day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಸ್ವಲ್ಪ ಖಾರವಾದರೂ ವಾಸ್ತವ ಇದೇ ಅಲ್ಲವೇ.. – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

ಸ್ವಲ್ಪ ಖಾರವಾದರೂ ವಾಸ್ತವ ಇದೇ ಅಲ್ಲವೇ..

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಸ್ವಲ್ಪ ಖಾರವಾದರೂ ವಾಸ್ತವ ಇದೇ ಅಲ್ಲವೇ…..

ಒಂದು ಕಡೆ ನಾಗಮಂಗಲದ ತರಕಾರಿ ಕಮಲಮ್ಮನ ಮಗ, ಗಣೇಶ ಉತ್ಸವದಲ್ಲಿ ಭಾಗವಹಿಸಿ, ಅಂದು ನಡೆದ ಗಲಭೆಯಲ್ಲಿ ಆರೋಪಿಯಾಗಿ ಪೊಲೀಸರು ಬಂಧಿಸಿದ್ದರಿಂದ ಇಂದು ಜೈಲಿನಲ್ಲಿ ಇದ್ದಾನೆ. ಆತನ ಜಾಮೀನಿಗಾಗಿ ಕಮಲಮ್ಮನವರು ತುಂಬಾ ನೋವಿನಿಂದ, ಕಷ್ಟದಿಂದ ಪ್ರಯತ್ನಿಸುತ್ತಿದ್ದಾರೆ. ಮಾಧ್ಯಮಗಳ ಮುಂದೆ ಗೋಳಾಡುತ್ತಿದ್ದಾರೆ……

ಮತ್ತೊಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಗ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯನವರು ಈಗ
ಎಂ ಎಲ್ ಸಿ ಯಾಗಿ ಮುಂದೆ ತನ್ನ ತಂದೆಯ ನಂತರ ರಾಜ್ಯದಲ್ಲಿ ಮಂತ್ರಿಯಾಗಲು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ…..

ಒಂದು ಕಡೆ ದಾವಣಗೆರೆಯ ಹಣ್ಣಿನ ಅಂಗಡಿಯ ಇಬ್ರಾಹಿಂ ಅವರ ಮಗ ನಿನ್ನೆ ನಡೆದ ಗಣೇಶ ಉತ್ಸವದ ಗಲಾಟೆಯ ಸಂದರ್ಭದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಈಗ ಜೈಲು ಸೇರಿದ್ದಾನೆ. ಅವನ ಬಿಡುಗಡೆಗಾಗಿ ಅವರ ತಂದೆ ಇಬ್ರಾಹಿಂ ಕಣ್ಣೀರು ಸುರಿಸುತ್ತಾ ಓಡಾಡುತ್ತಿದ್ದಾರೆ…….

ಮತ್ತೊಂದು ಕಡೆ ಕರ್ನಾಟಕ ಸರ್ಕಾರದ ಮಂತ್ರಿಗಳು ಹಾಗೂ ಮುಸ್ಲಿಂ ಸಮುದಾಯದ ನಾಯಕರು ಆದ ಜಮೀರ್ ಅಹ್ಮದ್ ಅವರ ಪುತ್ರ ಹಿಂದೆ ಒಂದು ಸಿನಿಮಾದಲ್ಲಿ ಅಭಿನಯ ಮಾಡಿ ಈಗ ನಾಯಕನಾಗಿ ಮತ್ತೊಂದು ದೊಡ್ಡ ಬಜೆಟ್ಟಿನ ಸಿನಿಮಾ ಮಾಡಲು ಸಿದ್ಧತೆಯಲ್ಲಿ ತೊಡಗಿ ಅದಕ್ಕಾಗಿ ತುಂಬಾ ಶ್ರಮವಹಿಸುತ್ತಿದ್ದಾರೆ…….

ಒಂದು ಕಡೆ ನಾಗಮಂಗಲದ ರೈತರಾದ ಕೃಷ್ಣಪ್ಪರನವರ ಮಗ ಅದೇ ಗಣೇಶನ ಮೆರವಣಿಗೆಯಲ್ಲಿ ಭಾಗವಹಿಸಿ ಆರೋಪಿಯಾಗಿ ಜೈಲು ಸೇರಿದ್ದಾನೆ. ಕೃಷ್ಣಪ್ಪನವರು ಅದೇ ಕೊರಗಿನಲ್ಲಿ ಹಾಸಿಗೆ ಹಿಡಿದಿದ್ದಾರೆ. ಅವರ ಬಂಧುಗಳು ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದಾರೆ……

ಮತ್ತೊಂದು ಕಡೆ ಮಾಜಿ ಮುಖ್ಯಮಂತ್ರಿಗಳು ಮತ್ತು ಹಾಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಯವರ ಮಗ ನಿಖಿಲ್ ಕುಮಾರಸ್ವಾಮಿ ಅವರು ಚನ್ನಪಟ್ಟಣದಲ್ಲಿ ತಮ್ಮ ಪಕ್ಷದ ಗೆಲುವಿಗಾಗಿ, ಮುಂದೆ ತಮ್ಮ ಪಕ್ಷವನ್ನು ರಾಜ್ಯಾದ್ಯಂತ ಬೆಳೆಸುವ ನಿಟ್ಟಿನಲ್ಲಿ ಅದರ ಅಧ್ಯಕ್ಷರಾಗಲು ಸಾಕಷ್ಟು ಶ್ರಮ ಪಡುತ್ತಿದ್ದಾರೆ….

ಒಂದು ಕಡೆ ದಾವಣಗೆರೆಯ ಬಟ್ಟೆ ಅಂಗಡಿ ಕಲೀಲ್ ಸಾಬರ ಮಗ ಮತ್ತೆ ಅದೇ ಗಣೇಶೋತ್ಸವದ ಗಲಾಟೆಯ ಆರೋಪದಲ್ಲಿ ಜೈಲು ಪಾಲಾಗಿದ್ದಾನೆ. ಖಲೀಲ್ ಸಾಬರು ಇದ್ದ ಒಂದಷ್ಟು ಹಣ ಕೂಡಿಸಿ ಸಾಲ ಮಾಡಿ ಮಗನನ್ನು ಬಿಡಿಸಿಕೊಳ್ಳಲು ವಕೀಲರ ಮನೆ ಬಾಗಿಲು ಸುತ್ತುತ್ತಿದ್ದಾರೆ…..

ಮತ್ತೊಂದು ಕಡೆ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ಮಗ ವಿಜಯೇಂದ್ರ ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ, ಮುಂದೆ ಪಕ್ಷವನ್ನು ಅಧಿಕಾರಕ್ಕೆ ತಂದು ತಾವೇ ಮುಖ್ಯಮಂತ್ರಿ ಆಗಬೇಕೆಂಬ ಆಸೆಯಿಂದ ಸಾಕಷ್ಟು ಶ್ರಮ ಪಡುತ್ತಿದ್ದಾರೆ……

ಒಂದು ಕಡೆ ನಾಗಮಂಗಲದ ಬಿಇ ಓದಿದ್ದ ಕೆಂಚೇಗೌಡರ ಮಗ ಈ ಗಲಭೆಯಲ್ಲಿ ಆರೋಪಿಯಾಗಿ ಜೈಲಿಗೆ ಸೇರಿದ್ದಾನೆ. ಅವನನ್ನು ವಿದೇಶದಲ್ಲಿ ಓದಿಸಬೇಕೆಂದು ಕನಸುಕಂಡಿದ್ದ ಕೆಂಚೇಗೌಡರು ಅವನ ಮುಂದಿನ ಭವಿಷ್ಯ, ಪಾಸ್ ಪೋರ್ಟ್, ವೀಸಾಗೆ ಈ ಬಂಧನ ಎಷ್ಟರಮಟ್ಟಿಗೆ ತೊಂದರೆ ಕೊಡಬಹುದು ಎಂಬ ಚಿಂತೆಯಲ್ಲಿ ಕೊರಗುತ್ತಿದ್ದಾರೆ……

ಮತ್ತೊಂದು ಕಡೆ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮಗಳು ಒಂದು ಬೃಹತ್ ಉದ್ದಿಮೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಾ, ಅದನ್ನು ಇನ್ನೂ ದೇಶ ವಿದೇಶಗಳಲ್ಲಿ ಬೆಳೆಸಲು ಸಾಕಷ್ಟು ಶ್ರಮ ಪಡುತ್ತಿದ್ದಾರೆ…..

ಈ ಎಲ್ಲಾ ಹೆಸರುಗಳು ಕೇವಲ ಸಾಂಕೇತಿಕ. ನಿಮ್ಮ ಮನಸ್ಸಿನಲ್ಲಿ ಸುಳಿದಾಡುವ ಯಾವುದೇ ರಾಜಕಾರಣಿ ಅಥವಾ ಪತ್ರಕರ್ತರು ಅಥವಾ ಧಾರ್ಮಿಕ ಮುಖಂಡರು ಅಥವಾ ದೊಡ್ಡ ಹುದ್ದೆಯ ಅಧಿಕಾರಿಗಳು ಅಥವಾ ಸಿನಿಮಾ ನಟರು ಅಥವಾ ವಿಜ್ಞಾನಿಗಳು ಅಥವಾ ಸಾಹಿತಿಗಳು ಅಥವಾ ಯಾರೇ ಆಗಿರಲಿ ದೊಡ್ಡವರ ಮಕ್ಕಳು ಎಂದಿಗೂ ಕಲ್ಲು ಎಸೆಯುವುದಿಲ್ಲ. ಮಚ್ಚು ಹಿಡಿದು ಹೊಡೆದಾಡುವುದಿಲ್ಲ. ಈ ರೀತಿಯ ಉತ್ಸವಗಳ ಗಲಭೆಗಳಲ್ಲಿ ಭಾಗವಹಿಸುವುದಿಲ್ಲ. ಆದರೆ ಬಡವರು, ಮಧ್ಯಮ ವರ್ಗದವರು ಹುಚ್ಚು ಹಿಡಿದವರಂತೆ, ಅಜ್ಞಾನದಿಂದ, ತಮ್ಮ ಧರ್ಮಗಳ, ದೇವರುಗಳ ರಕ್ಷಣೆ ಮಾಡುತ್ತೇವೆ ಎನ್ನುವ ಭ್ರಮೆಗೆ ಒಳಗಾಗಿ ಜೈಲು ಪಾಲಾಗುತ್ತಿರುವುದು ನಮ್ಮ ಕಣ್ಣ ಮುಂದೆ ನಡೆಯುತ್ತಿದೆ……

ಅಷ್ಟು ದೊಡ್ಡ ದೊಡ್ಡ ಮಾತನಾಡುವ ಎರಡೂ ಕಡೆಯ ಧರ್ಮ ರಕ್ಷಕರು ತಮ್ಮ ಮಕ್ಕಳನ್ನು ಹೊಡೆದಾಟಗಳಿಗೆ ಕಳುಹಿಸಲಿ ನೋಡೋಣ. ಅನೇಕ ಮೇಲ್ವರ್ಗದ ಜನ ತಮ್ಮ ಮಕ್ಕಳನ್ನು ವಿದೇಶಗಳಲ್ಲಿ ಓದಿಸಿ ಅಲ್ಲಿಯೇ ವಾಸಿಸುವಂತೆ ಮಾಡಿ ಈಗ ಇಲ್ಲಿ ಧರ್ಮ ರಕ್ಷಣೆಗೆ ಬಡ ಮತ್ತು ಮಧ್ಯಮ ವರ್ಗದ ಜನರನ್ನ ಉಪಯೋಗಿಸಿಕೊಂಡು ರೊಚ್ಚಿಗೆಬ್ಬಿಸಿ ಅವರನ್ನು ಜೈಲು ಪಾಲು ಮಾಡುತ್ತಿದ್ದಾರೆ……

