ಲಾಸ್ಟ್ ಸ್ಟಾಪ್ ವಿಕ್ಟೋರಿಯಾ* & ಥ್ಯಾಂಕ್ಸ್ To ಸಿದ್ದರಾಮಯ್ಯ…
1 min read
ಅವಿನ್ ಟಿವಿ ಸುದ್ದಿ ಜಾಲ ✍️: ಲಾಸ್ಟ್ ಸ್ಟಾಪ್ ವಿಕ್ಟೋರಿಯಾ*
& ಥ್ಯಾಂಕ್ಸ್ To ಸಿದ್ದರಾಮಯ್ಯ
ಸಚ್ಚಾರಿತ್ರದ ರಾಜಕಾರಣಿ , ಸಮಾಜವಾದದ ಧೀಮಂತ ನಾಯಕ ಶಾಂತವೇರಿ ಗೋಪಾಲಗೌಡರು ತಮ್ಮ ಕೊರಳಿಗೆ ಸುತ್ತಿಕೊಳ್ಳುತ್ತಿದ್ದ ಮೊಪ್ಲರನ್ನು ತೋರಿಸಿ ಜನಾದೇಶದ ಮೂಲಕ ಶಾಸಕರಾದವರು ಮತ್ತೋರ್ವ ಧೀಮಂತ ರಾಜಕಾರಣಿ ಕೋಣಂದೂರು ಲಿಂಗಪ್ಪನವರು, ಅಂತಹ ಧೀಮಂತ ವ್ಯಕ್ತಿತ್ವದ ಶಾಂತವೇರಿ ಗೋಪಾಲಗೌಡರ ಹೆಸರನ್ನು ಬೆಂಗಳೂರಿನ ಪ್ರತಿಷ್ಠಿತ ವಿಕ್ಟೋರಿಯಾ ಆಸ್ಪತ್ರೆಗೆ ಮರುನಾಮಕರಣ ಮಾಡುವುದರೊಟ್ಟಿಗೆ ಸಮಾಜವಾದಿತನವನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡಿದಂತಿದೆ.
ನೆನ್ನೆ ಮಂಡಿಸಿದ ತಮ್ಮ ಬಜೆಟ್ ನಲ್ಲಿ ಇತಿಹಾಸ ಪ್ರಸಿದ್ಧವಾದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಎಂಬ ಹೆಸರನ್ನು ತೆಗೆದುಹಾಕಿ ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಎಂಬ ಹೆಸರಿನಲ್ಲಿ ಮರುನಾಮಕರಣ ಮಾಡಿದ್ದಾರೆ.
ಇತಿಹಾಸ ಅರಿಯದವನು ಇತಿಹಾಸ ಸೃಷ್ಟಿಸಲಾರ ಎಂಬ ಮಾತಿದೆ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ತನ್ನದೇ ಆದ ಒಂದು ದೊಡ್ಡ ಇತಿಹಾಸವಿದೆ, ಅಂತಹ ಇತಿಹಾಸಕ್ಕೆ ಅವಮಾನ ಮಾಡುವ ರೀತಿಯಲ್ಲಿ ಯಾರದೋ ಕೂಸಿಗೆ ಮತ್ಯಾರದ್ದು ಹೆಸರು ಇಟ್ಟು ಬಹುದೊಡ್ಡ ತಪ್ಪು ಮಾಡಿದ ಸಿದ್ದರಾಮಯ್ಯನವರ ಸರ್ಕಾರದ ಈ ನಡೆಯನ್ನು ಅನೇಕರು ನಿನ್ನೆ ಖಂಡಿಸಿದ್ದಾರೆ,
ಗೋಪಾಲಗೌಡರ ಹೆಸರಿನಲ್ಲಿ ಮತ್ತೊಂದು ಬೃಹತ್ ಆಸ್ಪತ್ರೆ ತೆರೆದು ಅದನ್ನು ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡಬಹುದಾದ ಅವಕಾಶ ಮತ್ತು ಅಧಿಕಾರ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಇತ್ತು,
ಹಿಂದೊಮ್ಮೆ ಜೆ ಎಚ್ ಪಟೇಲರು ಮುಖ್ಯಮಂತ್ರಿಗಳಾಗಿದ್ದಾಗ ಏಷ್ಯಾ ಖಂಡದಲ್ಲಿ ಅತಿ ಎರಡನೇ ದೊಡ್ಡ ಕೆರೆ ಎಂದು ಹೆಸರಾದ ಸೂಳೆಕೆರೆಗೆ ಮರು ನಾಮಕರಣ ಮಾಡುವ ಪ್ರಸ್ತಾಪ ಇಟ್ಟಾಗ, ಈ ಪ್ರಸ್ತಾಪವನ್ನು ತೆಗೆದುಕೊಂಡು ಹೋದ ನಿಯೋಗಕ್ಕೆ ಪಟೇಲರು ಒಂದು ಇತಿಹಾಸ ಇರುವ ಕೆರೆಯ ಹೆಸರನ್ನು ಬದಲಾಯಿಸುವ ಪ್ರಯತ್ನ ಮಾಡಿದರೆ ಅ ಇತಿಹಾಸದ ಹಿಂದೆ ಇರುವ ಒಂದು ಚರಿತ್ರೆಯೆ ನಾಶವಾಗುತ್ತದೆ, ಅಂತಹಹುದಕ್ಕೆ ನಾನು ನೀವೆಲ್ಲ ಕಾರಣರಾಗುತ್ತೇವೆ ಎಂದು ತಿಳಿಹೇಳಿ ಸೂಳೆಕೆರೆಗೆ ಮರುನಾಮಕರಣ ಮಾಡುವ ಹೆಸರನ್ನು ತಿರಸ್ಕರಿಸಿದ್ದರು, ಈ ಪಾಠ ವಿಧಾನಸೌಧದ ಕಡತದೊಳಗೆ ಇದೆ, ಕನಿಷ್ಠಪಕ್ಷ ಪಟೇಲರ ಈ ನಿರ್ಧಾರವನ್ನಾದರೂ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಭ್ಯಾಸ ಮಾಡಬೇಕಿತ್ತು, ಈ ಅಭ್ಯಾಸಕ್ಕೆ ತೆರೆದುಕೊಳ್ಳದೆ ಇತಿಹಾಸ ಪ್ರಸಿದ್ಧ ವಿಕ್ಟೋರಿಯಾ ಆಸ್ಪತ್ರೆ ಹೆಸರನ್ನು ಬದಲಾಯಿಸಿ ಅವಮಾನ ಮಾಡಿದ ಅಪಕೀರ್ತಿ ಇಂದಿನ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುವಂತೆ ಮಾಡಿದ್ದಾರೆ .
ಈ ಬಗ್ಗೆ ಹೆಚ್ಚಿನ ವಿರೋಧಗಳು ಮತ್ತು ಕಡಿಮೆ ಸಂಖ್ಯೆಯ ಪ್ರಶಂಸೆಗಳು, ಹೊರ ಬಿದ್ದಿವೆ, ಈ ಕುರಿತು ನಮ್ಮ ಸ್ನೇಹಿತರ ಒಂದು ಲೇಖನವನ್ನು ಅವಿನ್ ಟಿವಿ ಸುದ್ದಿ ಜಾಲವು ತಮ್ಮೊಟ್ಟಿಗೆ ಹಂಚಿಕೊಳ್ಳುತ್ತಿದೆ.
•••••••••••••••👇
ಬೆಂಗಳೂರಿನ ಬಡಜನರ ಭರವಸೆಯಂತಿರುವ ವಿಕ್ಟೋರಿಯಾ ಆಸ್ಪತ್ರೆಯನ್ನು ನೋಡಿದಾಗಲೆಲ್ಲಾ ಶಾಂತವೇರಿ ಗೋಪಾಲಗೌಡರು ಎಂಬ ಪ್ರಾಮಾಣಿಕ ಮತ್ತು ತಾತ್ವಿಕ ಆದರ್ಶದ ನಾಯಕ ನೆನಪಾಗುತ್ತಾರೆ.
ನಾನು ಶಾಂತವೇರಿ ಗೋಪಾಲಗೌಡರನ್ನು ಖುದ್ದಾಗಿ ನೋಡಿದವನಲ್ಲ, ಆದರೆ ಅವರ ಪ್ರಭಾವಳಿ ಪ್ರಭೆ ಸೋಕಿದವನು ಎಂದಷ್ಟೇ ಹೇಳಬಹುದು. ಅವರು ಹುಟ್ಟಿದ ,ಕಟ್ಟಿದ ನಾಡಿನಲ್ಲಿ, ಜಿಲ್ಲೆಯಲ್ಲಿ ನಾನು ಹುಟ್ಟಿದೆ ಅನ್ನೋದೇ ಹೆಗ್ಗಳಿಕೆ.
ಸರ್ಕಾರಿ ವಿಕ್ಟೋರಿಯಾ ಆಸ್ಪತ್ರೆಯ ಬೆಡ್ ಮೇಲೆ
ಮಲಗಿದ್ದ ಶಾಂತವೇರಿ ಗೋಪಾಲಗೌಡರ ಕಣ್ಣುಗಳಲ್ಲಿ ಸಣ್ಣಗೆ ನೀರು ಜಿನುಗುತ್ತಿದ್ದವು. ಅವರಿನ್ನೂ ಸಕ್ರಿಯವಾಗಿ ಬರಲು ಸಾಧ್ಯವಿಲ್ಲ ಎಂಬುದನ್ನು ಈ ನಾಡಿಗೆ ಎರಗಿದ ಆಘಾತಕಾರಿ ಸುದ್ದಿ.
1972 ತೀರ್ಥಹಳ್ಳಿ ವಿಧಾನಸಭಾ ಚುನಾವಣೆಗೆ ತಮ್ಮ ಉತ್ತರಾಧಿಕಾರಿಯಾಗಿ ಕೋಣಂದೂರು ಲಿಂಗಪ್ಪ ಅವರನ್ನು ನಿಲ್ಲಿಸಲು ನಿರ್ಧರಿಸಲಾಗಿತ್ತು. ಈ ವಿಷಯ ತಿಳಿದ ತಕ್ಷಣ ಗೌಡರ ತಮ್ಮ ವಿಕ್ಟೋರಿಯಾ ಆಸ್ಪತ್ರೆಯ ಬೆಡ್ ನಲ್ಲಿದ್ದ ಗೋಪಾಲಗೌಡರು ತಮ್ಮ ತಲೆ ದಿಂಬಿನ ಅಡಿಯಿಂದ ಮಪ್ಲರ್ ತೆಗೆದು ಕೋಣಂದೂರು ಲಿಂಗಪ್ಪ ಅವರ ಕೈಗಿತ್ತರು.
ಇದೇ ಮಪ್ಲರ್ ಅನ್ನೇ ಕೊರಳಿಗೆ ಸುತ್ತಿಕೊಂಡು ಪ್ರಚಾರಕ್ಕೆ ಹೋದ ಕೋಣಂದೂರು ಲಿಂಗಪ್ಪನವರು ಜನರಿಗೆ ಮಪ್ಲರ್ ತೋರಿಸಿ ಗೌಡರು ಆಸ್ಪತ್ರೆಯಲ್ಲಿದ್ದಾರೆ, ಅವರ ಮಪ್ಲರ್ ಗೆ ಓಟು ಕೊಡಿ ಎಂದು ಮನವಿ ಮಾಡಿಕೊಂಡರು. ಜನ ಕೈ ಬಿಡಲಿಲ್ಲ ಜಾತಿ ,ಹಣ ಬಲವೇ ಇಲ್ಲದ ಕೋಣಂದೂರು ಲಿಂಗಪ್ಪ ಅವರನ್ನು ಗೋಪಾಲ ಗೌಡರ ಮಪ್ಲರ್ ಗೆಲ್ಲಿಸಿತ್ತು. ಇದು ಶಾಂತವೇರಿ ಗೋಪಾಲಗೌಡರು ಅಂದಿನ ಕಾಲಕ್ಕೆ ನೆಲೆಗೊಳಿಸಿದ್ದ ಪ್ರಾಮಾಣಿಕ, ತಾತ್ವಿಕ ರಾಜಕಾರಣದ ಆದರ್ಶ ಮಾದರಿ. ಗೌಡರು ಇಲ್ಲದೆ ಕ್ಷೇತ್ರದಲ್ಲಿ ಅವರಿದ್ದರು. ಅವರ ಹೆಸರಲ್ಲೇ ಕಾಗೋಡು ತಿಮ್ಮಪ್ಪ, ಎಸ್ ಬಂಗಾರಪ್ಪ ಗೆದ್ದು ಬಂದರು.
