ಬಲಗೈ ಸಮುದಾಯಗಳ ಒಕ್ಕೂಟದಿಂದ ಮಾ.3ರಂದು ಮೂಡಿಗೆರೆ ಬಂದ್ ಕರೆ*..
1 min read
*ಬಲಗೈ ಸಮುದಾಯಗಳ ಒಕ್ಕೂಟದಿಂದ ಮಾ.3ರಂದು ಮೂಡಿಗೆರೆ ಬಂದ್ ಕರೆ*




ಒಳ ಮೀಸಲಾತಿ ಪ್ರಕ್ರಿಯೆಯಿಂದ ಬಲಗೈ ಸಮುದಾಯದ ಜನರಿಗೆ ಅನ್ಯಾಯವಾಗುತ್ತಿರುವುದನ್ನು ಖಂಡಿಸಿ ಬಲಗೈ ಸಮುದಾಯಗಳ ಒಕ್ಕೂಟದಿಂದ ಮಾ.3ರಂದು ಮೂಡಿಗೆರೆ ತಾಲೂಕು ಬಂದ್ ಕರೆ ಕೊಡುವ ಮೂಲಕ ಪಟ್ಟಣದಲ್ಲಿ ಪ್ರತಿಭಟನೆ ಹಾಗೂ ಭಹಿರಂಗ ಸಭೆ ನಡೆಸುವುದಾಗಿ ಒಕ್ಕೂಟದ ಸದಸ್ಯ ಎಂ.ಎಸ್.ಅನಂತ್ ಹೇಳಿದರು.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ್ಯಾ. ನಾಗಮೋಹನ್ದಾಸ್ ಅವರು ಸಿದ್ದಪಡಿಸಿರುವ ಪರಿಶಿಷ್ಟ ಜಾತಿಯ ಒಳಮೀಸಲಾತಿ ವರ್ಗೀಕರಣ ಅವೈಜ್ಞಾನಿಕವಾಗಿದೆ. ಇದರಿಂದ 19 ಜಾತಿಗಳು ಸೇರಿದಂತೆ ಆದಿ ದ್ರಾವಿಡ, ಆದಿ ಆಂಧ್ರ, ಆದಿ ಕರ್ನಾಟಕ, ಮನ್ನಾ, ಮೇದಿ, ಮಾದಾರಿ ಜಾತಿಗಳಿಗೆ ಸಂಪೂರ್ಣವಾಗಿ ಅನ್ಯಾಯವಾಗಿದ್ದು, ಪರಿಶಿಷ್ಟರಿಗೆ ಉದ್ಯೋಗ ಸೇರಿದಂತೆ ಇತರೇ ಸರಕಾರಿ ಸವಲತ್ತು ಪಡೆಯಲು ಅನಾನುಕೂಲವಾಗಿದೆ. ಮೂಡಿಗೆರೆ ವಿಧಾನಸಭೆ ಕ್ಷೇತ್ರದಲ್ಲಿ ಸುಮಾರು 80 ಸಾವಿರ ಬಲಗೈ ಸಮುದಾಯದವರಿದ್ದು, ಪಕ್ಷಾತೀತವಾಗಿ ಒಳ ಮೀಸಲಾತಿ ವಿರುದ್ಧ ಖಂಡಿಸುವ ಸಲುವಾಗಿ ಮಾ.3ರಂದು ಮೂಡಿಗೆರೆ ಬಂದ್ಗೆ ಕರೆ ನೀಡಲಾಗಿದೆ. ಇದಕ್ಕೆ ಪಟ್ಟಣ ಸೇರಿದಂತೆ ಬಣಕಲ್, ಗೋಣಿಬೀಡು ಸೇರಿದಂತೆ ಎಲ್ಲಾ ಹೋಬಳಿ ವ್ಯಾಪ್ತಿಯಲ್ಲಿ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಗ್ಗಟ್ಟು ಮುಚ್ಚಿ ಬಂದ್ ಕರೆಗೆ ಬೆಂಬಲಿಸಬೇಕೆಂದು ಮನವಿ ಮಾಡಿದರು.
ಒಕ್ಕೂಟದ ಸಂಚಾಲಕ ಶಿವಪ್ರಸಾಧ್ ಮಾತನಾಡಿ, ಈ ವರದಿಗೆ ರಾಜ್ಯಪಾಲರ ಅಂಕಿತ ಸಿಗುವ ಮೊದಲೇ ಪ್ರವರ್ಗ ಎ, ಬಿ, ಸಿ ಎಂದು ಹೊಸ ಜಾತಿ ಪ್ರಮಾಣ ಪತ್ರ ನೀಡುವುದನ್ನು ನಿಲ್ಲಿಸಿ, ಹಳೆ ಪದ್ಧತಿ ಮುಂದುವರೆಸಬೇಕು. ಪ್ರಸ್ತುತ ಮಾಡಲಾದ ಅವೈಜ್ಞಾನಿಕ ವರದಿ ಪರಿಷ್ಕರಣೆ ಕೈಬಿಡಬೇಕು. ಗೊಂದಲಗಳು ಬಗೆಹರಿಯುವವರೆಗೆ ಹಳೆಯ ಮೀಸಲಾತಿ ನಿಯಮಾವಳಿಗಳನ್ನೆ ಅಳನಡಿಸಿಕೊಂಡು ನೇಮಕಾತಿ ಮಾಡಬೇಕು. ಒಳಮೀಸಲಾತಿ ವಿರೋಧಿಸಿ ಪ್ರತಿಭಟಿಸಿದ ದಲಿತ ವಿದ್ಯಾರ್ಥಿಗಳ ಮೇಲೆ ಪೋಲೀಸ್ ಇಲಾಖೆ ದಾಖಲಿಸಿರುವ ದೂರುಗಳನ್ನು ಸರಕಾರ ತಕ್ಷಣ ಕೈಬಿಡಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಒಕ್ಕೂಟದ ಸದಸ್ಯರಾದ ಮಂಜುನಾಥ್ ಬೆಟ್ಟಗೆರೆ, ಗಿರೀಶ್ ಹೆಸಗಲ್, ಸಚಿನ್ ಬಾನಳ್ಳಿ, ರಘುಪತಿ ಬಾಳೂರು, ಚಂದ್ರು ಸಾಲುಮರ, ಅಭಿಜಿತ್ ಹೆಡ್ದಾಳ್, ಕುಮಾರ್ ಬಕ್ಕಿ, ರಾಜೇಶ್, ಗಣೇಶ್ ಮತ್ತಿತರರಿದ್ದರು.

