ಸತ್ತರೆ ಹೂಳುವುದಕ್ಕೂ ಹಳ್ಳಿಗಳಲ್ಲಿ ಸ್ಮಶಾನಗಳು ಉಳಿದಿಲ್ಲ ಆ ಮಟ್ಟಿಗೆ ಒತ್ತುವರಿಯಾಗಿದೆ,…
1 min read
ಅವಿನ್ ಟಿವಿ ಸುದ್ದಿಜಾಲ ✒️: ಜನರ ಜನರ ಮಧ್ಯೆ ಮತ ಧರ್ಮ ಜಾತಿಗಳ ನಡುವೆ ಗೋಡೆಗಳನ್ನು ಕಟ್ಟುತ್ತಿರುವ ವರ್ತಮಾನದ ಈ ವಿಷಮ ಪರಿಸ್ಥಿತಿಯಲ್ಲಿ ರಾಜಕೀಯ ಪಕ್ಷಗಳು ಹಸಿರು ಗೋಡೆ ಕಟ್ಟುವ ಬಗ್ಗೆ ವಿಧಾನ ಪರಿಷತ್ ವಿಧಾನ ಸಭೆ ಮತ್ತು ಸಂಸತ್ತಿನ ಪಡಸಾಲೆಗಳಲ್ಲಿ ಪರಿಸರದ ಬಗ್ಗೆ ತಮಗೆಷ್ಟು ಜ್ಞಾನವಿದೆ ಎಂಬ ಕಾಳಜಿಯನ್ನು ಗಂಭೀರವಾಗಿ ತೆರೆದಿಡಬೇಕಿದೆ,ಮಠಮಾನ್ಯಗಳು ಸಹ ಮಣ್ಣು, ಗಿಡ ಮರ, ನೀರು ಗಾಳಿಯನ್ನು ಕುರಿತು ಪ್ರವಚನ ನೀಡಬೇಕಿದೆ.
ಸತ್ತರೆ ಹೂಳುವುದಕ್ಕೂ ಹಳ್ಳಿಗಳಲ್ಲಿ ಸ್ಮಶಾನಗಳು ಉಳಿದಿಲ್ಲ ಆ ಮಟ್ಟಿಗೆ ಒತ್ತುವರಿಯಾಗಿದೆ,
AI ತಂತ್ರಜ್ಞಾನದ ಫಲ ಬರುವ ದಿನಗಳಲ್ಲಿ ಉದ್ಯೋಗದ ಬರಗಾಲವನ್ನು ಸೃಷ್ಟಿಸುವ ಸಂಭವವಿದೆ, ಇದರ ಪರಿಣಾಮ ಯೂಸ್ ಲೆಸ್ ಪೀಪಲ್ ಗಳ ದೊಡ್ಡ ಸೈನ್ಯವೇ ಸೃಷ್ಟಿಯಾಗಲಿದೆ ಎಂದು ಚಿಂತಕ ಯುವಾಲ್ ನೋವ ಹರಾಲಿ ಎನ್ನುವರು ಎಚ್ಚರಿಸಿದ್ದಾರೆ.
ಹಾಗಾಗಿ,ಬರಡು ನೆಲ ದಿನದಿಂದ ದಿನಕ್ಕೆ ನಿರ್ಮಾಣವಾಗುತ್ತಿರು ಪ್ರಮಾಣ ಹೆಚ್ಚಾಗುತ್ತಿರುವುದರಿಂದ, ಕನ್ನಡ ನಾಡಿನ ಉತ್ತಮ ನಾಳೆಗಳಿಗಾಗಿ ಪರಿಸರ ತಜ್ಞ , ಲೇಖಕ ನಾಗೇಶ್ ಹೆಗಡೆಯವರು ಕರ್ನಾಟಕ ಸರ್ಕಾರಕ್ಕೆ ಕೊಟ್ಟ ಲಿಖಿತ ಸಲಹೆ ಯೊಂದರ ಯಥಾಪ್ರತಿಯನ್ನು ಅವಿನ್ ಟಿವಿ ಸುದ್ದಿಜಾಲವು ತನ್ನ ಓದುಗರಿಗಾಗಿ ಕೊಡ ಮಾಡಿದೆ.
👇 ••••••••••••••••• 👇
*ನೀಲನಕ್ಷೆಗಳ ಮಧ್ಯೆ ಒಂದು ಹಸಿರು ನಕ್ಷೆ*
ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಬಜೆಟ್ ಸಿದ್ಧತೆಯ ಸಭೆ ಇತ್ತು. ಯೋಜನಾ ಆಯೋಗದ ಪರಿಸರ ಸಮಿತಿಯ ಸದಸ್ಯನಾಗಿ ನನಗೂ ಆಹ್ವಾನವಿತ್ತು. ಈ ಬಾರಿಯ ಮುಂಗಡಪತ್ರದಲ್ಲಿ ಏನೇನು ಹೊಸ ಪ್ರಸ್ತಾವನೆ ಇರಬೇಕು, ಹಳೆಯ ಯಾವ ಯಾವ ಯೋಜನೆಗಳ ಬಲವರ್ಧನೆ ಮಾಡಬೇಕು ಎಂಬ ಚರ್ಚೆ ಇತ್ತು. ಅದಕ್ಕೆಂದು ನಾವೆಲ್ಲ ಈ ಮೊದಲೇ ನಮ್ಮ ನಮ್ಮ ಲಿಖಿತ ಸಲಹೆಗಳನ್ನು ಮುಂದಿಟ್ಟಿದ್ದೆವು.
ನಾನು ಸಲ್ಲಿಸಿದ ʻಹಸಿರು ಗೋಡೆ‘ ಯೋಜನೆಯ ಸಂಕ್ಷಿಪ್ತ ವಿವರ ಹೀಗಿದೆ:
ಜಗತ್ತಿನ ಎಲ್ಲ ಕಡೆ ಮರುಭೂಮಿ ವಿಸ್ತರಿಸುತ್ತಿದೆ. ಶತಾಯಗತಾಯ ಅಂಥ ವಿಸ್ತರಣೆಯನ್ನು ತಡೆಯಲೆಂದು ಅನೇಕ ಖಂಡಗಳಲ್ಲಿ, ದೇಶಗಳಲ್ಲಿ ಯತ್ನಗಳು ನಡೆದಿವೆ. ನಮ್ಮಲ್ಲೂ ಅಂಥದ್ದೊಂದು ಯೋಜನೆ ಬರಬೇಕು. ಏಕೆಂದರೆ ಉತ್ತರ ಕರ್ನಾಟಕದ ಬಹಳಷ್ಟು ಜಿಲ್ಲೆಗಳಲ್ಲಿ ಮರುಭೂಮಿ ಸದೃಶ ವಾತಾವರಣ ನಿರ್ಮಾಣ ಆಗುತ್ತಿದೆ. ʻಕಚ್ಛದ ರಣ ಬಿಟ್ಟರೆ ಎರಡನೇ ಅತಿ ದೊಡ್ಡ ಮರುಭೂಮಿ ಕರ್ನಾಟಕದಲ್ಲಿ ರೂಪುಗೊಳ್ಳುತ್ತಿದೆ’ ಎಂದು 20 ವರ್ಷಗಳ ಹಿಂದೆಯೇ ವಿಜ್ಞಾನಿಗಳು ಹೇಳಿದ್ದರು. ಅದನ್ನು ತಡೆಯಲು ನಾವೊಂದು ʻಹಸಿರು ಗೋಡೆ‘ಯ ನಿರ್ಮಾಣಕ್ಕೆ ಕೈ ಹಾಕೋಣ ಎಂಬುದು ನನ್ನ ಸಲಹೆಯಾಗಿತ್ತು. ಅದಕ್ಕೆಂದು ಎರಡು ಸಿದ್ಧ ಮಾದರಿಗಳನ್ನೂ ಕೊಟ್ಟೆ.
1. ಆಫ್ರಿಕದ ʻಮಹಾ ಹಸಿರು ಗೋಡೆ’ (’ದಿ ಗ್ರೇಟ್ ಗ್ರೀನ್ ವಾಲ್‘) ನಮಗೆ ಗೊತ್ತೇ ಇದೆ. 22 ದೇಶಗಳು ಒಟ್ಟಾಗಿ ಅಲ್ಲಿ 7800 ಕಿಲೊಮೀಟರ್ ಉದ್ದದ, 15 ಕಿ.ಮೀ. ಅಗಲದ ಹಸಿರುಪಟ್ಟಿಯನ್ನು ನಿರ್ಮಿಸುತ್ತಿವೆ. ಅದು ವಿಶ್ವಸಂಸ್ಥೆ ಮತ್ತು ಆಫ್ರಿಕನ್ ಸಂಘದ ಯೋಜನೆ.
2. ಭಾರತದ ʻಮಹಾ ಹಸಿರು ಗೋಡೆ‘: ಇದು ಐದು ರಾಜ್ಯಗಳ, 1500 ಕಿ.ಮೀ. ಉದ್ದಕ್ಕೂ 5 ಕಿ.ಮೀ. ಅಗಲದ ಹಸಿರು ಪಟ್ಟಿಯನ್ನು ಬೆಳೆಸುವ ಯೋಜನೆ. ಗುಜರಾತಿನ ಪೋರಬಂದರದಿಂದ ಆರಂಭವಾಗಿ ಹರ್ಯಾಣಾದ ಪಾಣಿಪತ್ವರೆಗೂ ಕಚ್ಛದ ಮರುಭೂಮಿಗೆ ಸಮಾನಾಂತರವಾಗಿ ಅದು ಅರಾವಲೀ ಪರ್ವತಮಾಲೆಯಗುಂಟ ಸಾಗುತ್ತದೆ.
ಚೀನಾದಲ್ಲಿ ಗೋಬಿ ಮರುಭೂಮಿಯನ್ನು ತಡೆಯಲೆಂದು 4800 ಕಿಮೀ ಉದ್ದದ ಹಸಿರು ಗೋಡೆಯ ನಿರ್ಮಾಣ ಕೆಲಸ ಸಾಗುತ್ತಿದೆ. ಇದಕ್ಕೆ ನಿರ್ದಿಷ್ಟ ಅಗಲಳತೆ ಇಲ್ಲ. ಕೆಲವೆಡೆ ಅಗಲ 1400 ಕಿ.ಮಿ.ಗೂ ವಿಸ್ತರಿಸಿದೆ. ಹಾಗಾಗಿ ಇದಕ್ಕೆ ನಾವು ಹಸಿರು ʻಚಾದರ‘ ಎನ್ನಬಹುದು. ಆಫ್ರಿಕದ ಗೋಡೆಯ ಕೆಲಸ ಆಗೀಗ ತುಸು ಕುಂಟುತ್ತ ಸಾಗುತ್ತಿದೆಯಾದರೆ ಚೀನಾದ್ದು ಮಾತ್ರ ಜಂಗೀ. ಅಲ್ಲಿನ ತಕ್ಲಾಮಾಕನ್ ಮರುಭೂಮಿಯ 3000 ಕಿ.ಮೀ ಪಟ್ಟಿ ಪೂರ್ತಿಗೊಂಡಿತು ಎಂದು ಕಳೆದ ವರ್ಷ ಚೀನಾ ಘೋಷಿಸಿತ್ತು.
ಇದೇ ಮಾದರಿಯಲ್ಲಿ ಉತ್ತರ ಕರ್ನಾಟಕದಲ್ಲಿ ವಿಸ್ತರಿಸುತ್ತಿರುವ ಮರುಭೂಮಿಯ ತಡೆಗೆ ನಾವೂ ಒಂದು ಹಸಿರು ಗೋಡೆಯನ್ನು ನಿರ್ಮಿಸಬಹುದು. ಅದು ಬೆಳಗಾವಿಯಿಂದ ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿವರೆಗೆ ಐದು ಜಿಲ್ಲೆಗಳ, ಮೂರು ಕಿ.ಮೀ. ಅಗಲದ್ದಾಗಿರಬಹುದು. (ಅಂದಾಜು ನಕ್ಷೆಯೂ ಜೊತೆಗಿದೆ)
ಈ ಪ್ರಸ್ತಾವನೆಗೊಂದು ತಾರ್ಕಿಕ ಹಿನ್ನೆಲೆ ಇದೆ:
ಅಭಿವೃದ್ಧಿ ಮತ್ತು ಪರಿಸರ ರಕ್ಷಣೆ ಎರಡೂ ಒಟ್ಟೊಟ್ಟಾಗಿ ನಡೆಯಬೇಕೆಂದು ಎಲ್ಲರೂ ಹೇಳುತ್ತಾರೆ. ಆದರೆ ಅಭಿವೃದ್ಧಿಯ ಮಹಾ ಯೋಜನೆಗಳು ಮಾತ್ರ ಒಂದರ ಮೇಲೊಂದರಂತೇ ಬರುತ್ತಿವೆ ವಿನಾ ಪರಿಸರ ರಂಗದಲ್ಲಿ ಎದ್ದು ಕಾಣುವಂಥ, ಹೆಮ್ಮೆಯಿಂದ ಹೇಳಿಕೊಳ್ಳುವಂಥ ಒಂದೇ ಒಂದು ಯೋಜನೆಯೂ ನಮ್ಮಲ್ಲಿಲ್ಲ. ಅಲ್ಲೆಲ್ಲೋ 10 ಸಾವಿರ ಮರ ಬೆಳೆಸಿದೆವು, ಇನ್ನೆಲ್ಲೊ ಐದು ಲಕ್ಷ ಗಿಡ ನೆಟ್ಟೆವು ಎಂಬ ಘೋಷಣೆ ಆಗೀಗ ಬರುತ್ತಿವೆಯಾದರೂ ಎಲ್ಲೋ ಎಂತೋ?
ಕರ್ನಾಟಕ ಸರ್ಕಾರ ಇಂಥ ಮಹಾಗೋಡೆಯ ಘೋಷಣೆ ಮಾಡಿದರೆ ಅದು ಭಾರತದ ಮೊದಲನೆಯ ʻರಾಜ್ಯಮಟ್ಟದ’ ಯೋಜನೆ ಆಗಿರುತ್ತದೆ. ನಮ್ಮ ನಾಡಿನ ಹೊಸ ಹೆಗ್ಗುರುತು ಅದಾಗಲು ಸಾಧ್ಯವಿದೆ. ಪರಿಸರವನ್ನು ಏನೆಲ್ಲ ವಿಧದಲ್ಲಿ ಧ್ವಂಸ ಮಾಡುತ್ತಿರುವ ಪೀಳಿಗೆಯೇ ತುಸುಮಟ್ಟಿನ ಪರಿಹಾರವನ್ನೂ ರೂಪಿಸಿದಂತಾಗುತ್ತದೆ.
ಇದಕ್ಕೆ ಆರಂಭಿಕ ಚಾಲನೆ ಕೊಟ್ಟರೆ, ಸೂಕ್ತ ತಾಂತ್ರಿಕ ನೆರವು ಅದಕ್ಕೆ ಸಿಗುತ್ತಿದ್ದರೆ, ಜನರ ಸಹಭಾಗಿತ್ವ ಕೂಡ ಸಿಗಲು ಸಾಧ್ಯವಿದೆ. ವರ್ಷ ಕಳೆದಂತೆ ಇದರ ವಿಶ್ವಾಸಾರ್ಹತೆ ಹೆಚ್ಚಿದರೆ ದಾನಿಗಳೂ ದಾನಿಸಂಸ್ಥೆಗಳೂ ಕೈಜೋಡಿಸಲು ಸಾಧ್ಯವಿದೆ. ತೆರಿಗೆದಾರರ ಮೇಲೂ ಹೆಚ್ಚಿನ ಹೊರೆ ಬೀಳಲಾರದು. ಈ ಗೋಡೆಯ ಆಸುಪಾಸಿನ ತಾಲ್ಲೂಕುಗಳ ಅಭಿವೃದ್ಧಿ ಯೋಜನೆಗಳಿಗೆ ಪರಿಹಾರ ರೂಪದ ಅರಣ್ಯವನ್ನು ಇಲ್ಲೇ ನಿರ್ಮಿಸುತ್ತೇವೆಂದು ಗುತ್ತಿಗೆದಾರರು ಘೋಷಿಸುವಂತೆ ಮಾಡಬಹುದು. ಹಾಗಾಗಿ ಪ್ರತಿವರ್ಷ ಇದಕ್ಕೆಂದು ಸರ್ಕಾರ ಕೋಟಿಗಟ್ಟಲೆ ಸುರಿಯಬೇಕಿಲ್ಲ.
ಆಫ್ರಿಕಾದ ಮಹಾಗೋಡೆಯ ಭಾಗವಾಗಿ ಅಲ್ಲಿ ಹಸಿರು ಬೆಳೆಸಿದವರಿಗೆ ಅದೇ ಭೂಮಿಯನ್ನು ನೀಡುವ ಯೋಜನೆ ಇದೆ. ಇಲ್ಲಿ ಅಂಥ ಸಾಧ್ಯತೆ ಇರಲಿಕ್ಕಿಲ್ಲ. ಬೇರೆಯದೇ ಬಗೆಯ ಸ್ಕೀಮನ್ನು ಇಲ್ಲಿ ಜಾರಿ ಮಾಡಬಹುದು. ತುಂಬಾ ಮಂದಿ ಅನುಕೂಲಸ್ಥ ಟೆಕಿಗಳು ಬಂಜರು ಭೂಮಿಯನ್ನು ಖರೀದಿಸಿ ಹಸಿರು ಬೆಳೆಸಲು ಉತ್ಸಾಹಿತರಾಗಿದ್ದಾರೆ.
ಆದು ಒತ್ತಟ್ಟಿಗಿರಲಿ. ಇಂಥ ಯೋಜನೆಯಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಿರ್ಮಾಣದ ಸಾಧ್ಯತೆಯಂತೂ ಇದ್ದೇ ಇದೆ. ಎಷ್ಟೊಂದು ಜ್ಞಾನಶಾಖೆಗಳನ್ನು ಒಗ್ಗೂಡಿಸಿ ಕೆಲಸ ಮಾಡಲು ಇಲ್ಲಿ ಅವಕಾಶವಿದೆ. ಎಷ್ಟೊಂದು ಪ್ರತಿಭೆಗಳನ್ನು ಇಲ್ಲಿ ತೊಡಗಿಸಿಕೊಳ್ಳಬಹುದು.
(ಬೆಂಗಳೂರಿನವರೇ ಆದ ವಿಶ್ವಖ್ಯಾತ ಗಾಯಕ ರಿಕಿ ಕೆಜ್ ಅವರನ್ನು ಆಫ್ರಿಕಾಖಂಡದ ಬರಗಾಲ ನಿವಾರಣೆಯ ಯೋಜನೆಯ ವನ್ನು ತಡೆಗಟ್ಟಲು ವಿಶ್ವಸಂಸ್ಥೆ ಬಳಸಿಕೊಂಡಿತ್ತು. ಅದರ ಲಿಂಕ್ ಕೊನೆಯಲ್ಲಿದೆ)
ಎಲ್ಲಕ್ಕಿಂತ ಮುಖ್ಯವೆಂದರೆ ಬರುತ್ತಿರುವ ಎಐ ಕ್ರಾಂತಿಯಿಂದಾಗಿ ಉದ್ಯೋಗದ ಭಾರೀ ಬರಗಾಲ ಬರಲಿದೆ ಎಂದು ಹೇಳಲಾಗುತ್ತಿದೆ (’ಯೂಸ್ಲೆಸ್ ಪೀಪಲ್‘ಗಳ ದೊಡ್ಡ ಸೈನ್ಯವೇ ಸೃಷ್ಟಿಯಾಗಲಿದೆ ಎಂದು ಚಿಂತಕ ಯುವಾಲ್ ನೋವಾ ಹರಾರಿ ಹೇಳುತ್ತಾರೆ). ಅಂಥ ಖಾಲಿ ಕೈಗಳಿಗೆ ಕೆಲಸ ನೀಡುವ ಯೋಜನೆಯಾಗಿ ಇದು ರೂಪುಗೊಂಡರೆ ಎರಡೂ ಬಗೆಯ ಬರಗಾಲಗಳ ನಿವಾರಣೆ ಕೆಲ ಮಟ್ಟಿಗೆ ಸಾಧ್ಯವಾದೀತು.
ಇಷ್ಟಕ್ಕೂ ಕನ್ನಡ ನಾಡಿನ ನಾಳೆಗಳಿಗೆ ಒಂದು ಹೊಸ ಲಾಂಛನ ಬೇಡವೆ?
ನಾನೇನೋ ʻಪ್ರಾರಂಭದ ಹೂಡಿಕೆಯಾಗಿ 15 ಕೋಟಿ ರೂಪಾಯಿ ಇಡಿ‘ ಎಂದು ಸಲಹೆ ನೀಡಿದ್ದೇನೆ. ದೊಡ್ಡ ಕುಳಗಳು ಇತ್ತ ಧಾವಿಸಿ ಬರದಿರಲಿ ಎಂದೇ ಈ ಜುಜುಬಿ ಮೊತ್ತ ಅಷ್ಟೆ. ಮುಖ್ಯಮಂತ್ರಿಯವರಿಗೆ ಅದೇ ತೀರಾ ದೊಡ್ಡ ಮೊತ್ತವಾಗಿ ಕಂಡರೆ ಅದರಲ್ಲಿ ಕಡಿತ ಮಾಡಬಹುದು. ಅಥವಾ ಇಡೀ ಯೋಜನೆಯನ್ನು ಕೈಬಿಡಬಹುದು. ಅಥವಾ ಅವರ ಗಮನಕ್ಕೇ ಇದು ಬಂದಿಲ್ಲದಿರಬಹುದು.
ಮಂಗಟ್ಟೆ ಪಕ್ಷಿಗಳ ಪಡಿಪಾಟಲ ಕತೆಯನ್ನು ವಿಶ್ವೇಶ್ವರ ಭಟ್ 15 ವರ್ಷಗಳ ಹಿಂದೆ ಮನಕರಗುವಂತೆ ಬರೆದಿದ್ದನ್ನು ಓದಿ ಅಂದಿನ ಮುಖ್ಯಮಂತ್ರಿ ಯಡ್ಯೂರಪ್ಪನವರು ‘ಮಂಗಟ್ಟೆ ಆಶ್ರಯಧಾಮ’ವನ್ನೇ ಘೋಷಿಸಿದರು. 2009ರಲ್ಲಿ ಅದು ನೋಟಿಫೈ ಕೂಡ ಆಗಿ, ಜಗತ್ತಿನ ಮೊದಲ ʻಮಂಗಟ್ಟೆ ಸಂರಕ್ಷಣಾ ತಾಣ’ ಎನ್ನಿಸಿತು. ಅದೇ ಮುಖ್ಯಮಂತ್ರಿ ಹೊನ್ನಾವರ ಅಪ್ಸರಕೊಂಡದ ಸಮುದ್ರದ ತಡಿಯ ಜೀವಿವೈವಿಧ್ಯ ರಕ್ಷಣೆಗೆ ತಮ್ಮ ಬಜೆಟ್ನಲ್ಲಿ 10 ಕೋಟಿ ರೂಪಾಯಿಗಳನ್ನೂ ತೆಗೆದಿಟ್ಟಿದ್ದರು (ಅದು ಬಳಕೆಯಾಗಲಿಲ್ಲ, ಆ ಮಾತು ಬೇರೆ). ಎಚ್ ಡಿ ಕುಮಾರಸ್ವಾಮಿಯವರೂ ರಾಜ್ಯದಾದ್ಯಂತ ಅಂಟುವಾಳ ಮರಗಳನ್ನು ಬೆಳೆಸಲು ಬಜೆಟ್ನಲ್ಲಿ 10 ಲಕ್ಷ ರೂಪಾಯಿಗಳನ್ನು ಘೋಷಿಸಿದ್ದರು.
ಇಂಥ ಪಡಿಪಾಟಲ, ನಗೆಪಾಟಲ ಸಂಗತಿಗಳ ಮಧ್ಯೆ ಹಸಿರುಗೋಡೆ ಪ್ರಸ್ತಾವನೆ ಎಲ್ಲಿಗೆ ಹೋಗುತ್ತದೊ ನೋಡಬೇಕು.
••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✒️
ಚಿಕ್ಕಮಗಳೂರು

