लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಈ ನರಮೇಧ ಮನುಷ್ಯ ಸಮಾಜಕ್ಕೆ ನೀಡುತ್ತಿರುವ ಸಂದೇಶವಾದರು ಏನು….

1 min read

ಅವಿನ್ ಟಿವಿ ಸುದ್ದಿಜಾಲ ✍️: ಎಷ್ಟೊಂದು ಕನಸುಗಳಿದ್ದವು ಆ ಎಳೆಯ ಮುದ್ದು ಕಂದಮ್ಮಗಳ ಕಂಗಳಲಿ… ವಿಶ್ವದ ದೊಡ್ಡಣ್ಣ ನೆನೆಸಿಕೊಂಡವನ ಕೈ ಮುಷ್ಟಿಯಲ್ಲಿದ್ದ ಆ ಒಂದು ಸಣ್ಣ ಬಾಂಬು ಕ್ಷಣಮಾತ್ರದಲ್ಲಿ ಸಾವಿರಾರು ಅ ಎಳೆಯ ಮಕ್ಕಳನ್ನು ಹೆಣವಾಗಿ ಮಲಗಿಸಿದ್ದಾದರೂ ಯಾವ ಸಾರ್ಥಕತೆಗಾಗಿ ? ಈ ನರಮೇಧ ಮನುಷ್ಯ ಸಮಾಜಕ್ಕೆ ನೀಡುತ್ತಿರುವ ಸಂದೇಶವಾದರು ಏನು ? ಸಾವನ್ನು ನೋಡಿ ಸಂಭ್ರಮಿಸುತ್ತಿರುವ ವಿಕೃತ ಮನಸ್ಸುಗಳಿಗೆ ಬುದ್ಧನ ಪ್ರೀತಿ ಗಾಂಧೀಜಿಯ ಅಹಿಂಸೆ ಅರ್ಥವಾದೀತು ಹೇಗೆ ???.

*ಅಜೋ ಎಂಬುವರ ಈ ಕೆಳಕಂಡ ಬರಹ ಅವಿನ್ ಟಿವಿ ಸುದ್ದಿಜಾಲದ ಓದುಗರಿಗಾಗಿ…. 👇*
____________________

ಬೆಳಗ್ಗೆ ಅಮ್ಮನ ಕೈತುತ್ತಿನ ರುಚಿ ಹಾಗೆ ನಾಲಿಗೆಯ ಮೇಲೆ ನಲಿದಾಡುತ್ತಿತ್ತು..
ಮದ್ಹಾಹ್ನದ ಟಿಫಿನ್ ಬಾಕ್ಸ್ ಜತೆ ಸ್ನಾಕ್ಸ್ ಗೆ ಹಾಕಿದ ಖರ್ಜೂರದ ಸಿಹಿ ತನ್ನ ಸುತ್ತಲೇ ಸುಳಿಯುತ್ತಲಿತ್ತು…
ಎಸ್ರಾ ಫರಾಯಿ ಕನಸು ಕಂಗಳಲಿ ಹೋಮ್ ವರ್ಕ್ ತೋರಿಸಲು ನೋಟ್ಸ್ ಹಿಡಿದು ಗೆಳತಿ ಮಖಾನ್ ನಾಸಿರಿ ಜತೆ ಮಾತಿಗಿಳಿದಿದ್ದಳು…

ಅಪ್ಪನಿಗಾಗಿ ರಚ್ಚೆ ಹಿಡಿದಾಗ
ದೂರದ ಓಮನ್ ನಿಂದ ದುಡಿಯಲು ಹೋದ ಅಪ್ಪ ಇಂದು ನೀ ಶಾಲೆಯಿಂದ ಬರುವ ಹೊತ್ತಿಗೆ ಬಂದಿರುತ್ತಾರೆಂದು ಅಮ್ಮೀಜಾನ್ ಸಂತೈಸಿ ಕಳಿಸಿದ ಜಹ್ರಾ ಬಹ್ರಾಮಿ ಅಪ್ಪನ ಕಾಣುವ ಕಾತರದಲ್ಲಿದ್ದಾಳೆ..

