day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj “ಪ್ರವಾಸಿಗರ ಮಿತಿ ಮೀರಿದ ಅಟ್ಟಹಾಸ : ಮಲೆನಾಡಿಗೆ ಕಂಟಕಪ್ರಾಯವಾದ ಮಲ-ಮೂತ್ರ,ವಾಂತಿ-ಪ್ಲಾಸ್ಟಿಕ್.” – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

“ಪ್ರವಾಸಿಗರ ಮಿತಿ ಮೀರಿದ ಅಟ್ಟಹಾಸ : ಮಲೆನಾಡಿಗೆ ಕಂಟಕಪ್ರಾಯವಾದ ಮಲ-ಮೂತ್ರ,ವಾಂತಿ-ಪ್ಲಾಸ್ಟಿಕ್.”

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಇತ್ತೀಚೆಗೆ ಕುಮಾರ ಪರ್ವತ ಚಾರಣ ಹೊರಟ ಜನರ ದೊಡ್ಡ ಗುಂಪೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.ಸುಬ್ರಹ್ಮಣ್ಯ ಸಮೀಪದ ಪಶ್ಚಿಮ ಘಟ್ಟದ ವ್ಯಾಪ್ತಿಯ ಈ ಗುಡ್ಡ ಹತ್ತಲು ಜನ ಜಾತ್ರೆಯೇ ನೆರೆದಿತ್ತು.ಈಗ ವಾರಾಂತ್ಯ ಬಂತೆಂದರೆ ಕುಮಾರ ಪರ್ವತ ಮಾತ್ರವಲ್ಲ,ಮಲೆನಾಡಿನ ಯಾವುದೇ ಟ್ರೆಕ್ಕಿಂಗ್ ಸ್ಥಳಗಳಲ್ಲಿ ಈ ರೀತಿಯ ಜನರ ಗುಂಪು ಸಾಮಾನ್ಯ ಎಂದಾಗಿಬಿಟ್ಟಿದೆ!

ಬೆಂಗಳೂರು ಸೇರಿದಂತೆ ಮಹಾನಗರಗಳ ದಿನನಿತ್ಯದ ಜಂಜಾಟಗಳ ಜೀವನದಿಂದ ಸ್ವಲ್ಪ ರಿಲ್ಯಾಕ್ಸ್ ಆಗೋಣ ಎಂದು ಜನ ಹಸಿರು ಹೊದ್ದಿರುವ ಮಲೆನಾಡಿಗೆ ಪ್ರವಾಸ ಬರುತ್ತಾರೆ.ಪ್ರಕೃತಿ ಸೌಂದರ್ಯಕ್ಕೆ ಆಕರ್ಷಿತರಾಗಿ ಬರುವವರು ಕೆಲವರಿದ್ದರೆ, ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಬರುವವರು ಇನ್ನೊಂದಿಷ್ಟು ಜನ.ಹೀಗೆ ಪ್ರವಾಸ ಬರುವ ಹೆಚ್ಚಿನವರು ಅವರೊಂದಿಗೆ ಪಟ್ಟಣದ ಗದ್ದಲಗಳನ್ನು ಕೂಡಾ ಇಲ್ಲಿಗೆ ಹೊತ್ತು ತರುತ್ತಿದ್ದಾರೆ.

ಇವತ್ತು ಮಲೆನಾಡಿನ ಯಾವುದೇ ಕಾಡು ನಡುವಿನ ಮುಖ್ಯ ರಸ್ತೆ ನೋಡಿದರೂ ವಾರಾಂತ್ಯದಲ್ಲಿ ವಿಪರೀತ ವಾಹನಗಳ ಸಾಲು,ಕರ್ಕಶ ಹಾರ್ನ್,ಡಿಜೆ,ಗದ್ದಲ,ಪ್ಲಾಸ್ಟಿಕ್ ತ್ಯಾಜ್ಯ, ಮದ್ಯದ ತೊಟ್ಟೆಗಳು, ಗಾಜಿನ ಚೂರು, ತೀರ್ಥದ ಬಾಟಲಿ, ಪ್ರವಾಸಿಗರ ಮಲ-ಮೂತ್ರ,ವಾಂತಿ ಇತ್ಯಾದಿಗಳಿಂದ ತುಂಬಿ ತುಳುಕುತ್ತಿರುತ್ತದೆ.ಶಾಂತ ಪರಿಸರದ ಮಧ್ಯೆ ಮನುಷ್ಯ ವಿಕೃತಿಯ ಗುರುತುಗಳು ಎಲ್ಲೆಲ್ಲೂ ಕಾಣಿಸುತ್ತದೆ.

