ಹಾವೇರಿ ವಿವಿ ನೀಡಲು ಹೊರಟಿದ್ದ “ಗೌಡಾ” ಪುರಸ್ಕಾರವನ್ನು ನಿರಾಕರಿಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.*..
1 min read
ಅವಿನ್ ಟಿವಿ ಸುದ್ದಿಜಾಲ ✍️: *ಹಾವೇರಿ ವಿವಿ ನೀಡಲು ಹೊರಟಿದ್ದ “ಗೌಡಾ” ಪುರಸ್ಕಾರವನ್ನು ನಿರಾಕರಿಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.*
ಹಾವೇರಿ ಏ ೦೫: ಹಾವೇರಿ ವಿಶ್ವವಿದ್ಯಾಲಯವು ಮಾಜಿ ಮುಖ್ಯಮಂತ್ರಿಗಳು ಹಾಲಿ ಸಂಸದರಾದ ಬಸವರಾಜ ಬೊಮ್ಮಾಯಿ ಅವರಿಗೆ ಗೌರವ ಡಾಕ್ಟರೇಟ್ (ಗೌಡಾ) ಪ್ರಧಾನ ಮಾಡಲು ತೀರ್ಮಾನಿಸಿತ್ತು, ಆದರೆ ಈ ಗೌರವ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಲು ನಿರಾಕರಿಸಿದ ಬೊಮ್ಮಾಯಿ ಅವರ ಈ ನಡೆ ನಿಜಕ್ಕೂ ಮಾದರಿಯಾಗಿದೆ. ಅವರ ಈ ಪ್ರಬುದ್ಧ ನಿಲುವನ್ನು ರಾಜ್ಯದ ಅನೇಕರು ಸ್ವಾಗತಿಸಿ ಪ್ರಶಂಸಿಸಿದ್ದಾರೆ, ಅವರ ಸೈದ್ಧಾಂತಿಕ ವಿರೋಧಿಗಳು ಕೂಡ ಅಭಿನಂದಿಸಿದ್ದಾರೆ.
ಇಂದಿನ ಬಹುತೇಕ ವಿಶ್ವವಿದ್ಯಾಲಯಗಳು ರಾಜಕೀಯ ಪಡಸಾಲೆಗಳಾಗಿ ರಾಜಕಾರಣಿಗಳು ನಾಚುವಂತಹ ಒಳಸುಳಿಯ ರಾಜಕಾರಣ ಮಾಡುತ್ತಿವೆ ಎಂಬ ಗುರುತರ ಆರೋಪ ಕಳೆದ ಎರಡು ಮೂರು ದಶಕಗಳಿಂದೀಚೆಗೆ ಅತೀ ಹೆಚ್ಚಾಗಿ ವಿಶ್ವವಿದ್ಯಾಲಯಗಳ ಘನತೆಗೆ ಪೆಟ್ಟು ಬೀಳುತಿದೆ.
ತಮ್ಮ ತಮ್ಮ ವೈಯಕ್ತಿಕ ಹಿತಾಸಕ್ತಿಗೋಸ್ಕರ ಪ್ರಭಾವಿ ರಾಜಕೀಯ ವ್ಯಕ್ತಿಗಳನ್ನು ವಿಶ್ವವಿದ್ಯಾಲಯಗಳು ಓಲೈಕೆ ಮಾಡುವುದನ್ನು ಬಿಡಬೇಕು.ರಾಜ್ಯದ ಹಲವು ವಿಶ್ವವಿದ್ಯಾಲಯಗಳು ಈ ಹಿಂದೆ ಕೆಲವು ಪ್ರಭಾವಿ ರಾಜಕಾರಣಿಗಳಿಗೆ ಅರ್ಹತೆ ಇಲ್ಲದಿದ್ದರೂ ಕೂಡ ಗೌರವ ಡಾಕ್ಟರೇಟ್ ಅಂತಹ ಪದವಿ ಪುರಸ್ಕಾರ ನೀಡಿದ್ದಾವೆ, ಇಂತಹ ಗೌರವ ಡಾಕ್ಟರೇಟ್ ಪುರಸ್ಕಾರವನ್ನು ಸ್ವೀಕರಿಸುವ ಯೋಗ್ಯತೆ ನನಗೆಷ್ಟಿದೆ ಎಂಬುದನ್ನು ಚಿಂತಿಸದೆ ಉದಾರವಾಗಿ ಉಚಿತವಾಗಿ ಸ್ವೀಕರಿಸಿದ ಉದಾಹರಣೆಗಳು ಹಲವಷ್ಟುಂಟು, ಅರ್ಹತೆ ಮತ್ತು ಸಾಧನೆ ಇಲ್ಲದಿದ್ದವರಿಗೂ ಸಹ ಗೌರವ ಡಾಕ್ಟರೇಟ್ ಪ್ರಧಾನ ಮಾಡುವುದು ವಿಶ್ವವಿದ್ಯಾಲಯಗಳು ತಮಗೆ ತಾವೇ ಕಪ್ಪು ಚುಕ್ಕಿ ಇಟ್ಟುಕೊಂಡಂತೆ ಆಗುತ್ತದೆ.
