day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ವಿಶೇಷ ಲೇಖನ….., ಅಪೂರ್ವ ಇತಿಹಾಸದ ಪ್ರೀತಿಯ ಡಾಕ್ಟರ್ ಸಂಪತ್! – AVIN TV

लाइव कैलेंडर

September 2024
M T W T F S S
 1
2345678
9101112131415
16171819202122
23242526272829
30  

AVIN TV

Latest Online Breaking News

ವಿಶೇಷ ಲೇಖನ….., ಅಪೂರ್ವ ಇತಿಹಾಸದ ಪ್ರೀತಿಯ ಡಾಕ್ಟರ್ ಸಂಪತ್!

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ವಿಶೇಷ ಲೇಖನ…..,
ಅಪೂರ್ವ ಇತಿಹಾಸದ ಪ್ರೀತಿಯ ಡಾಕ್ಟರ್ ಸಂಪತ್!
*****
ನಮಸ್ಕಾರ ಅಮ್ಮ! ಗುತ್ತಿ ಮನ್ಯಾಥಣ್ಣ ಹೇಳಿದ್ರು ಸಂಪತ್ ನ ಹತ್ರ ಹೋಗು ಎಲ್ಲಾ ಸರಿಮಾಡ್ತಾನೆ ಅಂತ! ಅದಕ್ಕೆ ಬಂದೆ. ಎಲ್ಲಿ ಮಗ ಇಲ್ವಾ? ಕಾಣ್ತಾ ಇಲ್ಲ! ಎಂದು ಮನೆಗೆ ಬಂದಿದ್ದ ಹಿರಿಯರೊಬ್ಬರು ಅಮ್ಮನ ಕೇಳಿದ್ದಾರೆ. ಇಲ್ಲ, ಅವನು ಕಾಲೇಜಿನಲ್ಲಿ ಪಾಠಮಾಡಲು ಚಿಕ್ಕಮಗಳೂರಿಗೆ ಹೋಗಿದ್ದಾನೆ. ಅವನೆಂತಾ ಸರಿಮಾಡೋದು? ಎಂದು ಅವರನ್ನು ಅಮ್ಮ ಅಚ್ಚರಿಯಿಂದ ಕೇಳಿದ್ದಾರೆ. ಅದೇ ಅಮ್ಮ ನಿಮ್ಮ ಮಗ ಡಾಕ್ಟರ್ ಸಂಪತ್ ಅಂತೆ! ನನಗೆ ತುಂಬಾ ಖುಷಿಯಾಯ್ತು. ನಮ್ಮ ಕಣ್ ಮುಂದೆ ಬೆಳೆದ ಮಕ್ಕಳಲ್ವಾ? ನಿಮ್ಮವು! ಎಷ್ಟು ಚೆಂದ ಮಾತನಾಡ್ತಾ ಇದ್ದವು ಕಾಲೇಜಿಗೆ ಓದೋಕೆ ಹೋಗಿ ಬರುವಾಗ ಗುತ್ತಿಹಳ್ಳಿ ಬಸ್ನಲ್ಲಿ.