ಪ್ರವಾಸಿಗರು ಇಲ್ಲಿನ ಪ್ರಕೃತಿ ಸೌಂದರ್ಯ ಸವಿದು, ಧಾರ್ಮಿಕ ಕ್ಷೇತ್ರಗಳನ್ನು ನೋಡಿ ಖುಷಿ ಪಟ್ಟು ಹೋದರೆ ಅದು ಯಾರಿಗೂ ಸಮಸ್ಯೆಯಲ್ಲ. ಆದರೆ ಅಂತಹ ಪ್ರಬುದ್ಧತೆ ಎಲ್ಲಿದೆ? ಅವರ ಬೇಜವಾಬ್ದಾರಿಯುತ ನಡವಳಿಕೆಗಳು ಪರಿಸರವನ್ನು ಹಾಳುಗೆಡವುತ್ತಿದೆ. ವನ್ಯಜೀವಿಗಳ ಬದುಕನ್ನು ಕಿತ್ತುಕೊಳ್ಳುತ್ತಿದೆ. ಸ್ಥಳೀಯರ ನೆಮ್ಮದಿ ಕಸಿಯುತ್ತಿದೆ.

ಇವತ್ತು ಪ್ರವಾಸೋದ್ಯಮದಿಂದ ಮಲೆನಾಡಿಗರಿಗೆ ಅಲ್ಪಸ್ವಲ್ಪ ಆದಾಯವಿದೆ. ಅದರ ಸುತ್ತ ಒಂದಷ್ಟು ವ್ಯಾಪಾರ ವಹಿವಾಟು ನಡೆಯುತ್ತಿದೆ. ಹೊಟೇಲ್, ರೆಸಾರ್ಟ್, ಹೋಮ್ ಸ್ಟೇ ಮೊದಲಾದ ವ್ಯವಹಾರಗಳು ಆಗುತ್ತಿದೆ. ಒಂದಷ್ಟು ಜನರಿಗೆ ಇದರ ಲಾಭ ಸಿಗುತ್ತಿದೆ. ಅದರೆ ಅವರಿಂದ ನಡೆಯುತ್ತಿರುವ ಪರಿಸರ ಮಾಲಿನ್ಯ ಗರಿಷ್ಠ ಮಟ್ಟ ತಲುಪಿದೆ. ಹಾಗಾಗಿ ಪ್ರವಾಸಿಗರೆಂದರೆ ಮಲೆನಾಡಿನಾದ್ಯಂತ ಜನರಿಗೆ ಅಸಹನೆಯಿದೆ.

ಪಶ್ಚಿಮ ಘಟ್ಟ ಜಗತ್ತಿನ ಮೂವತ್ತಾರು ಜೀವವೈವಿಧ್ಯ ಬಿಸಿ ತಾಣಗಳಲ್ಲಿ ಒಂದು.ಇಲ್ಲಿರುವ ಜೀವಸಂಕುಲ ಜಗತ್ತಿನಲ್ಲೇ ವಿಶಿಷ್ಟವಾದುದು.ನಮ್ಮ ಬಹುಪಾಲು ನದಿಗಳು ಹುಟ್ಟುವುದು ಇಲ್ಲೇ.ಇಡೀ ದಕ್ಷಿಣ ಭಾರತದ ಉಳಿವು ಪಶ್ಚಿಮ ಘಟ್ಟದ ಉಳಿವಿನಲ್ಲಿ ನಿಂತಿದೆ.ಆದರೆ ಇವತ್ತು ವಿವಿಧ ರೂಪಗಳಲ್ಲಿ ಇದನ್ನು ಹಾಳುಗೆಡವಲಾಗುತ್ತಿದೆ. ಇದಕ್ಕೆ ಪ್ರವಾಸೋದ್ಯಮದ ಕೊಡುಗೆ ತುಂಬಾ ದೊಡ್ಡದಿದೆ.