ವಿವಿಗಳು ಇರುವುದು ಶೈಕ್ಷಣಿಕ ಸಾಧನೆಗೆ. ರಾಜಕೀಯ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಮೆರೆದು ಅದ್ಭುತವಾಗಿ ಜನಪರ ಕೆಲಸ ಮಾಡಿದ ಅಪರೂಪದ ಸಾಧಕರಿಗೆ ಅವರ ನಿವೃತ್ತಿ ನಂತರ ಬೇಕಾದರೆ ಕೊಡಲಿ. ರಾಜಕೀಯ ಅಧಿಕಾರ ಇದ್ದಂತಹ ಸಂದರ್ಭದಲ್ಲಿ ಕೊಡುವುದು ಬೇಡ,ಅದನ್ನು ಬಿಟ್ಟು ಪ್ರಭಾವಿ ರಾಜಕಾರಣಿಗಳ ಓಲೈಕೆ ಮಾಡಲು ಇಂತಹ ಗೌರವ ಡಾಕ್ಟರೇಟ್ ಪುರಸ್ಕಾರವನ್ನು ನೀಡುತ್ತಾ ಹೋದರೆ ವಿವಿಗಳ ಘನತೆ ಏನಾಗುತ್ತದೆ ? ಎಂಬುದನ್ನು ವಿಶ್ವವಿದ್ಯಾಲಯಗಳು ಅರಿಯಬೇಕಿದೆ.
ಅವಶ್ಯಕತೆ ಇರಲಿ ಬಿಡಲಿ ಈಗಾಗಲೇ ಜಿಲ್ಲೆಗೊಂದು ವಿಶ್ವವಿದ್ಯಾಲಯಗಳು ಹುಟ್ಟಿಕೊಂಡಿವೆ, ಹುಟ್ಟಿಕೊಳ್ಳುತ್ತಿವೆ, ಇಂತಹ ವಿವಿಗಳಲ್ಲಿ ಶೈಕ್ಷಣಿಕ ಘಮಲು ಪಸರಿಸಬೇಕು, ಸುವಾಸನೆಯನ್ನು ಪಸರಿಸಬೇಕಾದ ವಿಶ್ವವಿದ್ಯಾಲಯದ ಆವರಣದೊಳಗೆ ಚರಂಡಿ ವಾಸನೆ ಮೂಗಿಗೆ ಬಡಿಯುವಂತಾಗಬಾರದು, ಈ ನಾಡಿನ ಅನೇಕ ಮೇರು ವ್ಯಕ್ತಿಗಳು ತಮ್ಮ ಸಾಧನೆಯ ಮೂಲಕ ಇಂತಹ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದು ಅದರ ಗೌರವವನ್ನು ಎತ್ತರಿಸಿದ್ದಾರೆ , ಆದರೆ ಬದಲಾದ ಇತ್ತೀಚಿನ ದಿನಮಾನಗಳಲ್ಲಿ ಸಾಧಕರಲ್ಲದಿದ್ದವರಿಗೂ ಕೂಡ ಕೇವಲ ಅಧಿಕಾರ ಮತ್ತು ಪ್ರಭಾವವಿದ್ದ ಕಾರಣ ಇಂತಹ ಡಾಕ್ಟರೇಟ್ ಪದವಿಯನ್ನು ಕೊಟ್ಟು ಅದರ ಗೌರವವನ್ನು ವಿಶ್ವವಿದ್ಯಾಲಯಗಳು ಕಡಿಮೆ ಮಾಡುತ್ತಿವೆ.
