ಸಂಗಾತಿ ಬಿ ಕೆ ಸುಂದರೇಶ್ ಅವರ 32ನೇ ಸಂಸ್ಮರಣೆಯೊಂದಿಗೆ ಒಂದಿಷ್ಟು ಮುಖಾಮುಖಿ*..
1 min read
ಅವಿನ್ ಟಿವಿ ಸುದ್ದಿಜಾಲ ✒️: *ಜನಪರ ಚಳುವಳಿಯ ಪಾಠ ಕಲಿಸಿ, ಸಾಮಾಜಿಕ ಆಂದೋಲನದ ಮಹತ್ವ ಮತ್ತು ಅಗತ್ಯತೆ ಬಗ್ಗೆ ತಿಳಿಹೇಳಿ ಅದೆಷ್ಟೋ ಜನರ ಬೆನ್ನು ತಟ್ಟಿ ಬೆಳೆಸಿದ ಆ ಮೇರು ಸಂಗಾತಿ ಇಂದಿಗೂ ಕೂಡ ಅನೇಕರ ಕಾರ್ಯಚಟುವಟಿಕೆಯೊಳಗೆ ಜೀವಂತವಾಗಿದ್ದಾರೆ,….*
*ಇದು*
*ಅಂದು ಅಸಂಖ್ಯಾ ಜನರ ಮನಸ್ಸನ್ನು ಕಲಕಿದ ಸಾವೊಂದರ ಜಾಡು*
*ಸಂಗಾತಿ ಬಿ ಕೆ ಸುಂದರೇಶ್ ಅವರ 32ನೇ ಸಂಸ್ಮರಣೆಯೊಂದಿಗೆ ಒಂದಿಷ್ಟು ಮುಖಾಮುಖಿ*

••••••••••••••••
ಅದು 1994 ಡಿಸೆಂಬರ್ ಮಾಹೇಯ 31ರ ಕೊನೆಯ ದಿನ. ಬಿಹಾರದ ಪಾಟ್ನಾ ದಲ್ಲಿ ಒಂದು ವಾರಗಳ ಕಾಲ ಭಾರತೀಯ ಜನಕಲಾ ಸಮಿತಿ (IPTA) ಹಮ್ಮಿಕೊಂಡಿದ್ ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ನಾಟಕೋತ್ಸವವನ್ನು ಮುಗಿಸಿಕೊಂಡು ಪಾಟ್ನಾದಿಂದ ಆಗಷ್ಟೇ ರೈಲಿನಲ್ಲಿ ಧಾರವಾಡಕ್ಕೆ ಬಂದಿದ್ದೆವು.ಪೇಡಾ ನಗರ ಧಾರವಾಡದ ಶಹರದ ಒಂದು ಪ್ರಮುಖ ಬಡಾವಣೆಯಾದ ಶ್ರೀನಗರದ ಒಂದು ಸಣ್ಣ ಕೋಣೆಯಲ್ಲಿ ಏಳು ಜನ ಒಬ್ಬರ ಕಾಲ ಮೇಲೆ ಮತ್ತೊಬ್ಬರು ತಲೆ ಹಾಕಿಕೊಂಡು ನೆಲದ ಮೇಲೆ ಚಾಪೆ ಹಾಸಿಕೊಂಡು ಮಲಗಿದ್ದೆವು, ಆ ಕೊಠಡಿಯಲ್ಲಿ ಇದ್ದುದ್ದು ಒಂದೇ ಒಂದು ಸಣ್ಣ ಮಂಚ, ಆ ಮಂಚದ ಮೇಲೆ ಇಂದಿನ ಹೊಸತು ಪತ್ರಿಕೆಯ ಸಂಪಾದಕರಾದ ಡಾ. ಸಿದ್ದನಗೌಡ ಪಾಟೀಲ್ ಮಲಗಿದ್ದರು, ಅದು ಸಿದ್ದನಗೌಡ ಪಾಟೀಲರ ಬಾಡಿಗೆಯಿದ್ದ ಒಂದು ಸಣ್ಣ ಕೊಠಡಿಯಾಗಿತ್ತು,ಅದರಲ್ಲಿ ಆರು ಜನ ಗೆಳೆಯರ ಮಧ್ಯೆ ಒಬ್ಬಳು ಗೆಳತಿ ಕೂಡ ನಮ್ಮ ಜೊತೆ ಇದ್ದಳು. ಬೆಳಗಾದರೆ 1995ರ ಹೊಸ ವರ್ಷ ಆರಂಭವಾಗಿ ಜಗತ್ತಿಗೆ ಜಗತ್ತೇ ಸಂಭ್ರಮಕ್ಕೆ ತೊಡಗಿಕೊಳ್ಳುವುದರಲ್ಲಿತ್ತು. ನಾವು ಕೂಡ ಹೊಸ ವರ್ಷಾಚರಣೆಗೆ ಗೋವಾದ ಸಮುದ್ರ ತೀರಕ್ಕೆ ಹೋಗಿ 1995ರ ಹೊಸ ವರ್ಷವನ್ನು ವಿಭಿನ್ನವಾಗಿ ಆಚರಿಸಕ್ಕೊಳ್ಳಲ್ಲು ಮಾನಸಿಕವಾಗಿ ತಯಾರಾಗಿ ರಾತ್ರಿ ಮಲಗಿದ್ದೆವು.
