लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಹೆತ್ತಮ್ಮನ ಹೆರಿಗೆ ಮಾಡಿ ಸೂಲಗಿತ್ತಿಯಾದ ದಿಟ್ಟೆ

ಅವರು ಕಮಲಮ್ಮ. ಊರು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ನಿಡುವಾಳೆ. ನಿಡುವಾಳೆಯ ಕಾಫಿ ಎಸ್ಟೇಟ್‌ವೊಂದರ ಲೈನುಮನೆಯಲ್ಲಿರುವ ಕಮಲಮ್ಮ ಹಲವು ದಶಕಗಳಿಂದ ಸೂಲಗಿತ್ತಿಯಾಗಿ ನೂರಾರು ಹೆರಿಗೆ ಮಾಡಿದವರು. ಮಲೆನಾಡಿನ ಕುಗ್ರಾಮಗಳ ಬೆಟ್ಟ ಸಾಲಿನಲ್ಲಿ ಅಲ್ಲೊಂದು ಇಲ್ಲೊಂದು ಇದ್ದ ಮನೆಗಳಲ್ಲಿ ಹೆರಿಗೆಬೇನೆ ಶುರುವಾದಾಗ ವಾಹನ ಸೌಕರ್ಯಗಳೆ ಇಲ್ಲದ ಆ ದಶಕಗಳಲ್ಲಿ ನಡೆದುಕೊಂಡ ಹೋಗಿ ಸುಸೂತ್ರ ಹೆರಿಗೆಗಳನ್ನು ಮಾಡಿ ಜೀವಗಳನ್ನು ಉಳಿಸಿದವರು.
ಕಮಲಮ್ಮ ಸೂಲಗಿತ್ತಿಯಾಗಿ ಕಾರ್ಯ ಆರಂಭಿಸಿದ್ದೆ ಒಂದು ರೋಚಕ ಕತೆ. ಹತ್ತು ವಯಸ್ಸಿನ ಪುಟ್ಟ ಬಾಲೆಯಾಗಿದ್ದಾಗ ತನ್ನ ಹೆತ್ತಮ್ಮನಿಗೆ ನಡುರಾತ್ರಿ ಹೆರಿಗೆಬೇನೆ ಕಾಣಿಸಿಕೊಂಡಾಗ ತಾನೆ ಮುಂದೆ ನಿಂತು ಹೆತ್ತಮ್ಮನ ಹೆರಿಗೆ ಮಾಡಿಸಿದ ದಿಟ್ಟೆ ಈ ಕಮಲಮ್ಮ. ನಿಡುವಾಳೆಯ ಲೈನುಮನೆಯ ಅಂಗಳದಲ್ಲಿ ಕುಳಿತು ನಿಷ್ಕಲ್ಮಶ ನಗುಮೊಗದಲ್ಲಿ ಜೀವನೋತ್ಸಾಹ ಬುಗ್ಗೆಯಂತೆ ಕಂಡ ಕಮಲಮ್ಮ ತಮ್ಮ ಕತೆಯನ್ನು ಹೇಳುತ್ತಾ ಹೋದರು:
ನಿಡುವಾಳೆ ನನ್ನ ಊರು. ನಾನು ಶಾಲೆಯ ಮೆಟ್ಟಿಲು ಹತ್ತಿದವಳಲ್ಲ. ನನ್ನ ತಂದೆ ತಾಯಿಗೆ ೭ ಜನ ಮಕ್ಕಳು ನಾವು. ಒಂದು ಗಂಡು, ಆರು ಹೆಣ್ಣು. ತಂದೆಯ ಕಾಲದಲ್ಲೆ ಮಂಗಳೂರಿನಿಂದ ಮಲೆನಾಡು ಕಡೆಗೆ ಬಂದ್ವಿ. ನಿಡುವಾಳೆಯ ಕಾಫಿ ಎಸ್ಟೇಟಿನ ತೋಟದ ಮನೆಯಲ್ಲಿ ಗಂಡ ಮಕ್ಕಳೊಂದಿಗೆ ವಾಸ ಇದ್ದೇನೆ. ನನಗೆ ಆರು ಜನ ಮಕ್ಕಳು.
ಕೆಲ ದಶಕಗಳ ಹಿಂದೆ ಆಸ್ಪತ್ರೆಗಳು ಇಲ್ಲದ ಕಾಲದಲ್ಲಿ ಹೆರಿಗೆ ಬೇನೆ ಶುರುವಾದ ಮನೆಗಳವರು ಕರೆದಾಗ ಹೋಗಿ ಹೆರಿಗೆ ಮಾಡಿದ್ದೇನೆ. ಈವರೆಗೆ ನೂರಕ್ಕೂ ಹೆಚ್ಚು ಹೆರಿಗೆಯನ್ನು ಮಾಡಿದ್ದೇನೆ. ನಾನು ಮಾಡಿದ ಮೊದಲ ಹೆರಿಗೆ ನನ್ನ ತಾಯಿಯದು. ನಾನಾಗ ಹತ್ತು ವರ್ಷದ ಹುಡುಗಿ. ನನ್ನ ಕೊನೆಯ ತಂಗಿ ಅಂದ್ರೆ ನನ್ನ ತಂದೆ ತಾಯಿಯ ಏಳನೇ ಮಗಳು, ತಾಯಿಯ ಹೊಟ್ಟೆಯಲ್ಲಿದ್ದಾಗ ನಡೆದ ಘಟನೆ ಅದು. ಮಧ್ಯರಾತ್ರಿ ನನ್ನ ತಾಯಿಗೆ ಹೆರಿಗೆಬೇನೆ ಶುರು ಆಯ್ತು. ಇದಕ್ಕಿಂತ ಮುಂಚೆ ತಾಯಿ ಗರ್ಭಿಣಿಯಾದಾಗ ಅಪ್ಪನೇ ಹೆರಿಗೆ ಮಾಡಿಸ್ತಾ ಇದ್ರು. ತಂದೆ ಹೆರಿಗೆ ಮಾಡಿಸುವಾಗ ನಾನು ನೋಡಿದ್ದೆ. ತಂದೆ ಆ ಸಂದರ್ಭದಲ್ಲಿ ಏನಾದ್ರು ವಸ್ತುಗಳನ್ನು ಕೇಳಿದಾಗ ಸಹಾಯ ಮಾಡ್ತಾ ಇದ್ದೆ. ನಾವು ಮಕ್ಕಳೆಲ್ಲಾ ಮಲ್ಗಿದ್ವಿ. ಅಮ್ಮ ನರಳಾಡೋ ಶಬ್ದ ಕೇಳಿ ನಾವೆಲ್ಲಾ ಎದ್ದು ನೋಡಿದ್ವಿ. ಅಪ್ಪನಿಗೆ ಆಗ ವಯಸ್ಸಾಗಿತ್ತು. ಹೆರಿಗೆ ಮಾಡಿಸೋಕೆ ಆಗ್ತಾ ರ‍್ಲಿಲ್ಲ. ಅಮ್ಮನ ಹೊಟ್ಟೆಯಲ್ಲಿ ಮಗು ತಿರುಗಿತ್ತು. ಆಗ ಯಾವ ದೇವ್ರು ನಂಗೆ ಗ್ಯಾನ ಕೊಟ್ನೋ ಏನೋ. ನನ್ ಕೈಯಿಂದನ್ನೇ ತಾಯಿಯ ಹೆರಿಗೆ ಮಾಡೋಕೆ ಮುಂದಾದೆ. ರಾತ್ರಿ ಇಡಿ ಹೆರಿಗೆ ನೋವು ತಿಂದು ಬೆಳಿಗ್ಗೆ ಹೆರಿಗೆ ಆಯ್ತು. ಈಗ್ಲೂ ನನ್ ತಂಗಿ ಇದ್ದಾಳೆ. ತಾಯಿಯ ಹೆರಿಗೆ ಮಾಡಿದ ನಂತರ ಆ ಕೆಲಸ ಹೇಗೆ ಮಾಡೋದು ಅಂತ ಗೊತ್ತಾಯ್ತು. ಅದ್ ಆದ ನಂತರ ಯಾರೇ ಬಂದು ಹೆರಿಗೆ ಬೇನೆ ಶುರು ಆಗಿದೆ ಅಂದ್ರೆ ಹೋಗಿ ಹೆರಿಗೆ ಮಾಡಿ ಬರೋಕೆ ಶುರು ಮಾಡ್ದೆ.
ಇದುವರೆಗೂ ನಾನು ಮಾಡಿದ ಎಲ್ಲಾ ಹೆರಿಗೆಯಲ್ಲೂ ಯಾವುದೇ ತೊಂದರೆಯಾಗಿಲ್ಲ. ಹೆರಿಗೆಯಾಗೋ ದಿನ ಮುಂಚಿತವಾಗಿ ಆ ಮನೆಯವರು ತಿಳಿಸರ‍್ತಾರೆ. ಆ ದಿನ ಅಲ್ಲಿಗೆ ಹೋಗ್ತೀನಿ. ದೇವರನ್ನು ನೆನೆಸಿಕೊಂಡು ಭಗವಂತ ಕಾಪಾಡು ಅಂತ ಹೇಳಿ ಹೆರಿಗೆ ಬೇನೆ ಶುರುವಾದ ಗರ್ಭಿಣಿಯನ್ನ ಮುಟ್ತೀನಿ. ದೇವರ ದಯೆಯಿಂದ ಈವರೆಗೆ ಮಾಡಿದ ಎಲ್ಲಾ ಹೆರಿಗೆಯು ಸುಸೂತ್ರವಾಗಿ ಆಗಿದೆ.
ನನ್ನ ತಂದೆ ತುಂಬಾ ದೈರ್ಯದವರು. ಹೆರಿಗೆ ಮಾಡ್ಸೋದು, ಬಾಣಂತಿಯರಿಗೆ ಔಷಧಿ ಕೊಡೋದು ಗೊತ್ತಿತ್ತು ಅವ್ರಿಗೆ. ತಂದೆ ಕೊಡ್ತಾ ಇದ್ದ ಔಷದಿಯನ್ನು ನಾನು ಕೂಡ ಹೆರಿಗೆ ಮಾಡಿಸಿದ ಬಾಣಂತಿಗೆ ಕೊಡ್ತಾ ಇದ್ದೆ. ಓಲೆ ಬೆಲ್ಲ, ಕಹಿಜೀರಿಗೆಯಲ್ಲಿ ಮಾಡಿದ ಔಷಧಿಯನ್ನು ಹಿಂದೆ ಬಾಣಂತಿಯರಿಗೆ ಕೊಡ್ತಾ ಇದ್ದಿದ್ದು. ಈಗ ಆಸ್ಪತ್ರೆ ಔಷಧಿಗಳು ಬಂದಿವೆ.
ಹೆರಿಗೆ ಮಾಡಿಸಿದಾಗ ಕೂಡ ಹೆರಿಗೆ ಮಾಡ್ಸಿದಕ್ಕೆ ಅಷ್ಟು ಇಷ್ಟು ಕೊಡಿ ಅಂತ ಕೇಳಿಲ್ಲ. ಅವ್ರ್ ಕೊಟ್ಟಿದ್ದನ್ನ ಒಂದ್ ಕೈನಲ್ಲಿ ಕೊಟ್ರೆ ಎರಡ್ ಕೈನಲ್ಲಿ ಇಸ್ಕೊಳ್ತಾ ಇದ್ದೆ. ಶುರುವಿನಲ್ಲಿ ಒಂದ್ ಸೀರೆ ಜೊತೆಗೆ ೨೫ ಅಥವಾ ೫೦ ರೂಪಾಯಿ ಕೊಡ್ತಾ ಇದ್ರು. ಒಂದ್ ಪ್ರಾಣ ಉಳಿಸಿದ್ದಕ್ಕೆ ಅಷ್ಟ್ ಕೊಡಿ ಇಷ್ಟ್ ಕೊಡಿ ಅಂತ ಕೇಳ್ಬರ‍್ದು. ಕೆಲವರು ಹೆರಿಗೆ ಮಾಡ್ಸಿದ್ ಮನೆಲ್ಲಿ ಮೂರು ದಿನ ಇರು ಅಂತ ಇದ್ರು. ಮೂರು ದಿನ ಅವ್ರು ಮನೆಲ್ಲಿ ಇದ್ದು ಬಾಣಂತಿ ಸ್ನಾನ ಮಾಡ್ಸಿ ಮನೆಗೆ ಬರ್ತಿದ್ದೆ. ಹೆರಿಗೆ ಮಾಡೋಕೆ ಶುರು ಮಾಡಿದ್ಮೇಲೆ ಎಲ್ಲರೂ ನನ್ನ ನರ್ಸಮ್ಮ ಅಂತ ಕರಿಯೋರು. ಈಗ ಕೂಡ ಕರಿತ್ತಾರೆ. ಮೇಡಮೋರೆ, ಡಾಕ್ರೇ ಅಂತ ರ‍್ದು ತಮಾಷೆ ಮಾಡ್ತಾರೆ. ಖುಷಿ ಅನಿಸುತ್ತೆ ಆಗ.
ನಾನು ಹೆರಿಗೆ ಮಾಡಿದ ಮಗುವಿಗೆ ಹೆಸರು ಕೂಡ ಇಟ್ಟಿದ್ದೇನೆ. ನಾಮಕರಣಕ್ಕೂ ಹೋಗಿ ಬಂದಿದ್ದೇನೆ. ಹೆರಿಗೆ ಬೇನೆ ಶುರುವಾದ ಎಲ್ಲಾ ತರದ ಮನೆಗಳಿಗೂ ಹೋಗಿ ಹೆರಿಗೆ ಮಾಡಿದ್ದೇನೆ. ಇದುವರೆಗೂ ಯಾರು ಕೂಡ ನೀನ್ ಯಾವ ಜಾತಿ ಅಂತ ಕೇಳಿಲ್ಲ. ಕಷ್ಟದಲ್ಲಿದ್ದಾಗ ಯಾರು ಜಾತಿ ಕೇಳೋದಿಲ್ಲ. ಕಷ್ಟ ಒಂದ್ ಸಲ ಪರಿಹಾರ ಆದ್ರೆ ಸಾಕು ಅಂತಾರೆ.

ಬಾಣಂತಿಗೆ ಬಿಸಿನೀರಿನ ಸ್ನಾನ, ನಲವತ್ತು ದಿನದ ಮೇಲೆ ತಣ್ಣೀರ್ ಮುಟ್ಬಹುದು. ಊಟಕ್ಕೆ ಮೆಣಸಿನ ಪುಡಿ, ಅನ್ನ, ಮೂರು ದಿನ ಆದ್ ಮೇಲೆ ಕೆಸುವಿನ ಸಾರು ಅನ್ನ, ಐದು ದಿನ ಆದ ಮೇಲೆ ಓಮದ ಸಾರು ಅನ್ನ ಕೊಡೋದು. ಕುಡಿಯೋಕೆ ಬಿಸಿನೀರು, ಕಾಫಿ. ಮಗು ಹುಟ್ಟಿ ತಿಂಗಳಾದ ಮೇಲೆ ಮಗುವಿಗೆ ಅನ್ನ, ಅಥವಾ ಕಾಳುಗಳನ್ನು ಹುರಿದು ಮಾಡಿರೋ ಹಿಟ್ಟಿಗೆ ಚೂರು ಕಲ್ಲು ಸಕ್ಕರೆ, ಹಾಲು ಹಾಕಿ ಚೂರು ಚೂರೆ ಕೊಡೋದು. ಅದರ ಜೊತೆಗೆ ಎದೆಹಾಲು ಸಹ ಕೊಡ್ತಾ ಇರ‍್ಬೇಕು.
ಬಾಣಂತಿಗೆ ಹೊಟ್ಟೆಗೆ ೧೨ ಮೊಳದ ಸೀರೆನ ಹೊಟ್ಟೆಗೆ ಸುತ್ತೊ ಕ್ರಮ ಇದೆ. ಮಕ್ಕಳಿಗೆ ಶೀತ ಏನಾದ್ರೂ ಆದ್ರೆ ಸಂಬರಬಳ್ಳಿ ಸೊಪ್ಪು ಅಥವಾ ಹಾಲುವಾಣದ ಸೊಪ್ಪನ ಹಂಚಿಟ್ಟು ಅದರ ಮೇಲೆ ಹಾಕಿ ನೆತ್ತಿಗೆ, ಕೆನ್ನೆಗೆಲ್ಲಾ ಬಿಸಿ ಹಿಡ್ತೀವಿ. ಕುಂಕುಮ ಬಿಸಿ ಮಾಡಿ ನೆತ್ತಿಗೆ ಹಾಕ್ತಾ ಇದ್ದೀವಿ. ಹಿಂದೆ ಹೀಗೆಲ್ಲಾ ಮಾಡ್ತಾ ಇದ್ರು ಈಗ ಯಾರು ಹಾಗೆ ಮಾಡಲ್ಲ.

ಮುಂಚೆ ಮಗುವಿನ ಹುಬ್ಬಿಗೆ, ಹಣೆಗೆ ಕೆನ್ನೆಗೆ ‘ಕಣ್ ಕಪ್ಪು’ ಇಡೋದಕ್ಕೆ ಮಡಿಕೆಯ ಮಸಿ ತೆಗ್ದು ಕೊಬ್ಬರಿ ಎಣ್ಣೆ ಹಾಕಿ ಕೈಯಲ್ಲಿ ತಿಕ್ಕಿ ಮಗುವಿಗೆ ಹಚ್ತಾ ಇದ್ವಿ. ಈಗ ಕಣ್ ಕಪ್ಪು ಅಂಗಡಿಗಳಲ್ಲಿ ಸಿಗುತ್ತೆ. ಕೆಲವೊಂದು ಮನೆಗಳಿಗೆ ಹೆರಿಗೆ ಮಾಡ್ಸೋಕೆ ಹೋದಾಗ ಅಲ್ಲಿ ತಾಯಿ ಮಗು ಆರೈಕೆ ಮಾಡೋರು ಯಾರು ಇಲ್ಲ ಅಂದ್ರೆ ನನ್ಗೆ ಇರೋಕೆ ಹೇಳೋರು. ಇದ್ದು ಕೆಲವು ದಿನ ತಾಯಿ ಮಗು ಆರೈಕೆ ಮಾಡಿ ಬರ್ತಾ ಇದ್ದೆ.

