ನಾಡಿನ ದೊರೆಗೊಂದು ಬಹಿರಂಗ ಪತ್ರ * ಕಸ್ತೂರಿರಂಗನ್ ವರದಿ ಸಮಸ್ಯೆ ಪರಿಹರಿಸಿ, * ಮಾನವ-ಪ್ರಾಣಿ ಸಂಘರ್ಷ ಕೊನೆಗೊಳಿಸಿ, * ಕಂದಾಯ-ಅರಣ್ಯಭೂಮಿ ಸಮಸ್ಯೆ ಪರಿಹರಿಸಿ * ಕಾಫಿಬೆಳೆಗಾರರನ್ನು ಸರ್ಫೇಸಿಯಿಂದ ಮುಕ್ತಿನೀಡಿ…..
1 min read
ನಾಡಿನ ದೊರೆಗೊಂದು ಬಹಿರಂಗ ಪತ್ರ
* ಕಸ್ತೂರಿರಂಗನ್ ವರದಿ ಸಮಸ್ಯೆ ಪರಿಹರಿಸಿ, * ಮಾನವ-ಪ್ರಾಣಿ ಸಂಘರ್ಷ ಕೊನೆಗೊಳಿಸಿ, * ಕಂದಾಯ-ಅರಣ್ಯಭೂಮಿ ಸಮಸ್ಯೆ ಪರಿಹರಿಸಿ * ಕಾಫಿಬೆಳೆಗಾರರನ್ನು ಸರ್ಫೇಸಿಯಿಂದ ಮುಕ್ತಿನೀಡಿ
ಕಳೆದ ಚಿಕ್ಕಮಗಳೂರು: ರಾಜ್ಯದ ಮುಖ್ಯ ಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡುತ್ತಿರುವ ರಾಜ್ಯದ ದೊರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರಿಗೆ ಜಿಲ್ಲೆಯ ಜನರ ಪರವಾಗಿ ಅವಿನ್ ಟಿವಿ ಹಾರ್ದಿಕ ಸುಸ್ವಾಗತವನ್ನು ಕೋರುತ್ತಾ ಹಲವು ದಶಕಗಳಿಂದ ಬಗೆ ಹರಿಯದ ಹತ್ತು ಹಲವು ಜ್ವಲಂತ ಸಮಸ್ಯೆಗಳ ಬಗ್ಗೆ ವಾಹಿನಿ ಬೆಳಕು ಚೆಲ್ಲುತ್ತಿದ್ದು, ಈ ಕುರಿತಂತೆ ಕ್ರಮ ವಹಿಸಿ ಜಿಲ್ಲೆಯ ಜನರ ನೆಮ್ಮದಿಯ ಬದುಕಿಗೆ ಕ್ರಮ ಕೈಗೊಳ್ಳಬೇಕೆಂಬುದು ನಮ್ಮ ಮನವಿ.
ಇತ್ತೀಚೆಗೆ ಜಿಲ್ಲೆಯ 137 ಗ್ರಾಮ ಪಂಚಾಯ್ತಿ ವ್ಯಾಪ್ತಿಯ 2,23,440.41 ಹೆಕ್ಟೇರ್ ಭೂ ಪ್ರದೇಶವನ್ನು ಕಸ್ತೂರಿರಂಗನ್ ವರದಿಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಿರುವುದರಿಂದ ಜಿಲ್ಲೆಯ ಜನತೆ ಭಯದ ನೆರಳಿನಲ್ಲಿ ದಿನ ದೂಡುವಂತಾಗಿದೆ.
ಪಶ್ಚಿಮಘಟ್ಟ ಸಂರಕ್ಷಣೆ ಅಗತ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಸಂರಕ್ಷಣೆಯ ಹೆಸರಿನಲ್ಲಿ ಇಲ್ಲಿ ತಲೆ ತಲಾಂತರಗಳಿಂದ ಬದುಕುತ್ತಿರುವ ರೈತರು, ಬೆಳೆಗಾರರು, ಗ್ರಾಮಸ್ಥರು ತಮ್ಮ ಭೂಮಿ ಮತ್ತು ಬದುಕಿನ ಬಗ್ಗೆ ನಿರಂತರ ಆತಂಕದಲ್ಲಿ ಜೀವಿಸುತ್ತಿದ್ದು ಈ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸುವ ನಿಟ್ಟಿನಲ್ಲಿ ಕೇರಳ ರಾಜ್ಯದಲ್ಲಿ ಅಲ್ಲಿನ ಸರ್ಕಾರ ಕೈಗೊಂಡ ದಿಟ್ಟ ಕ್ರಮಗಳನ್ನು ಕೈಗೊಳ್ಳುವ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಕೇಂದ್ರದೊಂದಿಗೆ ನಿರಂತರ ಸಂವಾದ ನಡೆಸಿ, ಗ್ರಾಮವಾರು ವಾಸ್ತವಾಂಶ ಪರಿಶೀಲಿಸಿ, ಜನರ ಆತಂಕಕ್ಕೆ ಕಾನೂನುಬದ್ದ ಮತ್ತು ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಮುಂದಾಗಬೇಕಿದೆ. ಇದು ಜನರ ಆಗ್ರಹವೂ ಕೂಡಾ.