ಸಂಜೆಗೆ ಹೊಸ ಶೂ ತರುವೆನೆಂದು ಹಣ್ಣು ಮಾರಲು ಹೋದ ಅಂಕಲ್ ಹಣೆಯ ಮೇಲೆ ಮುತ್ತಿಟ್ಟ ಕಾವಿನ್ನೂ ಆರಿಲ್ಲ..
ಮಹ್ದಿಸ್ ನಜಾರಿ ಹೊಸ ಶೂಗಳು ಹೇಗಿರಬಹದುದೆಂದು ಡ್ರಾಯಿಂಗ್ ಬುಕ್ ನಲ್ಲಿ ಕ್ರೆಯಾನ್ಸ್ ನಿಂದ ಶೂ ಚಿತ್ರ ಬರೆಯುತ್ತಿದ್ದಾಳೆ…

ತನ್ನಂತೆಯೇ ಯೂನಿಫಾರಂ ಹಾಕಿ, ಶೂ ಧರಿಸಿ ಪೋಲೀಸ್ ಡ್ಯೂಟಿಗೆ ಹೊರಟ ಅಮ್ಮಿ ತೆಹಮಿನಾ ‘ನೀನು ನನಗಿಂದ ದೊಡ್ಡ ಅಧಿಕಾರಿ ಆಗಬೇಕು ಕಂದಾ’ ಎಂದ ಮಾತು ಇನ್ನೂ ನಾಡಿಯಾ ಶಹಮಿರ್ ಗೆ ಅರ್ಥವೇ ಆಗಿಲ್ಲ…
ಅಮ್ಮೀಜಾನ್ ನಿನ್ನಂತೆ ಆಗುವುದೆ ಇಷ್ಟ ಎಂದದ್ದನ್ನು ನೆನಪಿಸಿಕೊಳ್ಳುತ್ತಿದ್ದಾಳೆ..

ತಾತ ಮೊಹಮದ್ ತಾರೀಕ್ ದೂರದ ದೆಹಲಿಯಿಂದ ತಂದಿದ್ದ ಬೆಚ್ಚನೆಯ ಉಣ್ಣೆಯ ಗೌನ್ ತೊಟ್ಟು, ನನ್ನ ತಾತ ತಂದಿದ್ದು ಎಂದು ತನ್ನ ಸ್ನೇಹಿತೆ ಸಮನ್
ಕರಿಮ್ಜಾದೆಯ ಕಿವಿಯಲ್ಲಿ
ಪಿಸಿನುಡಿದು ಹೇಳುತ್ತಿದ್ದಾಳೆ ಪುಟಾಣಿ ಅಸ್ನಾ ರೈಸಿ…

ನಿನ್ನೆಯ ಪಪ್ಪನ ಬರ್ಥಡೇ ಪಾರ್ಟಿಯ ಸಂಭ್ರಮದಲ್ಲಿ ಹೋಮ್ ವರ್ಕ್ ಮಾಡದೆ ಭಯದಲ್ಲಿರುವ ಲಿಯಾನಾ..
ಕ್ಲಾಸ್ ಟೀಚರ್ ಹಸೀನಾ ಇಂದು ಶಾಲೆಗೆ ರಜೆ ಹಾಕಿರಲಿ ಎಂದು ಅಲ್ಲಾಹ್ ನಲ್ಲಿ ಮೊರೆಯಿಡುತ್ತಿದ್ದಾಳೆ…

ಶಾಲೆಯಿಂದ ಮನೆಗೆ ಮರಳಿದ ನಂತರ ಐಸ್ ಕ್ರೀಮ್ ಪಾರ್ಲರ್ ಗೆ ಕರೆದೊಯ್ಯುವೆ ಎಂದ
ಆಂಟಿಯ ಮಾತು ಕಿವಿಯಲ್ಲಿ ರಿಂಗಣಿಸುತ್ತಲೇ ಇದೆ..
ಬೆನ್ನಾಮಿನ್ ಸೂರ್ಯನೆ ಬೇಗ ಚಲಿಸಿಬಿಡು ಶಾಲೆ ಮುಗಿದುಬಿಡಲಿ ಮನದಲ್ಲೇ ಲೆಕ್ಕ ಹಾಕುತ್ತಿದ್ದಾಳೆ…

