರಣಿಗಳು ಹೆಚ್ಚಿನ ಮಹತ್ವ ನೀಡುತ್ತಿಲ್ಲ.

ಇಲ್ಲಿ ಇನ್ನೊಂದು ಆಶ್ಚರ್ಯಕರ ವಿಷಯವಿದೆ. ಆದಾಯ ತೆರಿಗೆ ವಿನಾಯಿತಿ, ವಸ್ತು ಮತ್ತು ಸೇವೆಗಳ ತೆರಿಗೆ ಹೆಚ್ಚಳ, ಸರ್ಕಾರಿ ನೌಕರರ ಸಂಬಳ ಹೆಚ್ಚಳ ಇನ್ನೂ ಮುಂತಾದ ಯೋಜನೆಗಳು ಚಾಚೂ ತಪ್ಪದೆ ಅಥವಾ ಅದಕ್ಕಿಂತ ಹೆಚ್ಚಾಗಿಯೇ ಸಂಪೂರ್ಣ ಜಾರಿಯಾಗುತ್ತದೆ. ಕಾರಣ ಈ ಯೋಜನೆಗಳು ಈಗಾಗಲೇ ವಿದ್ಯಾವಂತರಾಗಿರುವ ಮತ್ತು ವ್ಯವಸ್ಥೆಯ ಮೇಲೆ ನಿಯಂತ್ರಣ ಹೊಂದಿರುವ ಜನಗಳು ಇವುಗಳನ್ನು ಸ್ವತಃ ಅಥವಾ ಮಧ್ಯವರ್ತಿಗಳ ಮುಖಾಂತರ ಜಾರಿಯಾದ ಮಧ್ಯರಾತ್ರಿಯಿಂದಲೇ ಲಾಭ ಪಡೆದುಕೊಳ್ಳುತ್ತಾರೆ.

ಆದರೆ, ಇನ್ನೂ ಕೆಲವು ‌ಯೋಜನೆಗಳು ಇವೆ‌. ಉದಾಹರಣೆಗೆ ಗರೀಬ್ ಹಠವೋ, ಉದ್ಯೋಗ ಖಾತ್ರಿ, ಆಹಾರ ಭದ್ರತೆ, ಬೇಟಿ ಬಚಾವೋ ಬೇಟಿ ಪಡಾವೋ , ಸ್ವಚ್ಛ ಭಾರತ್, ಆಯುಷ್ಮಾನ್ ಮುಂತಾದ ಯೋಜನೆಗಳು ಅದರ ನಿಜ ರೂಪದಲ್ಲಿ ಜನರಿಗೆ ತಲುಪುವುದು ತುಂಬಾ ಕಷ್ಟವಿದೆ.

ಜನರಲ್ಲಿ ಇರುವ ಅಜ್ಞಾನ ಬಡತನ ದಾಖಲೆ ಮತ್ತು ಮಾಹಿತಿಯ ಕೊರತೆ, ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ, ರಾಜಕಾರಣಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷತನ ಮತ್ತು ಸೋಮಾರಿತನ, ಅಸೂಯೆ ಮುಂತಾದ ಕಾರಣಗಳು ಇವುಗಳನ್ನು ಜಾರಿಯಾಗಲು ಬಿಡುವುದಿಲ್ಲ.

ಪಾರ್ಲಿಮೆಂಟ್ ಅಥವಾ ವಿಧಾನಸೌದದಲ್ಲಿ ಅಂಕಿಅಂಶಗಳ ಸರ್ಕಸ್ ಮಾಡುತ್ತಾ ಬಜೆಟ್ ಮಂಡಿಸುವುದು ಮತ್ತು ಅದರ ಪರ ವಿರೋಧದ ಚರ್ಚೆಗಳಿಗಿಂತ,
ಅದರ ಅನುಷ್ಠಾನ ಮತ್ತು ವಾಸ್ತವ ಫಲಿತಾಂಶಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದರೆ ನಿಜವಾದ ಮತ್ತು ಸಮಾನವಾದ ಅಭಿವೃದ್ಧಿ ಸಾಧ್ಯ. ಇಲ್ಲದಿದ್ದರೆ ಪ್ರತಿ ಸರ್ಕಾರಗಳ ಪ್ರತಿ ಬಜೆಟ್ ಕೇವಲ ಸಾಂಕೇತಿಕ ಶಾಸ್ತ್ರವಾಗುತ್ತದೆ. ಚುನಾವಣಾ ರಾಜಕೀಯದ ನಾಟಕಗಳಾಗುತ್ತವೆ.

ಇದು ಎಲ್ಲಾ ಪಕ್ಷಗಳ, ಎಲ್ಲಾ ಸರ್ಕಾರಗಳಿಗೂ ಸಮನಾಗಿ ಅನ್ವಯ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451….
9844013068……

About Author

Leave a Reply

Your email address will not be published. Required fields are marked *

You may have missed