ಈಗ ನೆಪಕ್ಕಷ್ಟೇ ಒಳ ಮೀಸಲಾತಿಯ ಚರ್ಚೆ ಶುರುವಾಗಿದೆ….
1 min read
ಎಲ್ಲರಿಗೂ ನಮಸ್ಕಾರ ಬಹಳ ದಿನಗಳಿಂದ ರಾಜ್ಯದ್ಯಂತ ಫೇಸ್ಬುಕ್ ವಾಟ್ಸಾಪ್ ಗಳಲ್ಲಿ ಬಹಳ ದೊಡ್ಡ ಚರ್ಚೆ ನಡೆದಿದೆ. ಒಳ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಸಂಘಟನೆ ಮತ್ತು ಜಾತಿ ಸಂಘಟನೆಗೆ ಸಂಬಂಧಿಸಿದಂತೆ ತಮ್ಮದೇ ಆದ ಜಾತಿಯನ್ನು ನಮೂದಿಸುವಂತೆ ಪತ್ರಿಕೆಗೋಷ್ಠಿಗಳು, ಚರ್ಚೆಗಳು ಸಲಹೆಗಳು ಅವರವರ ಮೊಬೈಲ್ ಗಳಲ್ಲಿ ಹರಿದಾಡುತ್ತಿದೆ. ಕೆಲವು ವಿಷಯ ಸತ್ಯವಾಗಿದ್ದರೂ ಕೆಲವು ವಿಚಾರಗಳನ್ನು ತರ್ಕ ಮಾಡದೆ ಅದರ ಒಳಾರ್ಥಗಳನ್ನು ಅರ್ಥ ಮಾಡಿಕೊಳ್ಳದೆ ಯಾಂತ್ರಿಕವಾಗಿ ಒಪ್ಪಿಕೊಳ್ಳುವಂತ ಪರಿಸ್ಥಿತಿಯನ್ನು ತಂದೊಡ್ಡುತಿದ್ದಾರೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಸವಿಂದಾನ ಮತ್ತು ಅದರ ಮಹತ್ವವನ್ನು ಕಡೆಗಾಣಿಸುವ ಪ್ರವೃತ್ತಿ ಮುಂದುವರೆದುಕೊಂಡು ಬಂದಿದೆ.ಇದರ ಜೊತೆಯಲ್ಲಿ ಕಳೆದ ಎರಡು ದಶಕಗಳಿಂದ ಮೀಸಲಾತಿಗೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ಜಾರಿ ಮಾಡುವುದರ ಮೂಲಕ ಹತ್ತಿಕ್ಕುವ ಪ್ರವೃತ್ತಿ ಮುಂದುವರಿಸಿಕೊಂಡು ಬರಲಾಗುತ್ತಿದೆ. ಏನೇ ಇರಲಿ ಒಳ ಮೀಸಲಾತಿ ಹಂಚಿಕೆ ವಿಷಯದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ ಆದರೆ ಚರ್ಚೆ ಮಾಡಬೇಕಾಗಿರುವುದು ಮೀಸಲಾತಿ ಜಾರಿಗೆ ಬರಲು ಕಾರಣ ಮೀಸಲಾತಿ ಯಾವ ಕ್ಷೇತ್ರದಲ್ಲಿ ಇದೆ ಮೀಸಲಾತಿಯಿಂದ ಯಾರ್ಯಾರಿಗೆ ಲಾಭ ಇದೆ ಒಳ ಮೀಸಲಾತಿಯಿಂದ ಅಸ್ಪೃಶ್ಯರಿಗೆ ದೊಡ್ಡ ಪ್ರಮಾಣದ ಲಾಭ ಏನಾದರೂ ಇದೆಯೇ ಅನ್ನುವುದು ಪ್ರಮುಖವಾದ ಅಂಶ.