ಆದರೆ ಆದದ್ದೇ ಬೇರೆ,
ಅ ಅಪರಾತ್ರಿಯಲಿ ಡಾ. ಸಿದ್ದನಗೌಡ ಪಾಟೀಲರ ಸ್ಥಿರ ದೂರವಾಣಿಗೆ ಧಾರವಾಡದ ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದ ಗೆಳೆಯರೊಬ್ಬರಿಂದ ಕರೆ ಬಂತು, ಬೆಂಗಳೂರಿನ ಯಲಹಂಕದ ಬಳಿ ನಡೆದ ಭೀಕರ ರೈಲ್ವೆ ಅಪಘಾತದಲ್ಲಿ ಸಂಗಾತಿ ಬಿ ಕೆ ಸುಂದರೇಶ್ ಮಡಿದಿದ್ದಾರೆ ಎಂದು. ಅ ನಡು ರಾತ್ರಿ ಕ್ಷಣಮಾತ್ರದಲ್ಲಿ ನಮಗೆಲ್ಲ ಕರಾಳದ ರಾತ್ರಿಯಾಗಿಬಿಟ್ಟಿತು, ಆ ಕರಾಳದ ರಾತ್ರಿಯಲ್ಲಿ ಸಂಕಟದ ಸುಳಿಯನ್ನು ಮೈ ಮನಸ್ಸಿಗೆ ಸುತ್ತಿಕೊಂಡು 1995ರ ಜನವರಿ ಹೊಸ ವರ್ಷದ ಮೊದಲ ದಿನದಂದು ಧಾರವಾಡದಿಂದ ಚಿಕ್ಕಮಗಳೂರಿಗೆ ಆಗಮಿಸಿದೆವು.
ನಾವು ಧಾರವಾಡದಿಂದ ಚಿಕ್ಕಮಗಳೂರಿಗೆ ಬರುವ ಹೊತ್ತಿಗೆ ಸುಂದರೇಶ್ ಅವರ ಪಾರ್ಥಿವ ಶರೀರವನ್ನು ಚಿಕ್ಕಮಗಳೂರಿನ ನಗರದ ಪ್ರಮುಖ ಬೀದಿಗಳಲ್ಲಿ ಹೊತ್ತೈದು, ಚಿಕ್ಕಮಗಳೂರಿನ ಇತಿಹಾಸದಲ್ಲಿಯೇ ಪ್ರಪ್ರಥಮವಾಗಿ ಸೇರಿದ್ದ ಆ ಸಹಸ್ರ ಜನಸ್ತೋಮನಕ್ಕೆ ದರ್ಶನ ಮಾಡಿಸುತ್ತಿದ್ದರು, ನಂತರ ಚಿಕ್ಕಮಗಳೂರಿನಿಂದ ಸುಂದರೇಶ್ ಅವರ ಹುಟ್ಟೂರು ಮೂಡಿಗೆರೆ ತಾಲೂಕಿನ ಬಕ್ಕಡಿಯ ಬೈಲಲಿನಿದ್ದ ಆ ಸ್ಮಶಾನದತ್ತ ಹೆಜ್ಜೆ ಹಾಕಿದೆವು.
ಹೌದು.
ಸಂಗಾತಿ ಬಿ ಕೆ ಸುಂದರೇಶ್ ದೈಹಿಕವಾಗಿ ಇಂದಿಗೆ ನಮ್ಮನ್ನಗಲಿ ಬರೋಬ್ಬರಿ ಮೂರು ದಶಕಗಳು ಅಂದರೆ 31 ವರ್ಷಗಳು ಇತಿಹಾಸದ ಕಾಲ ಗರ್ಭದೊಳಗೆ ತಣ್ಣಗೆ ಸರಿದು ಹೋಗಿದ್ದಾವೆ.
ತನ್ನ ಜೀವಿತಾವಧಿಯ 37 ವರ್ಷಗಳಲ್ಲಿ ಸಂಗಾತಿ ಬಿ ಕೆ ಸುಂದರೇಶ್ ಸಂಪಾದಿಸಿಕೊಂಡಿದ್ದು ಅವರ ಬದುಕಿನ ಒಂದು ಮುಖ್ಯವಾದ ಭಾಗವಾದರೆ, ಈ ಸಮಾಜಕ್ಕೆ ಅವರು ಹಿಂತಿರುಗಿ ಕೊಟ್ಟಿದ್ದನ್ನು, ಅವರು ರೂಡಿಸಿಕೊಂಡಿದ್ದ ಮಾನವೀಯತೆಯನ್ನು, ಗಳಿಸಿಕೊಂಡಿದ್ದ ಪ್ರಾಮಾಣಿಕತೆಯನ್ನು, ರೂಪಿಸಿಕೊಂಡಿದ್ದ ಆದರ್ಶ ರಾಜಕಾರಣವನ್ನು, ಅವರು ಈ ಜಿಲ್ಲೆಯಲ್ಲಿ ರೂಪಿಸಿದ ಚಳುವಳಿಯ ಕಾವಿಗೆ ನಮ್ಮ ಹಸ್ತವನ್ನು ಮತ್ತೊಮ್ಮೆ ಬೆಚ್ಚಗೆ ಮಾಡಿಕೊಳ್ಳಬೇಕಾಗಿದೆ, ಮೈ ಮನವನ್ನು ಕೊಡವಿಕೊಂಡು ಹೊಸ ಮನ್ವಂತರಕ್ಕೆ ಹೆಜ್ಜೆ ಇಡಬೇಕಾಗಿದೆ.
ಸಮತಾವಾದದ ಸಿದ್ಧಾಂತವನ್ನು ಮೈಗೂಡಿಸಿಕೊಂಡಿದ್ದ ಸುಂದರೇಶ್ ಅವರನ್ನು ಕಮ್ಯುನಿಸ್ಟ್ ಪಕ್ಷದ ಒಳಗೆ ಕರತಂದಿದ್ದು ಎಚ್ಎಮ್ ರೇಣುಕಾರಾಧ್ಯರು, ಜನರು ಹೆಚ್ಚಾಗಿ ಬಿಕೆಎಸ್ ಅವರನ್ನು ಕಮ್ಯುನಿಸ್ಟ್ ನಾಯಕ ಎಂದು ಸೀಮಿತವಾಗಿ ಗುರುತಿಸಿ ಮಾತನಾಡುತ್ತಿದ್ದಾರೆ, ಸುಮಾರು 19 ವರ್ಷಗಳ ಕಾಲ ಕಮ್ಯುನಿಸ್ಟ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ, ತಾಲೂಕು ಜಿಲ್ಲೆ ರಾಜ್ಯ ರಾಷ್ಟ್ರಮಟ್ಟದ ನಾಯಕರಾಗಿ ಅವರು ಬೆಳೆದು ಹೋದ ಪರಿ, ಕಮ್ಯುನಿಸ್ಟ್ ಪಕ್ಷವು ಸೇರಿದಂತೆ ಇತರ ಎಲ್ಲ ರಾಜಕೀಯ ಪಕ್ಷಗಳಿಗೆ ಒಂದು ಮಾದರಿಯಾಗಿದೆ. ರಾಷ್ಟ್ರೀಯ ಪಕ್ಷದ ರಾಜಕೀಯ ನಾಯಕರಾಗಿದ್ದರು ಕೂಡ, ಕೇವಲ ಒಂದು ರಾಜಕೀಯ ಪಕ್ಷದ ಕಾರ್ಯ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೆ ಅವರು ರೂಪಿಸಿದ ಸಾಮಾಜಿಕ ಆಂದೋಲನಗಳು ಇಂದಿಗೂ ಕೈಮರದಂತೆ ಗೋಚರಿಸುತ್ತಿವೆ.
ಮಹಾರಾಷ್ಟ್ರ ರಾಜ್ಯದ ಅಲ್ಲಿನ ಸ್ತ್ರೀ ಶಕ್ತಿ ಸಂಘಗಳು ಬಾಲ ವಿಕಾಸ ಯೋಜನೆಯನ್ನು ಮಾದರಿಯಾಗಿ ಅನುಷ್ಠಾನ ಮಾಡಿರುವ ಬಗ್ಗೆ ಕ್ಷೇತ್ರಧ್ಯಾಯನ ಮಾಡಿ , ಆ ಮಾದರಿಯನ್ನು ಕರ್ನಾಟಕಕ್ಕೆ ಅಳವಡಿಸಿಕೊಂಡು, ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರಿಗೆ ಉತ್ತೇಜನವಾಗುವ ನಿಟ್ಟಿನಲ್ಲಿ ಕರ್ನಾಟಕದಿಂದ ಮೂರು ಜನ ಬಾಂಬೆಗೆ ತೆರಳಿದ್ದರು, ಆ ಅಲ್ಲಿನ ಬಾಲವಿಕಾಸ ಯೋಜನೆಯ ಎಲ್ಲ ಕಾರ್ಯ ಚಟುವಟಿಕೆಗಳನ್ನು ಅಧ್ಯಯನ ಮಾಡಿಕೊಂಡು ಹಿಂತಿರುಗಿ ಕರ್ನಾಟಕಕ್ಕೆ ರೈಲಿನಲ್ಲಿ ಬರುವಾಗ ಬೆಂಗಳೂರಿನ ಯಲಹಂಕ ಬಳಿ ರೈಲು ಅಪಘಾತದಲ್ಲಿ ಸುಂದರೇಶ್ ಅವರು ಮಡಿಯಬೇಕಾಯಿತು ಎಂಬುದನ್ನು ಮತ್ತೊಮ್ಮೆ ನೆನಪಿಸುತ್ತಿದ್ದೇನೆ.
