लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರೀಲಂಕಾ ಸಂಸತ್ತಿನಲ್ಲಿ ಐತಿಹಾಸಿಕ ನಿರ್ಧಾರ.

ಭಾರತದಲ್ಲಿನ ಜನಪ್ರತಿಗಳೆಂಬ ಹಗಲು ದರೋಡೆಕೋರರು ಆತ್ಮಸಾಕ್ಷಿಯನ್ನು ಒಮ್ಮೆ ಪ್ರಶ್ನಿಸಿಕೊಳ್ಳುವಂತೆ ನಿನ್ನೆ ನೆರೆಯ ಪುಟ್ಟ ದ್ವೀಪ ರಾಷ್ಟ್ರವಾದ ಶೀಲಂಕಾದಲ್ಲಿ ಅಲ್ಲಿನ ಸರ್ಕಾರವು ಸಂಸದರಿಗೆ ನಿವೃತ್ತಿ ವೇತನವನ್ನು ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ನಿನ್ನೆ ನಡೆದ ಸಂಸತ್ ಕಲಾಪದಲ್ಲಿ ಹಾಜರಿದ್ದ ಸದಸ್ಯರ ಪೈಕಿ ಮೂವರು ಮಾತ್ರ ವಿರೋಧ ವ್ಯಕ್ತಪಡಿಸಿದರು.ಉಳಿದ ಸದಸ್ಯರಿಗೆ ತಮ್ಮ ವ್ಯಯಕ್ತಿಕ ಬದುಕು ಅಥವಾ ಕುಂಟುಂಬದ ಆಸಕ್ತಿಗಿಂತ ಮುಖ್ಯವಾಗಿ ತಮ್ಮ ದೇಶದ ಹಿತಾಸಕ್ತಿ ಮುಖ್ಯವಾಯಿತು.

ಪ್ರವಾಸೋದ್ಯಮವನ್ನು ನಂಬಿಕೊಂಡಿರುವ ಶ್ರೀಲಂಕಾ ರಾಷ್ಟ್ರದಲ್ಲಿ ಅಲ್ಲಿನ ಆಂತರೀಕ ಜನಾಂಗೀಯ ಘರ್ಷಣೆಗಳು ರಾಷ್ಟ್ರದ ಆರ್ಥಿಕ ಬೆಳವಣಿಗೆಗ ಅಡ್ಡಿಯಾಗಿವೆ. ಇದನ್ನು ಮನಗಂಡ ಅಲ್ಲಿನ ಜನಪ್ರತಿಗಳು, ರಾಷ್ಟ್ರದ ಆರ್ಥಿಕ ಬೆಳೆವಣಿಗೆಗೆ ಅಡ್ಡಿಯಾಗಬಾರದಂದು ಇಡೀ ಜಗತ್ತಿಗ ಮಾದರಿಯಾಗುವಂತಹ ನಿರ್ಧಾರ ಕೈಗೊಂಡಿದ್ದಾರೆ.

ಇಂದಿನ ಭಾರತವೆಂಬ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸ್ಥಾನಗಳ ದೊರೆಗಳ ವಂಶಾಡಳಿತವನ್ನು ಮೀರಿಸುವ ಇಲ್ಲಿನ ಸಂಸದರು, ಶಾಸಕರೆಂಬ ಜನಪ್ರತಿನಿಧಿಗಳು ಸಂಪಾದಿಸಿರುವ ಆಸ್ತಿಯ ಮೌಲ್ಯವನ್ನು ಪರಿಗಣಿಸಿದರೆ ಸಾಕು. ಇವರಿಗೆ ಜನಪ್ರತಿನಿಧಿಗಳ ಪಿಂಚಣಿ ಅಥವಾ ನಿವೃತ್ತಿ ವೇತನ ಪಡೆಯಲು ಯಾವ ನೈತಿಕತೆ ಅಥವಾ ಅರ್ಹತೆ ಇದೆ? ಎಂಬುದು ತಿಳಿಯುತ್ತದೆ.