ಕೆಲವು ಚರ್ಚೆಗಳನ್ನು ನೋಡಿದಾಗ ಅಂಬೇಡ್ಕರ್ ಅವರು ಜಾತಿ ಕುರಿತು ಅದರ ವಿನಾಶ ಕುರಿತು ಮಾತನಾಡಿದ್ದಾರೆ ಮೀಸಲಾತಿ ಒಂದು ತಾತ್ಕಾಲಿಕ ಊರುಗೋಲು ಅಷ್ಟೇ ಅದರಿಂದ ದೊಡ್ಡ ಪ್ರಮಾಣದ ನೀರಿಕ್ಷೆಗಳೇನು ಇಲ್ಲ. ಅದು ಕೇವಲ ರಾಜಕೀಯ ಮತ್ತು ಶಿಕ್ಷಣ ಮತ್ತು ಉದ್ಯೋಗಕ್ಕೆ ಸೀಮಿತ. ಅದರ ಆಚೆ ಯಾವುದೇ ದೊಡ್ಡ ಪ್ರತಿಫಲಗಳನ್ನು ನಿರೀಕ್ಷೆ ಮಾಡುವಂತಿಲ್ಲ
ಈಗ ನಾವು ಚರ್ಚೆ ಮಾಡುತ್ತಿರುವುದು ಒಳ ಮೀಸಲಾತಿಗೆ ಸಂಬಂಧಿಸಿದಂತೆ ಉದ್ಯೋಗ ಸೃಷ್ಟಿಯಾಗುತ್ತಿದ್ದ 9. ಕ್ಷೇತ್ರಗಳು ಇವುಗಳನ್ನು ನವರತ್ನಗಳೆಂದು ಕರೆಯಲಾಗುತ್ತಿತ್ತು. ಅವು ಯಾವು ಎಂದರೆ ಬ್ಯಾಂಕ್. ವಿಮೆ.ಸಾರಿಗೆ. ಶಿಕ್ಷಣ. ದೂರಸಂಪರ್ಕ ಮತ್ತು ಅಂಚೆ ಮತ್ತು ತಂತಿ ಇಲಾಖೆ. ಇವತ್ತು ಈ ಕ್ಷೇತ್ರಗಳು ಎಲ್ಲವೂ ಖಾಸಗಿಕರಣಗೊಂಡಿದೆ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಇಲ್ಲ ಉದ್ಯೋಗವು ಇಲ್ಲ ಉದ್ಯೋಗವಿದ್ದರೂ ಅದು ಮೇಲ್ಜಾತಿ ಮೇಲ್ವರ್ಗಕ್ಕೆ. ನಿಜವಾಗಿ ಒಳ ಮೀಸಲಾತಿಗಿಂತ ಮೊದಲು ನಾವು ಸರ್ಕಾರ ಅಥವಾ ಪ್ರಭುತ್ವವನ್ನು ಎದುರುಗೊಳ್ಳಬೇಕಾಗಿದ್ದು ಜನಗಣತಿ ಅಧಾರಿತ ಮೀಸಲಾತಿ ನಂತರ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ.
ಆ ನಂತರವೇ ಒಳ ಮೀಸಲಾತಿ ಆದರೆ ಪ್ರಭುತ್ವ ಈಗಾಗಲೇ ಎಲ್ಲವನ್ನು ನಾಶ ಮಾಡಲಾಗಿದೆ. ಮೀಸಲಾತಿಯನ್ನು ಕೇಳುವ ಮೊದಲು ಮೀಸಲಾತಿ ಉಳಿದಿದೆಯೇ ಅನ್ನೋದನ್ನು ಪರೀಕ್ಷೆ ಮಾಡಬೇಕಾಗಿತ್ತು. ಇದು ಯಾವುದನ್ನೂ ಮಾಡದೆ ನಮ್ಮ ಶತ್ರುಗಳನ್ನು ಮುಚ್ಚಿಟ್ಟು ಕುಲಬಾಂಧವರ ನಡುವೆ ಸಂಘರ್ಷ ಮಾಡುತ್ತಿರುವುದು ವಿಪರ್ಯಾಸ.ಎಲ್ಲ ಅಸ್ಪೃಶ್ಯರು ಒಂದಾಗಿ ಮೀಸಲಾತಿಯ ಉಳಿವಿಗಾಗಿ ದೊಡ್ಡ ಆಂದೋಲನ ಮಾಡಿದಿದ್ದರೆ ಒಂದು ಯಶಸ್ಸನ್ನು ನಾವು ಸಾಧಿಸಬಹುದು.