ಈಗ ಕೂಡ ಕಷ್ಟದಲ್ಲಿರುವ, ಗ್ರಾಮೀಣ ಪ್ರದೇಶದಲ್ಲಿರುವ ಗರ್ಬಿಣಿಗೆ ಹೆರಿಗೆ ಬೇನೆ ಶುರುವಾದಾಗ ಹೆರಿಗೆ ಮಾಡ್ಬೇಕು, ಸಹಾಯ ಮಾಡ್ಬೇಕು ಅನ್ನೋ ಉತ್ಸಾಹ ಇದೆ. ಬದುಕಿನ ಕೊನೆವರೆಗೂ ಆ ಹುಮ್ಮಸ್ಸು ಇರುತ್ತೆ. ಆದ್ರೆ ಈಗ ಆಸ್ಪತ್ರೆಯಲ್ಲಿ ಹೆರಿಗೆ ಮಾಡೋ ನಿಯಮ ಇರೋದ್ರಿಂದ ಮನೆಗಳಿಗೆ ಹೋಗಿ ಹೆರಿಗೆ ಮಾಡೋದಿಲ್ಲ. ನಿಡುವಾಳೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ವರ್ಷ ಹೆರಿಗೆ ಸಂದರ್ಭದಲ್ಲಿ ಸಹಾಯಕಿಯಾಗಿ ಕೆಲಸ ಮಾಡ್ದೆ. ಈಗ ಹೋಗ್ತಾ ಇಲ್ಲ.

ನಾನು ಹೆರಿಗೆ ಮಾಡಿದ ತಾಯಿ ಮತ್ತು ಮಗು ಈಗ ಸಿಕ್ಕರೂ ಗೌರವದಿಂದ ಮಾತಾಡಿಸ್ತಾರೆ. ಮುಂಚೆ ಮಧ್ಯರಾತ್ರಿಲ್ಲಿ ಬಂದು ಬಾಗಿಲು ತಟ್ಟಿ ಕರೆದ್ರು ಕೂಡ ಹೋಗಿ ಹೆರಿಗೆ ಮಾಡಿ ಬಂದಿದ್ದೇನೆ. ಅವ್ರು ಹಣ ಕೊಡ್ತಾರೆ ಅಂತ ಹೋಗೋದಲ್ಲ. ಹೆರಿಗೆ ಮಾಡಿಸೋದು ನನ್ನ ಧರ್ಮ. ನಾನು ಹೆರಿಗೆ ಮಾಡಿಸಿದ ಮಗುವೊಂದು ಈಗ ದೊಡ್ಡ ಹುಡುಗಿ ಆಗಿ ಮೊನ್ನೆ ಅವಳ ಮದುವೆ ಆಯ್ತು. ಹೋಗಿದ್ದೆ. ಹೆರಿಗೆ ಮಾಡಿದ್ ನಾನೆ ಅಂತ ನೆನ್ಪ್ ಇಡ್ಕೊಂಡು ಅಜ್ಜಿ ಅಂತ ಮಾತಾಡಿಸ್ತು ಆ ಹುಡ್ಗಿ. ನನ್ ಮೊಮ್ಮಗಳ ಹಾಗೆ. ಖುಷಿ ಅನಿಸ್ತು. ತುಂಬಾ ವರ್ಷದ ಹಿಂದೆ ನಾನು ಹೆರಿಗೆ ಮಾಡಿಸಿದ ತಾಯಿ ಮೊನ್ನೆ ಸಿಕ್ಕಿದ್ದಾಗ ನನ್ ಮಗಳು ಈಗ ಗರ್ಭಿಣಿ. ನನ್ನ ಹೆರಿಗೆ ಮಾಡಿಸಿದ ಹಾಗೆ ಅವಳಿಗೂ ನೀನ್ ಹೆರಿಗೆ ಮಾಡಿಸ್ಬೇಕು ಅಂತ ಹೇಳಿದ್ರು. ಅದಕ್ಕಿಂತ ಖುಷಿ ಮತ್ತೇನಿದೆ ಎಂದರು ಕಮಲಮ್ಮ.

-ನಂದೀಶ್ ಬಂಕೇನಹಳ್ಳಿ.

About Author

Leave a Reply

Your email address will not be published. Required fields are marked *

You may have missed