ಅದೊಂದು ಕಾಲದಲ್ಲಿ ಕರ್ನಾಟಕದಲ್ಲಿ ಶಾಂತವೇರಿ ಗೋಪಾಲಗೌಡ, ಅಬ್ದುಲ್ ನಜೀರ್ ಸಾಬ್, ತಮಿಳುನಾಡಿನಲ್ಲಿ ಕೆ.ಕಾಮರಾಜ್, ಜೀವಾ ಹೆಸರಿನಲ್ಲಿ ಕರೆಸಿಕೊಳ್ಳುತ್ತಿದ್ದ ಕಮ್ಯೂನಿಷ್ಟ್ ನಾಯಕ ಜೀವಾನಂದ್, ರಾಷ್ಟ್ರಮಟ್ಟದಲ್ಲಿ ಮಧುದಂಡವತೆ, ಜಾರ್ಜ್ ಪೆರ್ನಾಂಡಿಸ್ ಹೀಗೆ ಬೆರಳೆಣಿಕಯಷ್ಟು ನಾಯಕರು ದೇಶಾದ್ಯಂತ ಇದ್ದರು. ಅವರ ನಿವೃತ್ತ ಜೀವನಕ್ಕೆ ಪಿಂಚಣಿ ಅವಶ್ಯಕತೆಯಿತ್ತು. ಈಗಿನ ಈ ಲಂಪಟ ರಾಜಕಾರಣಿಗಳು ಯಾವ ಅರ್ಹತೆಯ ಮೇಲೆ ಇದನ್ನು ಪಡೆಯುತ್ತಿದ್ದಾರೆ.

ಈಗ ಚುನಾವಣೆಗೆ ಮುನ್ನ ಚುನಾವಣಾ ಆಯೋಗಕ್ಕೆ ಅಭ್ಯರ್ಥಿಗಳು ಸಲ್ಲಿಸುವ ಆಸ್ತಿ ವಿವರವನ್ನು ಗಮನಿಸಿದರೆ ಸಾಕು. ಶೇಕಡಾ ನೂರಕ್ಕೆ ನೂರರಷ್ಟು ಪಾಲು ಕೋಟ್ಯಾಧೀಶ್ವರರು ಜನಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಿದ್ದಾರೆ. ಇಂದು ತಳ ಸಮುದಾಯ ಮತ್ತು ಮಧ್ಯಮ ವರ್ಗದ ಜನತೆಗೆ ಶಿಕ್ಷಣ, ಆರೋಗ್ಯ ವೆಂಬುದು ಗಗನ ಕುಸುಮವಾಗಿದೆ. ಆದರೆ, ನಮನ್ನಾಳುವವರು ಮಕ್ಕಳನ್ನು ವಿದೇಶಕ್ಕೆ ಕಳುಹಿಸಿ, ಇಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ನಾಡಿನ ಬುದ್ದಿಜೀವಿಗಳೆಂಬ ಬುದ್ದಿಮಾಂದ್ಯರು, ಆಳುವವರ ಆಸ್ಥಾನದಲ್ಲಿ ವಿದೂಷಕರಾಗಿದ್ದಾರೆ. ಮಾಧ್ಯಮಗಳೆಂಬ ಬುಡುಬುಡಿಕೆ ಮತ್ತು ಗಳಗಂಟೆಯ ದಾಸರು, ರಾಜಕಾರಣಿಗಳು ಮತ್ತು ಧರ್ಮಾಧಿಕಾರಿಗಳು ಹಾಗೂ ಉದ್ಯಮಿಗಳ ಪಾದದ ಬಳಿ ಮಕಾಡೆ ಮಲಗಿ ದಶಕವಾಯಿತು. ಎದ್ದೇಳುವ ಸಂಭವವಿಲ್ಲ. .

ಈ ಎಲ್ಲವನ್ನೂ, ಎಲ್ಲರನ್ನೂ ತಿಪ್ಪೆಗುಂಡಿಗೆ ಗುಡಿಸಿ ಹಾಕಿ, ಇಂದಿನ ಯುವ ಜನಾಂಗ ವ್ಯವಸ್ಥೆಯ ವಿರುದ್ಧ ಎದ್ದು ನಿಲ್ಲಬೇಕಿದೆ. ಇದಕ್ಕೆ ಯಾವುದೇ ದೊಡ್ಡ ಆಂಧೋಲನ ಬೇಡ. ಒಬ್ಬೊಬ್ಬ ರಾಜಕಾರಣಿಯನ್ನು ನಡು ರಸ್ತೆಯಲ್ಲಿ ಅಥವಾ ವೇದಿಕೆಯಲ್ಲಿ ನಿಲ್ಲಿಸಿ ಕೇಳಬೇಕಿದೆ. ಅದಕ್ಕೂ ಮೊದಲು, ಯುವ ಜನಾಂಗವು, ನಮ್ಮ ನಾಯಕ ಇಂದ್ರಲೋಕದ ದೇವೆಂದ್ರ, ದಾನಶೂರಕರ್ಣ ಅಥವಾ ಸತ್ಯಹರಿಶ್ಚಂದ್ರ ಎಂದು ಪಕ್ಷಗಳ ಪರವಾಗಿ ಅಥವಾ ವಿರೋಧವಾಗಿ ಅಂಗಿ ಚೆಡ್ಡಿ ಬಿಚ್ಚಿಕೊಂಡು ಕುಣಿಯುವುದನ್ನು ನಿಲ್ಲಿಸಬೇಕಾಗಿದೆ.

ಎಪ್ಪತ್ತರ ದಶಕದ ನನ್ನ ತಲೆಮಾರಿನ ಗೆಳೆಯರ ಹೋರಾಟವನ್ನು ಈ ತಲೆಮಾರು ಓಮ್ಮೆ ಗಮನಿಸಬೇಕು. ಹೊಟೇಲ್ ಗಳಲ್ಲಿ ತಿಂಡಿದ ದರ ಅಂದರೆ, ಸೆಟ್ ದೋಸೆ ಹತ್ತು ಪೈಸೆಯಿಂದ ಹದಿನೈದು ಪೈಸೆಗೆ, ಕಾಫಿ, ಟೀ ದರ ಏಳು ಪೈಸೆಯಿಂದ ಹತ್ತು ಪೈಸೆಗೆ ಹೆಚ್ಚಳವಾದುದಕ್ಕೆ ನಾವು ಜೀವನ್ಮರಣದ ಪ್ರಶ್ನೆಯಂತೆ ಬೀದಿಗಳಿಯುತ್ತಿದ್ದೆವು. ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜು ಮತ್ತು ಮೈಸೂರಿನ ಮಹಾರಾಜ ಕಾಲೇಜಿನ ವಿದ್ಯಾರ್ಥಿ ನಾಯಕರು ನಮ್ಮ ಹೋರಾಟವನ್ನು ಮುನ್ನಡೆಸುತ್ತಿದ್ದರು.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್. ನಾಗಮೋಹನದಾಸ್ ಬಳಿ ನೀವು ಒಮ್ಮೆ ಕುಳಿತು ಅಂದಿನ ವಿದ್ಯಾರ್ಥಿಗಳ ಹೋರಾಟ ಹೇಗಿತ್ತು ಎಂದು ಕೇಳಿದರೆ ಅದ್ಘತವಾಗಿ ಇತಿಹಾಸವನ್ನು ಹೇಳಬಲ್ಲರು. ಏಕೆಂದರೆ, ಅವರು, ಅಂದು ಬೆಂಗಳೂರಿನಲ್ಲಿ ವಕೀಲರಾಗಿ, ಎಡಪಂಥ ಚಿಂತನೆಯ ಹೋರಾಟಗಾರರಾಗಿ, ನಮಗೆ ಕಾನೂನು ಸೇವೆಯನ್ನು ಉಚಿತವಾಗಿ ನೀಡುತ್ತಿದ್ದರು. ನ್ಯಾಯಾಲಯದ ಆವರಣದಲ್ಲಿ ಹಸಿವಿನಿಂದ ಬಸವಳಿದು ಕುಳಿತ ನಮಗೆ ಜಾಮೀನು ಕೊಡಿಸಿ, ಹೊಟ್ಟೆ ತುಂಬಾ ಅನ್ನ ಸಾಂಬಾರ್ ಕೊಡಿಸಿ ಕಳಿಸುತ್ತಿದ್ದರು.

ನನ್ನ ತಲೆಮಾರಿಗೆ ಇನ್ನೂ ಸಹ ಒಂದಿಷ್ಟು ಬದ್ಧತೆ, ಸಿಟ್ಟು, ಅಥವಾ ಹೋರಾಟದ ಮನೋಭಾವದ ಕೆಚ್ಚು ಉಳಿದಿರಲು, ನಮ್ಮ ಹಿಂದೆ ಆವಾಗ ಲಂಕೇಶ್, ಕೆ.ರಾಮದಾಸ್, ಪ್ರೊ.ನಂಜುಂಡಸ್ವಾಮಿ, ಚಂಪಾ, ಹೀಗೆ ಅನೇಕ ಚಿಂತಕರಿದ್ದರು. ಇಂದಿನ ಚಿಂತಾಜನಕರ ನಡುವೆ ನಾನು ಏನನ್ನೂ ನಿರೀಕ್ಷಿಸುವುದಿಲ್ಲ. ಆದ್ದರಿಂದ ಕನಿಷ್ಠ ಇಂತಹ ದರಿದ್ರ ವ್ಯವಸ್ಥೆಯ ವಿರುದ್ಧ ನ್ಯಾಯಾಲಯದಲ್ಲಿ ನಾವು ಪ್ರಶ್ನಿಸಬೇಕಿದೆ.

ಭಾರತೀಯ ಮೂಲದ ವಕೀಲನೊಬ್ಬ ಅಮೇರಿಕಾದ ಅಧ್ಯಕ್ಷನೆಂಬ ಪುಂಡನ ಸುಂಕದ ನೀತಿಯ ಹುಚ್ಚಾಟಕ್ಕೆ ಅಲ್ಲಿನ ಸರ್ವೋಚ್ಛ ನ್ಯಾಯಾಲಯದ ಮೂಲಕ ಕಡಿವಾಣ ಹಾಕಿದ್ದಾನೆ ಎಂದರೆ, ಇಲ್ಲಿನ ಜನಪ್ರತಿನಿಧಿಗಳೆಂಬ ದರೋಡೆಕೋರರಿಗೆ ನಾವು ಕಡಿವಾಣ ಹಾಕಲು ಏಕೆ ಸಾಧ್ಯವಾಗುವುದಿಲ್ಲ?

ಇಲ್ಲಿನ ವಕೀಲರು ಮತ್ತು ಯುವಜನತೆ ಈ ಕುರಿತು ಗಂಭೀರವಾಗಿ ಚಿಂತಿಸಬೇಕಾಗಿದೆ. ರಾಜಕೀಯ ನಾಯಕರು ಮತ್ತು ಪಕ್ಷಗಳ ಪರವಾಗಿ‌ ಬೀದಿಗಳಿಯುವುದು ಸ್ವಯಂ ಆತ್ಮಹತ್ಯೆಯ ಮಾರ್ಗ ಎಂದು ಮೊದಲು ಅರಿಯಬೇಕಾಗಿದೆ.
ರಾಜ್ಯದಲ್ಲಿ ಎರಡೂವರೆ ಲಕ್ಷ ಸರ್ಕಾರಿ ಉದ್ಯೋಗಗಳು ಖಾಲಿ ಬಿದ್ದಿವೆ ಎಂದು ಸ್ವಯಂ ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ.

ಒಮ್ಮೆ ಯೋಚಿಸಿ ನೋಡಿ.
ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ತುಂಬಲು ಎಷ್ಟು ಚಳುವಳಿಗಳು ಅಥವಾ ಪ್ರತಿಭಟನೆಗಳು ನಡೆದಿವೆ?

ಚಿತ್ರ- ಕೊಲಂಬೋ ನಗರದಲ್ಲಿ ಇರುವ ಶ್ರೀಲಂಕಾ ಸಂಸತ್ ಭವನ

ಜಗದೀಶ್ ಕೊಪ್ಪ. ಮೈಸೂರು.

About Author

Leave a Reply

Your email address will not be published. Required fields are marked *

You may have missed