ಸಂಗಾತಿ ಬಿಕೆ ಸುಂದರೇಶ್ ಅವರು ಅವರು ಒಂದು ಕೇವಲ ರಾಜಕೀಯ ಪಕ್ಷದ ನಾಯಕರಲ್ಲ ಈ ನಾಡಿನ ಜನನಾಯಕನಾಗಿ ಬೆಳೆದಿದ್ದರು, ಅವರು ಮಾತ್ರ ಬೆಳದಿರಲಿಲ್ಲ, ಸಾಮಾಜಿಕ ಹೋರಾಟಗಳ ಮೂಲಕ ಅನೇಕ ಚಳುವಳಿ ಮತ್ತು ಆಂದೋಲನಗಳನ್ನು ಕಟ್ಟಿ ಹೋರಾಟಗಾರರ ಪಡೆಯನ್ನೇ ನಿರ್ಮಿಸಿ ಒಂದು ಹೊಸ ಪರಂಪರೆಯ ನಿರ್ಮಾಣಕ್ಕೆ ಕಾರಣರಾಗಿದ್ದರು. ತನ್ನೊಟ್ಟಿಗೆ ತನ್ನ ಕುಟುಂಬದವರನ್ನು ಬಂಧುಗಳನ್ನು ಸ್ನೇಹಿತರನ್ನು ಸಾಮಾಜಿಕ ಚಳುವಳಿಗಳಿಗೆ ಧುಮುಕುವಂತೆ ಪ್ರಭಾವಿಸುವ ಅವರ ಮಾತು, ಸ್ಪರ್ಶ, ಬದುಕಿನಲ್ಲಿ ರೂಡಿಸಿಕೊಂಡಿದ್ದ ಆದರ್ಶಗಳು ಒಂದೊಂದು ನಮಗೆ ವಿಶೇಷ ಪಾಠದಂತೆ ಇವೆ.
ಮೂಡಿಗೆರೆಯ ತಾಲೂಕಿನ ಕೊನೆಯ ಹಂಚಿನ ಒಂದು ಸಣ್ಣ ಹಳ್ಳಿಯಲ್ಲಿ ಮಧ್ಯಮ ವರ್ಗದ ರೈತಾಪಿ ಕುಟುಂಬದ ಕಾಳೇಗೌಡ ನಂಜಮ್ಮ ದಂಪತಿಗಳಿಗೆ ಹುಟ್ಟಿದ ಈ ಕೆಂಪು ಹುಡುಗ ಕೆಂಪು ಕೆಂಪಾಗಿ ಅತಿ ಸುಂದರವಾಗಿದ್ದ ಕಾರಣ ಪ್ರಾರ್ಥಮಿಕ ಶಾಲೆಯ ಮೇಷ್ಟ್ರು ಅಪ್ಪ ಇಟ್ಟ ಟಂಕೇಗೌಡ ಎಂಬ ಹೆಸರಿಗೆ ಬದಲಾಗಿ ಸುಂದರೇಶ್ ಎಂದು ನಾಮಕರಣ ಮಾಡಿದ್ದರು. ಸಾಮಾನ್ಯ ಕುಟುಂಬ ಒಂದರಲ್ಲಿ ಹುಟ್ಟಿ ಬೆಳೆದ ಇಂತಹ ಸುಂದರೇಶ್, ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ, ಆರ್ಥಿಕವಾಗಿ ಸದೃಢವಾಗಿರದಿದ್ದರೂ ಕೂಡ ಪಾರ್ಲಿಮೆಂಟ್ ಮತ್ತು ವಿಧಾನಸಭಾ ಚುನಾವಣೆಗಳಿಗೆ ಸ್ಪಂದಿಸಿ ಕೋಟ್ಯಾಧಿಪತಿಗಳ ಬೆವರಿಳಿಯುವಂತೆ ಸ್ಪರ್ಧಿಸಿ ಅಚ್ಚರಿಗೊಳಿಸಿದ್ದು ಅವರ ಸಂಪಾದಿಸಿಕೊಂಡಿದ್ದ ಜನ ಪ್ರೀತಿ ಕಾರಣವಾಗಿತ್ತು, ಆ ಮಟ್ಟದ ಒಲವನ್ನು ಈ ನಾಡಿನ ಜನರಿಂದ ಸಂಪಾದಿಸಿಕೊಂಡಿದ್ದರು.