ಈಗಷ್ಟೇ ಶಾಲೆ ಶುರುವಾಗಿತ್ತು…
ಮಕ್ಕಳ ಕಂಗಳಲ್ಲಿನ ಕನಸುಗಳು
ಈಗತಾನೆ ಕಣ್ಣುಜ್ಜಿ ಪಿಳಿಪಿಳಿ ನೋಡುತ್ತಿದ್ದವು..
ಹೊರಗಡೆ ಮಿನಾಬ್ ನಗರ
ವಾಹನಗಳ ಹಾರನ್ ಗಳಿಂದ
ಪಾರಿವಾಳಗಳ ಹಾರಾಟದಿಂದ ಜೀವಂತವಾಗಿತ್ತು..
ತಯ್ಯಿಬಾ ಶಾಲೆ
ಮರಿಗಳ ರೆಕ್ಕೆಯಲಿ ಮುಚ್ಚಿಟ್ಟುಕೊಂಡು ಮೇಲೆ ಹಾರುತ್ತಿದ್ದ ಗಿಡುಗಕ್ಕೆ ಭಯಗೊಂಡ ಕೋಳಿಯಂತೆ ಕಾಣುತ್ತಿತ್ತು…

ಸರಕ್ಕನೆ ಎರಗಿದ ಕಿವಿಗಡಕಿಚ್ಚುವ ಭಯಂಕರ ಸದ್ದು..ಮಕ್ಕಳು ಕಣ್ಣುಬಿಟ್ಟು ನೋಡುತ್ತಿದ್ದಂತೆಯೇ ಕುಸಿದ ಚಾವಣಿಗಳ ಅಡಿಯಲ್ಲಿ…ಕೀರಲು ದನಿಗಳು ಉಸಿರಾಡಲು ಕಷ್ಟಪಡುತ್ತಿವೆ…
ಕಳಚಿಬಿದ್ದ ಕಟ್ಟಡದ ಹೊಗೆಯಲ್ಲಿ
ಮನುಷ್ಯತ್ವವೇ ಉಸಿರುಕಟ್ಟಿತ್ತು..

ನನ್ನ ಪುಟ್ಟ ಮಗಳೂ ಇದೇ ಶಾಲೆಯಲ್ಲಿ ಓದುತ್ತಿದ್ದಳು ಎಂದುಕೊಂಡು
ಅವಳ ದೇಹವ ಹುಡುಕುವಾಗಿನ ತಂದೆ ತಾಯಿಯರ ದುಃಖವನ್ನು ಕಿರುಬೆರಳಿಂದ ಮುಟ್ಟಲು ಸಾಧ್ಯವಾದರೆ…
ನಮ್ಮ ನಮ್ಮ ಎದೆಗಳಿಗೆ ಆ ಕಡುದುಃಖದ ಕಡಲಿನ ಅಲೆಗಳು ಅಪ್ಪಳಿಸಲಿವೆ…

ಕಂದಮ್ಮಗಳಿರಾ ಕ್ಷಮಿಸಿಬಿಡಿ…
ಮನುಷ್ಯದ ಯುದ್ಧದಾಹ ಎಲ್ಲ ಮನುಷ್ಯರನ್ನೂ ಬಲಿ ಬಡೆಯುತ್ತಿದೆ…
ನಾವೂ ಸಾವಿನ ಸರದಿ ಸಾಲಿನಲ್ಲಿ ನಿಂತಿದ್ದೇವೆ ನಿಮ್ಮ ಜತೆಗೆ ನಾವೂ ಜತೆಯಾಗಲಿದ್ದೇವೆ….
•••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed