ಆದಿವಾಸಿಗಳ ಅಭಿವೃದ್ಧಿಗೆ ವಿಶೇಷ ಸವಲತ್ತು ಜಾರಿ ಮಾಡಿ ಮೂಡಿಗೆರೆ….
1 min read
ಆದಿವಾಸಿಗಳ ಅಭಿವೃದ್ಧಿಗೆ ವಿಶೇಷ ಸವಲತ್ತು ಜಾರಿ ಮಾಡಿ
ಮೂಡಿಗೆರೆ
ರಾಜ್ಯ ಸರಕಾರ ಬಜೆಟ್‌ನಲ್ಲಿ ಆದಿ ವಾಸಿಗಳ ಅಭಿವೃದ್ಧಿಗೆ ವಿಶೇಷ ಸವಲತ್ತುಗಳನ್ನು ನೀಡಬೇಕು ಎಂದು ಕರ್ನಾಟಕ ರಾಜ್ಯ ಲ್ಯಾಂಪ್ಸ್ ಮಹಾ ಮಂಡಳಿ ಮಾಜಿ ಅಧ್ಯಕ್ಷ ಮುತ್ತಪ್ಪ ಒತ್ತಾಯಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆದಿವಾಸಿಗಳ ಸಮಸ್ಯೆಗಳನ್ನು ಪರಿಹರಿಸುವಂತೆ ಸರಕಾರಕ್ಕೆ ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಪರಿಶಿಷ್ಟ ಪಂಗಡದವರಿಗೆ ಒಳ ಮೀಸಲು ಜಾರಿ ಮಾಡಬೇಕು. ಎಲ್ಲ ತಾಲೂಕಿನಲ್ಲಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ಸ್ಥಾಪಿಸಬೇಕು. ಅರಣ್ಯದಂಚಿನಲ್ಲಿ ವಾಸಿಸುವ 13 ಬುಡಕಟ್ಟು ಜನಾಂಗಕ್ಕೆ ರಾಜ್ಯ ಸಿವಿಲ್ ಸೇವೆಗಳಲ್ಲಿ ಪ್ರಾತಿನಿಧ್ಯ ನೀಡುವ ವಿಶೇಷ ನೇರ ನೇಮಕಕ್ಕೆ ಆದೇಶಿಸಿ ಅನುಷ್ಠಾನಕ್ಕೆ ತರಬೇಕು. ಎಸ್ಟೇಟ್ ಲೈನ್‌ಗಳಲ್ಲಿ ವಾಸಿಸುವ ಹಸಲರು ಜನಾಂಗದವರು ಸ್ವತಂತ್ರವಾಗಿ ಬದುಕಲು ಸ್ವಂತ ಸೂರು ನಿರ್ಮಿಸಿ ಕೊಡಬೇಕು. ಆದಿವಾಸಿ ಅಲೆಮಾರಿ, ಅರೆಅಲೆಮಾರಿ ನಿಗಮದಿಂದ ನೀಡುವ ನೇರ ಸಾಲ ಸೌಲಭ,
ಗಂಗಾಕಲ್ಯಾಣ ಇನ್ನಿತರ ಸೌಲಭ್ಯಗಳ ಗುರಿಯನ್ನು ಅಧಿಕಗೊಳಿಸಬೇಕು ಎಂದು ಒತ್ತಾಯಿಸಿದರು.
<span;>ಹಸಲರು ಸಂಘದ ಜಿಲ್ಲಾಧ್ಯಕ್ಷ ಗೋಪಾಲ ಮಾತನಾಡಿ, ಪ್ರತ್ಯೇಕ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಆದಿವಾಸಿಗಳಿಗೆ ನೀಡುವ ಪೌಷ್ಟಿಕ ಆಹಾರ ಯೋಜನೆ ಹಕ್ಕಿಪಿಕ್ಕಿ, ಪೌಷಿಕ ಆಹಾರದ ಡೋಂಗಿಗರೇಸಿಯಾ, ಮಲೆಕುಡಿಯ, ಮೇಧ, ಮರಾಠಿ ನಾಯಕ್ ಜನಾಂಗಕ್ಕೂ ವಿಸ್ತರಿಸಬೇಕು. ಜಮೀನು ರಹಿತರಿಗೆ ತಲಾ 2 ಎಕರೆ ಜಮೀನು ನೀಡಬೇಕು, ಆದಿವಾಸಿಗಳಿಗೆ ಜಮೀನು ಭೂಒಡೆತನ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಅರಣ್ಯ ಕಾಯಿದೆಯಡಿ ನೀಡಿರುವ ಜಮೀನುಗಳಿಗೆ ಬೆಳೆಸಾಲ, ಬೆಳೆ ವಿಮೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೊಳಿಸಬೇಕು. ಮುಖ್ಯವಾಗಿ ಕಲ್ಯಾಣ ಕರ್ನಾಟಕ ಮೀಸಲು ನಿಯಮ್ ಗೆಜೆಟ್ ನೋಟಿಫಿಕೇಷನ್ ಜಾರಿ ಮಾಡಿ, ಯಾವುದೇ ತಿದ್ದುಪಡಿಗೊಳಿಸದೇ ಈ ಹಿಂದಿನಂತೆಯೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಲ್ಯಾಂಪ್ಸ್ ಸಹಕಾರ ಸಂಘದ ಮಾಜಿ ಅಧ್ಯಕ್ಷ ವಿಜೇಂದ್ರ, ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಎಚ್.ಕೆ.ಕೃಷ್ಣಪ್ಪ, ಮುಖಂಡರಾದ ಹರೀಶ್ ಸಬ್ಬೇನಹಳ್ಳಿ, ರಮೇಶ್, ಸುರೇಶ್ ಹಾಗೂ ಇತರರಿದ್ದರು.