1994ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು ರೂಪಿಸಿದ ಒಂದು ನೋಟು ಕೊಡಿ ಒಂದು ವೋಟು ಕೊಡಿ, ಒಂದು ನೋಟು ಎಂದರೆ ಒಂದು ರೂಪಾಯಿ ಮಾತ್ರ, ಓಟು ಕೊಡುವುದರಾದರೆ ಮಾತ್ರ ಒಂದು ರೂಪಾಯಿಯನ್ನು ಮಾತ್ರ ಕೊಡಿ ಎಂದು ಚುನಾವಣೆಯನ್ನು ಎದುರಿಸಿ ಕೇವಲ 375 ಮತಗಳು ಬಂದಿದ್ದರೆ ಅವರು ಕರ್ನಾಟಕ ರಾಜ್ಯದ ವಿಧಾನಸಭಾ ಸದಸ್ಯರಾಗಿ ಆಯ್ಕೆ ಆಗುತ್ತಿದ್ದರು, ಆ ಸಂದರ್ಭದಲ್ಲಿ ಬಾಲ ವಿಕಾಸ ಯೋಜನೆಯ ಅಧ್ಯಯನಕ್ಕಾಗಿ ಬಾಂಬೆಗೆ ಹೋಗುತ್ತಿರಲಿಲ್ಲ, ಕಾರಣ ಅದೇ ಸಮಯದಲ್ಲಿ ವಿಧಾನಸಭೆಯ ಅಧಿವೇಶನ ನಡೆಯುತ್ತಿತ್ತು, ಜಿಲ್ಲೆಯ ಜನತೆ ಅಂದು ಸುಂದರೇಶ್ ಅವರನ್ನು ಒಂದು ಪಕ್ಷ ಗೆಲ್ಲಿಸಿದ್ದರೆ ಸುಂದರೇಶ್ ಇವತ್ತಿಗೂ ಇನ್ನೂ ಜೀವಂತವಾಗಿರುತ್ತಿದ್ದರು. ಅಷ್ಟು ಮಾತ್ರವಲ್ಲ, ಇಡೀ ದೇಶಕ್ಕೆ ಮಾದರಿ ಶಾಸಕರಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬುನಾದಿ ಹಾಕುತ್ತಿದ್ದರು.
ಚುನಾವಣಾ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿದ ಸುಂದರೇಶ್ ಅವರು ರಾಜಕೀಯ ಅಧಿಕಾರ ಇಲ್ಲದ ಸಂದರ್ಭದಲ್ಲಿಯೂ ಸಹ, ಈ ಜಿಲ್ಲೆಯ ಜನಸಾಮಾನ್ಯರ ಕಷ್ಟ ಸುಖಗಳ ಭಾಗವಾಗಿದ್ದರು, ಜನಸಾಮಾನ್ಯರ ಧ್ವನಿಯಾಗಿ ಸಂಸತ್ತು ಮತ್ತು ವಿಧಾನಸಭೆಯ ಒಳಗಡೆ ಜನರ ಧ್ವನಿಯಾಗಿ ಮಾತನಾಡಲು ಅವಕಾಶವಿಲ್ಲದಿದ್ದರೂ ಸಹ, ಯಾವ ರಾಜಕೀಯ ಪಕ್ಷದ ಚುನಾಯಿತ ಪ್ರತಿನಿಧಿಗಳಿಗೂ ಕಡಿಮೆ ಇಲ್ಲದಂತೆ ರಾಜಕೀಯ ಮತ್ತು ಸಾಮಾಜಿಕವಾದ ಜನಪರ ಕಲ್ಯಾಣದ ಕಾರ್ಯಕ್ರಮಕ್ಕಾಗಿ ದುಡಿದರು.