ಈಗ ಡಾಕ್ಟರ್ ಓದಿಸೋದೆ ಕಷ್ಟ. ಅಂತದ್ರಲ್ಲಿ ನಿಮ್ಮ ಮಗ ಡಾಕ್ಟರ್ ಓದೋರಿಗೇ ಪಾಠ ಮಾಡೋಕೆ ಹೋಗ್ತಾ ಇದಾನೆ ಅಂದ್ರೆ ತುಂಬಾ ಖುಷಿ. ಚಿಕ್ಕಮಗಳೂರು ಹೊಸ ಮೆಡಿಕಲ್ ಕಾಲೇಜಿಗಾ? ಪರ್ವಾಗಿಲ್ಲ ಬಿಡಿ, ಸೂಪರ್ ತುಂಬಾ ಅತ್ಯದ್ಭುತ ಅಪೂರ್ವ! ನನಗೆ ತುಂಬಾ ದಿನವಾಯ್ತು ಬೆನ್ನು, ಕೈ, ಕಾಲು, ಮೈಯೆಲ್ಲ ಸೇದೋದು ಏಕೆ ಅಂತ ಗೊತ್ತಿಲ್ಲ! ತುಂಬಾ ಡಾಕ್ಟರಿಗೆ ತೋರಿಸಿದೆ ವಾಸಿನೇ ಆಗಿಲ್ಲ! ಅದಕ್ಕೆ ಹಿಂಗೆ ಮಾತಾಡ್ತ ಗುತ್ತಿ ಮನ್ಯಾಥಣ್ಣನ ಹತ್ರ ಒಳ್ಳೆ ಡಾಕ್ಟ್ರು ಇದ್ರೆ ಹೇಳಿ ಮಾರ್ರೆ ಅಂದೆ! ಅದಕ್ಕವರು ಬೆಟ್ಟಗೆರೆ ಸಂಪತ್ ನ ಹತ್ರ ಹೋಗು. ಅದೇ ಓದೋ ಹೊತ್ತಿಗೆ ಇಲ್ಲೆಲ್ಲ ನಾನು ಒಂದು ಪುಸ್ತಕ ಬರಿದ್ದೀನಿ ಕೊಂಡುಕೊಂಡು ಪ್ರೋತ್ಸಾಹ ಕೊಡಿ ಅಂತ ಬರ್ತಾ ಇದ್ನಲ್ಲ ಬೆಟ್ಟಗೆರೆ ಹುಡುಗ ಅವನು. ಮೊನ್ನೆ ಮೊನ್ನೆ ಪೇಪರ್ ನಲ್ಲಿ ಒಂದು ಲೇಖನ ಬರ್ದಿದ್ದ ಮಾರಾಯ!
ಏನು ಕೇಳ್ತೀಯಾ? ಮೈಮನಸ್ಸೆಲ್ಲ ರೋಮಾಂಚನ ಆಯ್ತು ಅದ್ನ ಓದಿ. ಅದರ ಕೆಳಗೆ ನೋಡ್ತೀನಿ ಬರೆದಿದ್ದು ಯಾರು ಅಂತ ಡಾ.ಸಂಪತ್ ಬೆಟ್ಟಗೆರೆ ಅಂತ ಇದೆ. ನನಗಂತೂ ಬಹಳ ಖುಷಿ ಆಯ್ತು ನೋಡು. ವಿದ್ಯಾರ್ಥಿ ಜೀವನದಲ್ಲಿ ಪುಸ್ತಕ ಬರ್ದು ಪ್ರಿಂಟ್ ಹಾಕಿಸಿ ಮನೆ ಮನೆಗೆ ಅಲೆದಲೆದು ಮಾರಾಟ ಮಾಡಿ ಓದಿದ ಹುಡುಗ ಇವತ್ತು ಡಾಕ್ಟರ್ ಆಗ್ಯಾನೆ ಅಂದ್ರೆ ಹುಡುಗಾಟವಾ? ಖಂಡಿತ ಅಲ್ಲ. ಅವನ ಹತ್ರ ಹೋದ್ರೆ ಒಂದಷ್ಟು ಪರಿಹಾರ ಸಿಗಬಹುದು. ಈ ಬಡ ಮಧ್ಯಮ ವರ್ಗದವರ ಮಕ್ಳು ಲಂಚ ಕೊಟ್ಟು ಓದಿಕೊಂಡು ಕೆಲಸಕ್ಕೆ ಬಂದಿರಲ್ಲ. ಕಷ್ಟಪಟ್ಟು ಮೆರಿಟ್ ಸೀಟಲ್ಲಿ ಕೂತು ಓದಿಕೊಂಡು ಕೆಲಸ ಮಾಡ್ತಾ ಇರ್ತಾವೆ. ಅಂತವರ ಹತ್ರ ಹೋಗ್ಬೇಕು. ಅದು ಬಿಟ್ಟು ನೀನು ಯಾರಾದರೂ ಕಾಂಜಿ ಪೀಂಜಿ ಡಾಕ್ಟರ್ ಹತ್ರ ಹೋದ್ರೆ ಗುಣ ಆಗೋದ್ ಎಲ್ಲಿ? ಪ್ರಾಣನೇ ಕಳಕೋಬೇಕಾಗ್ತದೆ ಅಂದ್ರು.