ಇಂತಹ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಲು ಕೇವಲ ರಾಜಕಾರಣಿಗಳು ಮಾತ್ರವಲ್ಲ ಮಠಮಾನ್ಯಗಳು ಸೇರಿದಂತೆ ಇತರೆ ಕ್ಷೇತ್ರದ ಜನರು ಸಹ ತಮ್ಮ ಪ್ರಭಾವ ಬಳಸಿ ಡಾಕ್ಟರೇಟ್ ಪದವಿಯನ್ನು ಗಳಿಸಿಕೊಳ್ಳುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ, ತಲೆಗೊಂದು ವಿಶ್ವವಿದ್ಯಾಲಯಗಳು ಹುಟ್ಟಿಕೊಂಡು ಪ್ರಭಾವಕ್ಕೆ ಮತ್ತು ಇತರೆ ಆಮಿಷಗಳಿಗೆ ಒಳಗಾಗಿ ಸಿಕ್ಕಸಿಕ್ಕ ವರಿಗೆ ಗೌಡ ಪುರಸ್ಕಾರ ಕೊಡುತ್ತಿರುವ ಕಾರಣ ಈ ಗೌರವ ಡಾಕ್ಟರೇಟ್ ಪುರಸ್ಕಾರದ ಬೆಲೆ ಕಡಿಮೆಯಾಗುತ್ತಿರುವ ಸಂಬಂಧ ಡಾಕ್ಟರೇಟ್ ಪುರಸ್ಕಾರ ಪಡೆದ ಯಾರು ಕೂಡ ತಮ್ಮ ಹೆಸರಿನ ಹಿಂದೆ ತಾವು ಪಡೆದಂತಹ ಈ ಗೌರವ ಡಾಕ್ಟರೇಟ್ ಪದವಿಯನ್ನು ಹಾಕಿಕೊಳ್ಳಬಾರದು ಎಂದು ರಾಜ್ಯ ಉಚ್ಚ ನ್ಯಾಯಾಲಯ ಆದೇಶ ಮಾಡಿದ್ದರೂ ಸಹ ಇಂದಿಗೂ ಅನೇಕರು ತಮ್ಮ ಹೆಸರಿನ ಹಿಂದೆ ಈ ಗೌರವ ಡಾಕ್ಟರೇಟ್ ಪದವಿಯನ್ನು ಅಂಟಿಸಿಕೊಳ್ಳುತ್ತಿದ್ದಾರೆ, ಇದಕ್ಕೆ ಮಠಮಾನ್ಯದ ಕೆಲವು ಸ್ವಾಮೀಜಿಗಳು ಹೊರತಾಗಿಲ್ಲ ಎಂಬುದು ಗಂಭೀರ ವಿಷಯವಾಗಿದೆ.
ಇಂಥ ಅಭಾಸಗಳನ್ನು ತಡೆಗಟ್ಟಲು
“ಗೌಡಾ” ಪದವಿ ನೀಡವ ಎಲ್ಲಾ ವಿವಿಗಳಿಗೆ ಏಕ ರೂಪದ ನಿಯಮ ರೂಪಿಸಿ ಒಂದು ವಿವಿಗೆ ಪ್ರತಿ ವರ್ಷ ಒಬ್ಬರು ಅಥವಾ ಇಬ್ಬರಿಗೆ ಮಾತ್ರ “ಗೌಡಾ” ಹಾಗೂ “ನಾಡೋಜ” ನೀಡುವಂತಾದರೆ ಈ “ಭಿಕ್ಷೆ ನೀಡುವ ಪದ್ಧತಿ”ಗೆ ಲಗಾಮು ಹಾಕಬಹುದು ಎಂಬುದು ಶಿಕ್ಷಣ ತಜ್ಞರು ಮತ್ತು ಹಲವು ಚಿಂತಕರ ಅಭಿಪ್ರಾಯವಾಗಿದೆ.
ಈ ನಿಟ್ಟಿನಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಲಿ ಸಂಸದರಾದ ಬಸವರಾಜ್ ಬೊಮ್ಮಾಯಿ ಅವರು ಗೌರವ ಡಾಕ್ಟರೇಟ್ ಪದವಿಯನ್ನು ನಿರಾಕರಿಸುವ ಮೂಲಕ ಮುತ್ಸದ್ದಿತನವನ್ನು ತೋರಿಸಿ ವಿಶ್ವವಿದ್ಯಾಲಯಗಳಿಗೆ ಒಂದು ಎಚ್ಚರಿಕೆಯ ಗಂಟೆ ಹಾಗೂ ರಾಜಕಾರಣಿಗಳನ್ನೂ ಒಳಗೊಂಡಂತೆ ಡಾಕ್ಟರೇಟ್ ಪದವಿಯನ್ನು ಪಡೆಯಲು ಸಾಲಾಗಿ ನಿಂತಿರುವ ಇತರೆ ಕ್ಷೇತ್ರಗಳ ಪ್ರಮುಖರಿಗೂ ಒಂದು ಮಾದರಿಯ ಪಾಠವನ್ನು ಏಕಕಾಲಕ್ಕೆ ಮಾಡಿದ್ದಾರೆ.
•••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✍️
ಚಿಕ್ಕಮಗಳೂರು