ಇವತ್ತು ಪ್ರವಾಸಿಗರಿಂದಾಗಿ ವಾಹನಗಳು ಹೆಚ್ಚಾಗುತ್ತಿದೆ ಎಂದು ಇಲ್ಲಿನ ರಸ್ತೆಗಳನ್ನು ವಿಸ್ತರಣೆ ಮಾಡಲಾಗುತ್ತಿದೆ. ಅದಕ್ಕಾಗಿ ನೂರಾರು ವರ್ಷಗಳ ಪಾರಂಪರಿಕ ಮರಗಳನ್ನು ಕಡಿಯಲಾಗುತ್ತಿದೆ. ಗುಡ್ಡ ಬಗೆಯಲಾಗುತ್ತಿದೆ. ಜಲದ ಕೊಂಡಿಗಳನ್ನು ಕತ್ತರಿಸಲಾಗುತ್ತಿದೆ.ಪ್ರವಾಸಿಗರಿಗೆ ಸೌಲಭ್ಯ ಒದಗಿಸಲು ಮಲೆನಾಡಿನ ಪಟ್ಟಣಗಳ ಸುತ್ತಲಿನ ಗದ್ದೆಗಳು ಲೇ ಔಟ್ ಆಗುತ್ತಿದೆ. ಕೆರೆಗಳು ಮುಚ್ಚಿ ಕಟ್ಟಡಗಳು ಏಳುತ್ತಿದೆ.ನಗರದ ವಿಸ್ತರಣೆಯಲ್ಲಿ ತೋಟ,ಕಾಡು ಎಲ್ಲದೂ ಬಲಿಯಾಗುತ್ತಿದೆ.ಸಂಸ್ಕೃತಿಯೊಂದು ಅವಸಾನದ ಅಂಚಿಗೆ ಬಂದು ನಿಂತಿದೆ.

ಪ್ರವಾಸಿಗರು ಕೊಡುವ ತಿಂಡಿ ತೀರ್ಥಗಳಿಂದಾಗಿ ಬಾನೆಟ್ ಕೋತಿಗಳು ತಮ್ಮ ಸಹಜ ಸ್ವಭಾವ ಕಳೆದುಕೊಂಡು ಆಹಾರಕ್ಕಾಗಿ ಜನರೆದುರು ಭಿಕ್ಷೆ ಬೇಡುವ ಸ್ಥಿತಿಗೆ ಬಂದಿವೆ. ಸಿಂಗಳಿಕಗಳ ಫೋಟೋ ತೆಗೆಯಬೇಕೆಂಬ ಏಕೈಕ ಕಾರಣಕ್ಕೆ ಅವುಗಳಿಗೆ ಆಹಾರದ ಆಮಿಷವೊಡ್ಡಿ,ಅವು ತಮ್ಮ ಮೂಲ ಗುಣಗಳನ್ನು ಮರೆತು,ರಸ್ತೆಗಿಳಿಯುತ್ತಾ ಅಳಿವಿನಂಚಿನೆಡೆಗೆ ಸಾಗುತ್ತಿವೆ.ಕಾಡು ಸೇರುತ್ತಿರುವ ಪ್ಲಾಸ್ಟಿಕ್ ವನ್ಯಜೀವಿಗಳ ನೆಮ್ಮದಿ ಕಸಿಯುತ್ತಿದೆ.ಗಾಜಿನ ಚೂರುಗಳು ಕಾಡು ಪ್ರಾಣಿಗಳ ಜೀವವನ್ನೇ ಬಲಿ ತೆಗೆದುಕೊಳ್ಳುತ್ತಿದೆ.ಮನುಷ್ಯ ಕೊಡುವ ಆಹಾರ ಜೀವ ಲೋಕದಲ್ಲಿ ಸಾಂಕ್ರಾಮಿಕ ರೋಗಗಳನ್ನು ಹಬ್ಬಿಸುತ್ತಿದೆ. ಮನುಷ್ಯನ ವಿಕೃತಿಗಳು ಪರಿಸರ ವ್ಯವಸ್ಥೆಯಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡುತ್ತಿದೆ.