ಕುದುರೆಮುಖ ಕಬ್ಬಿಣ ಅದಿರು, ತುಂಬಿ ಹರಿಯುವ ಜಿಲ್ಲೆಯ ಐದು ಜೀವನದಿಗಳು, ಕಾಫಿ ಟೀ ಏಲಕ್ಕಿ ಅಡಿಕೆ ತೆಂಗು ಮುಂತಾದ ಬೆಳೆಗಳ ಮೂಲಕ ಕೇಂದ್ರಕ್ಕೆ ರಾಜ್ಯ ದ ಬೊಕ್ಕಸಕ್ಕೆ ಕೋಟ್ಯಾಂತರ ರೂ ಆದಾಯ ಹೋಗುತ್ತಿದ್ದರು ಸಹ ಜಿಲ್ಲೆ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ ಎಂದು 1991ರಲ್ಲಿಯೇ ಜಿಲ್ಲೆಯ ಪರವಾಗಿ ಧ್ವನಿ ಮಾಡಿದ್ದರು. ಮೂರು ದಶಕಗಳು ಕಳೆದರೂ ಕೂಡ, ಈ ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ಕೆಲವರು ರಾಜ್ಯ ಮತ್ತು ರಾಷ್ಟ್ರಮಟ್ಟದ ರಾಜಕೀಯವನ್ನು ನಡೆಸಿದರು ಸಹ ಹೇಳಿಕೊಳ್ಳಲಾಗದಂತಹ ಅಭಿವೃದ್ಧಿ ಆಗದೆ ಇರುವುದು ವಿಷಾದವಾಗಿದೆ.
ಹಣ ಹೆಂಡ ವಿವಿಧ ವಸ್ತುಗಳನ್ನು ಕೊಟ್ಟು ಅಧಿಕಾರ ರಾಜಕಾರಣವನ್ನು ಹಿಡಿಯಲು ಏನೆಲ್ಲ ತಂತ್ರ ಕುತಂತ್ರದೊಂದಿಗೆ ಚುನಾವಣೆಯನ್ನು ಎದುರಿಸುತ್ತಿರುವ ಇಂದಿನ ಎಲ್ಲಾ ಆರ್ಡಿನರಿ ರಾಜಕಾರಣಿಗಳ ಮುಂದೆ ಬಿ ಕೆ ಸುಂದರೇಶ್ ಒಬ್ಬ ಮುತ್ಸದ್ದಿ ರಾಜಕಾರಣಿಯಾಗಿ ಎದ್ದು ನಿಲ್ಲುತ್ತಾರೆ. ಅವರು ಬಿಟ್ಟುಹೋದ ಆದರ್ಶದ ಪಾಠಗಳನ್ನು ಯಾವುದೇ ಪಕ್ಷದ ನಾಯಕರಿರಲಿ, ಸಾಮಾನ್ಯ ಕಾರ್ಯಕರ್ತರಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ.
ಇನ್ನೂ, ಸುಮಾರು 19 ವರ್ಷಗಳ ಕಾಲ ಸಕ್ರಿಯವಾಗಿ ತನ್ನನ್ನು ತಾನು ಗುರುತಿಸಿಕೊಂಡು ದುಡಿದಿದ್ದ ಭಾರತೀಯ ಕಮ್ಯುನಿಸ್ಟ್ ಪಕ್ಷ ತನ್ನ ಟ್ರೇಡ್ ಯೂನಿಯನ್ ನಿಗಷ್ಟೇ ಸೀಮಿತವಾದಂತೆ ಕಾಣುತ್ತಿದೆ, ಚುನಾವಣಾ ರಾಜಕೀಯದಿಂದ ದಿನದಿಂದ ದಿನಕ್ಕೆ ವೈರಾಗ್ಯ ತಾಳುತ್ತಿರುವಂತೆ ಗೋಚರಿಸುತ್ತಿದೆ ಎಂಬುದು ಆತಂಕದ ವಿಷಯವಾಗಿದೆ.
ಸಿಹಿಯಾದ ಸುಳ್ಳು ಕಹಿಯಾದ ಸತ್ಯ ಎಂಬ ವಿಚಾರಗಳ ನಡುವೆ ನಡೆಯುವ ಚುನಾವಣಾ ಆಯ್ಕೆಯಲ್ಲಿ ನಾವು ಕಹಿಯಾದ ಸತ್ಯವನ್ನೇ ಆರಿಸಿಕೊಳ್ಳಬೇಕಾಗಿರುವುದು ನಮ್ಮ ಬದ್ಧತೆಯಾಗಬೇಕೆಂದು ಬಿಕೆಎಸ್ ಹೇಳಿದ್ದು ಇನ್ನು ನೆನಪಿದೆ.
ಕುದುರೆಮುಖ ಗಣಿಗಾರಿಕೆ.
ಜಾಗತೀಕರಣದ ವಿರುದ್ಧ ಗ್ಯಾಟ್ ಅಂಡ್ ಡಂಕಲ್ ಪ್ರಸ್ತಾವನೆ.
ಭೂ ಹೋರಾಟ.
ಕಾರ್ಮಿಕ ಹೋರಾಟ.
ವಸತಿ ರೈತರಿಗೆ ನಿವೇಶನ ಕೊಡಿಸುವ ಹಕ್ಕೊತ್ತಾಯ.