ಮೂರು ಅವಧಿಗೆ ಶಾಸಕರಾಗಿ ಬಡವರು, ಭೂ ಹೀನರು, ನಿರ್ಗತಿಕರ ಪರವಾಗಿ ಸದನದ ಒಳಗೆ ಹೊರಗೆ ದಿಟ್ಟ ಹೋರಾಟ ನಡೆಸಿದ, ಸಮ ಸಮಾಜ ನಿರ್ಮಾಣ, ಆದರ್ಶ ಜನಪರ ರಾಜಕಾರಣಕ್ಕಾಗಿ ಸವೆದ ಗೋಪಾಲಗೌಡರು ತಮ್ಮ ಅನಾರೋಗ್ಯಕ್ಕೆ ಚಿಕಿತ್ಸೆಗಾಗಿ ಸರ್ಕಾರದ ಇದೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು.
1972 ಜೂನ್ 9 ಶಾಂತವೇರಿ ಗೋಪಾಲಗೌಡರನ್ನು
ಈ ನಾಡು ಕಳೆದುಕೊಂಡಿತು. ಅವರ ಕೊನೆ ನಿಲ್ದಾಣ ವಿಕ್ಟೋರಿಯಾ ಆಸ್ಪತ್ರೆಯೇ ಆಗಿತ್ತು. ಈಗಲೂ ನನಗೆ ವಿಕ್ಟೋರಿಯಾ ಆಸ್ಪತ್ರೆ ಪ್ರಾಮಾಣಿಕ ರಾಜಕಾರಣಿಯೊಬ್ಬರ ಅಸ್ಮಿತೆಯಂತೆ ಕಾಣುತ್ತದೆ.
ಸಾತ್ವಿಕ ಸಿಟ್ಟಿನ ಪ್ರಾಮಾಣಿಕ ಮತ್ತು ತಾತ್ವಿಕ ರಾಜಕಾರಣವನ್ನು ಮುಂಗಾಣಿಕೆ ಯಾಗಿ ಬಿಟ್ಟು ಹೋದ ಗೌಡರನ್ನು ಹೊಸತಲೆಮಾರಿಗೆ ಕಾಣಿಸದೆ ಹೋದರೆ ಅದು ದೊಡ್ಡ ನಷ್ಟ.
ಗೌಡರು ತಮ್ಮ ಬದುಕಿನಲ್ಲಿ ಇಳಿದು ಹೋದ ಕೊನೆಯ ನಿಲ್ದಾಣ ವಿಕ್ಟೋರಿಯಾ ಆಸ್ಪತ್ರೆ.
ಈ ಆಸ್ಪತ್ರೆಗೆ ಶಾಂತವೇರಿ ಗೋಪಾಲಗೌಡರ ಹೆಸರನ್ನು ನಾಮಕರಣ ಮಾಡುವ ಮೂಲಕ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಳಿಸಿಕೊಂಡಿದ್ದಾರೆ.
ಚರಿತ್ರೆಗಳನ್ನು ಅರಿಯದವರು ಚರಿತ್ರೆಗಳನ್ನು ಸೃಷ್ಟಿಸಲಾರರು.
•••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✍️
ಚಿಕ್ಕಮಗಳೂರು