ಮಲೆನಾಡಿನ ಜನರನ್ನು ಕಂಗೆಡಿಸಿರುವ ಮಾನವ ವನ್ಯಜೀವಿ ಸಂಘರ್ಷವನ್ನು ಕೊನೆಗಾಣಿಸುವ ಬದ್ಧತೆ ಪ್ರದರ್ಶನದ ಅಗತ್ಯವಿದೆ. ಜಿಲ್ಲೆಯ ಮಲೆನಾಡು ಭಾಗದ ಗ್ರಾಮಗಳಲ್ಲಿ ನಿರಂತರವಾಗಿ ಆನೆ ದಾಳಿಯಿಂದ ಸಾವು ನೋವುಗಳಿಂದ ಸಾಗಿ ಶವ ಯಾತ್ರೆಗಳ ಹೊಸ ಸೇರ್ಪಡೆ ನಿರಂತರವಾಗಿವೆ.ಅದರೊಂದಿಗೆ ಕಾಡೆಮ್ಮೆ ದಾಳಿಯಿಂದ ಸಾವು ನೋವುಗಳು ಆರಂಭವಾಗಿವೆ. ಆನೆಗಳು ನುಗ್ಗುವುದು, ಬೆಳೆ ಹಾನಿಯಾಗುವುದು, ಕಾರ್ಮಿಕರು ಮತ್ತು ಬೆಳೆಗಾರರ ಜೀವಕ್ಕೆ ಅಪಾಯ ಎದುರಾಗುವುದು ಇವೆಲ್ಲವೂ ಗ್ರಾಮೀಣ ಆರ್ಥಿಕತೆಯನ್ನೇ ದುರ್ಬಲಗೊಳಿಸುತ್ತಿವೆ.
ಪ್ರಾಣಿ-ಮಾನವ ಸಂಘರ್ಷದಿಂದ ಮೃತಪಟ್ಟವರಿಗೆ ಸರ್ಕಾರ ಲಕ್ಷ ಲಕ್ಷ ರೂಗಳನ್ನು ಪರಿಹಾರ ರೂಪದಲ್ಲಿ ಸುರಿದರು ಪ್ರಾಣಕ್ಕೆ ಎಣೆಯಾಗುವುದಿಲ್ಲ ಪರಿಹಾರ ಧನಕ್ಕಿಂತ ಮೊದಲು ಜೀವ ಉಳಿಸುವ ವ್ಯವಸ್ಥೆ ತುರ್ತಾಗಿ ಆಗಬೇಕಿದೆ. ಸಂಘರ್ಷ ಪೀಡಿತ ಪ್ರದೇಶಗಳ ವೈಜ್ಞಾನಿಕ ಮ್ಯಾಪಿಂಗ್.ನಿರಂತರ ಆನೆ ಚಲನವಲನ ನಿಗಾ ವ್ಯವಸ್ಥೆ,.ಸೌರ ಬೇಲಿ ಮತ್ತು ಇತರ ಸುರಕ್ಷತಾ ಕ್ರಮಗಳ ಗುಣಮಟ್ಟದ ಪರಿಶೀಲನೆ,ರೈತರ ಬೆಳೆಹಾನಿಗೆ ತ್ವರಿತ ಮತ್ತು ಪಾರದರ್ಶಕ ಪರಿಹಾರ, ಮೃತರ ಕುಟುಂಬಗಳಿಗೆ ತಕ್ಷಣದ ನೆರವು, ಸಂಘರ್ಷಪೀಡಿತ ಪ್ರದೇಶಗಳಿಗೆ ವಿಶೇಷ ಅರಣ್ಯ ಸಿಬ್ಬಂದಿ, ದೀರ್ಘಕಾಲಿಕ ಆನೆ ಕಾರಿಡಾರ್ ನಿರ್ವಹಣೆ ಇವೆಲ್ಲವನ್ನೂ ಒಳಗೊಂಡ ಚಿಕ್ಕಮಗಳೂರು ಮಾನವ-ವನ್ಯಜೀವಿ ಸಂಘರ್ಷ ಶಾಶ್ವತ ಕಾರ್ಯಯೋಜನೆ ರೂಪಿಸುವ ಅಗತ್ಯವಿದೆ.