ನಂಗೂ ಅವರು ಹೇಳೋದ್ರಲ್ಲಿ ಅರ್ಥ ಇದೇ ಅನಿಸ್ತು ಅದಕ್ಕೆ ಬಂದೆ! ನಿಮ್ಮ ಮಗ ಬಂದು ಕೂಡ್ಲೇ ಹೇಳಿ. ನನ್ನ ಫೋನ್ ನಂಬರ್ ಅವರಿಗೆ ಕೊಡಿ. ತಗೊಳ್ಳಿ, ಗುತ್ತಿಹಳ್ಳಿ ಸೋಮಣ್ಣ ಬಂದಿದ್ರು ಅಂತಾ ಹೇಳಿ ಎಂದು ಅವರು ಒಂದೇ ಉಸಿರಿನಲ್ಲಿ ಹೇಳಿ ಮುಗಿಸುವ ಹೊತ್ತಿಗೆ ಅಮ್ಮನಿಗೋ ಬಾಯಿ ತುಂಬಿದ ನಗು. ಏಕೆಂದರೆ ನಾನೋ ಈ ಕನ್ನಡಮ್ಮನ ಪಾಲಿಗೆ ಅಪ್ಪಟ ಕನ್ನಡ ಹೃದಯ ಪ್ರೀತಿಯ ಮಗು.
ನನ್ನ ಮಗ ಆ ಡಾಕ್ಟರ್ ಅಲ್ಲ. ಅದ್ನ ಓದಿರೋದು ಅಲ್ಲ. ಅದು ಎಂ.ಬಿ.ಬಿ.ಎಸ್. ಇವನದು ಕನ್ನಡ ಸಾಹಿತ್ಯ ಪಿಎಚ್ ಡಿ ಪದವಿ. ಅವನು ಚಿಕ್ಕಮಗಳೂರು ಐ.ಡಿ.ಎಸ್.ಜಿ ಡಿಗ್ರಿ ಕಾಲೇಜಿಗೆ ಕನ್ನಡ ಪಾಠ ಮಾಡಲು ಹೋಗೋದು ಗೊತ್ತಾಯ್ತ? ಆ ಗುತ್ತಿ ಮನ್ಯಾಥಣ್ಣಗೆ ಯಾವಾಗಲೂ ತಮಾಷೆನೇ. ಅದಕ್ಕೆ ನಿಮಗೆ ಹಾಗೆ ಹೇಳಿ ಕಳುಹಿಸಿ ಕೊಟ್ಟಿದ್ದಾರೆ ಅಂತ ತೋರ್ತಾದೆ! ಎಂದು ವಾಸ್ತವತೆಯನ್ನು ಅಮ್ಮ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಅವರು ಕೂಡ ತುಂಬಾ ತುಂಬಾ ನಗಾಡಿ ನಾನು ಅದು ಇದು ಟೆಂಕ್ಷನ್ ಅಂತ ಈ ಥರ ನಗಾಡಿ ತುಂಬಾ ದಿನವಾಗಿತ್ತು. ನಿಮ್ಮ ಮನೆಗೆ ಬಂದು ತುಂಬಾ ದಿನವೂ ಆಗಿತ್ತು. ಒಳ್ಳೇದಾಗ್ಲಿ, ನಂಗೆ ಮನಸ್ಸಿಗೆ ಅಂಟಿದ ಖಾಯಿಲೆ ಎಲ್ಲಾ ಬಿಟ್ಟು ಹೋದಂಗೆ ಆಯ್ತು ನೋಡಿ. ಮೈಗಂಟಿದ ರೋಗ ಹೇಗೋ ವಾಸಿ ಆಗುತ್ತೆ ಬುಡಿ. ಈ ಮನಸ್ಸಿಗೆ ಅಂಟಿದ್ದನ್ನು ಹೀಗೇ ಗುಣಪಡಿಸಿಕೊಳ್ಳಬೇಕು. ಎಂಥದೋ ಒಂದು ಡಾಕ್ಟ್ರು! ಇಷ್ಟೆಲ್ಲ ನೀವು ನಿಮ್ಮ ಯಜಮಾನ್ರು ಕಷ್ಟಪಟ್ಟು ಓದಿಸಿದಕ್ಕೆ ಅಷ್ಟಾದರೂ ಓದಿದವಲ್ಲ ನಿಮ್ಮ ಮಕ್ಳು. ಹೋಗಲಿ ಬಿಡಿ, ನಿಮ್ಮ ಮಗ ಬರೆಯೋ ಬರಹ ತುಂಬಾ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ. ಮತ್ತೆ ಒಂದು ಒಳ್ಳೆಯ ವಿಚಾರ ಇರ್ತಾದೆ. ದೇವರಮನೆ ದೇವಸ್ಥಾನದ ಹೊಯ್ಸಳರ, ಕಾರ್ಕಳದ ಬೈರವರಸರ ಇತಿಹಾಸ ಎಷ್ಟು ಚೆನ್ನಾಗಿ ಬರ್ದಿದ್ದ ಆಗ ನಿಮ್ಮ ಮಗ. ಆ ಪುಸ್ತಕ ನಮ್ಮ ಮನೆಲಿ ಐತೆ. ನೆಂಟ್ರು ಅವರ ಮಕ್ಳು ಬಂದಾಗ ಇಲ್ಲಿ ಇತಿಹಾಸ ಏನು ಅಂತ ಕೇಳ್ದಗೆಲ್ಲ ಓದಿ ಆ ಹುಡುಗ ಓದೋ ಹೊತ್ತಿಗೇ ಇಲ್ಲಿನ ಹಿರಿಯರನ್ನು ಭೇಟಿಮಾಡಿ ಹೀಗೆ ಬರ್ದಿದ್ದ. ಆಗಿನ ಹಿರಿಯರಲ್ಲಿ ಈಗ ಕೆಲವರು ಇಲ್ಲ. ತಿರ್ಕೊಂಡಿದ್ದಾರೆ, ಪಾಪ! ಅವರು ಹೇಳಿದ್ದ ಮಾಹಿತಿ ಮಾತ್ರ ಹಿಂಗೆ ಉಸಿರಾಡ್ತ ಇದೆ ಅಂಥ! ಹೇಳ್ತಾಇರ್ತೀನಿ.
ಇತ್ತೀಚೆಗೆ ಅಂಗಡಿ ಹೊಯ್ಸಳರ ಇತಿಹಾಸ ಕೂಡ ಮೂಡಿಗೆರೆಯ ಸ್ಥಳೀಯ ಕಥೆಗಳ ಹಿನ್ನೆಲೆಯಲ್ಲಿ ಬರ್ದಿದ್ನಲ್ಲ ನಿಮ್ಮ ಮಗ ಪೇಪರಿನಲ್ಲಿ. ಅದೂ ತುಂಬಾ ಚೆನ್ನಾಗಿತ್ತು. ಅದನ್ನೇ ಗುತ್ತಿ ಮನ್ಯಾಥಣ್ಣ ಓದೋದಕ್ಕೆ ಕೊಟ್ಟು. ಎಂಥಾ ಅಪೂರ್ವ ಇತಿಹಾಸವನ್ನು ಕಲೆ ಹಾಕಿದ್ದಾನೆ ನೋಡು ಮಾರಾಯಾ ಇವನು ಡಾಕ್ಟರ್ ಯಾವಾಗ ಆದ ಅಂತ ಗೊತ್ತಿರ್ಲಿಲ್ಲ! ಅವನ ಒಂದ್ಸಲ ಭೇಟಿ ಆಗು ಎಲ್ಲಾ ಸರಿ ಹೋಗ್ತಾದೆ ಅಂತ ಹೇಳಿ ಕಳ್ಸಿದ್ದು. ಅದೆಲ್ಲಾ ಹಾಗಿರಲಿ. ನಿಮ್ಮ ಮಗನಿಗೆ ಮದುವೆ ಆಯ್ತಾ? ಓ ಇನ್ನೂ ಆಗಿಲ್ವಾ? ವಯಸ್ಸು ಆಯಸ್ಸು ನಮ್ಮ ಕೈಯಲ್ಲಿ ಇರೋದಿಲ್ಲ. ಎಲ್ಲಾ ಆ ಭಗವಂತನ ಇಚ್ಛೆಯಂತೆ. ಬೇಗ ಒಂದು ಅವನ ಹಂಗೆ ಮಕ್ಳಿಗೆ ಪಾಠ ಮಾಡೋ ಹುಡುಗಿ ಗಿಡುಗಿನ ತಂದು ಕಟ್ಟಿ. ಚೆನ್ನಾಗಿ ಇರ್ತಾದೆ ಜೀವನ. ಇವನು ಬರಿಲಿ. ಅವಳು ಓದ್ಲಿ,ತಿದ್ಲಿ! ಅಂತ ಒಂದು ಲೋಟ ಕಾಫಿ ಕುಡಿದು ಹೊರಟುಹೋಗಿದ್ದಾರೆ.