ಪ್ರವಾಸಿ ವಾಹನಗಳನ್ನು ತೊಳೆಯುವುದು,ಅವರ ಸ್ನಾನ, ಮಲ-ಮೂತ್ರ ಇತ್ಯಾದಿ ಚಟುವಟಿಕೆಗಳು ನದಿ ಮತ್ತು ನೀರಿನ ಮೂಲಗಳನ್ನು ಕಲುಷಿತಗೊಳಿಸುತ್ತಿದೆ.ಕೆಡುತ್ತಿರುವ ನೀರು ಜಲಚರಗಳ ಜೀವ ಹರಣಕ್ಕೂ ಕಾರಣವಾಗುತ್ತಿದೆ. ಪುಣ್ಯ ಕ್ಷೇತ್ರಗಳು ಪ್ರವಾಸಿಗರ ಒತ್ತಡದಿಂದ ನಲುಗಿದೆ. ಪವಿತ್ರ ನದಿಗಳೆಲ್ಲಾ ಅಪವಿತ್ರಗೊಂಡಿವೆ.ಪ್ರವಾಸಿಗರಿಂದಾಗಿ ಇಲ್ಲಿನ ಕಾಡು,ನದಿ,ಬೆಟ್ಟಗಳೆಲ್ಲಾ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿದೆ.ಪ್ರವಾಸೋದ್ಯಮ ಇಲ್ಲಿನ ಪರಿಸರದ ಮೇಲೆ ಇನ್ನಷ್ಟು ಒತ್ತಡ ಹಾಕುತ್ತಿದೆ.ನೈಸರ್ಗಿಕ ಸಂಪನ್ಮೂಲಗಳ ಬಳಕೆ ಮಿತಿಮೀರಿ ಅದರ ಪರಿಣಾಮಗಳು ಸ್ಥಳೀಯ ಜನಸಮುದಾಯದ ಮೇಲಾಗುತ್ತಿದೆ.

ಇವತ್ತು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಕಠಿಣ ನಿಯಮಗಳನ್ನು ಜಾರಿಗೆ ತಂದು ಬೇಕಾಬಿಟ್ಟಿ ಪ್ರವಾಸಕ್ಕೆ ಕಡಿವಾಣ ಹಾಕಬೇಕಾಗಿದೆ.ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಪ್ರವಾಸಿಗರಿಗೆ ಕಠಿಣ ನಿರ್ಬಂಧಗಳನ್ನು ಹೇರಿ ನಿಸರ್ಗದ ಉಳಿವಿಗೆ ಹೆಚ್ಚು ಮಹತ್ವ ನೀಡಬೇಕಿದೆ. ಪ್ಲಾಸ್ಟಿಕ್ಕಿಗೆ ನಿರ್ಬಂಧ ಹೇರಿ ಸ್ಥಳೀಯರ ಮೇಲ್ವಿಚಾರಣೆಯಲ್ಲಿ ಸೀಮಿತ ಜನರಿಗೆ ಮಾತ್ರ ಪ್ರವಾಸಕ್ಕೆ ಅವಕಾಶ ನೀಡಬೇಕಿದೆ.ಈಶಾನ್ಯ ರಾಜ್ಯಗಳ ಮಾದರಿಯಲ್ಲಿ ಇಲ್ಲಿನ ಪ್ರವಾಸೋದ್ಯಮವನ್ನು ನಿಯಂತ್ರಿಸಿ ಸ್ಥಳೀಯ ಪರಿಸರ ಮತ್ತು ಸಂಸ್ಕೃತಿಯ ಉಳಿವಿಗೆ ಪ್ರಾಮುಖ್ಯತೆ ಕೊಡಬೇಕಿದೆ. ವಿದ್ಯಾರ್ಥಿಗಳು ಮತ್ತು ಪರಿಸರ ಅಧ್ಯಯನಕ್ಕೆ ಸಂಬಂಧಿಸಿದವರನ್ನು ಹೊರತು ಪಡಿಸಿ ಉಳಿದವರಿಗೆ ಕಾಡಿನ ಪ್ರವೇಶ ನಿರ್ಬಂಧಿಸಬೇಕಾಗಿದೆ.ಹವಾಗುಣ ಬದಲಾವಣೆಯ ಈ ದಿನಗಳಲ್ಲಿ ಪಶ್ಚಿಮ ಘಟ್ಟದಂತಹ ಸೂಕ್ಷ್ಮ ಪ್ರದೇಶವನ್ನು ಸಂರಕ್ಷಿಸಲು ಯಾವುದೇ ಕಠಿಣ ನಿಯಮಗಳನ್ನು ಜಾರಿಗೆ ತರುವ ಮೂಲಕ ಪರಿಸರ ಮತ್ತು ಸ್ಥಳೀಯರ ಜೀವನೋಪಾಯವನ್ನು ಉಳಿಸುವ ಬದ್ಧತೆಯನ್ನು ಸರ್ಕಾರ ತೋರಿಸಬೇಕಿದೆ.

✍🏻ಬರಹ ಕೃಪೆ.✍🏻

 

 

ನಾಗರಾಜ್ ಕೂವೆ.

BEAS Centre ಶೃಂಗೇರಿ.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *