ಹೋಂ ಸ್ಟೇನಲ್ಲಿ ಯುವತಿ ಸಾವು ~ ಆಲ್ದೂರು ಪೊಲೀಸ್ ಸ್ಟೇಷನ್ ನಲ್ಲಿ ಮಾಲೀಕನ ವಿರುದ್ಧ ಪ್ರಕರಣ ದಾಖಲು.
1 min read
ಅವಿನ್ ಟಿವಿ ಸುದ್ದಿಜಾಲ ✒️: ಹೋಂ ಸ್ಟೇನಲ್ಲಿ ಯುವತಿ ಸಾವು ~ ಆಲ್ದೂರು ಪೊಲೀಸ್ ಸ್ಟೇಷನ್ ನಲ್ಲಿ ಮಾಲೀಕನ ವಿರುದ್ಧ ಪ್ರಕರಣ ದಾಖಲು.
ಚಿಕ್ಕಮಗಳೂರು ಫೆ ೨೦ : ತಾಲೂಕಿನ ಹಾಂದಿ ಗ್ರಾಮದ ‘ಹಿಪ್ಲಾ ಹೋಂ ಸ್ಟೇ’ನಲ್ಲಿ ನಡೆದಿದ್ದ ಯುವತಿಯ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ,
ನಾಲ್ಕು ತಿಂಗಳ ಬಳಿಕ ಮಾಲೀಕ ಸುಧಾಕರ್ ವಿರುದ್ಧ ಅಲ್ಲೂರು ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.
ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಂಜಿತಾ (27) ಅವರು ಕಳೆದ ಅಕ್ಟೋಬರ್ 25ರಂದು ಸ್ನೇಹಿತೆಯ ನಿಶ್ಚಿತಾರ್ಥಕ್ಕಾಗಿ ಬಂದು ಹೋಂ ಸ್ಟೇ ನಲ್ಲಿ ತಂಗಿದ್ದರು. ಸ್ನಾನಕ್ಕೆಂದು ಬಾತ್ರೂಮ್ಗೆ ತೆರಳಿದ್ದ ಅವರು ಬಹಳ ಹೊತ್ತಾದರೂ ಹೊರಬರದಿದ್ದಾಗ, ಕಿಟಕಿಯಿಂದ ನೋಡಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು.
ಆರಂಭದಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಿಸಲಾಗಿದ್ದರೂ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸಾವಿನ ಹಿಂದಿನ ನೈಜ ಕಾರಣ ಬಯಲಾಗಿದೆ. ಗ್ಯಾಸ್ ಗೀಸರ್ನಿಂದ ಸೋರಿಕೆಯಾದ ಕಾರ್ಬನ್ ಮಾನಾಕ್ಷೆಡ್ ಎಂಬ ವಿಷಕಾರಿ ಅನಿಲವನ್ನು ಸೇವಿಸಿದ್ದರಿಂದಲೇ ರಂಜಿತಾ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ವರದಿಯಲ್ಲಿ ದೃಢಪಡಿಸಿದ್ದಾರೆ.
ಸ್ನಾನದ ಕೋಣೆಯಲ್ಲಿ ಸರಿಯಾದ ಗಾಳಿ-ಬೆಳಕಿನ (ವೆಂಟಿಲೇಶನ್) ವ್ಯವಸ್ಥೆ ಇಲ್ಲದ ಕಾರಣ ಈ ದುರಂತ ಸಂಭವಿಸಿದೆ. ಹೋಂ ಸ್ಟೇ ಮಾಲೀಕನ ನಿರ್ಲಕ್ಷ್ಯವೇ ಈ ಸಾವಿಗೆ ನೇರ ಕಾರಣ ಎಂದು ಕುಟುಂಬದವರು ಆರೋಪಿಸಿದ್ದು, ರಂಜಿತಾ ಅವರ ಸಹೋದರ ರತನ್ ನೀಡಿದ ದೂರಿನ ಮೇರೆಗೆ ಮಾಲೀಕ ಸುಧಾಕರ್ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
•••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….✒️
ಚಿಕ್ಕಮಗಳೂರು