ಈಗ ಯೋಚಿಸುವ ಸರದಿ ನಮ್ಮದು. ಇದೆಲ್ಲವೂ ಬೇಕೆ. ಒಮ್ಮೆ ಆರೋಪಿಯಾಗಿ ಕೋರ್ಟ್ ಕಟಕಟೆ ಹತ್ತಿ ಅಲ್ಲಿಂದ ಜೈಲು ಸೇರಿದ ಮೇಲೆ ನಮ್ಮ ಜೀವನದಲ್ಲಿ ಆ ದಾಖಲೆ ಶಾಶ್ವತವಾಗಿ ಉಳಿದುಬಿಡುತ್ತದೆ. ಯಾವುದೇ ಪಾಸ್ ಪೋರ್ಟ್, ವೀಸಾ ಅಥವಾ ಸರ್ಕಾರಿ ನೌಕರಿ ಪಡೆಯಬೇಕೆಂದಾಗ ಈ ಒಂದು ವಿಷಯ ಸದಾ ಅಡ್ಡಿಪಡಿಸುತ್ತದೆ. ಆಗ ಯಾವ ದೇವರು, ಧರ್ಮವು, ರಾಜಕೀಯ ನಾಯಕರು, ಧಾರ್ಮಿಕ ನಾಯಕರು ನಮ್ಮ ರಕ್ಷಣೆಗೆ ಬರುವುದಿಲ್ಲ. ಇದನ್ನು ಗಂಭೀರವಾಗಿ ಯೋಚಿಸಿ…..

ಧರ್ಮ ರಕ್ಷಣೆ ಮಾಡಲು, ಹೊಡೆದಾಡಲು ಸಿ ಟಿ ರವಿ, ಸಂತೋಷ್ ಲಾಡ್, ಆರ್. ಅಶೋಕ್, ಪ್ರತಾಪ್ ಸಿಂಹ, ದಿನೇಶ್ ಗುಂಡೂರಾವ್ ಮುಂತಾದ ಯಾರು ಬರುವುದಿಲ್ಲ. ಈಶ್ವರ್ ಕಂಡ್ರೆ ಅವರ ಮಗ, ಸತೀಶ್ ಜಾರಕಿಹೊಳಿ ಅವರ ಮಗಳು, ಮೈಸೂರಿನ ಮಹಾರಾಜ, ಯಡಿಯೂರಪ್ಪನವರ ಇನ್ನೊಬ್ಬ ಮಗ, ಕುಮಾರಸ್ವಾಮಿಯವರ ಪತ್ನಿ ಇಂತಹವರೇ ಎಂಎಲ್ಎ ಎಂಪಿಗಳಾಗುತ್ತಾರೆ. ಇವರು ಬಂದು ಹೊಡೆದಾಡಲಿ ನೋಡೋಣ…..

ದಯವಿಟ್ಟು ಮತ್ತೆ ಮತ್ತೆ ಅರ್ಥ ಮಾಡಿಕೊಳ್ಳಿ. ರಾಜಕಾರಣಿಗಳೇ ಗಲಭೆ ಮಾಡಿಕೊಳ್ಳಲಿ. ನಾವು ನಮ್ಮ ನಮ್ಮ ಹಂತದಲ್ಲಿ ಪ್ರೀತಿ, ಸೌಹಾರ್ದತೆ, ಸಮನ್ವಯ ಮಾಡಿಕೊಂಡು ಬಾಂಧವ್ಯ ಬೆಸೆದು ನೆಮ್ಮದಿಯಾಗಿರೋಣ. ಪ್ರತಿ ಗಣೇಶ ಹಬ್ಬದಲ್ಲೋ ಅಥವಾ ಈದ್ ಮಿಲಾದ್, ರಂಜಾನ್ ಬಕ್ರೀದ್ ಸಂದರ್ಭದಲ್ಲಿ ಈ ರೀತಿ ಒಬ್ಬರಿಗೊಬ್ಬರು ಹೊಡೆದಾಟ ಮಾಡಿಕೊಂಡು ಬಡವರೇ ಜೈಲು ಪಾಲಾಗುವ ಈ ವ್ಯವಸ್ಥೆಯನ್ನು ಇನ್ನು ಮುಂದಾದರು ತಡೆಯೋಣ…..

ಅಧಿಕಾರ ಅನುಭವಿಸುವವರು, ಧರ್ಮದ, ಜಾತಿಯ ಹೆಸರೇಳಿ ಉನ್ನತ ಸ್ಥಾನ ಪಡೆಯುವವರು ಬೇಕಾದರೆ ಹೊಡೆದಾಡಿಕೊಳ್ಳಲಿ. ನಮಗ್ಯಾಕೆ ಆ ಚಿಂತೆ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068……

About Author

Leave a Reply

Your email address will not be published. Required fields are marked *