ನನ್ನ ಪ್ರೀತಿಯ ಎಂ.ಎ. ಪದವಿಯ ವಿದ್ಯಾಗುರುಗಳಾದ ಡಾ.ರಂಗರಾಜ ವನದುರ್ಗ ಸರ್ ಕೂಡ ಕುವೆಂಪು ವಿಶ್ವವಿದ್ಯಾಲಯದ ತಮ್ಮ ಅಧ್ಯಾಪಕರ ಕೊಠಡಿಯಲ್ಲಿ ಕುಳಿತು ಏನೋ ಭಾಷಣವನ್ನು ಟಿಪ್ಪಣಿ ಮಾಡಿಕೊಳ್ಳುತ್ತಿದ್ದಾಗ ಅಲ್ಲೇ ಎಲ್ಲೋ ಅಕ್ಕ ಪಕ್ಕದ ಕಟ್ಟಡವೊಂದನ್ನು ನಿರ್ಮಾಣ ಮಾಡುತ್ತಿದ್ದ ಕಟ್ಟಡ ಕಾರ್ಮಿಕರ ವಲಯದ ಬಡತಾಯಿಯೊಬ್ಬಳು ಓಡೋಡಿಬಂದು ತನ್ನ ಹಸುಗೂಸು ತುಂಬಾ ದಿನಗಳಿಂದ ಹೊಟ್ಟೆಗೆ ಏನು ಸರಿಯಾಗಿ ತಿನ್ನುತ್ತಿಲ್ಲ. ಎಲ್ಲಾ ಕಕ್ಕಿಕೊಳ್ತದೆ! (ವಾಂತಿ ಮಾಡಿ ಕೋಳ್ತದೆ ಅಂತ!) ಇದಕ್ಕೆ ನೀವೇ ಏನಾದರೂ ಮಾಡಬೇಕು ಡಾಕ್ಟ್ರೇ ಎಂದಿದ್ದಳಂತೆ. ಅದಕ್ಕೆ ಅವರು ಅಯ್ಯೋ ತಾಯಿ ನಾನು ಕನ್ನಡ ಪಿಎಚ್ ಡಿ, ಕನ್ನಡ ಡಾಕ್ಟರ್. ಹುಷಾರ್ ಇಲ್ದಾಗ ವಾಸಿ ಮಾಡ್ತಾರಲ್ಲ ಆ ಎಂ.ಬಿ.ಬಿ.ಎಸ್ ಡಾಕ್ಟರ್ ಅಲ್ಲಮ್ಮ! ಎಂದಿದ್ದಾಗ ಇದೆಲ್ಲ ಏನೆಂದು ಅರ್ಥವಾಗದ ಆ ಮಹಾತಾಯಿ ಅದೇನೇ ಇರಲಿ, ಅಲ್ಲಿ ನಿಂತಿದ್ದಾರಲ್ಲ ಹುಡುಗ್ರು ಅವರು ಹೇಳಿದ್ದು ನೀವು ಚೆನ್ನಾಗಿ ನೋಡ್ತೀರಿ ಅಂತ ಅದಕ್ಕೆ ಬಂದೆ.
ನನ್ನ ಮಗಿನ ಜೀವ ನಿಮ್ಮ ಕೈಯಲ್ಲಿ ಇದೆ. ಹೇಗಾದರೂ ಬಂದು ಕಾಪಾಡಿ ಅಂತ ದುಃಖ ಭರಿತ ಒಡಲುರಿಯ ಮಮತೆಯ ಕಣ್ಣುಗಳಿಂದ ನೋಡುತ್ತ ನಿಂತಂತೆ ಪ್ರೀತಿಯ ಮೆತ್ತನೆಯ ಹೃದಯದ ಗುರುಗಳಿಗೆ ದುಃಖಿತರನ್ನು ನೋಡಿಯೂ ನೋಡದಂತೆ ಕಣ್ಣುಮುಚ್ಚಿಕೊಂಡು ಇದ್ದರೂ ಪರ್ವಾಗಿಲ್ಲ,
ಆದರೆ ಅಂತವರಿಗೆ ಇಂಥ ಸಂದರ್ಭದಲ್ಲೂ ತಮಾಷೆ ಮಾಡುವ ಆ ಹುಡುಗರ ತುಂಬಿದ ಹೊಟ್ಟೆಯ ಮನೋಸ್ಥಿತಿ ಎಂಥದೋ ಅಂದ್ಕೊಂಡು ಅವರಿಗೆ ಇದು ಸರಿನಾ? ಎನ್ನುತ್ತಲೇ ಅವರೊಂದಿಗೇ ಆ ತಾಯಿಯ ಮಗುವಿನ ಬಳಿ ಹೋದಾಗ ಈ ಮೊದಲು ತಮಾಷೆಗೆಂದು ಮೇಷ್ಟರ ಬಳಿಗೆ ಹಾಗೆ ಹೇಳಿ ಕಳುಹಿಸಿದ್ದ ಆ ಹುಡುಗರಿಗೂ ಅಲ್ಲಿನ ಪರಿಸ್ಥಿತಿಯಲ್ಲಿ ಹೊಟ್ಟೆಯೊಳಗೆಲ್ಲ ಕರಗಿ ಹೋಗಿ ಕಣ್ಣೀರಿನ ಹನಿಯಾಗಿ ಹರಿದು ಬರುವ ಉಪನದಿಗಳು. ಗುರುವಿನ ಕರುಣ ಭಾವನೆ ಮಾತ್ರ ಮಹಾನದಿಯ ಪ್ರೀತಿ.
ಸಂಬಂಧಿಸಿದ ಮಕ್ಕಳ ವೈದ್ಯರಿಗೆ ತೋರಿಸು ಎಂದು ವ್ಯವಸ್ಥೆ ಮಾಡಿ ತದನಂತರ ಭಾಷಣ ಸಿದ್ಧಪಡಿಸುತ್ತಿದ್ದ ತಮ್ಮ ಅದೇ ಛೇಂಬರಿಗೆ ಬಂದು ಒಬ್ಬನೇ ಕುಳಿತು ಅಲ್ಲಿಯವರೆಗೆ ಕಟ್ಟಿಕೊಂಡು ಹೋಗಿ ಒತ್ತರಿಸಿ ಬಿಕ್ಕಳಿಸಿ ಹೊರಬರುತ್ತಿದ್ದ ಎದೆ ದುಃಖವನ್ನೆಲ್ಲ ಗಳಗಳನೆ ಅತ್ತು ಹೊರಹಾಕಿದರಂತೆ. ಆಗ ಅವರ ಬಾಲ್ಯ, ಬಯಲು ನಾಡಿನ ಅವರಮ್ಮ ಎಲ್ಲಾ ನೆನಪಾಗಿ ದುಃಖ ಮಹಾ ನದಿಯಾದುದು ಸುಳ್ಳು ಎನ್ನಲಾದಿತೇ? ಇಲ್ಲ! ಇದನ್ನು ಓದುತ್ತಿರುವ ನಿಮ್ಮ ಕನ್ನಡದ ಕರುಳು ಕಣ್ಣು ಹಾಗೇ ಹನಿಗೂಡುತ್ತಿರುವುದೇ ಇದಕ್ಕೆ ಸತ್ಯಸಾಕ್ಷಿ.