ದುರಂತ ವೆಂದರೆ 1990ರಲ್ಲಿ ಡಾಕ್ಟರ್ ಬಿ.ಆರ್
ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. 1991 ರಿಂದ ನೂತನ ಆರ್ಥಿಕ ನೀತಿ ಅದರ ಮೂಲಕ ಜಾಗತೀಕರಣ. ಖಾಸಗಿಕರಣ ಮತ್ತು ಉದಾರಿಕರಣ ನೀತಿಗಳ ಮೂಲಕ ಇಡೀ ದೇಶವನ್ನು ಮುಕ್ತ ಮಾರುಕಟ್ಟೆಗೆ ತೆರೆದಿಟ್ಟು ಸರಕಾರಿ ಸ್ವಾಮ್ಯದ ಎಲ್ಲಾ ಕ್ಷೇತ್ರಗಳನ್ನು ಬಂಡವಾಳದಾರರಿಗೆ ಕಾರ್ಪೊರೇಟರ್ ಗೆ ಮಾರಾಟ ಮಾಡುವುದರ ಮೂಲಕ ಮೀಸಲಾತಿಯ ನೀತಿಯನ್ನೇ ಬುಡಮೇಲು ಮಾಡಿದರು. ಇದರ ವಿರುದ್ಧ ಜಾಗೃತರಾಗದ ದಲಿತ ಸಮುದಾಯ ಅವೆಲ್ಲವನ್ನು ಗಮನಿಸಿಯೂ ಪ್ರತಿಕ್ರಿಯಿಸಿರುವುದು ದುರಂತ. ಇವತ್ತು ಮೀಸಲಾತಿ ರದ್ದು ಮಾಡುವ ಮಾತುಗಳು ಸರ್ಕಾರದಿಂದ ನೇರವಾಗಿ ಬರದಿದ್ದರೂ ಅವರ ಕ್ರಿಯಾ ಯೋಜನೆಗಳ ಮೂಲಕ ಅವರು ತಮ್ಮ ಗುರಿಯನ್ನು ಸಾಧಿಸುತ್ತಿದ್ದಾರೆ. ಇವೆಲ್ಲವನ್ನೂ ಗಮನಿಸಿ ಇಡೀ ಸಮುದಾಯವನ್ನು ಎಚ್ಚರಗೊಳಿಸಬೇಕಿದ್ದ ರಾಜಕೀಯ ಪಕ್ಷದ ರಾಜಕಾರಣಿಗಳು ಸಂಘಟನೆಯ ಮುಖಂಡರು ಬುದ್ಧಿಜೀವಿಗಳು ಶಾಂತವಾಗಿ ಮುತುವರ್ಜಿ ವಹಿಸದೆ ಇದ್ದದ್ದು ಇಂಥ ದುರಂತಕ್ಕೆ ಕಾರಣವಾಗಿದೆ.
ಸ್ನೇಹಿತರೆ ವಸ್ತುವಿದ್ದರೆ ಹಂಚಿಕೊಳ್ಳಬಹುದು ವಸ್ತುವೇ ಇಲ್ಲ ನಾಶಗೊಂಡಿರುವಾಗ ಯಾವುದಕ್ಕಾಗಿ ವಾದ. ತರ್ಕ ಮತ್ತು ಯಾರಿಗೆ ಯಾರು ಶತ್ರುಗಳು ಇವೆಲ್ಲವನ್ನ ಕೋಲಂಕುಶವಾಗಿ ಪರಿಶೀಲಿಸಲೇಬೇಕಾಗಿದೆ. ಚರ್ಚೆಯ ಪ್ರಮುಖ ವಿಷಯವಿಷ್ಟೇ ಜನಗಣತಿಗನುಗುಣವಾದ ಮೀಸಲಾತಿ ಜಾರಿಯಾಗಬೇಕು ಹಾಗೂ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಬೇಕು ನಂತರವೇ ಒಳ ಮೀಸಲಾತಿ ಈಗಾಗಲೇ ರಾಜಕೀಯ ಕ್ಷೇತ್ರದಲ್ಲಿ ಇರುವವರ ಪ್ರಮುಖ ಬೇಡಿಕೆ, ರಾಜಕೀಯ ಕ್ಷೇತ್ರಕ್ಕೆ ಮಾತ್ರ ಸೀಮಿತವಾದಂತಿದೆ . ಒಳ ಮೀಸಲಾತಿಯ ನಾಯಕತ್ವ ವಹಿಸಿರುವ ಎಲ್ಲಾ ಜಾತಿಯ ನಾಯಕರುಗಳ ತೀರ್ಮಾನ ಆಯಾ ಪಕ್ಷಗಳ ತೀರ್ಮಾನದಂತೆ ಇದೆ. ಎಲ್ಲ ರಾಜಕೀಯ ಪಕ್ಷಗಳು ಮೀಸಲಾತಿ ನಾಶ ಮಾಡುವುದು ಆ ಪಕ್ಷದ ಪ್ರಮುಖ ಅಜೆಂಡವಾಗಿದೆ. ಯಾವ ಪಕ್ಷಗಳು ಜಾಗತೀಕರಣ. ಖಾಸಗಿಕರಣ ಪರವಾಗಿ ಇದ್ದಾರೋ ಅವರೆಲ್ಲ ಮೀಸಲಾತಿ ವಿರೋಧಿಗಳು.ಈಗ ನೆಪಕ್ಕಷ್ಟೇ ಒಳ ಮೀಸಲಾತಿಯ ಚರ್ಚೆ ಶುರುವಾಗಿದೆ ಇದರಲ್ಲಿ ಪ್ರಮುಖವಾಗಿ ರಾಜಕಾರಣಿಗಳು ಮತ್ತು ಅವರ ಬಾಲ ಬುಡುಕರೆ ಹೆಚ್ಚು ಚರ್ಚೆ ಮಾಡುತ್ತಿದ್ದಾರೆ. ದುರಂತವೆಂದರೆ ಮೇಲ್ಜಾತಿ ಮೇಲ್ವರ್ಗದ ರಾಜಕೀಯ ಪಕ್ಷದ ನಾಯಕರುಗಳ ತೀರ್ಮಾನದಂತೆ ನಮ್ಮ ಒಳ ಮಿಸಲಾತಿಯ ನಾಯಕರುಗಳ ತೀರ್ಮಾನ ಒಂದೇ ರೀತಿ ಕಂಡುಬರುತ್ತದೆ.
ಮಾದಿಗರಿಗೆ ಹೊಲೆಯರು ವಿರೋಧಿಗಳು.ಹೊಲೆಯರಿಗೆ ಮಾದಿಗರು ವಿರೋಧಿಗಳು ಎಂಬಂತ ಪರಿಸ್ಥಿತಿ ನಿರ್ಮಾಣ ಆಗಿದೆ. ಮೀಸಲಾತಿಯ ಕಲ್ಪನೆ ಸಾಮಾಜಿಕ ವಾಗಿ ಅಸ್ಪೃಶ್ಯತೆ ನಿವಾರಣೆ ಪ್ರಮುಖ ಉದ್ದೇಶ ಆಗಿತ್ತು. ಅದು ಯಾವತ್ತೂ ಆರ್ಥಿಕ ಆಧಾರಿತವಾಗಿರಲಿಲ್ಲ. ದುರಂತವೆಂದರೆ ಅಸ್ಪೃಶ್ಯರಲ್ಲದವರು ಅಸ್ಪೃಶ್ಯರ ಸಾಲಿಗೆ ರಾಜಕೀಯ ಪಕ್ಷದ ರಾಜಕೀಯ ಲಾಭಕ್ಕಾಗಿ ಸೇರಿರುವುದನ್ನು ನಾವು ಮರೆಯುವಂತಿಲ್ಲ.ಹೀಗಾಗಿ ಚರ್ಚೆ ಮಾಡಲು ಬೇಕಾಗಿದೆ ಆದರೆ ಅಸ್ಪೃಶ್ಯ ಜಾತಿಗಳು ಯಾವತ್ತೂ ಶತ್ರುಗಳಲ್ಲ ನಮ್ಮ ಶತ್ರುಗಳು ನಮ್ಮನ್ನು ಸಾವಿರಾರು ವರ್ಷಗಳ ಕಾಲ ಶೋಷಣೆ ದೌರ್ಜನ್ಯ ಮಾಡಿ ಪ್ರಾಣಿಗಳಂತೆ ಕಂಡ ಈ ಪ್ರಭುತ್ವ ಇದರ ವಿರುದ್ಧ ಸಂಘಟಿತರಾಗಲೇಬೇಕು .
ಕೃಪೆ….
ರುದ್ರಯ್ಯ.ಬಿ.
ಹಳೇಮೂಡಿಗೆರೆ…