ರೈತಪರ ಮತ್ತು ದಲಿತಪರ ನಿಲುವುಗಳಿಗೆ ನೀಡಿದ ಬೆಂಬಲ ಮತ್ತು ಭಾಗವಹಿಸುವಿಕೆ.
ಏಷ್ಯಾ ಖಂಡದಲ್ಲಿ ಪ್ರಪ್ರಥಮವಾಗಿ ಕಾರ್ಮಿಕರೇ ಮಾಲೀಕರಾಗಿ ದುಡಿಯುವಂತೆ ಕಟ್ಟಿದ ಕೊಪ್ಪದ ಸಹಕಾರ ಸಾರಿಗೆ ಸ್ಥಾಪನೆಗೆ ಹೆಚ್ಎಂ ರೇಣುಕಾರಾಧ್ಯರ ಪಾತ್ರ ಹಿರದಾದದ್ದು ಹಾಗೆಯೇ ಸಹಕಾರ ಸಾರಿಗೆ ಬೆಳವಣಿಗೆಗೆ ಬಿಕೆಎಸ್ ಪಾತ್ರ ಕೂಡ ಮಹತ್ವದ್ದು .
ಅನಕ್ಷರಸ್ತ ಸಮಾಜವನ್ನು ಸಾಕ್ಷರರಾಗಿ ಮಾಡುವಲ್ಲಿ ರೂಪಿಸಿದ ಸಾಕ್ಷರತಾ ಆಂದೋಲನ.
ಮೌಡ್ಯ ಕಂದಾಚಾರದ ವಿರುದ್ಧ ಹಮ್ಮಿಕೊಂಡ ಜನ ವಿಜ್ಞಾನ ಚಳುವಳಿಗಳು.
ಕೆಮ್ಮಣ್ಣಗುಂಡಿ ರೂಪ್ ವೇ ವಿರುದ್ಧ ತೆಗೆದುಕೊಂಡ ನಿಲುವುಗಳು,
ಮಹಿಳೆಯರ ಒಲವು ನಿಲುವುಗಳನ್ನು ಕುರಿತು ನಡೆಸಿದ ಸಮತಾ ಕಾರ್ಯಗಾರಗಳು.
ಪರಿಸರದ ಮಹತ್ವವನ್ನು ಅರಿತು ಆಚರಿಸಿದ ನೇಚರ್ ಅಂಡ್ ಅಡ್ವೆಂಚರ್ ಚಟುವಟಿಕೆಗಳು.
ಬಡವ ಎಂಬ ಮಾಸಿಕ ಪತ್ರಿಕೆಯನ್ನು ಹುಟ್ಟು ಹಾಕಿ ಅದರ ಜೊತೆಗೆ ಜನಪತ್ರಿಕೆ ಎಂಬ ಎಂಬ ದಿನ ಪತ್ರಿಕೆಯನ್ನು ತೆರೆದು ಪತ್ರಿಕೋದ್ಯಮದ ಮಹತ್ವ ಮತ್ತು ಮೌಲ್ಯವನ್ನು ಕಾಪಾಡಿದ ಅವರ ಚತುರತೆ.
ಹೀಗೆ ಅನೇಕ ಸಾಮಾಜಿಕವಾದ ರಾಜಕೀಯ ಚಟುವಟಿಕೆಗಳನ್ನು ನಿತ್ಯ ರೂಪಿಸುತ್ತ , ಅದರೊಳಗೆ ತಾನು ಬೆಳೆಯುತ್ತಾ, ತನ್ನ ಜೊತೆ ಇದ್ದ ಅದೆಷ್ಟೋ ಜನರನ್ನು ರೂಪಿಸಿದ ಸುಂದರೇಶ್ ಅವರ ಕಾರ್ಯಚಟುವಟಿಕೆಗಳನ್ನು ದಾಖಲಿಸಲು ಹೋದರೆ ಒಂದು ದೊಡ್ಡ ಪುಸ್ತಕವೇ ಆದೀತು.
ಅಂದು, ಸುಂದರೇಶ್ ಅವರು ಅಸ್ತಂಗತವಾದ ಆ ಸಮಯದಲ್ಲಿ, ಮೂಡಿಗೆರೆಯ ಬಕ್ಕಡಿ ಗ್ರಾಮದ ಅ ಬಯಲಿನ ಮಧ್ಯೆ , ರಾಜ್ಯದ ಮೂಲೆ ಮೂಲೆಗಳಿಂದ ಸೇರಿದ್ದ ಅಪಾರವಾದ ಜನಸ್ತೋಮದ ಮಧ್ಯೆ ಅವರ ಪಾರ್ಥಿವ ಶರೀರಕ್ಕೆ ಅವರ ಹಿರಿಯ ಸಹೋದರ ಲಕ್ಷ್ಮಣ್ ಕುಮಾರ್ ಅವರು ಅಗ್ನಿಸ್ಪಶ್ಯ ಮಾಡುವ ಸಂದರ್ಭದಲ್ಲಿ ಅವರ ಏಕೈಕ ಪುತ್ರಿ ಯಾದ ಅಂಜುವನ್ನು ಹೆಗಲ ಮೇಲೆ ಹೊತ್ತುಕೊಂಡು, ಸುಂದರೇಶ್ ಅಣ್ಣನ ಮಡದಿ ಅಕ್ಕ ರಾಧಕ್ಕನನ್ನು ಕೈ ಹಿಡಿದುಕೊಂಡು….ಇಪ್ಟಾ ಕಲಾವಿದರಾದ ನಾವು ಭಾರತೀಯ ಜನಕಲಾ ಸಮಿತಿಯ ಧ್ವಜವನ್ನು ಅವರ ಪಾರ್ಥಿವ ಶರೀರದ ಮೇಲೆ ಹಾಕಿ ಆ ಸಂಘದ ಬಾವುಟವನ್ನು ಮುಗಿಲೆತ್ತರಕ್ಕೆ ಹಾರಿಸಿ , ಅವರ ಪಾರ್ಥಿವ ಶರೀರವನ್ನು ದಗ ದಗನೇ ದಹಿಸುತ್ತಿದ್ದ ಬೆಂಕಿಯ ಜ್ವಾಲೆಯ ಮುಂದೆ ಹಾಡಿದ ಹಾಡು 31 ವರ್ಷಗಳು ಗತಿಸಿದರು ಕೂಡ ಇನ್ನೂ ನಮ್ಮೊಳಗೆ ಬಿಸಿ ಬಿಸಿಯಾಗಿಯೇ ಸುಡುತ್ತಿದೆ.
ಗೆಳೆಯ ಸುಂದರೇಶನೇ ನಿನಗೆ ನಮ್ಮ ವಂದನೆ.
ಗೆಳೆಯ ಸುಂದರೇಶನೇ ನಿನಗೆ ನಮ್ಮ ಅಭಿವಂದನೆ.
ಹೀಗೆ ಈ ಹಾಡು..
ಹೋಗಿ ಬಾರೋ ನನ್ನೊಡೆಯ ಓ ನನ್ನ ಸುಂದರೇಶನೇ… ಎಂಬ ಹಾಡು.
ಮತ್ತು,
ಕಟ್ಟುತ್ತೆವಾ ನಾವು ಕಟ್ಟುತ್ತೇವಾ,
ಒಡೆದ ಮನಸುಗಳ ಕಂಡ ಕನಸುಗಳ ಕಟ್ಟೆ ಕಟ್ಟುತ್ತೇವಾ ಎಂಬ ಎರಡು ಹಾಡನ್ನು ಸಾರಿ ಸಾರಿ ಮುಗಿಲೆತ್ತರಕ್ಕೆ ಕೇಳುವಂತೆ ಹೇಳಿ ಪ್ರತಿಜ್ಞೆ ಮಾಡಿ ಭಾರವಾದ ಹೃದಯದಿಂದ ಬಕ್ಕಡಿ ಬಕ್ಕಡಿಯಿಂದ ಹಿಂದಿರುಗಿದ್ದೆವು.
ಕ್ಷಮಿಸಿ ಸಂದೇಶಣ್ಣ.
ರಾಜಕೀಯವಾಗಿ ಸಾಮಾಜಿಕವಾಗಿ ಭೌಗೋಳಿಕವಾಗಿ ಸಾಂಸ್ಕೃತಿಕವಾಗಿ ನೀವು ಹಂಬಲಿಸುತ್ತಿದ್ದ ಬದಲಾವಣೆಯ ನಿಮ್ಮ ಆಶಯಗಳನ್ನು, ಅಶೋತ್ತರಗಳನ್ನು ನೀವು ನಿರೀಕ್ಷಿಸಿದಷ್ಟು ನಾವು ಈಡೇರಿಸಲು ಸಾಧ್ಯವಾಗಿಲ್ಲ. ಆದರೆ ಇದು ಮಾತ್ರ ಸತ್ಯ ಸ್ಪಷ್ಟ, ನಾನು ಮಾಡುವ ಯಾವುದೇ ಸಾಮಾಜಿಕ ಚಟುವಟಿಕೆಯೊಳಗೆ ನಾನು ಸೇರಿದಂತೆ ನನ್ನಂತಹ ಅದೆಷ್ಟೋ ಜನರ ಹೃದಯದೊಳಗೆ ಜೀವಂತವಾಗಿದ್ದೀರಿ.
••••••••••••••••••••••••✍️
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ…
ಚಿಕ್ಕಮಗಳೂರು