ಹೀಗೆ ಅನೇಕ ಮಂದಿ ಆಪ್ತರು ಏನ್ ಡಾಕ್ಟ್ರೇ ಅಂತ ನನ್ನನ್ನ ಸಂಬೋಧಿಸಿ ಮಾತನಾಡಿದ ಮೇಲೆ ನನಗೆ ಅನ್ನಿಸಿದ್ದು, ಹೌದಲ್ವಾ? ಒಬ್ಬ ಲೇಖಕ, ಅಧ್ಯಾಪಕನೂ ಕೂಡ ನಿಜಕ್ಕೂ ಡಾಕ್ಟ್ರೇ! ಅದು ಪಿಎಚ್ ಡಿ ಆಗಿರಲಿ, ಇಲ್ಲದಿರಲಿ. ಒಬ್ಬ ಎಂಬಿಬಿಎಸ್ ಡಾಕ್ಟರ್ ಸಾವಿರಾರು ರೋಗಿಗಳ ದೇಹವನ್ನು ಪರೀಕ್ಷಿಸಿ ಚಿಕಿತ್ಸೆ ನೀಡುವ ಮೂಲಕ ಆರಾಮವಾಗಿಸುವಂತೆ ಒಬ್ಬ ಭಾಷೆ – ಸಾಹಿತ್ಯ ವಿಷಯದ ಅಧ್ಯಾಪಕ, ಲೇಖಕ ಮನಸ್ಸು ಎಂಬ ಕನ್ನಡಿಗೆ ಪಾರದರ್ಶಕ ದ್ರವ ಹಚ್ಚುವ ಉಪಶಮನದ ಕೆಲಸ ಮಾಡುತ್ತಲೇ ಇರುತ್ತಾನೆ.
ಆದರೆ ಇಲ್ಲೇ ಒಂದು ಮಾತು. ಅವನು ಇದರಲ್ಲಿ ಎಷ್ಟು ಪರಿಣತ ಹಾಗೂ ಪ್ರಾಮಾಣಿಕ ಎಂಬುವುದನ್ನು ನಾವು ಸದಾ ಆಲೋಚಿಸುತ್ತಲೇ ಇರಬೇಕು. ಇದು ಎಂಬಿಬಿಎಸ್ ಮತ್ತು ಪಿಎಚ್ ಡಿ ಪದವಿಯ ಎರಡೂ ಡಾಕ್ಟರ್ ನೆನಪಿಡಬೇಕು. ನಾವೆಲ್ಲರೂ ಕೂಡ ಅಂತಹ ಕೈಗುಣದ ಡಾಕ್ಟರ್ ಹತ್ತಿರ ಹೋಗಿ ಸೂಕ್ತವಾದ ರೀತಿಯಲ್ಲಿ ಗುಣಮುಖರಾಗಬೇಕಾಗುತ್ತದೆ!

