ಸರ್ಕಾರಿ ಶಾಲೆಯಲ್ಲಿ ಬಯೋಮೆಟ್ರಿಕ್ ಸಿಸ್ಟಂ ಅಳವಡಿಕೆ…..
1 min read
ಸರ್ಕಾರಿ ಶಾಲೆಯಲ್ಲಿ ಬಯೋಮೆಟ್ರಿಕ್ ಸಿಸ್ಟಂ ಅಳವಡಿಕೆ
ತರೀಕೆರೆ : ತಾಲ್ಲೂಕಿನ ಕರಕುಚ್ಚಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಥಮವಾಗಿ ಇದೇ ಗ್ರಾಮದ ನಮ್ಮ ಶಾಲೆ, ನಮ್ಮ ನೆನಪು ಟ್ರಸ್ಟ್ ವತಿಯಿಂದ ಶಿಕ್ಷಕರಿಗೆ ಮುಖ ಗುರುತಿನ ಬಯೋಮೆಟ್ರಿಕ್ ಸಿಸ್ಟಂ ಅಳವಡಿಕೆ ಮಾಡಲಾಗಿದೆ.
ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಶಾಲಾ ಶಿಕ್ಷಕರ ಹಾಜರಾತಿಯನ್ನು ಬಯೋಮೆಟ್ರಿಕ್ ಆಧಾರಿತ ಅಳವಡಿಕೆ ಮಾಡಿದ ಮೊದಲ ಶಾಲೆಯಾಗಿ ಕರಕುಚ್ಚಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗಮನ ಸೆಳೆದಿದೆ.ಎಸ್ ಡಿ ಎಮ್ ಸಿ ಯ ನಿರ್ಣಯದಂತೆ ‘ನಮ್ಮ ಶಾಲೆ, ನಮ್ಮ ನೆನಪು’ ಟ್ರಸ್ಟ್ ನ ಸಹಯೋಗದಲ್ಲಿ ತಂತ್ರಜ್ಞಾನ ಆಧಾರಿತ ಹಾಜರಾತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದು ಶಾಲೆಗೆ ಆಳವಡಿಸಲಾಗಿದೆ.
ಇದೀಗ ಎಲ್ಲೆಡೆ ಖಾಸಗಿ ಮತ್ತು ಸರ್ಕಾರಿ ಕಛೇರಿಗಳಲ್ಲಿ ಬಯೋಮೆಟ್ರಿಕ್ ಆಧರಿತ ಹಾಜರಾತಿ ವ್ಯವಸ್ಥೆಯನ್ನು ಗಮನಿಸುತ್ತಿದ್ದೇವೆ. ಇಂತಹ ಮಾದರಿಯನ್ನು ಸರ್ಕಾರಿ ಶಾಲೆಗಳಲ್ಲಿ ಮುಂದಿನ ದಿನಗಳಲ್ಲಿ ಅಳವಡಿಕೆ ಮಾಡಬೇಕೆಂದು ಶಿಕ್ಷಣ ಇಲಾಖೆ ಯೋಜನೆ ಜಾರಿಯ ಹಂತದಲ್ಲಿದೆ. ಆದರೆ ನಮ್ಮ ಶಾಲೆ ನಮ್ಮ ನೆನಪು ಟ್ರಸ್ಟ್ ಸರ್ಕಾರಕ್ಕಿಂತಲೂ ಮೊದಲೇ ಈ ಉಪಕರಣವನ್ನು ಶಾಲೆಗೆ ಆಳವಡಿಸಿ ತಾಲ್ಲೂಕಿನಲ್ಲಿಯೇ ಪ್ರಥಮ ಬಯೋಮೆಟ್ರಿಕ್ ಶಾಲೆಯನ್ನಾಗಿಸಿದೆ. ಟ್ರಸ್ಟ್ ನ ಈ ಕಾರ್ಯವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಎಸ್ ಡಿ ಎಮ್ ಸಿ ಹಾಗೂ ಶಿಕ್ಷಕರು ಪ್ರಶಂಶಿಸಿ ಪ್ರೋತ್ಸಾಹಿಸಿದ್ದಾರೆ.
ಕಳೆದ ಏಳು ವರ್ಷಗಳಿಂದ ಕರಕುಚ್ಚಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ನಮ್ಮ ಶಾಲೆ ನಮ್ಮ ನೆನಪು ಟ್ರಸ್ಟ್ ನ ಹಲವು ಬಗೆಯ ಕಾರ್ಯಕ್ರಮ ಹಾಗೂ ಕೊಡುಗೆ ನೀಡುತ್ತ ಬಂದಿದೆ. ಶಾಲಾ ಕೊಠಡಿಗಾಗಿ ಅನುದಾನದ ವ್ಯವಸ್ಥೆ, ಶಾಲಾ ಬಾಲಕಿಯರಿಗಾಗಿ ಸುಸಜ್ಜಿತ ಶೌಚಾಲಯ, ಗ್ರಂಥಾಲಯ, ಶುದ್ಧ ಕುಡಿಯವ ನೀರಿನ ಘಟಕ, ಪೀಠೋಪಕರಣ, ಆಟದ ಮೈದಾನ ಅಭಿವೃದ್ಧಿ, ರಂಗಶಿಕ್ಷಣ ಶಿಬಿರ, ದಾಖಲಾತಿ ಅಭಿಯಾನ, ಸಾಂಸ್ಕೃತಿಕ ಸಂಘಟನೆ ಹೀಗೆ ಹಲವು ಯೋಜನೆಗಳು ಮತ್ತು ಕಾರ್ಯಕ್ರಮ ರೂಪಿಸಿ ಗ್ರಾಮದ ಶಾಲೆಯ ಅಭಿವೃದ್ಧಿಗಾಗಿ ಹಲವು ಕೊಡುಗೆ ನೀಡುತ್ತಿದ್ದಾರೆ. ಇಂತಹ ಸಂಸ್ಥೆ ಇದೀಗ ಶಾಲಾ ಶಿಸ್ತು, ಸಮಯ ಪಾಲನೆ ಹಾಗೂ ಆಡಳಿತ ಸುಧಾರಣೆಯ ಭಾಗವಾಗಿ ಬಯೋಮೆಟ್ರಿಕ್ ಉಪಕರಣವನ್ನು ಅಳವಡಿಸಿದೆ.