ಚಿಕ್ಕಮಗಳೂರಿನ ಹಳೆಯ ಸಮಸ್ಯೆಗಳಲ್ಲಿ ಅರಣ್ಯ ಮತ್ತು ಕಂದಾಯ ಭೂಮಿಯ ಗಡಿ ಹಾಗೂ ದಾಖಲೆಗಳ ಗೊಂದಲವೂ ಒಂದು. ಜಂಟಿ ಸರ್ವೆ, ಗಡಿ ಗುರುತಿಸುವಿಕೆ, ದಾಖಲೆಗಳ ಪರಿಶೀಲನೆ ಮತ್ತು ಹಕ್ಕುಗಳ ಸ್ಪಷ್ಟಿಕರಣ ಹಲವು ಕಡೆಗಳಲ್ಲಿ ಪೂರ್ಣಗೊಳ್ಳದೆ ಇರುವುದರಿಂದ ಜನರು ಕಚೇರಿಗಳ ಸುತ್ತ ಸುತ್ತುವ ಪರಿಸ್ಥಿತಿ ಮುಂದುವರಿದಿದೆ.
2026ರಲ್ಲಿ ರಾಜ್ಯಾದ್ಯಂತ ದುರ್ಬಲ ಮುಂಗಾರು ಮತ್ತು ನೀರಿನ ಕೊರತೆಯ ಬಗ್ಗೆ ಸರ್ಕಾರವೇ ಎಚ್ಚರಿಕೆ ನೀಡಿದೆ. ಚಿಕ್ಕಮಗಳೂರು ಜಿಲ್ಲಾಡಳಿತದ ದಾಖಲೆಗಳಲ್ಲೂ ಕುಡಿಯುವ ನೀರು, ಮೇವು ಮತ್ತು ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ಸಭೆಗಳು ನಡೆದಿದೆ. ಮಲೆನಾಡಿನಲ್ಲಿ ಮಳೆ ಕಡಿಮೆಯಾದರೆ
ಕಾಫಿ, ಅಡಿಕೆ, ಮೆಣಸು ಸೇರಿದಂತೆ ತೋಟಗಾರಿಕಾ ಬೆಳೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಬಯಲು ಭಾಗದಲ್ಲಿ ರಾಗಿ, ಜೋಳ ಮತ್ತು ಇತರ ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತದೆ. ಮಳೆ ನೀರು ಸಂಗ್ರಹ, ಕೆರೆಗಳ ಪುನರುಜ್ಜಿವನ, ಸಣ್ಣ ಜಲಾಶಯಗಳು, ಜಲಾನಯನ ಅಭಿವೃದ್ಧಿ, ಕುಡಿಯುವ ನೀರಿನ ಶಾಶ್ವತ ಮೂಲಗಳ ರಕ್ಷಣೆ ಇವುಗಳಿಗೆ ವಿಶೇಷ ಅನುದಾನ ನೀಡಬೇಕಾಗಿದೆ.
ಕಾಫಿ ಬೆಳೆಗಾರರಿಗೆ ರಕ್ಷಣೆ ನೀಡುವುದು ಸರ್ಕಾರದ ಆದ್ಯ ಕರ್ತವ್ಯವಾಗಲಿ. ಅತಿವೃಷ್ಟಿ ಅನಾವೃಷ್ಟಿಯ ಪರಿಣಾಮಗಳು ನೇರವಾಗಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಕಾಫಿಯ ಮೇಲೆ ಬೀರುತ್ತಿದ್ದು ಇದರಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅತೀವೃಷ್ಟಿ ಅನಾವೃಷ್ಟಿ, ಕೀಟಬಾಧೆಯಿಂದ ಬೆಳೆ ನಷ್ಟದ ನೋವಿನ ಜೊತೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಪಡೆದಿರುವ ಸಾಲ ಮರು ಪಾವತಿಯಾಗದ ಕಾರಣ ಸರ್ಫೇಸಿ ಕಾಯ್ದೆಯಡಿ ಆನ್ ಲೈನ್ ಮೂಲಕ ನಿರ್ಧಾಕ್ಷಿಣ್ಯವಾಗಿ ಹರಾಜು ಹಾಕಲಾಗುತ್ತಿದೆ.
ಅನಾವೃಷ್ಟಿಯಿಂದ ಬೆಳೆ ನಷ್ಟವನ್ನು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಕೀಟಬಾದೆ ನೀಗಿಸಲು ಪರಿಹಾರ ಕಲ್ಪಿಸುವುದು. ಕಾಫಿ ಸಂಶೋಧನೆ ಮತ್ತು ತಂತ್ರಜ್ಞಾನದಲ್ಲಿ ಚಿಕ್ಕಮಗಳೂರಿನ ಐತಿಹಾಸಿಕ ಸ್ಥಾನವನ್ನು ಗಮನದಲ್ಲಿಟ್ಟುಕೊಂಡು ಸಂಶೋಧನಾ ಸಂಸ್ಥೆಗಳು, ಕಾಫಿ ಮಂಡಳಿ ಮತ್ತು ರಾಜ್ಯದ ಕೃಷಿ ಇಲಾಖೆಯನ್ನು ಒಳಗೊಂಡ ಸಮನ್ವಯ ವ್ಯವಸ್ಥೆ ರೂಪಿಸಬೇಕಾಗಿದೆ. ಸರ್ಪೇಸಿ ಕಾಯ್ದೆ ವ್ಯಾಪ್ತಿಯಿಂದ ಕಾಫಿ ಬೆಳೆಯನ್ನು ಪ್ರತ್ಯೇಕಿಸಿ ಕಾಫಿ ಚಿಕ್ಕಮಗಳೂರಿನ ಕೆಲವು ಆಡಳಿತಾತ್ಮಕ ಸೇವೆಗಳ ವಿಳಂಬದ ಬಗ್ಗೆ ಇತ್ತೀಚಿನ ಸಾರ್ವಜನಿಕ ಸಭೆಗಳಲ್ಲೂ ಆಕ್ಷೇಪಗಳು ವ್ಯಕ್ತವಾಗಿವೆ. ಉದಾಹರಣೆಗೆ, ಕೊಪ್ಪ ತಾಲ್ಲೂಕಿನ ಪ್ರಜಾಸೇವಾ ಸಭೆಯಲ್ಲಿ ಜಾತಿ ಪ್ರಮಾಣಪತ್ರ ನೀಡುವಲ್ಲಿನ ವಿಳಂಬದ ಬಗ್ಗೆ ಅಧಿಕಾರಿಗಳ ವಿರುದ್ಧ ಆಕ್ಷೇಪ ವ್ಯಕ್ತವಾಗುತ್ತವೆ.
2026 ರ ಜೂನ್‌ನಲ್ಲಿ ಕರ್ನಾಟಕ ಲೋಕಾಯುಕ್ತ ನಡೆಸಿದ ಅಕ್ರಮ ಆಸ್ತಿ ಪ್ರಕರಣಗಳ ದಾಳಿಗಳ ವ್ಯಾಪ್ತಿಯಲ್ಲಿ ಚಿಕ್ಕಮಗಳೂರೂ ಸೇರಿತ್ತು. ಇದು ಜಿಲ್ಲೆಯ ಪ್ರತಿಯೊಬ್ಬ ಅಧಿಕಾ-ರಿಯ ಮೇಲೂ ಆರೋಪವಿದೆ ಎಂಬ ಅರ್ಥವಲ್ಲ; ಆದರೆ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಮೇಲ್ವಿಚಾರಣೆಯನ್ನು ಇನ್ನಷ್ಟು ಬಲಪಡಿಸುವ ಅಗತ್ಯವನ್ನು ನಿರ್ಲಕ್ಷಿಸಲಾಗದು. ಮುಖ್ಯಮಂತ್ರಿಗಳೇ, ಜಿಲ್ಲೆಗೆ ವಿಶೇಷ ಆಡಳಿತಾತ್ಮಕ ಕಾರ್ಯಕ್ಷಮತೆ ಮತ್ತು ಭ್ರಷ್ಟಾಚಾರ ನಿಯಂತ್ರಣ ಅಭಿಯಾನ ಆರಂಬಿಸಿ ಇಲಾಖೆಗಳ ಶುದ್ದಿಕರಣ ಮಾಡ ಬೇಕಿದೆ.