ಕೊನೆ ಮಾತು: “ಹಲೋ ಇದು ಡಾಕ್ಟರ್ ಸಂಪತ್ ಮಾತಾಡ್ತ ಇರೋದಾ? ವಾಟ್ಸಾಫ್ ಗ್ರೂಪ್ ವೊಂದರಲ್ಲಿ ನಿಮ್ಮ ಆರೋಗ್ಯ ವಿಜ್ಞಾನ ಲೇಖನ ಓದಿದೆ. ತುಂಬಾ ಚೆನ್ನಾಗಿ ಬರೆದಿದ್ದೀರಿ ಸರ್, ಅಭಿನಂದನೆಗಳು” “ಥ್ಯಾಂಕ್ಯೂ ನಿಮ್ಮ ಪ್ರೀತಿಗೆ ಧನ್ಯ!” “ಡಾಕ್ಟರ್ ಸಂಪತ್ ಸರ್, ನಮ್ಮ ಮಗು ಒಂದು ವಾರದಿಂದ ಮಂಕ್ ಮಂಕಾಗಿದೆ. ಒಂದರಲ್ಲೂ ಆಸಕ್ತಿ ಇಲ್ಲ! ನಿಮ್ಮ ಕ್ಲಿನಿಕ್ ಎಲ್ಲಿದೆ ಅಂತ ಹೇಳ್ತಿರಾ ಸರ್?” “ಓ ಹಾಗಾ? (ನಗುತ್ತ) ನಾನು ಮಕ್ಕಳ ಸಾಹಿತ್ಯದಲ್ಲಿ ಪಿಎಚ್ ಡಿ ಮಾಡಿರುವ ಕನ್ನಡ ಮೇಷ್ಟ್ರು ಡಾ.ಸಂಪತ್ ಬೆಟ್ಟಗೆರೆ. ನಿಮಗೆ ಎಂಬಿಬಿಎಸ್ ಮಕ್ಳ ಡಾಕ್ಟರ್ ಬೇಕು ಅಂದರೆ ಡಾ.ಎಂ.ವಿ.ಸಂಪತ್ ಕುಮಾರ್ ಅವರನ್ನು ಭೇಟಿಮಾಡಿ. ಆವರು ಮೂಡಿಗೆರೆಯ ಕಲ್ಪನ ಕಾಂಪ್ಲೆಕ್ಸ್ ನಲ್ಲಿ ಕ್ಲಿನಿಕ್ ಇಟ್ಟುಕೊಂಡಿದ್ದಾರೆ!” “ಓ ಹೌದಾ ಸಾರ್, ನೀವು ಅವರಲ್ವಾ ಹಾಗಾದರೆ? ನಾನು ನೀವು ಅವರು ಒಂದೇ ಅಂದುಕೊಂಡಿದ್ದೆ. ಇರಲಿ ಬಿಡಿ. ನನ್ನ ಮಗು ಚೆನ್ನಾಗಿ ಓದಬೇಕು ಅಂದ್ರೆ ಯಾವ ಸ್ಕೂಲಿಗೆ ಸೇರಿಸಿದ್ರೆ ಒಳ್ಳೆಯದು ಹೇಳಿ ಸರ್ ನೋಡೋಣ!” ” ಬಾಲಮಂಗಳ, ತುಂತುರು, ಚಂದಮಾಮ, ಚಂಪಕ, ಗಿಳಿವಿಂಡು ಇವುಗಳಲ್ಲಿ ಯಾವುದಕ್ಕೂ ಬೇಕಾದರೂ ಸೇರಿಸಿ. ಇವುಗಳಲ್ಲಿ ಅಡ್ಮಿಷನ್ ಇಲ್ಲದೆ ಕೆಲವು ಸ್ಥಗಿತಗೊಂಡು ಹಾಗೆ ನಿಂತು ಹೋಗಿವೆ. ಇನ್ನು ಕೆಲವು ಬೆರಳೆಣಿಕೆಯಷ್ಟು ಚಾಲ್ತಿಯಲ್ಲಿವೆ. ನನ್ನ ಪ್ರೀತಿಯ ಸಲಹೆ ಎಂದರೆ ನಿಮ್ಮ ಮಗುವಿಗೆ ಮಂಕು ಬಿಟ್ಟು ಹೋಗಬೇಕೆಂದರೆ ಇವುಗಳಲ್ಲೇ ಒಂದರ ಆಯ್ಕೆ ಹೆಚ್ಚು ಸೂಕ್ತ. ನಿಮ್ಮ ಮಗು ಹಾಗೇ ಲವಲವಿಕೆಯಿಂದ ಇರುವಾಗ ಫೋನ್ ಮಾಡ್ಸಿ. ಮಾತಾಡ್ತೀನಿ. ಓಕೆನಾ?!”

-ಡಾ.ಸಂಪತ್ ಬೆಟ್ಟಗೆರೆ, ಕನ್ನಡ ಉಪನ್ಯಾಸಕರು, ಚಿಕ್ಕಮಗಳೂರು
ಮೊ: 9353057067

About Author

Leave a Reply

Your email address will not be published. Required fields are marked *